ಮಂಗಳವಾರ, ಡಿಸೆಂಬರ್ 23, 2008

ಬೆಚ್ಚಿದ್ದು, ಬೆದರಿದ್ದು, ಹುಲಿ ಬಾಯಿಗೆ ಬಿದ್ದಿದ್ದು....

ಕಾಡಿನೊಂದಿಗೆ ಅವಿನಾಭಾವ ನಂಟು ಬೆಳೆಯಲು ನಮ್ಮ ಮನೆಯ ದನಕರುಗಳೂ ಸ್ವಲ್ಪ ಮಟ್ಟಿಗೆ ಕಾರಣವಾಗಿದ್ದವು. ಬೆಳಿಗ್ಗೆ ಗೋಲೆಗೆ ಬಿಟ್ಟ ದನಗಳು ಒಟ್ಟಾಗಿ ಕಾಡಿಗೆ ಹೋಗುವುದು, ಸಂಜೆ ಐದು, ಐದೂವರೆಯಾಗುತ್ತಿದ್ದಂತೆಯೇ ತಾವಾಗಿ ಶಿಸ್ತಿನಿಂದ ಮನೆಗೆ ಮರಳುತ್ತಿದ್ದುದಷ್ಟೇ ಮೊದಮೊದಲು ನನಗೆ ಗೊತ್ತಿದ್ದ ವಿದ್ಯಮಾನ.
ದಿನಾ ತಪ್ಪದೇ ಕಾಡಿಗೆ ಹೋಗಿ ಬಂದು ಮಾಡುತ್ತಿದ್ದ ಆಕಳುಗಳ ಪೈಕಿ ಯಾವುದೋ ಒಂದು ಅಕಸ್ಮಾತ್ ಒಂದಿನ ಮನೆಗೆ ಮರಳಲಿಲ್ಲವೆಂದರೆ ಅಪ್ಪನಿಗೆ ಆತಂಕ ಶುರುವಾಗುತ್ತಿತ್ತು. ಅಲ್ಲಿಗೆ ಶೋಧನಾ ಕಾರ್ಯಾಚರಣೆ ಆರಂಭ. ಮೊದಲು ಹನುಮಾಪುರ ಊರಿಗೆ ಹೋಗಿ, ಅಲ್ಲಿನ ದನಗಳ ಜೊತೆಗೇನಾದರೂ ಸೇರಿದೆಯೋ ಎಂಬ ಹುಡುಕಾಟ. ಅಲ್ಲಿ ಸಿಕ್ಕಿತೆಂದರೆ ನಿರಾಳತೆ. ಸಿಗದಾಗ ಆ ಮೂರು ಸಂಜೆಯ ಹೊತ್ತಿನಲ್ಲಿ ಅಲ್ಲಿ, ಇಲ್ಲಿ, ಮನೆ ಸುತ್ತಲ ಕಾಡಿನಲ್ಲಿ ಹುಡುಕಾಟ ಶುರು.
ರಾತ್ರಿ ದಟ್ಟವಾಗಿ ಕವುಚಿಕೊಂಡು ಕಾಡನ್ನೆಲ್ಲ ಆವರಿಸಿಕೊಳ್ಳುವವರೆಗೂ ಅಪ್ಪ, ಗೋಪಾಲಣ್ಣನಿಂದ ಶೋಧ ಮುಂದುವರೆಯುತ್ತಿತ್ತು. ಕತ್ತಲೆಯ ಕವಚವನ್ನು ಸೀಳಿಕೊಂಡು ಮುನ್ನುಗ್ಗುವ ಟಾರ್ಚ್, ಸೂಡಿ ಬೆಳಕುಗಳ ಜೊತೆಗೆ, ನಿಶಾಚರಿ ಹಕ್ಕಿ, ಕೀಟಗಳ, ಮಳೆ ಜಿರಲೆಗಳ ಮೊರೆತದೊಂದಿಗೆ ಇವರ 'ಅಂಬಾ..... ಅಮ್ಮಾ... ಶಾರದೆ/ಯಮುನೆ/ಕಾಳಿ ಎಲ್ಲಿದ್ಯೆ' ಇತ್ಯಾದಿ ಹೆಸರುಗೊಂಡ ಕರೆಗಳೂ ಬೆರೆಯುತ್ತಿದ್ದವು. ಅಷ್ಟಾಗಿಯೂ ಸಿಗಲಿಲ್ಲವೆಂದರೆ ಹತ್ತು-ಹತ್ತೂವರೆಯ ಸುಮಾರಿಗೆ ನಿರಾಶ ಭಾವ ಹೊತ್ತು ಮರಳುತ್ತಿದ್ದರು. ಕುತ್ತಿಗೆ ಉದ್ದ ಮಾಡಿ ಕಾಯುತ್ತಿದ್ದ ಅಮ್ಮನಿಗೆ ಅವರ ಖಾಲಿ ಕೈ, ಸೋತ ಮುಖಗಳು ಉತ್ತರ ಹೇಳುತ್ತಿದ್ದವು.
ಗಬ್ಬದ ದನಗಳು ಕರು ಹಾಕಲು ಬಂದ ಸಂದರ್ಭದಲ್ಲಿ ಕೆಲವೊಮ್ಮೆ ಹೀಗೆ ಮನೆಗೆ ಮರಳದ ಪ್ರಸಂಗಗಳೂ ಇರುತ್ತಿದ್ದವು. ಅಕಸ್ಮಾತ್ ಆ ದನ ಸಂಜೆಯ ಹೊತ್ತಿಗೆ ಕಾಡಿನಲ್ಲೇ ಕರು ಹಾಕಿತೆಂದರೆ, ಎಳೆಗರುವನ್ನು ನಡೆಸಿಕೊಂಡು ಮನೆಗೆ ಮರಳುವುದು ಅಸಾಧ್ಯವೆನಿಸಿದ ಸಂದರ್ಭದಲ್ಲಿ ಅಲ್ಲೇ ಉಳಿಯುತ್ತಿದ್ದುದುಂಟು.
ನಮ್ಮಮ್ಮನ ಪ್ರೀತಿಯ ಶಾರದೆ ಕಾಣೆಯಾಗಿದ್ದೂ ಇಂಥದ್ದೇ ಸಂದರ್ಭದಲ್ಲಿ. ನನಗೆ ಕಾಡಿನ ಅಗಾಧತೆಯ, ರಾಕ್ಷಸಾಕಾರದ, ರುದ್ರ ರಮ್ಯ ಸ್ವರೂಪದ ದರ್ಶನವಾದುದೂ ಇದೇ ಪ್ರಸಂಗದಿಂದಾಗಿಯೇ.
ದಿನ ತುಂಬಿದ್ದ, ಎರಡನೇ ಬಾರಿ ಗಬ್ಬಿದ್ದ ಶಾರದೆ ಸಂಜೆ ಮರಳಿರಲಿಲ್ಲ. ಮುಸ್ಸಂಜೆಯಿಂದ ಅರ್ಧರಾತ್ರಿವರೆಗೆ ನಡೆಸಿದ ಹುಡುಕಾಟ ಫಲ ನೀಡಿರಲಿಲ್ಲ. ಮರುದಿನ ಬೆಳಿಗ್ಗೆಯೇ ಮತ್ತೆ ಒಂದೊಂದು ದಿಕ್ಕು ಹಿಡಿದು ಒಬ್ಬೊಬ್ಬರು ಹೊರಟಾಗ ನಾನು, ಅಕ್ಕ ಸಹ ಅಪ್ಪನೊಂದಿಗೆ ಹೊರಟೆವು.
ಕಾಡಿನ ಆ ಹರವು ನಮ್ಮ ಮನೆಯಿಂದ ತುಂಬಾ ದೂರದ್ದೇನಲ್ಲ. ಮನೆಯ ಹಿಂದಿದ್ದ ವಿಸ್ತಾರ ಗದ್ದೆ ಬಯಲಿನಂಚಿನಿಂದ ಅದು ಶುರುವಾಗುತ್ತಿತ್ತು. ಆದರೆ ನಾನು, ಅಕ್ಕ ಅದನ್ನು ಹೊಕ್ಕಿದ್ದು ಅದೇ ಮೊದಲು. ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಬೆಳೆದ ಬೃಹತ್ ಮರಗಳು, ರಟ್ಟೆಗಾತ್ರದ ಬಳ್ಳಿಗಳು, ಭಯ ಹುಟ್ಟಿಸುವಂಥ ಬಿದಿರು ಮೆಳೆಗಳು.... ಸೊಳ್ಳೆ, ಜೀರುಂಡೆ, ಜೇನುಗಳ ಗುಂಜಾರವ.... ಕೆಸರು, ಹುಳು, ಕಣ್ಣಿಗೆ ಕಾಣದಿದ್ದರೂ ತಲೆಯನ್ನು ತುಂಬಿಕೊಂಡ ಹಾವು, ಹುಲಿಗಳ ಭೀತಿಯ ಭೂತ..., ಒಂದೊಂದು ಕೈಯನ್ನು ಒಬ್ಬೊಬ್ಬರು ಬಿಗಿಯಾಗಿ ಹಿಡಿದುಕೊಂಡಿದ್ದರೂ ನಾವಂತೂ ಪ್ರತಿಯೊಂದು ಚಿಕ್ಕ ಸದ್ದಿಗೂ ಬೆಚ್ಚಿ ಬೀಳುತ್ತಿದ್ದೆವು. 'ಅಂಬಾ... ಅಂಬೆ... ಶಾರದೆ ಎಲ್ಲದ್ಯೇ?...'ಗಳ ನಡುವೆಯೇ ಅಪ್ಪ ನಮಗೆ ಇದು 'ದಿಂಡಲ ಮರ- ನಂದಿಯ ಹತ್ತಿರದ ಜಾತಿ, ಇದು ಹಲವು ಮಕ್ಕಳ ತಾಯಿ ಗಿಡ- ಇದರ ಗೆಡ್ಡೆ ಕಿತ್ತು ದನಗಳಿಗೆ ತಿನ್ನಿಸಿದರೆ ಹಾಲು ಜಾಸ್ತಿಯಾಗ್ತು' ಎಂದೆಲ್ಲ ವಿವರಿಸುತ್ತ ನಡೆದ. ಸುಮಾರು ಒಂದು ತಾಸು ತಿರುಗಿದ ಮೇಲೆ ಒಂದೆಡೆ ನಮ್ಮಿಬ್ಬರನ್ನೂ ಬಲವಾದ ಬಳ್ಳಿಯ ಜೋಕಾಲಿ ಮೇಲೆ ಕೂಡ್ರಿಸಿ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬಾಳೆಹಣ್ಣು, ನೀರು ಕೊಟ್ಟ.
ಐದ್ಹತ್ತು ನಿಮಿಷ ಸುಧಾರಿಸಿಕೊಂಡ ಮೇಲೆ ಮತ್ತೆ ಶಾರದೆ ಶೋಧ ಶುರು. ಮಧ್ಯಾಹ್ನ ಮುಗಿಯುತ್ತ ಬಂದು, ನೆತ್ತಿ ಕತ್ತಿ ಉರಿಯುವವರೆಗೂ ಹುಡುಕಿ ಸುಸ್ತಾದ ಮೇಲೆ ಜೋಲು ಮೋರೆ ಹೊತ್ತು ವಾಪಸ್ಸಾದೆವು.
ಮಧ್ಯಾಹ್ನ ಊಟದ ನಂತರ ಅಪ್ಪ ಮತ್ತಿತರರು ಮತ್ತೆ ಹುಡುಕಾಟ ನಡೆಸಿದರು. ನಾನು, ಅಣ್ಣ-ಅಕ್ಕ ಮನೆಯೆದುರಿನ ಕೆರೆಯಂಗಳದಲ್ಲಿ, ಅದನ್ನು ಆವರಿಸಿದ್ದ ಕಳ್ಳಿ ಮಟ್ಟಿಗಳಲ್ಲಿ, ಅಲ್ಲಿ ಇಲ್ಲಿ ನಮ್ಮಿಂದಾದ ಮಟ್ಟಿಗೆ ಹುಡುಕಿದೆವು. ಈ ಶೋಧ ಹೀಗೆ ಐದಾರು ದಿನ ನಡೆಯಿತು. ನಡುನಡುವೆ ಭಟ್ಟರಿಂದ ಭವಿಷ್ಯ ಕೇಳಿದ್ದು, ನೋಟ ನೋಡಿಸಿದ್ದು, ಯಾರ್ಯಾರೋ ಸ್ವಯಂಘೋಷಿತ ತಂತ್ರಗಾರರೆಲ್ಲ ಬಂದು 'ನಿಮ್ಮ ದನ ಇಂಥಲ್ಲೇ ಇದೆ, ಮುಂಡಗೋಡು ದಾಟಿ ಹೋಗಿದೆ, ಹುಬ್ಬಳ್ಳಿಯಿಂದ ಎಂಟು ಕಿಮೀ ಪಶ್ಚಿಮಕ್ಕಿದೆ....' ಎಂದೆಲ್ಲಾ ಹೇಳಿ ಹೋಗಿದ್ದಾಯಿತು.
ಆವತ್ತು ಭಾನುವಾರ. ಶಾರದೆ ಕಳೆದು ಆವತ್ತಿಗೆ ಎಂಟನೇ ದಿನ. ಬೆಳಿಗ್ಗೆ ತಿಂಡಿ ತಿಂದವರೇ ಅಪ್ಪ ಮತ್ತು ಒಂದಿಬ್ಬರು ಆಳುಗಳು ಒಂದು ಸುತ್ತು ಹುಡುಕಾಟ ನಡೆಸಲು ಹೊಳೆಯ ಬಳಿ ತೆರಳಿದ್ದರು.
ಬೆಳಿಗ್ಗೆ ಹತ್ತು ಗಂಟೆಯ ಹೊತ್ತು. ಮನೆಯೆದುರಿನ ಕೆರೆ ಏರಿ ಮೇಲೆ ಏನೋ ಗದ್ದಲ ಕೇಳಿಸಿತು. ನಾನು, ಅಮ್ಮ, ಅಕ್ಕ ಎಲ್ಲ ಹೊರಬಂದೆವು. ಅಪ್ಪ, ಅಣ್ಣ, ಆಳುಗಳು ಗುಂಪುಗೂಡಿ ಬರುತ್ತಿದ್ದರು. ಆಳೊಬ್ಬನ ಕೈಯಲ್ಲಿ ಆಕಳೊಂದರ ಮುಖದ ಕೋಡುಸಹಿತ ಮೂಳೆ, ಅಪ್ಪನ ಹೆಗಲ ಮೇಲೆ ಬಸವಳಿದ ಒಂದು ಎಳೆಗರು... ಅಪ್ಪ ಏನೂ ಹೇಳುವುದೇ ಬೇಕಾಗಿರಲಿಲ್ಲ. ಕೋಡುಗಳನ್ನು ನೋಡುತ್ತಿದ್ದಂತೆಯೇ ಅಮ್ಮ 'ಅಯ್ಯೋ, ಶಾರದೆ ಹೋತಕ್ಕಲೇ' ಎಂದು ಕೂಗಿಕೊಂಡಳು.
ನಮ್ಮೆಲ್ಲರ ಒಳಗೂ ಮೂಡಿದ್ದ ಅವ್ಯಕ್ತ ಭಯ ನಿಜವಾಗಿತ್ತು. ಶಾರದೆ ಹುಲಿಗೆ ಬಲಿಯಾಗಿತ್ತು. ಮೇಯಲು ಹೋಗಿದ್ದ ಅದು ಬಹುಶಃ ಸಂಜೆಯ ಹೊತ್ತಿಗೆ ಹೊಳೆಯ ಅಂಚಲ್ಲಿ ಕರು ಹಾಕಿತ್ತು. ಕರುವಿಗೆ ಕಷ್ಟವಾದೀತೆಂದು ಅಲ್ಲೇ ಉಳಿಯಿತು ಕೂಡ. ಮೊದಲೇ ಹೊಳೆಯಂಚು... ಹುಲಿ ಓಡಾಡುವ ಜಾಗ. ಆ ರಾತ್ರಿಯೇ ಅದು ಹುಲಿಗೆ ಬಲಿಯಾಗಿದ್ದಿರಬೇಕು. ಹುಲಿ ಮತ್ತು ಆಕಳ ನಡುವೆ ಕಾದಾಟ ನಡೆದಿದ್ದಕ್ಕೆ ಕುರುಹುಗಳೂ ಅಲ್ಲಿದ್ದವಂತೆ.
ಆಶ್ಚರ್ಯವೆಂದರೆ ಹುಲಿಗೆ ಬಹುಪ್ರಿಯ ಬೇಟೆಯಾಗಲಿದ್ದ ಎಳೆಗರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು. ಕಾದಾಟ ನಡೆದ ಸ್ಥಳದಿಂದ ಸುಮಾರು ಹತ್ತು ಮಾರು ದೂರದಲ್ಲಿ, ಹಳ್ಳದ ಎಡಧರೆಯ ಮೇಲೆ ಇಳಿಜಾರಿನಲ್ಲಿದ್ದ ಒಂದು ಭಾರಿ ಬಿದಿರು ಮಟ್ಟಿಯ ಸಂಧಿಯಲ್ಲಿ ಈ ಕರು ಸಿಕ್ಕಿಕೊಂಡಿತ್ತಂತೆ. ಅದರ ಅದೃಷ್ಟಕ್ಕೆ ಅದು ಎಂಟು ದಿನ ಹಾಲಿಲ್ಲದೇ ಬದುಕಿತ್ತು, ಬಹುಶಃ ಬಿದಿರು ಮಟ್ಟಿಯ ಪಾದ ಮುಟ್ಟಿ ಹೋಗುತ್ತಿದ್ದ ಹೊಳೆಯ ನೀರನ್ನೇ ಕುಡಿದುಕೊಂಡಿತ್ತೇನೋ. ಕೂಗುವ ಶಕ್ತಿ ಇಲ್ಲದಿದ್ದರೂ, ಜೀವಚ್ಛವವಾಗಿ ಮಟ್ಟಿಯ ಒಳಗೆ ಮುಚ್ಚಿಹೋದಂತಿದ್ದರೂ ಅಪ್ಪ ಮತ್ತಿತರರ ಕಣ್ಣಿಗೆ ಬಿದ್ದಿತ್ತು.
ಹೋದ ದನವಂತೂ ಹೋಯಿತು, ಘನಾ ಹೆಣ್ಣುಕರು ಉಳಿದಿದೆ, ಅದನ್ನಾದರೂ ಚೆನ್ನಾಗಿ ಬೆಳೆಸೋಣ ಎಂದರು ಅಪ್ಪ-ಅಮ್ಮ ಭಾರಿ ಜತನ ಮಾಡಿದರು. 'ಗೌರಿ' ಎಂದು ಶಾರದೆಯ ತಾಯಿಯ ಹೆಸರನ್ನೇ ಅದಕ್ಕಿಟ್ಟು, ಬೇರೆ ಹಸುಗಳ ಹಾಲನ್ನು ಧಾರಾಳವಾಗಿ ಗೊಟ್ಟದಲ್ಲಿ ಎತ್ತಿ ಕುಡಿಸಿದರು. ಅನ್ನದ ತಿಳಿ, ಬೂಸಾದ ಗಂಜಿ.... ಏನೇನೋ ಉಪಚಾರ ಬೇರೆ. ಆದರೆ ಅವನ್ನೆಲ್ಲ ಜೀರ್ಣಿಸಿಕೊಳ್ಳುವುದು ಹೋಗಲಿ, ಅವನ್ನು ತಿನ್ನಬೇಕು, ಕುಡಿಯಬೇಕು ಎಂಬ ಕಲ್ಪನೆಯನ್ನು ಜೀರ್ಣಿಸಿಕೊಳ್ಳಲು ಕೂಡ ಆ ಅನಾಥ ಕರುವಿಗೆ ಬಹುಶಃ ಸಾಧ್ಯವಾಗಲಿಲ್ಲ. ವಾರೊಪ್ಪತ್ತಿನಲ್ಲಿ ಅದೂ ತನ್ನ ತಾಯನ್ನು ಸೇರಿಕೊಂಡಿತು.
ಮತ್ತೆ ಕೆಲವು ವರ್ಷಗಳ ನಂತರ ಕಸ್ತೂರಿ ಎಂಬ ಆಕಳು ಕಳೆದಾಗಲೂ ನಾವೆಲ್ಲ ಹೀಗೆ ಕಾಡುಮೇಡು ಸುತ್ತಿ ಹುಡುಕಿದ್ದೇ ಹುಡುಕಿದ್ದು. ಆದರೆ ಆಗ ಕಾಡು ಮೊದಲಿನಷ್ಟು ಅಪರಿಚಿತವಾಗಿ ಉಳಿದಿರಲಿಲ್ಲ ನನಗೆ. ಕಾಡಿನ ಕುರಿತಾದ ಮುಗ್ಧ ಕುತೂಹಲ, ಆರಾಧನಾ ಭಾವ ಮೊದಲಿನಷ್ಟಿರಲಿಲ್ಲ. ನಮ್ಮ ಮನೆಯ ಸುತ್ತಲಿದ್ದ ಕಾಡೂ ಮೊದಲಿನಷ್ಟು ದಟ್ಟವಾಗುಳಿದಿರಲಿಲ್ಲ. ಹಾಗಂತ ಆ ಎಕ್ಸ್ಪೆಡಿಷನ್ ನನ್ನಲ್ಲಿ ಆಸಕ್ತಿ, ಕಾತರ ಮೂಡಿಸಿರಲಿಲ್ಲ ಎಂದಲ್ಲ, ಕಾಡಿನ ಸಾಂಗತ್ಯಕ್ಕೆ ತೆರೆದುಕೊಳ್ಳುವುದಕ್ಕೆ ನಾನು ಎವರ್ರೆಡಿ.
ಕಸ್ತೂರಿಯನ್ನೇನೂ ಹುಲಿ ಒಯ್ದಿರಲಿಲ್ಲ. ಸುತ್ತ ಎಂಟು ದಿಕ್ಕುಗಳಲ್ಲಿ ನಾವು ಅದರ ಜಾಡು ಅರಸಿ ಅಲೆಯುತ್ತಿದ್ದರೆ, ಅದು ಮನೆಯೆದುರಿನ ಕೆರೆಯಂಗಳದಲ್ಲೇ ಅಸಹಾಯಕವಾಗಿ ಬಿದ್ದಿತ್ತು. ಬಿರು ಬೇಸಿಗೆಯಿಂದಾಗಿ ಕೆರೆಯಂಗಳ ತೀವ್ರವಾಗಿ ಬಿರುಕು ಬಿಟ್ಟಿತ್ತು. ಜೊತೆಗೆ ಕಳ್ಳಿ ಗಿಡಗಳೂ ಒತ್ತೊತ್ತಾಗಿ ಬೆಳೆದು ಜಡಕುಗಟ್ಟಿದ್ದವು. ಇಂಥದ್ದೊಂದು ಕಳ್ಳಿ ಟ್ರಾಪ್ನಲ್ಲಿ ಸಿಕ್ಕಿಕೊಂಡ ಕಸ್ತೂರಿ ಬಹುಶಃ ಹೊರಬರಲು ಒದ್ದಾಡುತ್ತಿದ್ದಾಗ ಬಿರುಕೊಂದರಲ್ಲಿ ಅದರ ಕಾಲು ಸಿಕ್ಕಿಕೊಂಡು, ಮೊಣಕಾಲಿಗಿಂತ ಕೆಳಗೆ ಅಕ್ಷರಶಃ ಲಟಕ್ಕೆಂದು ಮುರಿದುಹೋಗಿ, ಹೆಜ್ಜೆ ಮುಂದಿಡುವುದಿರಲಿ, ಮುರಿದ ಕಾಲನ್ನು ಬಿರುಕಿನಿಂದ ಬಿಡಿಸಿಕೊಳ್ಳುವುದಕ್ಕೂ ಆಗದೇ ಆ ದನ ಅಲ್ಲೇ ವಾರಗಟ್ಟಲೇ ಇತ್ತು. ಹುಲ್ಲು, ನೀರು ಇಲ್ಲದೇ ಕೂಗಲೂ ಆಗದ ಸ್ಥಿತಿ ತಲುಪಿತ್ತು ಅದು. ನಮಗಂತೂ ಹೋಗಲಿ, ನಮ್ಮ ನಾಯಿಗಳಿಗೂ ಅದರ ಸೂಟು ಸಿಕ್ಕಿರಲಿಲ್ಲ. ಆದರೆ ಹದ್ದುಗಳೆಂಬ ಪತ್ತೆದಾರರ ಸೂಕ್ಷ್ಮದೃಷ್ಟಿಗೆ ಅದು ಬಿದ್ದು, ಅವು ಅದರ ಮೇಲೆರಗಲು ಕಾಯುತ್ತ ಆಕಾಶದಲ್ಲೇ ಗಿರಗಟ್ಟೆ ಹೊಡೆಯುತ್ತಿದ್ದುದನ್ನು ಕಂಡು ಅನುಮಾನಗೊಂಡ ಯಾರೋ ಹೋಗಿ ಸ್ಥಳ ಪರಿಶೀಲನೆ ನಡೆಸಿ, ನಮಗೆ ಸುದ್ದಿ ಮುಟ್ಟಿಸಿ...... ಅಂತೂ ಪತ್ತೆಯಾಯಿತು ಕಸ್ತೂರಿ. ಆದರೆ ನಂತರದಲ್ಲಿ ಅದು ಶಾಶ್ವತವಾಗಿ ಆ ಕಾಲನ್ನು, ಜೊತೆಗೆ 'ಕಸ್ತೂರಿ' ಎಂಬ ಸುಂದರ ಹೆಸರನ್ನು ಕಳೆದುಕೊಂಡು 'ಕುಂಟಿ' ಆಯ್ತು.
ಹುಲಿಯ ಬಾಯಿಗೆ ಸಿಕ್ಕ ನಮ್ಮನೆಯ ಆಕಳು, ಹೋರಿಗಳು ಒಂದೆರಡಲ್ಲ. ಕರಿಯಮ್ಮ, ಯಮುನೆ, ಕಾಳಿ, ಹಂಡ..... ಪ್ರತಿ ಬಾರಿ ಒಂದು ಆಕಳನ್ನೋ, ಹೋರಿ, ಕರುವನ್ನೋ ಕಳಕೊಂಡಾಗ ನಮ್ಮಲ್ಲೆಲ್ಲ ವಿಷಾದ ಭಾವ. ಬೆಳಿಗ್ಗೆ ದನಗಳ ಗೋಲೆಯನ್ನು ಕಾಡಿಗೆ ಬಿಡುವಾಗ ವಿಪರೀತ ದುಗುಡ. ಸಂಜೆ ಅವು ವಾಪಸ್ಸಾಗುವವರೆಗೂ ತಳಮಳ. ಕೆಲ ದಿನ ಅಷ್ಟೇ. 20-25 ದನಕರುಗಳಿದ್ದ ಕೊಟ್ಟಿಗೆಯಲ್ಲಿ 2-3 ತಿಂಗಳಿಗೊಮ್ಮೆ ಹೊಸ ಕರು ಹುಟ್ಟುತ್ತಿತ್ತು. ಹೊಸ ಚಿಗುರನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಹಳೆ ಎಲೆ ಬಿದ್ದು ಹೋದ ವ್ಯಥೆ ಹಳತಾಗಿ ಬಿಡುತ್ತಿತ್ತು.
ನಮ್ಮನೆಯಿಂದ ಸ್ವಲ್ಪ ದೂರದಲ್ಲಿದ್ದ 'ಮೊಸಳೆಗುಂಡಿ' ಎಂಬ ಜಾಗಕ್ಕೆ ನಾವು ಬೇಸಿಗೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದುದುಂಟು. ದಟ್ಟ ಕಾಡ ನಡುವಲ್ಲಿದ್ದ ಆ ಜಾಗ ಹೆಚ್ಚುಕಮ್ಮಿ ನಿರ್ಜನ, ನೀರವವಾಗಿರುತ್ತಿದ್ದರೂ, ಸದಾಕಾಲ ಇರುತ್ತಿದ್ದ ನೀರು ಬೇಸಿಗೆಯಲ್ಲಿ ಜನ-ದನಕರುಗಳನ್ನು, ವನವಾಸಿಗಳನ್ನು ಬರಮಾಡಿಕೊಳ್ಳುತ್ತಿತ್ತು. ಊರಿನ ದನಕರುಗಳ, ಗೌಳೇರ ಎಮ್ಮೆಗಳ, ಜಿಂಕೆ, ನರಿ, ನಾಯಿಗಳ ನೀರಡಿಕೆ ನೀಗಿಸುತ್ತಿದ್ದ ಮೊಸಳೆಗುಂಡಿ, ಆ ಕಾರಣದಿಂದಾಗಿಯೇ ಹುಲಿ, ಕಿರುಬಗಳ ಹಸಿವೆಯನ್ನೂ ಹಿಂಗಿಸುತ್ತಿತ್ತು. ಆ ಹಳ್ಳದ ದಂಡೆಯಲ್ಲಿ, ಮರಳು ಹಾಸುಗಳ ಮೇಲೆ ಅಲ್ಲಲ್ಲಿ ಬಿದ್ದಿರುತ್ತಿದ್ದ ಹುಲಿಯ ಮಲವನ್ನು ಅಪ್ಪ ನಮಗೆ ತೋರಿಸುತ್ತಿದ್ದ. ಒಣಗಿದ ಮಲವನ್ನು ಕೋಲಿನಿಂದ ಕೆದರಿದರೆ ಅದರಲ್ಲಿ ದನಕರುಗಳ ಬಾಲದ ಕೂದಲ ಜೊಂಪೆ, ಸೆಡೆದುಕೊಂಡ ಚರ್ಮದ ಚೂರುಗಳು ಕಂಡು ಬರುತ್ತಿದ್ದವು. ಅದನ್ನು ನೋಡಿದ ನಮ್ಮಲ್ಲಿ 'ಇದು ಯಾವ ಗೌಳಿಯ ಎಮ್ಮೆಯಾಗಿತ್ತೋ, ಯಾರ ಮನೆಯ ದನವಾಗಿತ್ತೋ, ಅಕಸ್ಮಾತ್ ನಮ್ಮ ಶಾರದೆ/ಸೀತೆ/ಹಂಡಿಯದೇ ಕೂದಲೇನೋ' ಎಂಬ ಕುತೂಹಲಭರಿತ ವಿಷಾದ.
ಪ್ರತಿ ದೀಪಾವಳಿಯಲ್ಲಿ ದನಗಳ ಬೆನ್ನ ಮೇಲೆ ಕೆಮ್ಮಣ್ಣು, ಶೇಡಿಯ ಚಿತ್ತಾರ ಬರೆದು 'ಬೆಚ್ಚಡಾ, ಬೆದರಡಾ, ಹುಲಿ ಬಾಯಿಗೆ ಬೀಳಡಾ' ಎಂದು ಹರಸಿ, ಜೊತೆಗೆ ಹುಲಿಯಪ್ಪನ ಕಲ್ಲಿಗೆ ದನಕ್ಕೊಂದರಂತೆ ಕಾಯಿ ಒಡೆದು ಬೇಡಿಕೊಂಡರೆ ಮನೆ ಮಂದಿಗೆಲ್ಲ ನಿಶ್ಚಿಂತ ಭಾವ.
ಹರಕೆ ಕಾಯ್ದಿತೋ, ಹುಲಿಯಪ್ಪ ಕಾಯ್ದನೋ ಇಲ್ಲಾ 'ಗೋ ಹತ್ಯಾ ದೋಷ'ದಲ್ಲಿ ಪಾಲು ಬೇಡವೆಂದ ಕಾಡು ತಾನೇ ಹಿಂದೆ ಸರಿದುಕೊಂಡು, ಹುಲಿಯನ್ನೂ ಅಡಗಿಸಿತೋ, ಅಂತೂ ಹತ್ತು ವರ್ಷಗಳಿಂದೀಚೆಗೆ ನಮ್ಮ ಯಾವ ದನಕರುವೂ ಹುಲಿಯ ಪಾಲಾಗಿಲ್ಲ. ಈಗಂತೂ ಕಾಡು ಯಾವ ಪರಿ ಖಾಲಿಯಾಗಿದೆಯೆಂದರೆ ಮುಂದೆ ಇಂಥ ಪ್ರಸಂಗ ಬರುವ ಸಂಭವವೇ ಇಲ್ಲ.
ನಮ್ಮ ಮನೆ, ನಮ್ಮ ದನಕರು ಎಂದಷ್ಟೇ ಯೋಚಿಸಿದರೆ ನಿರಾಳತೆ ಮೂಡುತ್ತದೆ. ವನ್ಯ ಸಂಪತ್ತು, ರಾಷ್ಟ್ರೀಯ ಪ್ರಾಣಿ ಎಂದೆಲ್ಲ ವಿಶಾಲ ಪ್ರಪಂಚದಲ್ಲಿ ಮನಸ್ಸನ್ನು ಹರಿಯ ಬಿಟ್ಟಾಗ ಅನಂತ ವಿಷಾದ ಕಣ್ಣು ಮಂಜಾಗಿಸುತ್ತದೆ.

ಗುರುವಾರ, ಡಿಸೆಂಬರ್ 18, 2008

ಮನೆಯಂಗಳದ ಸಫಾರಿ-2

ಕಾಡಿನಲ್ಲಿ ಹಂದಿಗಳಂತೂ ಹುಲ್ಲಿನಷ್ಟೇ ಹುಲುಸಾಗಿದ್ದವು ಆಗ. ಅವುಗಳನ್ನು ಬೇಟೆಯಾಡಿ ತಿನ್ನುವ ಜನರೂ ಊರಿನಲ್ಲಿ ಹೇರಳವಾಗಿದ್ದರು. ಹಂದಿ ಶಿಕಾರಿ ಸಾಮಾನ್ಯ ಸಂಗತಿಯಾಗಿತ್ತು. ಹಾಗಾಗಿ ನಾನು ಹತ್ತಿರದಿಂದ ನೋಡಿದ್ದೆಲ್ಲ ಸತ್ತ ಹಂದಿಗಳನ್ನೇ. ಹಂದಿ ಹೊಡೆದು ಅದನ್ನು ಗಳುವೊಂದಕ್ಕೆ ತಲೆ ಕೆಳಗಾಗಿ ನೇತು ಹಾಕಿ ಕಟ್ಟಿ, ಮೆರವಣಿಗೆ ಸದೃಶ ಜನ ಸಮೂಹದಲ್ಲಿ ಕೊಂಡೊಯ್ಯುತ್ತಿದ್ದರೆ ನಾನು, ಅಕ್ಕ-ಅಣ್ಣ ಅಲ್ಲೇ ತೂರಿಕೊಂಡು ಹೋಗಿ ಆ ಹಂದಿಯ ಉದ್ದಗಲ, ಲಕ್ಷಣಗಳನ್ನು ಕಣ್ಣು ತುಂಬಿಕೊಂಡು ಬರುತ್ತಿದ್ದೆವು. ನಮಗಿರುತ್ತಿದ್ದುದು ಹಂದಿಯೆಡೆಗಿನ ಕುತೂಹಲ ಮಾತ್ರ. ಹಂದಿಯ 'ಶವಯಾತ್ರೆ'ಯಲ್ಲಿ ಭಾಗವಹಿಸಿದ ಇತರರಿಗೆಲ್ಲ ಕೊಂದವರ ಕೃಪೆಯನುಸಾರ ಅಷ್ಟೋ ಇಷ್ಟೋ ಮಾಂಸ ಲಭ್ಯವಾದರೆ, ನಮಗೆ ಕೆಲವೊಮ್ಮೆ 'ಆನ್ ರಿಕ್ವೆಸ್ಟ್' ಹಂದಿಯ ಬಿರುಗೂದಲಿನ ಪುಟ್ಟ ಗುಚ್ಛ ಸಿಗುತ್ತಿತ್ತು. ಅದಕ್ಕೆ ತಂತಿ ಬಿಗಿದು ಜಮೆಕಟ್ಟು ತಯಾರಿಸುತ್ತಿದ್ದ ಅಪ್ಪ, ದೇವರ ಮೂರ್ತಿಗಳನ್ನು ತಿಕ್ಕಿ ತೊಳೆಯಲು ಅದನ್ನು ಬಳಸುತ್ತಿದ್ದ.
ಅಣ್ಣನಿಗಂತೂ ಹಂದಿಗಳ ವಿಷಯದಲ್ಲಿ ಅಕ್ಕ-ನನಗಿಂತ ವಿಶೇಷ ಆಸಕ್ತಿ ಇತ್ತು. ಹೊಲದಲ್ಲಿ ಬೆಳೆ ಬರುವ ಸಮಯದಲ್ಲಿ ಅಪ್ಪ ಮಾಳ ಕಾಯಲು ಹೊರಟರೆ ಆತನೂ ಹಠ ಮಾಡಿ ಹೊರಡುತ್ತಿದ್ದ. ಮಾಳ ಎಂದರೆ ರಾತ್ರಿ ಹೊಲ ಕಾಯಲು ಮಾಡಿಕೊಂಡ 'ತ್ರಿಶಂಕು' ವ್ಯವಸ್ಥೆ. ಸ್ವಲ್ಪ ಎತ್ತರದ ಜಾಗದಲ್ಲಿ ನಾಲ್ಕು ಕವೆಗಳು ಹುಗಿದು, ಅದರ ಮೇಲೆ ಬಿದಿರಿನ ತಟ್ಟಿ ಕಟ್ಟಿ, ಬಿಳೆಹುಲ್ಲಿನ ಮುಚ್ಚಿಗೆ ಹೊದೆಸಿ, ಆ ತಟ್ಟಿಯ ಒಂದು ಅಂಚಿಗೆ ಹೊಂಚ ಮಣ್ಣು ಹಾಸಿ, ಬೆಂಕಿ ಉರಿಸಲು ಸಿದ್ಧತೆ ಮಾಡಿಕೊಂಡರೆ ಮಾಳ ರೆಡಿ. ಒಬ್ಬರು ಮಲಗುವಷ್ಟು ಜಾಗವೂ ಮಾಳದಲ್ಲಿ ಇರುತ್ತಿತ್ತು.
ಮೂರು ಸಂಜೆಯ ಹೊತ್ತಿಗೆ ಮಾಳದ ಮಣ್ಣಿನ ಹಾಸಿನ ಮೇಲೆ ನಾಲ್ಕು ಕಟ್ಟಿಗೆ ಇಟ್ಟು ಬೆಂಕಿ ಹೊತ್ತಿಸಿ ಬರುತ್ತಿದ್ದ ಅಪ್ಪ-ಗೋಪಾಲಣ್ಣ, ರಾತ್ರಿ ಊಟವಾದ ನಂತರ ಟಾರ್ಚ್, ಲಾಟೀನು ಸಿದ್ಧವಿಟ್ಟುಕೊಂಡು ಅಲ್ಲಿಗೆ ಮಲಗಲು ಹೋಗುತ್ತಿದ್ದರು. ನಿದ್ದೆ ಬರುವ ತನಕ ರೇಡಿಯೋ ಕೇಳುತ್ತ, ಪುಸ್ತಕ ಓದುತ್ತ, ನಡುವೆ ಆಗಾಗ ಕೂಗಿ, ಛೂಗುಟ್ಟಿ ಸಂಭಾವ್ಯ ಹಂದಿ ದಾಳಿಯನ್ನು ದೂರವಿಡುತ್ತಿದ್ದರು. ರಾತ್ರಿಯೂ ಆಗಾಗ ಎದ್ದು ಛೂಗುಡುತ್ತ, ಬೆಂಕಿ ಕೆದರುತ್ತ, ಹಂದಿ ಬರುವ ಸೂಚನೆ ಸಿಕ್ಕಿದರೆ ಅತ್ತ ಟಾರ್ಚ್ ಬೆಳಕು ಬಿಟ್ಟು ಅದನ್ನು ಓಡಿಸಿ, ಅಗತ್ಯ ಬಿದ್ದರೆ ಒಂದು ಪಟಾಕಿ ಹೊಡೆದು ಬೆದರಿಸಿ..... ಅಂತೂ ಮಾಳ ಕಾಯುವುದು ನಮ್ಮ ದೃಷ್ಟಿಯಲ್ಲಿ ಬಲು ರೋಮಾಂಚಕಾರಿ ಕೆಲಸವಾಗಿತ್ತು. ಆದರೆ ವಯಸ್ಸಿನಲ್ಲಿ ಎಷ್ಟೇ ಚಿಕ್ಕವನಿದ್ದರೂ, ನನಗಿಂತ-ಅಕ್ಕನಿಗಿಂತ ಮೊದಲು ಹುಟ್ಟಿದ್ದರಿಂದ ಹಿರಿಪಟ್ಟ ಹೊತ್ತಿದ್ದ ಅಣ್ಣನಿಗೆ ಇದರಲ್ಲಿ ಪಾಲ್ಗೊಳ್ಳಲು ಇದ್ದಷ್ಟು ಅವಕಾಶ ನಮಗಿರಲಿಲ್ಲ. ನಮ್ಮ ದುರಾದೃಷ್ಟಕ್ಕೆ ನಾವು ಹಠ ಮಾಡಿ ಮಾಳಕ್ಕೆ ಹೋದ ದಿನ ಹಂದಿಗಳು ದರ್ಶನ ನೀಡುತ್ತಲೇ ಇರಲಿಲ್ಲ.
ಎಲ್ಲಾದರೂ ನಾಲ್ಕೈದು ವರ್ಷಕ್ಕೆ ಒಮ್ಮೆ ಗಜ ಪರಿವಾರ 'ಕ್ಷೇತ್ರ ದರ್ಶನ'ಕ್ಕೆ ಆಗಮಿಸುತ್ತಿತ್ತು. ಅದರ ಧಾಂಧಲೆಯೂ ಗಜಗಾತ್ರದ್ದೇ. ಗುಂಪಿನ ನಾಯಕನ ಪುಂಡಾಟಿಕೆಗಳನ್ನು ಸಹಚರರು ನಿಷ್ಠೆಯಿಂದ ಅನುಸರಿಸುತ್ತಿದ್ದರು. ಸಾಮಾನ್ಯವಾಗಿ ದಾಂಡೇಲಿ ಅಭಯಾರಣ್ಯದಿಂದ ವಲಸೆ ಬರುತ್ತಿದ್ದ ಅವು ಕಾಡಿನ ಎಳೆ ಬಿದಿರಿನಷ್ಟೇ ಪ್ರೀತಿಯಿಂದ ನಾಡಿನ ಭತ್ತದ ಬೆಳೆಯನ್ನೂ ಮೆಲ್ಲುತ್ತಿದ್ದವು. ತೆನೆ ಕಟ್ಟುತ್ತಿದ್ದ, ಕೊಯ್ಯಲು ಸಿದ್ಧವಾದ ಅಥವಾ ಕೊಯಿಲು ಮುಗಿದು ಒಕ್ಕುವುದು ನಡೆಯುತ್ತಿದ್ದ ಗದ್ದೆಗೆ ಮೊದಲು ನಾಯಕ ಸಲಗ ನುಗ್ಗಿ ಅಧಿಪತ್ಯ ಸಾರುತ್ತಿತ್ತು. ಅದರ ಬೆನ್ನ ಹಿಂದೆಯೇ ಪರಿವಾರದ ಸದಸ್ಯಗಣ ನುಗ್ಗುತ್ತಿತ್ತು. ರಾತ್ರಿಯ ಕಾವಳದಲ್ಲಿ ಒಂದಿನಿತೂ ಸದ್ದು ಮಾಡದೇ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ಗಜ ಬಾಂಧವರು ಕತ್ತಲೆಯ ಪರ್ವತಗಳಂತೆ ಬರುತ್ತಿದ್ದರೆ, ಕಣದಲ್ಲಿ ಗೊಣಬೆ ಹಾಕುತ್ತ, ರೂಲು ಹೊಡೆಯುತ್ತ ಇರುತ್ತಿದ್ದ ರೈತರಿಗೆ ಚಿಕ್ಕ ಸುಳಿವೂ ಇರುತ್ತಿರಲಿಲ್ಲ. ಎಷ್ಟೋ ಬಾರಿ ಮರದ ದಿಮ್ಮಿಯಂಥ ಸೊಂಡಿಲು ಬಂದು ಗೊಣಬೆಯನ್ನು ಸೆಳೆದಾಗಲೇ ಅವರಿಗೆ ಇಹದ ಅರಿವು. ಆಮೇಲೇನು? ಸುತ್ತುವರಿದ ಅತಿಥಿ ಮಹೋದಯ(ರ)ರನ್ನು ಕಂಡು ಕ್ಷಣಾರ್ಧದಲ್ಲಿ ಎಲ್ಲ ಚೆಲ್ಲಾಪಿಲ್ಲಿ. ಗೊಣಬೆಯ ಕತೆಯೂ ಅದೇ.
ಒಮ್ಮೆ ನಮ್ಮ ಹೊಲದ ಪಕ್ಕದ ಕೃಷ್ಣಪ್ಪನ ಹೊಲದಲ್ಲಿ ಅವನ ತಾಯಿ ತಿಪ್ಪವ್ವ ಕಾವಲು ಇದ್ದಳು. ವಯಸ್ಸಾಗಿದ್ದ ಆಕೆಗೆ ಸಹಜವಾಗಿಯೇ ಒಳ್ಳೆ ನಿದ್ದೆ ಹತ್ತಿತ್ತು. ರಾತ್ರಿ ಒಂದು ಹೊತ್ತಿನಲ್ಲಿ ಕರಿರಾಯರ ತಂಡವೊಂದು ಹೊಲಕ್ಕೆ ದಾಳಿ ಇಟ್ಟಿತು. ಹೊಲ ಮೇಯುವುದಕ್ಕೆ ಮುದುಕಿಯ ಅಡ್ಡಿ ಖಂಡಿತ ಇರಲಿಲ್ಲ ನಿಜ, ಆದರೆ ಮಾಳದಲ್ಲಿ ಮಿನುಗುತ್ತಿದ್ದ ಬೆಂಕಿಯ ಕೆಂಡಗಳು ಆನೆಗಳ ಮನದಲ್ಲಿ ರೊಚ್ಚನ್ನೋ, ಕಿಡಿಗೇಡಿತನವನ್ನೋ ಜಾಗೃತಗೊಳಿಸಿರಬೇಕು. ಸರಿ, ಆ ಪೈಕಿ ಒಂದೆರಡು ಮಾಳದತ್ತ ಬಂದವು. ಒಂದು ಆನೆ ಮಾಳದ ಗೂಟ ಹಿಡಿದು ಅಲುಗಾಡಿಸಲಾರಂಭಿಸಿದರೆ, ಮತ್ತೊಂದು ಒಣಹುಲ್ಲಿನ ಮುಚ್ಚಿಗೆಯನ್ನು ಒಂದೇ ಸಾರಿಗೆ ಕಿತ್ತೆಸೆಯಿತು. ಒಳ್ಳೆ ತೊಟ್ಟಿಲು ತೂಗುವಂಥ ಅನುಭವವಾದರೂ, ಆ ವಯಸ್ಸಿನಲ್ಲಿ ಅದರ ಅಭ್ಯಾಸವಿಲ್ಲದ ತಿಪ್ಪವ್ವ ಎಚ್ಚರಗೊಂಡಳು. ಸುತ್ತ ಕತ್ತಲೆಯ ಪರದೆ- ಮಂಜುಗಣ್ಣಿನ ಮುದುಕಿಗೆ ಮೊದಲಿಗೆ ಏನೂ ಕಾಣಿಸಲಿಲ್ಲ. ಕ್ಷಣಗಳು ಕಳೆದ ಮೇಲೆ ಎರಡು ಜೋಡಿ ಕಣ್ಣುಗಳು, ಅವುಗಳಿಗೆ ಹೊಂದಿಕೊಂಡಿದ್ದ ಭಾರಿ ತಲೆಗಳು, ತೂಗಾಡುವ ತೊಲೆಗಳಂತಿದ್ದ ಸೊಂಡಿಲುಗಳು ಕಂಡವು. ಅಷ್ಟರಲ್ಲಾಗಲೇ ಒಂದು ಸೊಂಡಿಲು ತಿಪ್ಪವ್ವನಿಗೆ 'ಉಯ್ಯಾಲೆಸೇವೆ' ಸಲ್ಲಿಸಲು ಮುಂದೆ ಬಂದಿತ್ತು. ಎಲ್ಲಿತ್ತೋ ಅಷ್ಟು ಶಕ್ತಿ? ಅಪಾಯ ಗ್ರಹಿಸಿದ ಆಕೆ ಛಕ್ಕಂತ ಎದ್ದು ಕೆಳ ಜಿಗಿದಳು. 'ಹೆಗಡೇರೇ' ಎಂದು ಕೂಗುತ್ತ ಕತ್ತಲಲ್ಲಿಯೇ ನಮ್ಮ ಹೊಲದತ್ತ ಓಡಿ ಬಂದಳು. ಆಕೆಯ ಕೂಗಾಟ ಕೇಳಿ ಎಚ್ಚರಗೊಂಡ ಅಪ್ಪ ಲಗುಬಗೆಯಿಂದ ಮಾಳ ಇಳಿದು, ಎರಡೂ ಹೊಲಗಳ ನಡುವಿನ ತಂತಿಬೇಲಿಯತ್ತ ಓಡಿದ. ಆಕೆ ಅಲ್ಲಿ ಬರುತ್ತಲೇ ಆಕೆಯನ್ನು ಅನಾಮತ್ತಾಗಿ ಎತ್ತಿ ನಮ್ಮ ಹೊಲದೊಳಕ್ಕೆ ಕರೆದುಕೊಂಡ. ಆಮೇಲೆ ನಮ್ಮ ಮನೆಗೆ ಬಂದು ಬೆಚ್ಚಗೆ ಮಲಗಿದ್ದರೂ ಬೆಳತನಕ ಆಕೆಯ ಭಯ, ಕಂಪನ ಕಡಿಮೆಯಾಗಿರಲಿಲ್ಲ.
ನಮ್ಮ ತಂತಿ ಬೇಲಿಯ ಕಂಪೌಂಡ್ ದಾಟಿ ಆನೆಗಳು ಎಂದೂ ಒಳ ಬಂದಿರಲಿಲ್ಲ. ಆದರೆ ಹೊರಗಿನಿಂದಲೇ ಸಾಧ್ಯವಾದಷ್ಟು ಕಿಡಿಗೇಡಿತನ ಮಾಡದೇ ಬಿಡಲಿಲ್ಲ. ಬೇಲಿ ಹೋಗಲಿ, ಅದಕ್ಕೆ ತಾಗಿ ಇದ್ದ ಅಗಳಕ್ಕೂ ಆಚೆಯೇ ನಿಂತು, ಅಲ್ಲಿಂದಲೇ ಸೊಂಡಿಲು ತೂರಿ, ಭತ್ತದ ಗಿಡಗಳನ್ನು ಬಾಚಿ ಬಾಚಿ ತಿಂದದ್ದು ಒಮ್ಮೆಯಾದರೆ, ಬಾಳೆಗಿಡಗಳನ್ನು ಮುರಿದು ತಿಂದದ್ದು ಮತ್ತೊಮ್ಮೆ. ಸಾಲದೆಂಬಂತೆ ಗಿಡ್ಡ ಮರದಲ್ಲಿ ಬಿಟ್ಟಿದ್ದ ತೆಂಗಿನ ಹಿಂಡಿಗೆಯನ್ನೇ ಇಳಿಸಿ ಮೆದ್ದು ಹೋಗಿದ್ದವು. ಉಂಡ ಉಪಕಾರ ಸ್ಮರಿಸಿಯೋ ಅಥವಾ ಪರಿಹಾರಾರ್ಥವಾಗಿಯೋ, ಎಲ್ಲ ಸಂದರ್ಭಗಳಲ್ಲಿಯೂ ಧಾರಾಳವಾಗಿ ಬುಟ್ಟಿಗಟ್ಟಲೇ ಲದ್ದಿ ಹಾಕಿ ಹೋಗಿದ್ದವು!!
ಭತ್ತದ ಕೆಲಸವೆಲ್ಲ ಮುಗಿದ ಮೇಲೆ ಹಿಂಗಾರಿನ ತನಿಸು ಇದ್ದರೆ ಹಸರಣಿಗೆ (ದ್ವಿದಳ ಧಾನ್ಯ) ಹಾಕುತ್ತಿದ್ದರು ನಮ್ಮ ಹೊಲದಲ್ಲಿ. ಶೇಂಗಾ, ಉದ್ದು, ಹೆಸರು, ಕಡಲೆಗಳೆಲ್ಲ ಫಲ ಬಿಡುವ ಸಮಯದಲ್ಲಿ ಮೊಲದ ಕಾಟ ತಲೆದೋರುತ್ತಿತ್ತು. ಹಂದಿ, ಆನೆಗಳಿಗೆ ಹೋಲಿಸಿದರೆ ಇವು ಮಾಡುತ್ತಿದ್ದ ಹಾನಿ ನಗಣ್ಯ. ಆದರೂ ಉಪಟಳ ಜಾಸ್ತಿಯಾದಾಗ ಅಪ್ಪನ ತಲೆ ಕಾಯುತ್ತಿತ್ತು. ಹಾಗಂತ ಅವನೇನೂ ಅದರ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಆ ಕೆಲಸವನ್ನು ಸ್ವಲ್ಪ ಮಟ್ಟಿಗೆ ನಮ್ಮ ನಾಯಿಗಳು ಮಾಡುತ್ತಿದ್ದವು. ಇನ್ನು ಎಷ್ಟೋ ಬಾರಿ ಶಿಕಾರಿ ಹುಚ್ಚಿನ ಜನರು ಬಂದು ನಮ್ಮ ಹೊಲದಲ್ಲಿ ಉಳ್ಳ ಹಾಕಲು ಅನುಮತಿ ಕೇಳಿದರೆ ಅಪ್ಪ ಮುಕ್ತವಾಗಿ ಅನುಮತಿಸುತ್ತಿದ್ದ.
ಉಳ್ಳ ಹಾಕುವುದು ಭಾರಿ ಅಚ್ಚರಿಯ ಶಿಕಾರಿ ವಿಧ. ಕಣ್ಣ ಸೂಟಿನಲ್ಲೇ ಮೊಲ ಓಡಾಡುವ ದಾರಿ ಪತ್ತೆ ಮಾಡುತ್ತಿದ್ದ ಶಿಕಾರಿಗಳು ಮೊಣಕೈ ಉದ್ದದ ಎರಡು ಕವೆಗೂಟಗಳನ್ನು ಆ ದಾರಿಯ ಇಬ್ಬದಿಗಳಲ್ಲಿ ನೆಡುತ್ತಿದ್ದರು. ನಂತರ ಅವುಗಳನ್ನು ಸೇರಿಸಿ ಒಂದು ಸಪೂರ ತಂತಿ ಬಿಗಿದು ನಡುವಿನಲ್ಲಿ ಕುಣಿಕೆ ಹಾಕಿಡುತ್ತಿದ್ದರು. ಕುಣಿಕೆಯ ಆಚೀಚೆ ನುಸುಳಲು ಸಾಧ್ಯವಾಗದಂತೆ ಸೊಪ್ಪಿನ ಬೇಲಿ. ರಾತ್ರಿ ಮಾಮೂಲಿನಂತೆ ಬರುವ ಮೊಲ ತನಗರಿವಿಲ್ಲದಂತೆ ಕುಣಿಕೆಗೆ ಕೊರಳೊಡ್ಡುತ್ತಿತ್ತು. ಅಪಾಯದ ಅರಿವಾಗಿ ಅದು ತಪ್ಪಿಸಿಕೊಳ್ಳಲು ತಿಣುಕಾಡಿದಷ್ಟೂ ನೇಣು ಬಿಗಿಗೊಳ್ಳುತ್ತಿತ್ತು. ಒಂದ್ಹತ್ತು ಪ್ರಯತ್ನದ ನಂತರ ಪ್ರಾಣಪಕ್ಷಿ ಪರಲೋಕಕ್ಕೆ ಪಯಣಿಸುವುದು ಪಕ್ಕಾ.
ಒಮ್ಮೆ ರಾತ್ರಿ ಊಟದ ನಂತರ ಹಾಲು ಕುಡಿಯುತ್ತ, ಆಕಾಶ ನೋಡುತ್ತ ಕುಳಿತಿದ್ದೆವು. ಊರಿನ ಆಳೊಬ್ಬ ಏನೋ ಕಾರಣದಿಂದ ನಮ್ಮ ಮನೆಗೆ ಬಂದಿದ್ದ. ಆ ಸಮಯದಲ್ಲಿ ಗದ್ದೆಯ ಮಧ್ಯದಲ್ಲಿರುವ ಬಾವಿಯ ಬಳಿ ನಾಯಿಗಳು ಬೊಗಳುವುದು ಕೇಳಿತು. ಎಲ್ಲ ಆ ಕಡೆಗೆ ಹೋದೆವು. ಅದು ಕಲ್ಲು ಕಟ್ಟಿದ ಭಾರಿ ಅಗಲದ ನೆಲ ಮಟ್ಟದ ಬಾವಿ. ನಮ್ಮ ಎರಡೂ ನಾಯಿಗಳು ಅದರ ದಡದ ಮೇಲೆ ನಿಂತು ಕೆಳಗೆ ಇಣುಕಿ ಕೂಗುತ್ತಿದ್ದವು. ನಾಯಿಗಳನ್ನು ಅನುಸರಿಸಿ ಇಣುಕಿ ನೋಡಿದಾಗ ನಮಗೆ ಬೆಳದಿಂಗಳ ಆ ನಿಚ್ಚಳ ಬೆಳಕಿನಲ್ಲಿ ಬಾವಿಯೊಳಗೆ ಈಜುತ್ತಿದ್ದ ಮೊಲವೊಂದು ಕಾಣಿಸಿತು. ಹಸರಣಿಗೆ ತಿನ್ನಲು ಬಂದಿದ್ದ ಅದು ಬಹುಶಃ ನಾಯಿಗಳು ಬೆನ್ನಟ್ಟಿದ್ದೇ ಗಾಬರಿ ಬಿದ್ದು ಓಡ ಹೋಗಿ ಬಾವಿಯೊಳಗೆ ಬಿದ್ದಿತ್ತೇನೋ.
ನಾವೆಲ್ಲಾ ಇಣುಕಿ ನೋಡುತ್ತ ಮಾತನಾಡಲು ಶುರು ಮಾಡಿದ್ದೇ ಅದು ಇನ್ನೂ ಗಾಬರಿ ಬಿದ್ದು, ಸರಸರ ಬಾವಿಯಗಲಕ್ಕೂ ಈಜತೊಡಗಿತು. ಅದು ಈಜುವ ರಭಸ ನೋಡಿದರೆ ಇನ್ನರ್ಧ ಗಂಟೆಯಲ್ಲಿ ಸುಸ್ತಾಗಿ ಸಾಯಬಹುದೇನೋ ಅನ್ನುವಂತಿತ್ತು. ಅದನ್ನು ಹೇಗಾದರೂ ಮಾಡಿ ಮೇಲೆ ತಂದು ರಕ್ಷಿಸಬೇಕು ಎಂದು ಅಪ್ಪ ನಿರ್ಧರಿಸಿದ. ಅಲ್ಲೇ ಸತ್ತುಬಿಟ್ಟರೆ ಬಾವಿ ನೀರು ಹಾಳಾಗುತ್ತದೆ ಎಂಬ ಕಾಳಜಿಯೂ ಇತ್ತಲ್ಲ. ಸರಿ, ಒಂದು ಅಗಲದ ಬುಟ್ಟಿಯನ್ನು ತಂದು ಹಗ್ಗ ಕಟ್ಟಿ ಕೆಳಗೆ ಇಳಿಸಿದ್ದಾಯಿತು. ಆದರೆ ಆ ಬುಟ್ಟಿಯಲ್ಲಿ ಮೊಲವನ್ನು ಸೇರಿಸುವುದು ಕಪ್ಪೆಯನ್ನು ಹಿಡಿದು ಕೊಳಗದಲ್ಲಿ ತುಂಬುವುದಕ್ಕಿಂತ ಕಷ್ಟಕರವಾಗಿತ್ತು. ಬುಟ್ಟಿಯನ್ನು ಹತ್ತಿರ ತರುತ್ತಿದ್ದಂತೆಯೇ ಅದು ಇನ್ನಷ್ಟು ಬೆದರಿ ದೂರ ಈಜುತ್ತಿತ್ತು. ಹದಿನೈದು ನಿಮಿಷ ಸತತ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಬಾವಿ ಬೇರೆ ಭಾರಿ ಅಗಲವಿದ್ದುದು ಸಮಸ್ಯೆಯೇ ಆಯ್ತು. ಇನ್ನು ಕಾಲಹರಣ ಮಾಡುವುದು ಬೇಡ ಎಂದ ಅಪ್ಪ ತಾನೇ ಹಗ್ಗ ಹಿಡಿದುಕೊಂಡು ಬಾವಿ ಇಳಿದ. ಆತ ಕೆಳಗೆ ಬುಟ್ಟಿಯನ್ನು ಕೋಲಿನ ಸಹಾಯದಿಂದ ಮೊಲದತ್ತ ದೂಡಿದರೆ, ಮೇಲೆ ನಿಂತಿದ್ದ ಗೋಪಾಲಣ್ಣ ಮತ್ತು ಆಳು ಉದ್ದದ ಗಳುವನ್ನು ಇಳಿ ಬಿಟ್ಟು, ಅದು ಬೇರೆಡೆ ಹೋಗದಂತೆ ತಡೆದರು.
ಒಂದ್ಹತ್ತು ನಿಮಿಷದ ನಂತರ ಮೊಲ ಬುಟ್ಟಿಯೊಳಕ್ಕೆ ಬಂತು. ಹಗ್ಗ ಹಿಡಿದುಕೊಂಡಿದ್ದ ಅಣ್ಣ ಸರ್ರಂತ ಬುಟ್ಟಿಯನ್ನು ಮೇಲೆ ಎಳೆದ. ಈಜಿ ಈಜಿ ಸುಸ್ತಾಗಿದ್ದ ಮೊಲಕ್ಕೆ ಬುಟ್ಟಿಯಿಂದ ಹಾರಿ ಪರಾರಿಯಾಗುವಷ್ಟು ಶಕ್ತಿ ಇರಲಿಲ್ಲ. ಅದನ್ನು ಆಗಲೆ ಬಿಟ್ಟುಬಿಟ್ಟಿದ್ದರೆ ನಮ್ಮ ನಾಯಿಗಳು ಅದನ್ನು ಬದುಕಗೊಡುತ್ತವೆಂಬ ಭರವಸೆ ಇರಲಿಲ್ಲ. ಹಾಗಾಗಿ ಬಾವಿಯ ಪಕ್ಕದಲ್ಲಿ ಹುಲ್ಲ ಮೇಲೆ ಆ ಮೊಲವನ್ನು ಬಿಟ್ಟು, ಅದರ ಮೇಲೆ ಅದೇ ಬುಟ್ಟಿಯನ್ನು ಕವುಚಿ, ಅದರ ಮೇಲೊಂದು ದೊಡ್ಡ ಕಲ್ಲು ಹೇರಿ ಇಟ್ಟ ಅಪ್ಪ. ಬೆಳಗಾಗುವ ಹೊತ್ತಿಗೆ ಅದು ಚೇತರಿಸಿಕೊಳ್ಳುವುದರಿಂದ ನಾಯಿಗಳನ್ನು ದೂರವಿಟ್ಟು ಅದನ್ನು ಬಿಟ್ಟು ಬಿಡುವ ಯೋಚನೆ ಆತನದ್ದು.
ಸರಿ, ಬೆಳಗಾಯಿತು. ಬೇಗ ಎದ್ದ ನಾವೂ ಮೊಲವನ್ನು ಸ್ವತಂತ್ರಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಹೋದೆವು. ಭಾರಿ ಉತ್ಸಾಹದೊಂದಿಗೆ ಭಾರದ ಕಲ್ಲು ಸರಿಸಿ, ಬುಟ್ಟಿಯನ್ನು ಮೇಲೆತ್ತಿ ನೋಡಿದರೆ.... ಅಲ್ಲೇನಿದೆ? ಮೊಲ ನಾಪತ್ತೆ. ನಮಗೆ ಶಾಕ್! ಆದರೂ ನಂತರದಲ್ಲಿ ಮೊಲ ಏನಾಯ್ತು ಎಂದು ತಿಳಿದುಕೊಳ್ಳುವುದು ಕಷ್ಟವಾಗಲಿಲ್ಲ. ಮೊಲವನ್ನು ರಕ್ಷಿಸುವಲ್ಲಿ ನಮಗೆ ಸಹಾಯ ಮಾಡಿದಂತೆ ನಾಟಕ ಆಡಿದ್ದ ಆಳು, ನಾವು ಅದನ್ನು ಬುಟ್ಟಿಯಲ್ಲಿ ತುಂಬಿ ಹೋಗಿ ಮಲಗಿಕೊಂಡ ನಂತರ ವಾಪಸ್ ಬಂದು ಕದ್ದುಕೊಂಡು ಹೋಗಿದ್ದ. ಅವನೇನಾದರೂ ಮತ್ತೆ ಬಂದರೆ ಅವನಿಗೆ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕಲು ನಾನು, ಅಣ್ಣ-ಅಕ್ಕ ನಿರ್ಧರಿಸಿದೆವು. ಆದರೆ ನಮ್ಮ ರಜೆ ಮುಗಿಯುವ ತನಕ ಆತ ಇತ್ತ ಕಡೆಗೂ ಹಾಯ್ದಿರಲಿಲ್ಲ.
ಹೆಬ್ಬಾವು, ನಾಗರ ಹಾವು, ಕಾಡೆಮ್ಮೆ, ಕ್ಯಾಸಳಿಲು, ನರಿ, ನವಿಲು..... ಕಾಡಿನ ಬಗ್ಗೆ ಅನಂತ ಕುತೂಹಲ ಮೂಡಿಸಿದ್ದ ಪ್ರಾಣಿ-ಪಕ್ಷಿಗಳು ಒಂದೆರಡಲ್ಲ. ನನ್ನ ಬಾಲ್ಯವನ್ನು ಶ್ರೀಮಂತಗೊಳಿಸಿದ್ದ ಈ ಎಲ್ಲ ಪ್ರಾಣಿಗಳ ಋಣ ಭಾರ ಹೆಗಲೇರಿದೆ. ಅದನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳೋಣ ಎಂದರೆ ಅವೀಗ ಕಾಣಿಸಿಕೊಳ್ಳೋದೇ ಕಡಿಮೆಯಾಗಿದೆಯಲ್ಲ. ಏನು ಮಾಡೋದು ನೀವೇ ಹೇಳಿ.

ಸೋಮವಾರ, ಡಿಸೆಂಬರ್ 15, 2008

ಕಾಡು ಕಾಡ್ತು ೧: ಮನೆಯಂಗಳದ ಸಫಾರಿ

ನಾನು ಬಾಲ್ಯದ ಮೊದಲಾರು ವರ್ಷಗಳನ್ನು ಕಳೆದ ಹನುಮಾಪುರ, ಉತ್ತರ ಕನ್ನಡದ ಮುಂಡಗೋಡು ತಾಲ್ಲೂಕಿನ ಒಂದು ಕುಗ್ರಾಮ. ಆ ಸಮಯದಲ್ಲಿ ವಿದ್ಯುತ್, ಟಾರು ರಸ್ತೆ, ಬಸ್ ಸಂಪರ್ಕ ಏನನ್ನೂ ಕಾಣದ, ಶಾಲೆಯಿದ್ದೂ ಉತ್ತಮ ಶಿಕ್ಷಕರಿಲ್ಲದ ಕಾಡು ಹಳ್ಳಿ. ಹೇರಳ ಜನಸಂಖ್ಯೆ, ಧಾರಾಳ ಬಡತನ- ಇವಿಷ್ಟೇ ಆಗ ಆ ಊರಿನ ಹೆಗ್ಗಳಿಕೆ. ಅಂಥ ಪರಿಸರದ ಊರಿನಿಂದ ಸುಮಾರು ಒಂದು ಮೈಲು ದೂರದ ದೇವಗುಂಡಿ ಎಂಬಲ್ಲಿ ನಮ್ಮ ಒಂಟಿ ಮನೆ ಮತ್ತು ಜಮೀನು. ದೇವಗುಂಡಿಯಲ್ಲಿ ವಾಸವಿದ್ದರೂ ನಮ್ಮ ಮನೆಯನ್ನು ನಾವು ಹನುಮಾಪುರದ ವಿಸ್ತರಣೆ ಎಂದೇ ಗುರುತಿಸುತ್ತಿದ್ದೆವು.
ಅಷ್ಟು ಜನಸಂಪರ್ಕ ಬಿಟ್ಟರೆ ಉಳಿದಂತೆ ಕಾಡು, ಕಾಡು ಮತ್ತು ಎಲ್ಲೆಲ್ಲೂ ಕಾಡು. ಮನೆಯ ಎದುರಿದ್ದ ದೇವಗುಂಡಿ ಕೆರೆ, ಅದಕ್ಕೆ ತಾಗಿ ಇದ್ದ ಒಂದಿಷ್ಟು ಗದ್ದೆ ಬಯಲು, ಸುಮಾರು ಒಂದೂವರೆ ಮೈಲು ದೂರದಲ್ಲಿ ಕಾಡ ನಡುವಲ್ಲಿದ್ದ ಮಾಸ್ತ್ಯಮ್ಮನ ಗುಡಿ ಮತ್ತು ಅದರ ಹೆಸರನ್ನೇ ಹೊತ್ತ ಸನಿಹದ ಹಳ್ಳ, ಕೂಲಿ ಕೆಲಸಕ್ಕೆ ಬರುತ್ತಿದ್ದ ಊರಿನ ಜನ, ಮನೆಯ ಸದಸ್ಯರಾಗಿದ್ದ ದನಕರುಗಳು, ನಾಯಿ ಬೆಕ್ಕುಗಳು- ಇವೆಲ್ಲ ನಮ್ಮ ಒಡನಾಟದ ಅವಿಭಾಜ್ಯ ಅಂಗಗಳಾಗ. ಇವಷ್ಟೇ ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡಿದ್ದ ಹುಲಿ, ಕಿರುಬ, ಆನೆ, ಹಂದಿ, ಮಂಗಗಳಂತಹ ಕಾಡು ಪ್ರಾಣಿಗಳೂ ಅನಿವಾರ್ಯ ಒಡನಾಡಿಗಳೇ ಆಗಿದ್ದವು.
ಇಲ್ಲಿ ನಾವು ಎಂದರೆ ನಾನು, ಅಪ್ಪ-ಅಮ್ಮ, ನನಗೆ ಚಿಕ್ಕಪ್ಪನಂತಿದ್ದ ಗೋಪಾಲಣ್ಣ, ಆತನ ಪತ್ನಿ ಗೌರತ್ತಿಗೆ ಮತ್ತು ಅಕ್ಟೋಬರ್, ಮೇ ರಜೆಗಳಲ್ಲಿ ನಮ್ಮನ್ನು ಸೇರಿಕೊಳ್ಳುತ್ತಿದ್ದ ಅಣ್ಣ-ಅಕ್ಕ. ಮುಂದೆ ಶಾಲೆಗೆ ಸೇರಿ ವಲಸೆಹಕ್ಕಿಯಾದ ನಾನೂ ಅಣ್ಣ-ಅಕ್ಕನವರಂತೆ ರಜಾಕಾಲದ ವಿದ್ಯಮಾನವಾದೆ. ಹನುಮಾಪುರದಿಂದ ದೂರವಾಗಿ ಎಷ್ಟೇ ಕಾಲವಾದರೂ, ಬಿಟ್ಟು ಬರುವ ಮುನ್ನ ಕಟ್ಟಿಕೊಂಡು ಬಂದ ಬುತ್ತಿ ನೆನಪುಗಳು ಇನ್ನೂ ತಾಜಾ ಇವೆ. ಬಾಲ್ಯದ ವಿವಿಧ ಹಂತಗಳಲ್ಲಿ ಅಲ್ಲಿನ ಪರಿಸರದ ಜೊತೆ ನಡೆಸಿದ ಗುದಮುರಿಗೆ, ಗೆಳೆತನಗಳ ನೆನಪೆಲ್ಲ ಇಂದಿನ ಧಾವಂತದ ಬದುಕಿನಲ್ಲೂ ಮಳೆಗಾಲದ ಹಬ್ಬಗಳಂತೆ ಪದೇ ಪದೇ ಎದುರಾಗಿ ತನಿಸು ಉಣಿಸುತ್ತಿವೆ. ನನ್ನೊಳಗಿನ ಬರಹಗಾತಿಯನ್ನು ಕಟ್ಟಿದ ಪ್ರೋಟಿನ್ಗಳು ಅವು. ಅಂಥ ನೆನಪುಗಳ ಸಂಕಲನ ಈ 'ಕಾಡು ಕಾಡ್ತು'.

ಮನೆಯಂಗಳದ ಸಫಾರಿ

ಕಾಡಿನಂಚಿನಲ್ಲೇ ವಾಸಿಸುತ್ತಿದ್ದುದರಿಂದ ಅಲ್ಲಿನ ವೈವಿಧ್ಯಮಯ ಜೀವರಾಶಿ ನಮಗೆ ಅಪರಿಚಿತವಾಗಿರಲಿಲ್ಲ. ಸುಳಿವನ್ನೇ ನೀಡದೇ ಒಮ್ಮಿಂದೊಮ್ಮೆಗೆ ಪ್ರತ್ಯಕ್ಷವಾಗಿ, ನಾವು ಕಣ್ಣು ಹೊಸಕಿಕೊಂಡು ಮರು ದೃಷ್ಟಿ ಹರಿಸುವಷ್ಟರಲ್ಲಿ ಮಾಯವಾಗುತ್ತಿದ್ದ ಮಾಯಾವಿಗಳು ಹಲವಾದರೆ, ತಮ್ಮ ಉಪಟಳದಿಂದ ಶಾಶ್ವತವಾದ ತಣ್ಣನೆಯ ಭಯವನ್ನು ಮೂಡಿಸಿದ್ದ ಮೃಗಗಳು ಕೆಲವು. ಇಂದು ಮೃಗಾಲಯಗಳಿಗೆ ಸೀಮಿತವಾಗಿರುವ ಹಲವು ಅಪರೂಪದ ಜೀವಿಗಳನ್ನು ನನಗೆ, ಅಣ್ಣ-ಅಕ್ಕನಿಗೆ ಬಾಲ್ಯದಲ್ಲೇ ಪರಿಚಯಿಸಿತ್ತು ಮನೆ ಹಿಂದಿನ ಕಾಡು.
ಆ ದಿನಗಳ ಮಟ್ಟಿಗೆ ಅತಿಕ್ರಮಣದ ಆತಂಕವಿಲ್ಲದೇ, ಕಳ್ಳ ನಾಟಾ ಧಂಧೆಯವರ ಮಿತಿ ಮೀರಿದ ಕಾಟವಿಲ್ಲದೇ ಸಮೃದ್ಧವಾಗಿ ಹಸಿರನ್ನು ಹಾಸಿ ಹರಡಿಕೊಂಡಿದ್ದ ಆ ಕಾಡಿನ ಮುಕುಟವಿಲ್ಲದ ಮಹಾರಾಜ ಹುಲಿ. ಕರಡಿ, ಕಿರುಬ, ಕಾಡುಕೋಣ/ಎಮ್ಮೆ, ಜಿಂಕೆ, ಮೊಲ, ಕಾಡುಕುರಿ/ಕೋಳಿ, ಅಳಿಲು-ಕ್ಯಾಸಳಿಲು, ಹಂದಿಯಾದಿಯಾಗಿ ಅದರ ಪ್ರಜೆಗಳು. ಈ ಪೈಕಿ ಕರಡಿ, ಕಿರುಬ, ಹಂದಿಗಳು ಭಿನ್ನಮತೀಯ ನಾಯಕರಂತೆ ತಮ್ಮದೇ ಪ್ರತ್ಯೇಕ ಅಸ್ತಿತ್ವವನ್ನು ಸಾರಲು ಆಗಾಗ ಪ್ರಯತ್ನಿಸುತ್ತ ಸುದ್ದಿ ಮಾಡುತ್ತಿದ್ದವು. ಇನ್ನು ನೆರೆಯ ಪ್ರದೇಶಗಳಿಂದ ಜೈತ್ರಯಾತ್ರೆಗೆಂದು ಬಂದು, ತಮ್ಮ ಬಲ ಪ್ರದರ್ಶಿಸಿ, ಭಯ ಹುಟ್ಟಿಸಿ ಹೋಗುತ್ತಿದ್ದ ಆನೆಗಳಂಥ ಅತಿಥಿಗಳು ಬೇರೆ.
ಮಳೆಗಾಲದ ದಿನಗಳಲ್ಲಿ ಮಾಸ್ತ್ಯಮ್ಮದ ಕಡೆಯ, ಇತರ ಒಳಪ್ರದೇಶಗಳ ದಟ್ಟಡವಿಗಳನ್ನು ಹೊಕ್ಕುವುದೆಂದರೆ ಎಂಥ ಧೈರ್ಯವಂತರಿಗೂ ಸಣ್ಣ ಭಯ ಕಾಡುತ್ತಿತ್ತು. ಕಾರಣ ಕರಡಿಗಳು. ಹುಲಿ ಹೆಚ್ಚಾಗಿ ಓಡಾಡುವಂಥ ಕೆಲ ಜಾಗಗಳಲ್ಲೂ ಅಗತ್ಯ ಬಿದ್ದಾಗ ನಿರಾತಂಕವಾಗಿ ಹೋಗಿ ಬರುತ್ತಿದ್ದ ಅಪ್ಪ-ಗೋಪಾಲಣ್ಣ ಸಹ, ಮಳೆಗಾಲದಲ್ಲಿ ಕರಡಿಯ ಕ್ಷೇತ್ರವನ್ನು ಅವಾಯ್ಡ್ ಮಾಡುತ್ತಿದ್ದರು. ಕರಡಿ ಸಾಮಾನ್ಯವಾಗಿ ಅಂಜುಬುರುಕ ಪ್ರಾಣಿ. ಬಹುತೇಕ ಪ್ರಾಣಿಗಳಂತೆ ಅದೂ ಮನುಷ್ಯರಿಂದ, ಇತರ ಬಲಶಾಲಿ ಪ್ರಾಣಿಗಳಿಂದ ಆದಷ್ಟೂ ದೂರವಿರಲು ಬಯಸುತ್ತದೆ. ಆದರೆ ಮಳೆಗಾಲದಲ್ಲಿನ ಸ್ಥಿತಿಯೇ ಬೇರೆ. ಆಗ ಸಾಮಾನ್ಯವಾಗಿ ಮರಿ ಹಾಕುವ ಹೆಣ್ಣು ಕರಡಿ, ತನ್ನ ಕುಡಿಗಳ ರಕ್ಷಣೆಯ ವಿಷಯದಲ್ಲಿ ತೀರಾ ಆಕ್ರಮಣಶೀಲವಾಗಿರುತ್ತದೆ. ತನ್ನ ವ್ಯಾಪ್ತಿಯೊಳಗೆ ಬೇರೆ ಬಲಶಾಲಿ ಪ್ರಾಣಿ ಬಂತೆಂದರೆ ಯಾವುದೇ ಪ್ರಚೋದನೆ ಇಲ್ಲದೆಯೂ ಅದು ಆಕ್ರಮಣಕ್ಕಿಳಿಯುವ ಸಾಧ್ಯತೆ ಇರುತ್ತದೆ.
ಒಂದು ಮುಂಜಾವಿನಲ್ಲಿ ಚಿಟಗೇರಿಯ ಪುಟ್ಟಪ್ಪ ಮತ್ತವನ ಹೆಂಡತಿ ಕಾಡಿನ ದಾರಿಯಲ್ಲಿ ನಮ್ಮೂರಿಗೆ ಬರುತ್ತಿದ್ದರು. ಚಿಟಗೇರಿ ನಮ್ಮೂರಿನಿಂದ ಸುಮಾರು ನಾಲ್ಕು ಮೈಲು ದೂರದಲ್ಲಿದೆ. ನಡುವೆ ದಟ್ಟ ಕಾಡು. ಅವರ ಪಾಡಿಗೆ ಅವರು ಮಾತನಾಡುತ್ತ ಬರುತ್ತಿರಬೇಕಾದರೆ, ಅದೆಲ್ಲಿತ್ತೋ, ಒಂದು ಭಾರಿ ಕರಡಿ ಅವರ ಮೇಲೆರಗಿತು. ದಿಕ್ಕಾಪಾಲಾದ ಹೆಂಡತಿ ಗುಡ್ಡದ ಇಳಿಜಾರಿನಲ್ಲಿದ್ದ ಮಾಸ್ತ್ಯಮ್ಮದ ಹಳ್ಳದತ್ತ ಓಡಿದರೆ, ಪುಟ್ಟಪ್ಪ ಬಂದ ದಾರಿಯಲ್ಲೇ ಗುಡ್ಡ ಏರಿ ಓಡಿದ. ಕರಡಿಗೆ ಗುಡ್ಡ ಇಳಿಯುವುದಕ್ಕಿಂತ ಏರುವುದು ಸುಲಭ ನೋಡಿ, ಪುಟ್ಟಪ್ಪನ ಬೆನ್ನಟ್ಟಿತು. ಅವನನ್ನು ನೆಲಕ್ಕೆ ಕೆಡವಿ, ಉಗುರುಗಳಿಂದ ಆಕ್ರಮಣ ಆರಂಭಿಸಿತು. ಇದನ್ನು ದೂರದಿಂದಲೇ ಕಂಡ ಹೆಂಡತಿ ಇನ್ನು ಅವನನ್ನು ತನ್ನಿಂದಂತೂ ಪಾರು ಮಾಡಲಾಗುವುದಿಲ್ಲ ಎಂದುಕೊಂಡು, ಎರಡು ಮೈಲು ದೂರದ ಹನುಮಾಪುರಕ್ಕೆ ಓಡಿ ಬಂದು ವಿಷಯ ತಿಳಿಸಿದಳು. ಊರ ಜನ ಬಡಿಗೆ, ಹಾರೆ ಹಿಡಿದುಕೊಂಡು ಹೋಗಿ ನೋಡುವ ಹೊತ್ತಿಗೆ ರೋಷ ತೀರಿದ ಕರಡಿ ಪರಾರಿಯಾಗಿತ್ತು. ಹಣ್ಣುಗಾಯಿ, ನೀರುಗಾಯಿ ಆಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುಟ್ಟಪ್ಪನಲ್ಲಿ ಇನ್ನೂ ಕುಟುಕು ಜೀವವಿತ್ತು. ಆಮೇಲೆ ನಡೆದ ಆಸ್ಪತ್ರೆವಾಸ, ಪರಿಹಾರ ಪ್ರಹಸನದ್ದೇ ದೊಡ್ಡ ಕಥೆ ಬಿಡಿ.
ಮತ್ತೊಮ್ಮೆ ವಿರಾಜಪ್ಪ ಎಂಬ ಇನ್ನೊಬ ್ಬ ಗಂಡಸು ಬೆದೆಗರಡಿಯ ಕೈಗೆ ಸಿಕ್ಕಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಗ್ರಾಮದ ದೇವಸ್ಥಾನವೊಂದರ ಪೂಜಾರಿ ಆಗಿದ್ದ ವಿರಾಜಪ್ಪ ಹರಕೆಯ ಭತ್ತ ಸಂಗ್ರಹಿಸಲೆಂದು ಪಕ್ಕದೂರಿಗೆ ಹೊರಟಿದ್ದ. ಮಾರ್ಗ ಮಧ್ಯೆ ಕಾಡಿನ ಗರ್ಭದಲ್ಲಿ ಬೆದೆಗೆ ಬಂದಿದ್ದ ಹೆಣ್ಣುಕರಡಿಯೊಂದು ಅವನನ್ನು ಅಡ್ಡಹಾಕಿತು. ತಪ್ಪಿಸಿಕೊಳ್ಳಲು ಕೊಡದೇ ಅವನ ಮೇಲೆರಗಿದ ಕರಡಿ, ಅವನಲ್ಲಿ ತನ್ನ ಸಂಗಾತಿಯನ್ನು ಹುಡುಕತೊಡಗಿತು. ಹೊರಳಿಸಿ, ತಿರುಗಿಸಿ, ಅಪ್ಪಿ, ಮುದ್ದು ಮಾಡಿ.... 'ಕರಡಿ ಮುದ್ದು' ಎಂಬ ನುಡಿಗಟ್ಟನ್ನು ಅರಿತವರಿಗೆ ಕರಡಿಯ ತೆಕ್ಕೆಯಲ್ಲಿ ಸಿಕ್ಕಿಕೊಳ್ಳುವ ಪರಿಯ ಕಲ್ಪನೆ ಇರಬಹುದು. ಅಂತೂ ಇಂವ ತನಗೆ ಬೇಕಾದವನಲ್ಲ ಎಂದು ಆ ಕರಡಿ ಮನಗಂಡು ಬಿಟ್ಟು ಹೋಗುವ ಹೊತ್ತಿಗೆ ವಿರಾಜಪ್ಪನ ಮೈಯೆಂಬುದು ಸಿಪ್ಪೆ ಸುಲಿದ ಅಪ್ಪೆ ಹಣ್ಣಿನಂತಾಗಿತ್ತು. ಆತ ದಿನಾ ಪೂಜೆ ಸಲ್ಲಿಸುತ್ತಿದ್ದ ದೇವರ ಅನುಗ್ರಹವಿರಬೇಕು, ವಿರಾಜಪ್ಪ ಯಾರೋ ದಾರಿಹೋಕರ ಕಣ್ಣಿಗೆ ಬಿದ್ದು, ಬದುಕುಳಿದ. ಅವನಷ್ಟೇ ಅಲ್ಲ, ನಮ್ಮೂರಿನ ಆಸುಪಾಸು ಕರಡಿಯ ಕೈಯಲ್ಲಿ ಸಿಕ್ಕಿಕೊಂಡಿದ್ದ ಹೆಚ್ಚುಕಮ್ಮಿ ಎಲ್ಲರೂ ಬದುಕುಳಿದಿದ್ದಾರೆ, ಬದುಕಿಡೀ ಕಾಡುವ ಕರಾಳ ನೆನಪುಗಳೊಂದಿಗೆ.
ಈ ಪೈಕಿ ನನಗೆ ತೀರಾ ರೇಜಿಗೆ ಹುಟ್ಟಿಸಿದ ಪ್ರಕರಣ ಸಣ್ಣಪ್ಪನದು. ಇಲ್ಲಿ ರೇಜಿಗೆ ಹುಟ್ಟಿದ್ದು ಕರಡಿಯ ಬಗೆಗಲ್ಲ, ಮನುಷ್ಯರ ದುರಾಶೆ, ಅವಕಾಶವಾದಿ ಧೂರ್ತತೆಯ ಬಗ್ಗೆ. ಸಣ್ಣಪ್ಪ ನಮ್ಮೂರಿನಲ್ಲಿ ಹೆಸರು ಮಾಡಿದ್ದ ಬೇಟೆಗಾರ. ಈಡು ತುಂಬಿ, ಬಂದೂಕು ಹೆಗಲೇರಿಸಿಕೊಂಡು ಕಾಡು ತಿರುಗಲು ಹೊರಟನೆಂದರೆ ಖಾಲಿ ಕೈಯಲ್ಲಿ ಮರಳುತ್ತಿರಲಿಲ್ಲ ಆತ. ನಮ್ಮೂರ ಸುತ್ತಲಿನ ಕಾಡಿನಲ್ಲಿ ಹಂದಿ, ಜಿಂಕೆ, ಮೊಲ, ಕ್ಯಾಸಳಿಲುಗಳ ಸಂಖ್ಯೆಯನ್ನು ಕಡಿತಗೊಳಿಸುವಲ್ಲಿ ಅಂವ ಗಣನೀಯ ಪ್ರಮಾಣದ 'ಸೇವೆ' ಸಲ್ಲಿಸಿದ್ದ.
ಒಂದು ತುಂಬಿದ ನಿಶೆಯಲ್ಲಿ ಸಣ್ಣಪ್ಪ ಚೆನ್ನಾಗಿ ನಶೆಯೇರಿಸಿಕೊಂಡು, ಬಂದೂಕಿಗೆ ಈಡು ತುಂಬಿಕೊಂಡು, ಸಮೀಪದ ಹಾರುವಳ್ಳಿ ಕೆರೆಯ ಬಳಿ ಹೋಗಿ ಕುಳಿತಿದ್ದ. ಕೆರೆಯಂಚಿನಲ್ಲಿ ಕಾದು ಕುಳಿತರೆ ಒಂದಲ್ಲಾ ಒಂದು ಪ್ರಾಣಿ ಸಿಗುತ್ತದೆ ಎಂಬುದು ಅವನ ಅನುಭವ. ಸರಿರಾತ್ರಿಯಲ್ಲಿ ಒಂದು ಪ್ರಾಣಿ ಬಂತು. ದೂರದಿಂದ ಹೊಳೆಯುವ ಎರಡು ಕಣ್ಣುಗಳನ್ನು ದಿಟ್ಟಿಸಿದ ಸಣ್ಣಪ್ಪ, ಆ ಕಣ್ಣುಗಳ ನಡುವಿನ ಅಂತರವನ್ನು ಲೆಕ್ಕಹಾಕಿ ಅದು ಜಿಂಕೆಯೇ ಇರಬೇಕೆಂಬ ನಿರ್ಧಾರಕ್ಕೆ ಬಂದ. ಅಮಲನ್ನು ಹಾಸಿ ಹೊದೆದುಕೊಂಡಿದ್ದ ಅವನಿಗೆ ಅದು ಜಿಂಕೆ ಹೌದೋ ಅಲ್ಲವೋ ಎಂದು ಕಾದು ನೋಡುವಷ್ಟು ವ್ಯವಧಾನ ಇರಲಿಲ್ಲ. ಬಂದೂಕನ್ನೆತ್ತಿ ಗುಂಡು ಹಾರಿಸಿಯೇ ಬಿಟ್ಟ.
ಆತ ಜಿಂಕೆಯೆಂದುಕೊಂಡಿದ್ದು ವಾಸ್ತವದಲ್ಲಿ ಕರಡಿ ಆಗಿತ್ತು. ಅದು ಒಂದೇ ಏಟಿಗೆ ಸತ್ತಿದ್ದರೇ ಚೆನ್ನಿತ್ತೇನೋ. ಆದರೆ ಗಾಯಗೊಂಡು, ಘಾಸಿಗೊಂಡ ಆ ದೈತ್ಯ ಕರಡಿ, ತನ್ನ ಮೇಲೆ ವಿನಾಕಾರಣ ದಾಳಿ ಮಾಡಿದ ವೈರಿಯನ್ನು ಬಿಟ್ಟು ಬಿಡಲು ಸಿದ್ಧವಿರಲಿಲ್ಲ. ನೇರ ನುಗ್ಗಿಬಂದು ಸಣ್ಣಪ್ಪನ ಮೇಲೆರಗಿತು. ಕರಡಿ ತನ್ನನ್ನು ಕಚ್ಚಿ ಹರಿಯತೊಡಗಿದಾಗ ಸಣ್ಣಪ್ಪನ ನಿಶೆ ಇಳಿದು, ಅವನೂ ಸೊಂಟದಲ್ಲಿದ್ದ ಚಾಕು ಹೊರತೆಗೆದು ಆಕ್ರಮಣ ಶುರು ಮಾಡಿದ. ಹತ್ತು ಹದಿನೈದು ನಿಮಿಷ ನಡೆದ ಈ ಜಾಂಬವಂತ ಕಾಳಗ ಕೊನೆಗೊಳ್ಳುವ ಹೊತ್ತಿಗೆ ಗುಂಡೇಟು ತಿಂದು ತೀವ್ರ ಗಾಯಗೊಂಡಿದ್ದ ಕರಡಿ ರಕ್ತಸ್ರಾವದಿಂದ ಮೃತಪಟ್ಟರೆ, ಸಣ್ಣಪ್ಪ ಮುಖ ಮೈ ಸಿಗಿಸಿಕೊಂಡು ರಕ್ತಮಾಂಸದ ಮುದ್ದೆಯಾಗಿ ಬಿದ್ದಿದ್ದ.
ಬೆಳಗಿನ ಜಾವದಲ್ಲಿ ಕೆರೆಯಂಚಿಗೆ ಮಲಭಾದೆಗೆ ಬಂದವರಾರೋ ಕಂಡು, ಊರವರಿಗೆ ಸುದ್ದಿ ಮುಟ್ಟಿಸಿ, ಅಂತೂ ಅಸು ನೀಗುವ ಮೊದಲೇ ಆಸ್ಪತ್ರೆ ಸೇರಿದ ಸಣ್ಣಪ್ಪ. ಮುಖದ ಮೇಲಿನ ನೆರಿಗೆಗಳಿಗಿಂತ ಹೆಚ್ಚು ಹೊಲಿಗೆಗಳನ್ನು ಕಂಡ ಈ ಬೇಟೆಗಾರ ಕೊಂಚ ಚೇತರಿಸಿಕೊಂಡಿದ್ದೇ, ತನ್ನ ದುಸ್ಸಾಹಸಕ್ಕೆ ಹೊಸ ರೂಪ ನೀಡಿ ಬಿಟ್ಟ. ತಾನು ಬೇಟೆಗೆ ಹೋಗಿದ್ದೆ, ಕರಡಿಯ ಮೇಲೆ ಮೊದಲು ಆಕ್ರಮಣ ಮಾಡಿದ್ದು ತಾನೇ ಎಂಬ ವಿಷಯವನ್ನು ಮುಚ್ಚಿಟ್ಟು, 'ಮಲವಿಸರ್ಜನೆಗೆ ಹೋಗಿದ್ದ ತನ್ನ ಮೇಲೆ ಕರಡಿ ಎರಗಿತ್ತು' ಎಂದು ಕತೆ ಕಟ್ಟಿದ. ಪ್ರಭಾವಿಗಳಾಗಿದ್ದ ಅವನ ಬಂಧುಗಳಿಂದ ಈ ಕಟ್ಟುಕತೆಗೆ ಭಾರಿ ಪ್ರಚಾರ ದೊರೆಯಿತು. ಅವರು ಇಕ್ಕಿದ ಮೇವು ಮೆಲುಕಾಡಿದ ಅರಣ್ಯ ಇಲಾಖೆ ಸಿಬ್ಬಂದಿಯೂ, 'ಆ ಅಪರಾತ್ರಿಯಲ್ಲೇಕೆ ಸಣ್ಣಪ್ಪ ಒಂದೂವರೆ ಮೈಲು ದೂರದ ಕೆರೆಗೆ ಮಲವಿಸರ್ಜನೆಗೆ ಹೋಗಿದ್ದ' ಎಂದು ಪ್ರಶ್ನಿಸಲಿಲ್ಲ. ಕರಡಿಯ ಮೈಯಲ್ಲಿ ನಾಟಿದ್ದ ಗುಂಡಿನ ಬಗ್ಗೆ ಕನಿಷ್ಠ ಸಂದೇಹವನ್ನೂ ವ್ಯಕ್ತಪಡಿಸಲಿಲ್ಲ. ಪರಿಣಾಮ 'ವನ್ಯಮೃಗ ದಾಳಿಯಿಂದ ಸಂತ್ರಸ್ತನಾದ ಬಡಪಾಯಿ ಹಳ್ಳಿಗ'ನಿಗೆ ಧಾರಾಳ ಪರಿಹಾರ ದೊರೆತರೆ, ಪ್ರಚೋದನೆ ಇಲ್ಲದೆ ನಡೆದ ದಾಳಿಗೆ ಪ್ರತಿಭಟಿಸಿದ ನಿಷ್ಪಾಪಿ ಪ್ರಾಣಿ ಪರಲೋಕ ಸೇರಿದ್ದಷ್ಟೇ ಬಂತು.
('ಸಫಾರಿ' ಮುಂದುವರೆಯಲಿದೆ)

ಗುರುವಾರ, ಡಿಸೆಂಬರ್ 11, 2008

'ಬೆಳ್ಳಿ' ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....

ಹೀಗೊಂದು ಆಯ್ಕೆ: ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ. ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್ ಮಾತುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು.
ತಮಿಳು, ತೆಲುಗು ಲೇಬಲ್ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ. ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್ಗ್ರೇಡಿಂಗ್ ಎಂಟಿಟಿ.
ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.
ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ 'ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು' ('ಎರಡು ಕನಸು' ಚಿತ್ರದ 'ಪೂಜಿಸಲೆಂದೇ' ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ 'ಇದೇ ಹಾಡೇ ಬೇಕಾಗಿತ್ತ ನಿಂಗೆ' ಎಂದು ಸಿಡಿಮಿಡಿಗೊಳ್ಳುತ್ತಿದ್ದಳು.
'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ 'ವಿರಹ ನೂರು ನೂರು ತರಹ' ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ 'ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ' ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು.
ಇಡ್ಲಿ-ಸಾಂಬಾರು ಮಾಡಿದಾಗೆಲ್ಲ 'ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ' ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ 'ಬಂಧನ' ಚಿತ್ರದ 'ಪ್ರೇಮದಾ ಕಾದಂಬರಿ' ಧಾಟಿಯಲ್ಲಿ 'ಪ್ರೀತಿಯ ಕಾಯ್ತಂಬುಳಿ, ಬೀಸಿದೆ ಒಳ್ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ' ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ 'ಬಂಧನ' ಚಿತ್ರದ 'ನೂರೊಂದು ನೆನಪು' ಕೈ ಕೊಟ್ಟಾಗ ಇರಲಿ ಎಂದು 'ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ' ಎಂಬ ಬ್ಯಾಕಪ್ ಮೆಮೊರಿ ತಯಾರಾಗಿತ್ತು. ಹಾಗೆಯೇ 'ಉಪಕಾರ್' ಚಿತ್ರದ 'ಮೆರೆ ದೇಶ್ ಕೇ ಧರತಿ' ಹಾಡು 'ಮೇರೆ ಸೇಠ್ ಕೇ ಚಡ್ಡಿ ಫಡ್ ಫಡ್ ಫಾಟೆ, ಸಿಲೇ ನ ಕೋಯಿ ದರ್ಜಿ, ಮೇರೆ ಸೇಠ್ ಕೇ ಚಡ್ಡಿ' ಎಂಬ ರೂಪ ಪಡೆದಿತ್ತು.
ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ 'ಸ' ಬಂದರೆ 'ತೇಜಾಬ್' ಚಿತ್ರದ 'ಸೋ ಗಯಾ ಯೇ ಜಹಾಂ' ಹಾಡು ಗ್ಯಾರಂಟಿ. ಮತ್ತೊಮ್ಮೆ 'ಸ' ಬಂದಾಗ ಅದೇ ಧಾಟಿಯಲ್ಲಿ 'ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ' ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ 'ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......'ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.
ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ 'ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ' ಎಂದು 'ಹಮ್ರಾಝ್' ಚಿತ್ರದ 'ಹೇ ನೀಲೆ ಗಗನ್ ಕೆ ತಲೆ' ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು. ಎರಡನೇ ಬ್ಯಾಚ್ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- 'ದೇಖಾ ಹೈ ಪೆಹಲೀ ಬಾರ್, ಸಾಂಬಾರ್ ಮೇ ತುಅರ್ ಕಾ ದಾಲ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್, ಪೇಟ್ ಭರ್ ತುಜೇ ಖಾನೆ ಕೋ ಕಬ್ ಸೇ ಥೀ ಮೈ ಬೇಕರಾರ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್'- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ 'ಸಾಜನ್' ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ 'ಪಾಂಚ್ ಕಾ ಪಚಾಸ್, ಪಾಂಚ್ ಕಾ ಪಚಾಸ್' ಎಂಬ ಕೋರಸ್.
ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ 'ಸಜ'ವಾಗಿತ್ತು.
ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು 'ಶಿಕ್ಷಾ'ದಷ್ಟೇ 'ಶಿಕ್ಷೆ'ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮಥ್ರ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, 'ಕೋಲಿಸು'ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ 'ಸಾರೇ ಜಹಾಂ ಸೇ ಅಚ್ಛಾ'ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು. ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ 'ಗುಡ್ ಮಾರ್ನಿಂಗ್' ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ 'ಗರ್ಲ್ಸ್ ಸಿಡೌನ್' ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ 'ಯಾರು ಅದನ್ನು ಹಾಡಿದವರು' ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು 'ಇವರೇನು ಕೇಳುತ್ತಿದ್ದಾರೆ, ಆ 'ಅದು' ಏನು' ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು.
ಆಮೇಲೆ ತಿಳಿಯಿತು: ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು 'ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್ ಮೇ ಬಚ್ಚಾ' ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.
ಕನ್ನಡ ಶಾಲೆಯಲ್ಲಿ ಓದುವಾಗ 'ವಂದೇ ಮಾತರಂ' ಬಲ್ಲದ ಮಕ್ಕಳಿಗೂ 'ವಂದೇ ಮಾಸ್ತರಂ' ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ 'ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ' ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ.
ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. 'ಬಣ್ಣಾ ನನ್ನ ಒಲವಿನ ಬಣ್ಣಾ', 'ಶಿಲೆಗಳು ಸಂಗೀತವ ಹಾಡಿವೆ', 'ಧರಣಿ ಮಂಡಲ ಮಧ್ಯದೊಳಗೆ', 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ'ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. (ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ). ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ.
ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ 'ಬೆಳ್ಳಿ' ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು. 'ದೋ ಆಂಖೆ ಬಾರಾ ಹಾಥ್'ನ 'ಏ ಮಾಲಿಕ್ ತೇರೆ ಬಂದೆ ಹಮ್' ಧಾಟಿಯ 'ಮಂಗಳೇಶ ಮಹೇಶ ನಮೋ', 'ಬೀಸ್ ಸಾಲ್ ಬಾದ್'ನ 'ಕಹೀಂ ದೀಪ್ ಜಲೆ ಕಹೀಂ ದಿಲ್' ಧಾಟಿಯ 'ಗುರುದೇವ ಪರಿಪೂರ್ಣ', 'ಕವಿರತ್ನ ಕಾಳಿದಾಸ'ದ 'ಸದಾ ಕಣ್ಣಲಿ' ಹಿಂಬಾಲಿಸಿ ಬಂದ 'ಗುರುವೆ ನಿನ್ನೆಯ ನಾಮವ', 'ಕಸ್ತೂರಿ ನಿವಾಸ'ದ 'ಎಲ್ಲೇ ಇರು' ಅಂಗಿ ತೊಟ್ಟ 'ಗೌರಿ ಪ್ರಿಯ, ತೋರೋ ದಯ'ಗಳೆಲ್ಲ ಹೀಗೆ ಡಿಸೈನರ್ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು).
ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ.
ಕೊನೆಗೊಂದು ಕೊಸರು: ಹಲವು ಸಲ 'ಚಲ್ತೇ ಚಲ್ತೇ' ಚಿತ್ರದ ಶೀರ್ಷಿಕೆ ಗೀತೆ- 'ಚಲ್ತೇ ಚಲ್ತೇ ಮೇರೆ ಯೇ ಗೀತ್ ಯಾದ್ ರಖನಾ'ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- 'ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರ ನೂತನವು'.

('ದ್ಯಾಟ್ಸ್ ಕನ್ನಡ'ಕ್ಕೆ ಧನ್ಯವಾದ ಹೇಳುತ್ತ..)

ಸೋಮವಾರ, ಡಿಸೆಂಬರ್ 8, 2008

ಅದೋ ಅಲ್ಲಿ, ಅಲ್ಲಿಗೇಟರ್!!

ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು- 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ.
ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.
ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.
ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು... ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು.
ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ... ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ'- ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ. ಅದೂ ಪುಳಕ್ಕನೇ ಮರೆಯಾಯಿತು. ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ, ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು.
ಮೊಲ, ನರಿ, ಜಿಂಕೆ, ಹಂದಿ, ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ, ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ. ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ. ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು. ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ 'ಮಕರ ಜ್ಯೋತಿ'ಯ ದರ್ಶನ ಮಾಡುತ್ತಾರಂತೆ. ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ 'ಮಕರ ದರ್ಶನ' ಲಭ್ಯ.
ಈ ಕಡೆ ರಸ್ತೆಯಂಚಿನಲ್ಲಿ, ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ. ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ, ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು-ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು. ಇಲ್ಲಿನ ಕೆರೆ, ಕಾಲುವೆಗಳ ಅಂಚಿನಲ್ಲಿ 'ಮೊಸಳೆಗಳನ್ನು ಹಿಂಸಿಸಬೇಡಿ, ಆಹಾರ ಹಾಕಬೇಡಿ' (ಆಹಾರವಾಗಲೂಬೇಡಿ) ಎಂಬ ಎಚ್ಚರಿಕೆ ಸಾಮಾನ್ಯ.
ಇಲ್ಲಿನ ಮೊಸಳೆಗಳು (ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ 'ಮಗರ್' (ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್) ಜಾತಿಯ ಮೊಸಳೆಗಳಿಗಿಂತ ವಿಭಿನ್ನ. ಇವಕ್ಕೆ ಆಂಗ್ಲ ಭಾಷೆಯ 'ಯು' ಆಕಾರದ ಅಗಲ ಮೂತಿಯಿದ್ದರೆ ಅವರದ್ದು 'ವಿ' ಆಕಾರದ ಮೂತಿ. ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ, ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ, ಮೇಲ್ಚಾಚಿಕೊಂಡಿರುತ್ತದೆ. ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು 'ಅಲ್ಲಿಗೇಟರ್'ಗಳು, ಸಿಹಿ ನೀರಿನ ಜೊತೆ ಉಪ್ಪು-ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು 'ಕ್ರೊಕೊಡೈಲ್'ಗಳು. ಭಾರತದ ಗಂಗಾ ನದಿ, ಮಹಾನದಿ-ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ 'ಘರಿಯಲ್' (ಗವಿಯಾಲಿಸ್ ಗ್ಯಾಂಜೆಟಿಕಸ್) ಎಂಬ ಸಪೂರ, ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ. ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ. ಅಂಡಮಾನ್ ದ್ವೀಪ ಸಮೂಹದಲ್ಲಿ, ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ (ಕ್ರೊಕೊಡೈಲಸ್ ಪೊರೊಸಸ್) ಇವೆ.
ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ 'ಮಕರ ಕಟ್ಟು' ಎಂಬ ಜಾಗವೊಂದಿದೆ. ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ. ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ, ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ 'ಮೊಸಳೆ ಗುಂಡಿ'. ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ. 'ಛೇ, ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ' ಎಂದು ಹಲವು ಬಾರಿ ಹಳಹಳಿಸಿದ್ದೆ. ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು.
Free Web Counter

Free Counter

ಭಾನುವಾರ, ಡಿಸೆಂಬರ್ 7, 2008

ಅಸ್ತ-ಉದಯ

ಆತ ಓಡುತ್ತಲೇ ಇದ್ದ
ನಾ ಹಿಂಬಾಲಿಸಿ ಬಸವಳಿದೆ
ಆತ ಮುನ್ನುಗ್ಗಿ ಮರೆಯಾದ
ನಾ ಮುಸುಕೆಳೆದು ಮಲಗಿದೆ

ಕಣ್ಣೊಡೆದರೆ, ಅರೆ!
ಆತ ಆಗಲೇ ಎದುರಿದ್ದಾನೆ
ನಾ ಮುಖ ತೊಳೆದು ಮಡಿಯಾದೆ
ಮತ್ತೆ ಓಟ ಶುರುವಾಗಿದೆ...

ಶುಕ್ರವಾರ, ಡಿಸೆಂಬರ್ 5, 2008

ಹೆತ್ತೊಡಲ ಹಕ್ಕು

ಹಕ್ಕಿದೆ ನನಗೆ ಮಗುವಿನ ಮೇಲೆ
ಲಾಲಿಸಲು, ಮುದ್ದಿಸಲು, ರಮಿಸಲು
ಹೆಸರಿಟ್ಟು ಕೂಗಿ ಕರೆಯಲು
ಶಿಕ್ಷಿಸಲು, ತಿದ್ದಿ ನಡೆಸಲು
ಅದ ಕಿತ್ತುಕೊಳ್ಳದಿರಿ ನೀವು

ಹೊತ್ತಿದ್ದೆ ಅವನನ್ನು
ಸುತ್ತಲ ಜಗದ ಬೇಗೆ ತಾಕದಂತೆ
ಮುಚ್ಚಟೆಯಿಂದ ಬಸಿರಲ್ಲಿ
ಹಿರಿದು, ಹಿಸಿದು ಕೆಳ ಜಗ್ಗುತಿಹ
ಭಾರವನ್ನು ಸಹಿಸಿ ಪೊರೆದಿದ್ದೆ ಒಡಲಲ್ಲಿ

ಹಿಡಿಹಿಡಿಯಾಗಿ ಹಿಂಡಿದ
ಹನ್ನೆರಡು ತಾಸಿನ ಹೆರಿಗೆಗೆ ಹೆದರಿ
ಕುಂತು, ನಿಂತು
ಸೋತು
ಹೊರಳಾಡಿ, ಅರಚಾಡಿ ಅಂತೂ
ಪಡೆದಿದ್ದೆ ಮಡಿಲಲ್ಲಿ

ನಿದ್ರಾವಶನಾದ ಕಂದ
ಕಾಲ ಮರೆತು ಬಿದ್ದು ಮಲಗುತಿರೆ
ಬಸಿಯುತಿಹ ಎದೆಹಾಲ ಕಂಡು
'ಛೇ, ಸೋರಿಹೋಗುತ್ತಿದೆಯಲ್ಲ ಜೀವಾಮೃತ'
ಎಂದು ಮರುಗಿ ಪರಿತಪಿಸಿದ್ದೆ

ಒಪ್ಪುತ್ತೇನೆ, ಕೊಟ್ಟಿದ್ದೀರಿ ನೀವು
ದುಡ್ಡು, ಅಂತಸ್ತು, ಐಷಾರಾಮಗಳನ್ನು
ಅದ ನಾ ಕೊಡಲೂಬಲ್ಲೆ
ಅದಕ್ಕೆ ಮುಂಚೆ
ಹಡೆದು ತೋರಿಸಿ ಒಮ್ಮೆ.

ಬುಧವಾರ, ಡಿಸೆಂಬರ್ 3, 2008

ಕಾಲದ ಅಲ್ಬಂನಿಂದ ಹೆಕ್ಕಿದ ಚಿತ್ರಗಳು

ನಿಮಗೆಷ್ಟು ಮಂದಿ ಪರಿಚಯವಿರಬಹುದು? ಒಂದು, ಎರಡು, ಮೂರು... ನೂರು..... ಸಾವಿರದ ಆರುನೂರ ಎಪ್ಪತ್ತೆಂಟು...... ಮೂರು ಸಾವಿರದ ಎರಡು ನೂರ ಹತ್ತು..... ಲೆಕ್ಕ ಮಾಡುವುದು ಭಾರಿ ಕಷ್ಟ.
ಜೀವನದಲ್ಲಿ ಮೊದಲಬಾರಿ ಗುರುತಿನ ಛಾಪು ಮೂಡಿಸಿದ ಅಮ್ಮನಿಂದ ಹಿಡಿದು ಬೆಳಿಗ್ಗೆ ಕಚೇರಿಗೆ ಬರುವಾಗ ಟಿಕೆಟ್ ಕೊಟ್ಟಿದ್ದ ಸಿಡುಕ ಬಸ್ ನಿರ್ವಾಹಕ, ಮಗನನ್ನು ಶಾಲೆಗೆ ಬಿಡಲು ಹೋದಾಗ ಅದೇ ವೇಳೆಗೆ ತನ್ನ ಮಗಳನ್ನು ಕರೆ ತರುವ ಗುಳಿ ಗೆನ್ನೆಯ ತಿಳಿ ನಗುವಿನ ಆಕೆ, ಅಪಾರ್ಟಮೆಂಟಿನ ಇಸ್ತ್ರಿವಾಲ, ಗಡಿಬಿಡಿಯಿಂದ ರಸ್ತೆಯಲ್ಲೇ ವಾಹನ ನಿಲ್ಲಿಸಿ ಕೀಲಿ ಕೊಟ್ಟು ಹೋದರೆ ಪುಟ್ಟ ಜಾಗವಾಗುತ್ತಿದ್ದಂತೆ ತಳ್ಳಿಕೊಂಡು ಬಂದು ಅದನ್ನು ತೂರಿಸುವ ಪಾರ್ಕಿಂಗ್ ಸಹಾಯಕ... ಎಲ್ಲರೂ ಪರಿಚಯದವರೇ. ಹಲವರದು ರಕ್ತ-ಹೃದಯದ ಪರಿಚಯ, ಹಲವರದು ಕಣ್ ಪರಿಚಯ, ಇನ್ನು ಕೆಲವು ವ್ಯಾವಹಾರಿಕ ಪರಿಚಯ, ಕೆಲವಷ್ಟಂತೂ ತೋರಿಕೆಯವು.
'ಪರಿಚಯ' ಎಂಬ ಆ ವಿಶಾಲ ಹರವಿನ ಪರಿಧಿಯೊಳಗೆ ಇನ್ನೂ ಒಂದು ಪುಟ್ಟ ಪ್ರಪಂಚ ಇದೆ. ಒಂದಿಲ್ಲೊಂದು ರೀತಿಯಲ್ಲಿ ಒಡನಾಟದಲ್ಲಿರುವ, ಹಿಡಿಸಲಿ ಬಿಡಲಿ- ಅಂತೂ ಸದಾ ಸನಿಹದಲ್ಲೆಲ್ಲೋ ಸುಳಿದಾಡುವ ಒಂದಷ್ಟು ಜನರು ಈ ಪ್ರಪಂಚದ ಪ್ರಜೆಗಳು. ಒಂದು ನಾಲ್ಕಾರು ದಿನ ಕಾಣಲಿಲ್ಲವೆಂದರೆ 'ಅರೆ! ಯಾಕಪ್ಪಾ, ಅಂವ/ಅವಳು ಕಾಣ್ತಾ ಇಲ್ಲ' ಎಂದು ಕುತೂಹಲ ಮೂಡಿಸುವಷ್ಟರ ಮಟ್ಟಿಗೆ ಮನದಲ್ಲಿ ಮಣೆ ಹಾಕಿ ಕುಂತವರು.
ಅವರಲ್ಲೊಬ್ಬ ಮಳಗಿ ಫಕ್ಕೀರಪ್ಪ. ಫಕ್ಕೀರಪ್ಪ ನಾನು ನೋಡುವಷ್ಟರ ಹೊತ್ತಿಗೆ ಅರವತ್ತರ ಅಂಚು ಮುಟ್ಟಿದ್ದ ಮುದುಕ. ಸಣ್ಣ ಆಳ್ತನ, ಕೀರಲು ದನಿ, ಸದಾ ಮುಖದ ಮೇಲೆ ಮೇಳೈಸಿರುತ್ತಿದ್ದ ಚುಪುರು ಗಡ್ಡ, ಕುಳಿ ಬಿದ್ದ ಕೆನ್ನೆ..... ಕಣ್ಣಿಗೆ ಬೀಳುತ್ತಿದ್ದಂತೆಯೇ ಕಾಣಿಸಿಕೊಳ್ಳುತ್ತಿದ್ದ ಕಿರುಹಾಸ, ಆ ನಗೆಯನ್ನು ಅರೆಕ್ಷಣದಲ್ಲಿ ಮರೆ ಮಾಚುತ್ತಿದ್ದ ಬೀಡಿಯ ಹೊಗೆ... ಹಿಂದೆಂದೋ ಒಂದು ಕಾಲದಲ್ಲಿ ಬಿಳಿಯದ್ದಾಗಿರಬಹುದಾದ ಒಂದು ಮಾಸಲು ಪಂಜಿ (ಧೋತಿ), ಸರಿಯಾಗಿ ಹೊಟ್ಟೆಯ ಮೇಲೆ ಕಿಸೆ ಇರುತ್ತಿದ್ದ ಪಂಜಿಯ 'ಮ್ಯಾಚಿಂಗ್' ಬಣ್ಣದ ಹತ್ತಿಯ ಅಂಗಿ, ಕಿಸೆಯಲ್ಲಿ ಮರೆಯಾಗಿದ್ದೂ ಇರುವನ್ನು ತೋರುವ ಬೀಡಿ ಮತ್ತು ಬೆಂಕಿ ಪೊಟ್ಟಣಗಳು, ತಲೆಗೆ ಸುತ್ತಿದ್ದ ಬಣ್ಣ ಅಳಿದ ಟವೆಲ್......-ಇದು ಫಕೀರಪ್ಪನ 'ಪೋರ್ಟ್ರೇಟ್'!
ಫಕ್ಕೀರಪ್ಪನ ಪತ್ನಿ ಫಕ್ಕೀರವ್ವ. ನೊಸಲ ಮೇಲೆ ಕಾಸಗಲ ಕುಂಕುಮ ಇಡುತ್ತಿದ್ದ ಲಕ್ಷಣವಾದ ಹೆಂಗಸು. ಫಕ್ಕೀರಪ್ಪನ ಭಾಷೆಯಲ್ಲಿ 'ನಮ್ ಮುದುಕಿ'. ಆಕೆಗಂವ 'ನಮ್ ಮುದ್ಕ'!. ತಿರುಪತಿ, ಬಸವ, ಹೂವಕ್ಕ ಇವರ ಮಕ್ಕಳು. ನಮ್ಮ ಹೊಲದ ಕೆಳಭಾಗದಲ್ಲಿ, ಕಣ್ಣಿಗೆಟಕುವಷ್ಟು ದೂರದಲ್ಲಿ ಫಕ್ಕೀರಪ್ಪನ ಹೊಲ ಇತ್ತು. ಒಳ್ಳೆ ದುಡಿವಾನಿಯಾಗಿದ್ದ ಆತ ಹೊಲದ ಕೆಲಸವನ್ನು ಹೊತ್ತಿಗೆ ಸರಿಯಾಗಿ ಮಾಡುತ್ತಿದ್ದ. ಪ್ರತಿ ಬಾರಿ ಹೊಲಕ್ಕೆ ಬಂದಾಗಲೊಮ್ಮೆ ಮುದ್ದಾಂ ನಮ್ಮ ಮನೆಗೆ ಭೇಟಿ ಕೊಡುತ್ತಿದ್ದ. 'ಅಮ್ಮಾರೆ, ಒಂದೀಟು ಮಜ್ಜಿಗೀ ಕೊಡ್ರೀ, ಭಾಳ ತರಾಸ್ ಆಗಾಕ್ಹತ್ತೈತಿ', 'ಅಪ್ಪಾರೆ, ಒಂಚೂರು ಅಡಿಕೀ ಕೊಡ್ರೀ, ನಾಕು ದಿನ್ದಿಂದಾ ಎಲಡಕಿ ಹಾಕ್ದ ಬಾಯೆಲ್ಲಾ ಮರಮರಾ ಅಂತೈತಿ...'- ಭೇಟಿಯ ಜೊತೆಗೆ ಬೇಡಿಕೆಯೂ ಬಹಳಷ್ಟು ಸಲ ಇರುತ್ತಿತ್ತು. ನಮ್ಮನ್ನು ಕಂಡೊಡನೆ ಇಷ್ಟಗಲ ಬಾಯರಳಿಸಿ 'ಅಯ್ಯ್! ಸಣ್ಣಮ್ಮಾ/ಪ್ಪಾರು ಯಾವಾಗ್ ಬಂದೀರಿ, ಸಾಲೀ ಮುಗೀತೇನು' ಎಂದು ವಿಚಾರಿಸಿಕೊಳ್ಳುತ್ತಿದ್ದ. ನಾವಿನ್ನೂ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ಎಳೆ ವಿದ್ಯಾರ್ಥಿಗಳು, ಆದರೂ ಫಕ್ಕೀರಪ್ಪನಿಗೆ 'ಹೆಗಡೇರ ಮಕ್ಕಳು ಬುಧವಂತ್ ಅದಾರ, ಛೊಲೋ ಓದಾಕ್ಹತ್ತಾರ' ಎಂಬ ವಿಶೇಷ ಅಭಿಮಾನ ಇತ್ತು.
ಇಂತಿಪ್ಪ ಫಕ್ಕೀರಪ್ಪ ನಮ್ಮ ಪಾಲಿಗೆ ಆಕಾಶವಾಣಿಯ ಲೋಕಲ್ ಆವೃತ್ತಿ ಆಗಿದ್ದ. ಊರಲ್ಲಿ ಏನಾತು, ಏನು ಆಗಲಿಕ್ಕಿದೆ, ಏನೇನು ಆಗಬಹುದು.. ಎಂಬೆಲ್ಲಾ ವಿವರಗಳನ್ನು ಅವನು ನಮಗೆ ಬೇಕಿರಲಿ, ಬಿಡಲಿ ತಪ್ಪದೇ ವರದಿ ಮಾಡುತ್ತಿದ್ದ. ಕುಂತಲ್ಲಿ, ನಿಂತಲ್ಲಿ ಕತೆ ಹೇಳುತ್ತಿದ್ದ ಫಕ್ಕೀರಪ್ಪನಿಗೆ ಅಪ್ಪ ಒಮ್ಮೊಮ್ಮೆ 'ತಡೀ ಮಾರಾಯ, ನಿನ್ನ ಕತೆ ಕಾಲದಲ್ಲಿ ನನಗೆ ಇದ್ದ ಕೆಲಸ ಮರ್ತೋಗ್ತದೆ' ಎಂದು ಗದರುತ್ತಿದ್ದ. ಅಮ್ಮ ಹಾಗಲ್ಲ, ಅವನಿಂದ ಅಷ್ಟೂ ವಿಷಯಗಳನ್ನು ಪೂರ್ತಿ ಕೇಳಿಸಿಕೊಂಡು, ಅದರಲ್ಲಿ ಅರ್ಧದಷ್ಟನ್ನು ಮಾತ್ರ ನಂಬುತ್ತಿದ್ದಳು. 'ಫಕ್ಕೀರಪ್ಪಾ, ನೀ ಇಲಿ ಹೋದ್ರೆ ಹುಲಿ ಹೋತು ಅಂಬ ಪೈಕಿ' ಎಂದು ಎದುರಾ ಎದುರೇ ಹೇಳುತ್ತಿದ್ದಳು. 'ಏ ಇಲ್ರೀ ಅಮ್ಮಾರೇ' ಎಂದು ನಗುತ್ತಲೇ ಅಮ್ಮನ ಚಾಟಿ ಏಟು ಸ್ವೀಕರಿಸುತ್ತಿದ್ದ ಫಕ್ಕೀರಪ್ಪ, ಉತ್ಪ್ರೇಕ್ಷೆಯ ತನ್ನ ಹುಟ್ಟುಗುಣವನ್ನು ಮಾತ್ರ ಎಂದೂ ಬಿಟ್ಟುಕೊಟ್ಟಿದ್ದಿಲ್ಲ.
ಫಕ್ಕೀರಪ್ಪನ ಗುಣವೇ ಅದು. ತನ್ನ ತಪ್ಪನ್ನು ಎತ್ತಿ ತೋರಿಸಿದರೆ ತಕ್ಷಣ ಒಪ್ಪಿಕೊಳ್ಳುತ್ತಿದ್ದ ಅಂವ, ಅದನ್ನು ಎಂದೂ ಸುಧಾರಿಸಿಕೊಂಡಿದ್ದಿಲ್ಲ. ಸದಾ ಬೀಡಿ ಹೊತ್ತಿಸುತ್ತಿದ್ದ ಆತ ನಮ್ಮ ಮನೆಗೆ ಬಂದು ಹೊಗೆಯುಗುಳತೊಡಗಿದರೆ ಅಮ್ಮನ ಕಣ್ಣು ಬೆಂಕಿ ಉಗುಳುತ್ತಿತ್ತು. ಧೂಮಪಾನದ ಕಡು ವಿರೋಧಿಯಾದ ಅಮ್ಮ, 'ಫಕ್ಕೀರಪ್ಪಾ, ನೀ ಇಲ್ ಬಂದ್ಕಂಡು ಆ ಸುಡುಗಾಡು ಹೊಗೆ ಬಿಡ್ಬೇಡಾ' ಎಂದು ಗದರುತ್ತಿದ್ದಳು. 'ಆತ್ರೀ ಅಮ್ಮಾರೇ' ಎನ್ನುತ್ತಿದ್ದ ಆತ ಬೇರೆಡೆಗೆ ಹೋಗಿ ಆ ಬೀಡಿಯನ್ನು ಪೂರೈಸಿಯೇ ಬರುತ್ತಿದ್ದನೇ ಹೊರತು, ಎಂದೂ ಆರಿಸಿದ್ದಿಲ್ಲ. ಕುಡಿತದ ಚಟವೂ ಇದ್ದ ಆತ ಅಪರೂಪಕ್ಕೊಮ್ಮೆ ಕುಡಿದು ನಮ್ಮ ಮನೆಗೆ ಬರುತ್ತಿದ್ದ. ಸಾರಾಯಿ ವಾಸನೆ ತನ್ನೆಡೆಗೆ ಬರದೇ ಹೋದರೂ, ಹಿತ್ತಲ ಕಡೆ ಇರುತ್ತಿದ್ದ ಅಮ್ಮನಿಗೆ ಹೆಬ್ಬಾಗಿಲ ಅಂಗಳದಲ್ಲಿ ಇದ್ದ ಫಕ್ಕೀರಪ್ಪ ಕುಡಿದು ಬಂದಿರುವುದು ಆತನ ಮಾತಿನಿಂದಲೇ ಗೊತ್ತಾಗುತ್ತಿತ್ತು. ಮೊದಲೇ ವಾಚಾಳಿಯಾಗಿದ್ದ ಆತ ಹತ್ತು ಮಾತಾಡುವ ಜಾಗದಲ್ಲಿ ಇಪ್ಪತ್ತು ಮಾತಾಡಲು ಶುರು ಮಾಡಿದ್ದೇ ಅಮ್ಮ, 'ಫಕ್ಕೀರಪ್ಪಾ, ಮತ್ತೆ ಕುಡಕಂಡು ಬಂದಿದಿಯೇ ಅಲ್ಲಾ, ಎಷ್ಟು ಸಲ ಹೇಳಿದೇನೆ ನಿನಗೆ, ಕುಡಕಂಡು ನಮ್ಮನೆ ಸರಗೋಲು ದಾಟಬೇಡಾ ಹೇಳಿ. ಮೊದ್ಲು ಹೊರಡು ಇಲ್ಲಿಂದ. ಹೀಂಗೆಲ್ಲಾ ಕುಡ್ದು ಬರದಾದ್ರೆ ನಮ್ಮನೆಗೆ ಬರದೇ ಬೇಡಾ ನೀನು' ಎಂದು ಅಲ್ಲಿಂದಲೇ ಜೋರು ಮಾಡುತ್ತಿದ್ದಳು. ಫಕ್ಕೀರಪ್ಪ ಎಂದಿನಂತೆ ಮುಸಿಮುಸಿ ನಕ್ಕು, 'ಏ, ಇಲ್ಲ ತೊಗೋರಿ ಅಮ್ಮಾರೆ' ಎನ್ನುತ್ತ ಜಾಗ ಖಾಲಿ ಮಾಡುತ್ತಿದ್ದ. ಮತ್ತೆ ನಾಕು ದಿನಕ್ಕೆ ಆತ ಬಂದೇ ಬರುತ್ತಿದ್ದ. ಅಮ್ಮನೂ ಮಾಮೂಲಿನಂತೆ ಮಾತನಾಡಿಸುತ್ತಿದ್ದಳು.
ಹೀಗಿದ್ದೂ ಆತ ನಮ್ಮ ಪಾಲಿಗೆ ಸಜ್ಜನ ವ್ಯಕ್ತಿಯಾಗಿದ್ದ. ಎಷ್ಟೋ ಬಾರಿ ಹಸಿದು ಬಂದಾಗ ಅಮ್ಮ-ಅಪ್ಪ ನೀಡುತ್ತಿದ್ದ ಊಟ, ಮಜ್ಜಿಗೆ, ಕಜ್ಜಾಯಗಳ ಉಪಕಾರವನ್ನು ಸ್ವಯಂಪ್ರೇರಣೆಯಿಂದ ನೆನಪಿಟ್ಟುಕೊಳ್ಳುತ್ತಿದ್ದ ಆತ, ಅಪ್ಪ ಒಬ್ಬನೇ ಇದ್ದಾಗ ಕೊಟ್ಟಿಗೆ ಗುಡಿಸಿ ಕೊಟ್ಟೋ, ಒಂದೆರಡು ಕೊಡ ನೀರು ಎತ್ತಿಕೊಟ್ಟೋ, ಮನೆಯಲ್ಲಿ ಗಂಡಸರು ಇಲ್ಲದ ಸಂದರ್ಭದಲ್ಲಿ ಎತ್ತುಗಳನ್ನು ಅವುಗಳ ಜಾಗದಲ್ಲಿ ಕಟ್ಟಿಕೊಟ್ಟೋ... ಅಂತೂ ತನಗಾದ ರೀತಿಯಲ್ಲಿ ಪ್ರತ್ಯುಪಕಾರ ಮಾಡುತ್ತಿದ್ದ.

ಓಂ ನಾಮ

ಅನುದಿನವೂ ಬರೆಯುವನು ಬ್ಲಾಗಿಗೊಳಗುತ್ತಮನು
ಆಗಾಗ್ಗೆ ಬರೆಯುವನು ಮಧ್ಯಮನು
ಅಧಮತಾ ಆರಂಭಶೂರನು ಅಲ್ಪಜ್ಞ-


ಮನದೊಳಗಿನ ಮಾತುಗಳಿಗೆ ಮೈಕ್ ಹಿಡಿಯುತ್ತಿದ್ದೇನೆ. ಒಳಗೆಲ್ಲೋ ಅಡಗಿ ಸಣ್ಣಗೆ ಗುನುಗುಡುತ್ತಿದ್ದ ದನಿಗೆ ಈ ದಿನ ಇದ್ದಕ್ಕಿದ್ದಂತೆ ಹೊರಬರುವ ಆಸೆಯಾಗುತ್ತಿದೆ. ಬರೀ ಆಸೆಯಲ್ಲ. ಗಂಟಲಿಂದ ಹೊರಬಿದ್ದು, ಮನೆ ತುಂಬಿ, ಬಾಗಿಲನ್ನು ದೂಡಿ ಹೊರ ಬಂದು, ಅಂಗಳದ ಸರಗೋಲು ದಾಟಿ, ಎದುರಿನ ಗದ್ದೆಬಯಲು, ಅದರಂಚಿನ ಕೆರೆ-ಕಾಡಿಗೆಲ್ಲ ಹರಡಿ, ಮೇಲೆ ಕವುಚಿದ ಆಗಸಕ್ಕೂ ಆವರಿಸಿಕೊಳ್ಳುವಷ್ಟು ಆಶೆಬುರುಕತನ. ಯಾಕೋ ಈ ಆಶೆಬುರುಕತನವೂ ಆಪ್ಯಾಯವೆನಿಸುತ್ತಿದೆ. ಅದಕ್ಕೆ ಇನ್ನೂ ಗಟ್ಟಿಯಾಗಿಲ್ಲದ ಗಂಟಲಿಗಿಷ್ಟು ಜೇನುತುಪ್ಪ ಸವರಿಕೊಂಡು, ಎರಡು ಸಲ ಕೆಮ್ಮಿ, ಕ್ಯಾಕರಿಸಿ..., ಎದುರಿಗೊಂದು ಮೈಕ್ ತಂದಿಟ್ಟುಕೊಂಡು 'ಹಲೋ.. ಹಲೋ..' ಎಂದು ಪರೀಕ್ಷಿಸಿ ಅಂತೂ ಕಥನ ಕವಾಟ ತೆರೆಯುತ್ತಿದ್ದೇನೆ..
ದನಿ ಹಿತವಾಗಿರಲಿ, ಅಮಿತವಾಗಿರಲಿ ಎಂಬುದು ನನಗೆ ನನ್ನ ಹಾರೈಕೆ.