ಶುಕ್ರವಾರ, ಆಗಸ್ಟ್ 21, 2009

'ಚಂದೋ'ಪನಿಷತ್ತು

'ಹಾ, ನೈಸ್', 'ವೋವ್, ಸೋ ಸಾಫ್ಟ್'..... ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಮಗ ಒಂದೊಂದಾಗಿ ಕೆನ್ನೆಗೆ ಒತ್ತಿ ನೋಡುತ್ತಿದ್ದಾನೆ. ಅವನ ಕಡ್ಲಿ ಬೇರ್, ಟೆಡ್ಡಿ ಬೇರ್, ರಾಕಿ ಎಂಬ ಉದ್ದ ಕಿವಿಯ ನಾಯಿ, ಶಾಮು ದ ಕಿಲ್ಲರ್ ವೇಲ್, ಥಾಮಸ್ ದ ಟ್ಯಾಂಕ್ ಎಂಜಿನ್ ಚಿತ್ರ ಇರುವ ಚಾದರ...... ಪ್ರತಿಯೊಂದಕ್ಕೂ ಧಾರಾಳ ಮೆಚ್ಚುಗೆ ಹರಿದು ಬರುತ್ತಿದೆ. 'ಅಮ್ಮಾ, ನಂಗೀ ಕಾರು ತುಂಬಾ ಇಷ್ಟ', 'ಈ ಬುಕ್ ಚೆನ್ನಾಗಿದ್ದು', 'ಟ್ರೇನ್ ಎಷ್ಟು ಫಾಸ್ಟ್ ಹೋಗ್ತು ನೋಡು' ಬಣ್ಣನೆ ಮುಗಿಯುವುದೇ ಇಲ್ಲ.
ಮಜ ಎಂದರೆ ಯಾವ ಆಟಿಗೆಯನ್ನು ತೋರಿಸಿದರೂ 'ಅದು ಚೆಂದಿದ್ದು, ಚೆನ್ನಾಗಿದ್ದು' ಎಂದೇ ಉತ್ತರ ಬರುವುದು. ಡಾಲರ್ ಸ್ಟೋರಿನ ಒಂದು ಡಾಲರ್ ವಸ್ತುವಿಗೂ ಇಪ್ಪತ್ತೈದು ನುಂಗಿದ ಬ್ರಾಂಡೆಡ್ ಆಟಿಗೆಗೂ ಒಡೆಯನ ಪ್ರೀತಿಯಲ್ಲಿ ಭೇದ ಇಲ್ಲ. ಊಟದ ಬಟ್ಟಲ ಪಕ್ಕ ಪೇರಿಸಿಟ್ಟುಕೊಳ್ಳುವಾಗ, ಹಾಸಿಗೆಯಂಚಿಗೆ ಸಾಲಾಗಿಟ್ಟು 'ಟ್ರಾಫಿಕ್ ಜಾಂ' ಮಾಡುವಾಗ, ಗೆಳೆಯರ ಜೊತೆ ಹಂಚಿಕೊಳ್ಳುವಾಗ ಎಲ್ಲೂ ಅದಕ್ಕೆ ಹೆಚ್ಚಿನ ಮರ್ಯಾದೆ, ಇದಕ್ಕೆ ಕಮ್ಮಿ ಎಂಬುದಿಲ್ಲ. ಎಲ್ಲವೂ ಚಂದ, ಎಲ್ಲವೂ 'ನೈಸ್'!
ಮಗನ ಆಟ ಮನದ ಪುಟಗಳಲ್ಲಿ ದಾಖಲಾಗುತ್ತಿದ್ದಂತೆ ಹಳೆಯದೊಂದು ಪುಟ ತಾನಾಗಿ ತೆರೆದುಕೊಳ್ಳುತ್ತಿದೆ. ಕಾಲೇಜು ದಿನಗಳಲ್ಲಿ ದಾಖಲಾಗಿದ್ದು ಅದು.
"ಅಪ್ಪಾ, ನನ್ನ ರೂಮ್ ಮೇಟು, ಅದ್ರ ಫ್ರೆಂಡ್ಸೆಲ್ಲಾ ನನ್ನ ನೋಡಿ ನಗಾಡ್ತ."
"ಎಂಥಕ್ಕೆ ತಂಗಿ?"
"ನಂಗೆ ಟೇಸ್ಟೇ ಇಲ್ಯಡ. 'ನೀ ಎಂಥ ನೋಡಿದ್ರೂ ಚಂದ ಕಾಣ್ತು ಹೇಳ್ತೆ. ನಿಂಗೆ ಗುಲಾಬಿನೂ ಚಂದ ಕಾಣ್ತು, ಮಲ್ಲಿಗೆನೂ ಚೊಲೊ ಕಾಣ್ತು. ರಾಜಕುಮಾರನೂ ಚೊಲೊ ಹೇಳ್ತೆ, ಅನಂತನಾಗನೂ ಇಷ್ಟ ಹೇಳ್ತೆ. ಕತ್ಲೆ ಕತ್ಲೆ ಆರ್ಟ್ ಸಿನೆಮಾನೂ ಚೊಲೊ ಇದ್ದು ಹೇಳ್ತೆ, 'ದಿಲ್ ತೋ ಪಾಗಲ್ ಹೈ'ನೂ ಚೊಲೊ ಇದ್ದು ಹೇಳ್ತೆ.....' ಹೇಳೆಲ್ಲಾ ಚಾಳಿಸ್ತ. ಎಂಥಾರೂ 'ಚೆನ್ನಾಗಿದ್ದು' ಅಂದ್ರೆ, 'ನಿಂಗೆ ಚೆನ್ನಾಗಿ ಕಾಣದೋದ್ದು ಯಾವುದು ಇದ್ದು' ಹೇಳಿ ನಗಾಡ್ತ......" ಅಪ್ಪನೆದುರು ದುಃಖ ತೋಡಿಕೊಂಡಿದ್ದೆ ಒಂದು ದಿನ.
"ಅದಕ್ಕೆಲ್ಲಾ ಬೇಜಾರು ಮಾಡಿಕ್ಯಳಡ ತಂಗಿ. ನಿಂಗೆ ಎಲ್ಲಾ ವಸ್ತುನಲ್ಲೂ ಏನಾದ್ರೂ ಚಂದ ಕಾಣ್ತು ಅಂದ್ರೆ ಅದು ನಿನ್ನ ಒಳ್ಳೆಯತನ ತೋರಿಸ್ತು. ನಿನ್ನ ಮುಗ್ಧತೆ ತೋರಿಸ್ತು. ಅವೆರಡೂ ಜೀವನಕ್ಕೆ ಅತಿ ಅವಶ್ಯ ಗುಣ. ನೀ ಹೀಂಗೆ ಇರು' ಅಪ್ಪ ಬೆನ್ನು ತಟ್ಟಿ ಧೈರ್ಯ ತುಂಬಿದ್ದ.
ಇವತ್ತಿಗೂ ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ನೋಡುವ ನೂರರಲ್ಲಿ ತೊಂಭತ್ತು ಖಂಡಿತ ಚೆನ್ನಾಗಿ ಕಾಣುತ್ತವೆ.

ಗುರುವಾರ, ಜುಲೈ 30, 2009

ಕ್ಷಮೆ ಇರಲಿ

ಪ್ರಿಯ ಸ್ನೇಹಿತರೇ,
ಬಹಳ ದಿನಗಳಿಂದ ಬಳಸದೇ 'ಪೆನ್ನು' ಧೂಳು ಹಿಡಿದಿತ್ತು. ಒಳಗಣ ಶಾಯಿಯೂ ಒಣಗಿ ಗಟ್ಟಿಯಾಗಿತ್ತು. ರಾಶಿ ಸೋಮಾರಿತನ, ಒಂಚೂರು ಸಿನಿಕತನ, ಮೇಲಿಂದ ಮುತ್ತಿಕೊಂಡ ಗೊಂದಲದ ಬಿಂಜಲುಬಲೆ.... ನಿಜ ಹೇಳಬೇಕೆಂದರೆ ನನ್ನ ಬಳಿ 'ಪೆನ್ನು' ಇರುವುದೇ ಮರೆತು ಹೋಗಿತ್ತು. ಇವತ್ತೇಕೋ ನೆನಪಾಯಿತು. ಎತ್ತಿ ತೊಳೆದು, ಶಾಯಿ ತುಂಬುತ್ತಿದ್ದೇನೆ. ಈ ಬಾರಿ ಯಾವ '....ತನ'ದ ಗಾಳಿಯೂ ಅದನ್ನು ಒಣಗಗೊಡದಿರಲಿ ಎಂಬುದೊಂದು ಹಾರೈಕೆ.

ಶೆಟ್ಟಣ್ಯಾರ ಯಲ್ಲವ್ವ ಎಂಬೋ 'ಕಾಡವ್ವ'

ಹನುಮಾಪುರದ ಹೆಂಗಸರು ಎಂದಾಕ್ಷಣ ಎಲ್ಲರಿಗಿಂತ ಮೊದಲು ನನ್ನ ಕಣ್ಣಿಗೆ ಕಟ್ಟುವುದು ಯಲ್ಲವ್ವನ ಚಿತ್ರ. ದೇವಗುಂಡಿ ಕೆರೆಯ ಕೆಳಭಾಗದಲ್ಲಿ ಏರಿಗೆ ತಾಗಿ ನಮ್ಮ ಜಮೀನು ಇದ್ದರೆ, ಮೇಲುಭಾಗದಲ್ಲಿ ಕೆರೆಗೆ ಹೊಂದಿಕೊಂಡೇ ಶೆಟ್ಟಣ್ಯಾರ ಹೊಲ ಇತ್ತು. ಆತನ ಪತ್ನಿಯೇ ಯಲ್ಲವ್ವ. ನಾನು ಬಲ್ಲಂದಿನಿಂದಲೇ ಆಕೆ ಅರೆಮುದುಕಿ ಮತ್ತು ವಿಧವೆ. ಮಾಸಿದ ದಡಿ ಸೀರೆ, ಕಸೆ ರವಿಕೆ, ಅಗಲ ಬಾಯಲ್ಲಿ ಯಾವಾಗಲೂ ಕವಳ ತುಂಬಿಕೊಂಡು ಇರುತ್ತಿದ್ದ ಆಕೆ ಪಟ್ಟಗೆ ತಲೆ ಬಾಚಿದ್ದನ್ನು ನಾನೆಂದೂ ನೋಡಿರಲಿಲ್ಲ. ಕುತ್ತಿಗೆಯೊಳಗೆ ಸ್ಪ್ರಿಂಗ್ ಇದ್ದು, ಯಾವುದೋ ಅದೃಶ್ಯ ಕೈ ಅದನ್ನು ಸದಾಕಾಲ ತಟ್ಟುತ್ತಿರುತ್ತದೆಯೇನೋ ಎಂಬಂತೆ ಆಕೆಯ ತಲೆ ಯಾವಾಗಲೂ ಅತ್ತಿಂದಿತ್ತ ಅಲುಗಾಡುತ್ತಲೇ ಇರುತ್ತಿತ್ತು.
ಯಲ್ಲವ್ವನಿಗೆ ನಾನು, ಅಣ್ಣ-ಅಕ್ಕ ಇಟ್ಟ ಹೆಸರು 'ಕಾಡವ್ವ'. ಇನ್ನೂ ಸರಗೋಲು ದಾಟುವ ಮೊದಲೇ 'ಅಮ್ಮಾರೆ, ಈಟು ಮಜ್ಜಿಗೀ ಕೊಡ್ರಿ' ಎನ್ನುತ್ತಲೇ ಆಕೆ ಮುಂದಡಿ ಇಡುತ್ತಿದ್ದಳು. ಎಡಹೊತ್ತಿನಲ್ಲಿ ನಾವೇನಾದರೂ ದೋಸೆ ತಿನ್ನುವುದು ಕಂಡಿತೋ- 'ಅಮ್ಮಾರೆ, ನನ್ಗೂ ದ್ವಾಸಿ ಕೊಡ್ರಿ', ಎಣ್ಣೆಯ ಪರಿಮಳ ಬಂತೋ- 'ಏನೋ ಕಜ್ಜಾಯ ಮಾಡಾಕ್ಹತ್ತೀರಲ್ಲ, ಇತ್ತಾಗ ಒಂದೀಟು ಇಡ್ರಿ', 'ಒಂಚೂರು ಉಪ್ಪಿನಕಾಯಿ ನೀಡ್ರಿ', 'ಬಾಳಿಹಣ್ಣು ಕೊಡ್ರಿ', 'ಮಾವಿನ್ ಹಣ್ಣು ಕೊಡ್ರಿ.........' ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಹನುಮಾಪುರ ಮುಟ್ಟುತ್ತಿತ್ತು. 'ಯಲ್ಲವ್ವ, ನಿನ್ನ ಹೀಂಗೇ ಬಿಟ್ರೆ ನಾಳೆ ಸೀರೆ ಕೊಡ್ರಿ, ಸರ-ಬಳೆ ಕೊಡ್ರಿ ಹೇಳ್ಲಿಕ್ಕೆ ಶುರು ಮಾಡ್ತೀಯೆ' ಅಮ್ಮ ಟೀಕಿಸುತ್ತಿದ್ದಳು. 'ಹೂನ್ರೀ ಮತ್ತ, ಆಟೊಂದು ಸೀರಿ ಅದಾವಲ್ಲ, ಒಂದ್ ಕೊಡ್ರಿ ನನಗ, ನಿಮ್ ಹೆಸರ ಹೇಳಿ ಉಟಗೊಂತೀನಿ' ಪಟ್ಟಂತ ಉತ್ತರ ಬರುತ್ತಿತ್ತು.
ಹಿತ್ತಲಲ್ಲಿ ಅಮ್ಮ, ಗೌರತ್ತಿಗೆ ಕಷ್ಟಪಟ್ಟು ಬೆಳೆದ ತರಕಾರಿಗಳ ಮೇಲೆ ಯಲ್ಲವ್ವ ಇಷ್ಟಪಟ್ಟು ಕಣ್ಣು ಹಾಯಿಸುತ್ತಿದ್ದಳು. ಯಥಾ ಪ್ರಕಾರ 'ಅಮ್ಮಾರ, ಒಂದು ಯೆರಡು ಸೌತೀಕಾಯಿ ಕೊಡ್ರಿ, ಹೀರಿಕಾಯಿ ಕೊಡ್ರಿ, ಕುಂಬಳಕಾಯಿ ಕೊಡ್ರಿ....' ಎಂಬ ಪಲ್ಲವಿ ಯಲ್ಲವ್ವನಿಂದ. ಬೇಸಿಗೆಯ ಒಂದು ಮಧ್ಯಾಹ್ನ. ಅಮ್ಮ, ಗೌರತ್ತಿಗೆ ಭಾರದ ಕೊಡಗಳಲ್ಲಿ ನೀರು ಎತ್ತಿಕೊಂಡು ಬಂದು ಹರಿವೆ, ಗೋಳಿ ಸೊಪ್ಪಿನ ಕಣಗಳಿಗೆ, ಮೂಲಂಗಿ, ಬೀಟ್ರೂಟ್ ಓಳಿಗಳಿಗೆ ನೀರು ಹಾಯಿಸುತ್ತಿದ್ದರು. ನೀರುಣಿಸುವುದನ್ನು ಮುಗಿಸಿ ಮನೆಗೆ ಮರಳುವ ಮುನ್ನ ಸಂಜೆಯ ಅಡಿಗೆಗೆಂದು ಒಂದಷ್ಟು ಕೆಂಪು ಹರಿವೆ ಸೊಪ್ಪು ಮುರಿಯತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ ಯಲ್ಲವ್ವನ ಸವಾರಿ ಆಗಮಿಸಿತು. 'ಅಮ್ಮಾರು ಏನ್ ಮಾಡಾಕ್ಹತ್ತೀರಿ' ಆಕೆ ಕೇಳಿದಳು. ಅಮ್ಮ ತಲೆ ಎತ್ತದೇ ಜಾಣಗಿವುಡು ತೋರಿದಳು. ಯಲ್ಲವ್ವ ಬಿಡಬೇಕಲ್ಲ, 'ಹರಿವಿ ಸೊಪ್ಪು ಕೀಳಾಕ್ಹತ್ತೀರಲ್ಲ' ಎಂದಳು. ಗೌರತ್ತಿಗೆ ಮುಗುಮ್ಮಾಗಿ 'ಹೂಂ' ಎಂದಳು. 'ನಮ್ಗೂ ಒಂದೀಟು ಸೊಪ್ಪು ಕೊಡ್ರೀ, ಏನು ನೀವೊಬ್ಬರೇ ತಿಂತೀರೇನು' ಭಿಡೆ ಇಲ್ಲದ ಯಲ್ಲವ್ವ ಬೇಡಿಕೆಯ ಜೊತೆಗೆ ಆಕ್ಷೇಪವನ್ನು ಎದುರಿಟ್ಟಳು. 'ಪಕ್ಕಾ ಇದೀಯೇ ನೀನು. ನಮ್ಮನೆ ಗದ್ದೇಲಿ, ನಾವು ಬೀಜ ಹಾಕಿ, ನೀರು ಹೊತ್ತು ಬೆಳೀತೇವೆ. ನೀ ಬಂದ್ಕಂಡು ದೊಡ್ಡದಾಗಿ 'ನೀವೊಬ್ರೇ ತಿಂತೀರೇನು' ಹೇಳಿ ಬಿಡ್ತೀಯೇ. ಯಾವತ್ತಾದರೂ ಒಂದು ಕೊಡ ನೀರು ಎತ್ತಿ ಹಾಕಿದೀಯ?' ಅಮ್ಮ ದಬಾಯಿಸಿದಳು. 'ಅಯ್ಯ, ಅದಕ್ಯಾಕ ಹಂಗ್ ಅಂತೀರಿ ಅಮ್ಮಾರೆ, ನಿಮಗ ಗಿಡ ಹಚ್ಚದ್ ಗೊತ್ತೈತಿ, ಹಚ್ಚತೀರಿ, ನಮಗ ಗೊತ್ತಿಲ್ಲ, ಹಚ್ಚಂಗಿಲ್ಲ. ನೀವ್ ಬೆಳಿದೀರಿ, ಅದಕ್ಕ ಕೇಳಾಕ್ಹತ್ತೀನಿ, ಇಲ್ಲಂದ್ರ ಕೇಳತಿದ್ದೆನೇನು?'- ಯಲ್ಲವ್ವನ ತರ್ಕ ಇದು.
ಯಲ್ಲವ್ವ ಶಕ್ತಿ ಇದ್ದ ಕಾಲದಲ್ಲಿ ಹೊಲಕ್ಕೆ ಆಗಾಗ ಬರುತ್ತಿದ್ದಳು. ಬಂದಾಗೆಲ್ಲ ಬಿಂದಿಗೆ ಹಿಡಕೊಂಡು ನೀರಿಗಾಗಿ ನಮ್ಮನೆಗೆ ಬರುತ್ತಿದ್ದಳು. ಒಂದು ಬಿಂದಿಗೆ ನೀರಿಗೆಂದು ಬಂದವಳು ಮಜ್ಜಿಗೆ, ಅದೂ ಇದೂ ಎನ್ನುತ್ತ ಒಂಬತ್ತು ಬೇಡಿಕೆ ಇಡುತ್ತಿದ್ದಳು. ಕರೆವು ಇಲ್ಲದ ಕಾಲದಲ್ಲಿ, ಅದೂ ನಾವು ಮಕ್ಕಳೆಲ್ಲ ರಜೆಗೆ ಬಂದಿರುವಾಗ ಯಾರಾದರೂ ಮಜ್ಜಿಗೆ ಎನ್ನುತ್ತ ಬಂದರೆ ಅಮ್ಮನ ತಲೆ ಕಾಯುತ್ತಿತ್ತು. ಅಪರೂಪಕ್ಕೆ ಬಂದರೆ ಅಡ್ಡಿ ಇಲ್ಲ, ಯೋಗಕ್ಷೇಮ ವಿಚಾರಿಸಿ ಅಷ್ಟೋ ಇಷ್ಟೋ ಮಜ್ಜಿಗೆ ಕೊಡುತ್ತಿದ್ದಳು. ಆದರೆ ಎರಡೆರಡು ದಿನಕ್ಕೊಮ್ಮೆ ಬರುವವರ ಮೇಲೆ ಆ ಅನುಕಂಪ ಇರುತ್ತಿರಲಿಲ್ಲ. ನಾವೋ, ಮಜ್ಜಿಗೆ ಇಲ್ಲದೇ ಊಟ ಅಪೂರ್ಣ ಎಂಬಂಥ ಬ್ರಾಹ್ಮಣರು, ಜೊತೆಗೆ ಯಾವುದೋ ಬೇನೆಯ ಹೆಸರು ತೆಗೆದುಕೊಂಡು, ಒಂದು ಚೊಂಬು ಹಿಡಿದುಕೊಂಡು ಬರುವ ಊರ ಜನ, ಮೇಲಿಂದ ಯಲ್ಲವ್ವನಂಥ ರೆಗ್ಯುಲರ್ 'ಗಿರಾಕಿ'ಗಳು... ಯಲ್ಲವ್ವ ಇನ್ನೂ 'ಅಮ್ಮಾರೆ, ಮ' ಎನ್ನುತ್ತಿದ್ದಂತೆಯೇ ಅಮ್ಮ 'ಮಜ್ಜಿಗೆ ಇಲ್ಲಾ' ಎಂದು ಸರ್ರಂತ ಸಿಡುಕುತ್ತಿದ್ದಳು.
ನಿಜ ಹೇಳಬೇಕೆಂದರೆ ಯಲ್ಲವ್ವನಿಗೆ ಏನು ಬಯ್ದರೂ ವೇಸ್ಟೇ. ಅಮ್ಮನ ಪ್ರಖರ ಆಕ್ಷೇಪ-ಬಯ್ಗುಳಗಳೂ ಯಲ್ಲವ್ವನ ಸುತ್ತ ದಪ್ಪಗೆ ಬೆಳೆದಿದ್ದ 'ನಿರ್ಭಿಡೆ'ಯ ಪ್ರಭಾವಲಯಕ್ಕೆ ಡಿಕ್ಕಿ ಹೊಡೆಯುತ್ತಲೇ ಕಣ್ಣು ಮಂಜಾಗಿ ಮಕಾಡೆ ಬೀಳುತ್ತಿದ್ದವು. ಮೇಲಾಗಿ ಅಮ್ಮನ ನಿಷ್ಠುರತೆಗೊಂದು ಮಿತಿ ಇತ್ತು. ಆ ಮಿತಿಯನ್ನು ದಾಟದಂತೆ ಆಕೆಯ ಅಪ್ಪಯ್ಯ ಹೇಳಿಕೊಟ್ಟ ಆಚಾರ ಕಾವಲು ಕಾಯುತ್ತಿತ್ತು. ಶಾಸ್ತ್ರ ನಿಪುಣನಾಗಿದ್ದ ಅಜ್ಜ, ಅಮ್ಮ ಮದುವೆಯಾಗಿ ಬರುವಾಗ ಹೇಳಿದ್ದನಂತೆ- 'ಮಗಳೇ, ಬಾಯಾರಿ ಬಂದವರಿಗೆ ಯಾವತ್ತೂ ಕೈ ತಿರುಗಿಸಡಾ. ಅದರಲ್ಲೂ ಯಾರಾದರೂ ಮಜ್ಜಿಗೆ ಕೇಳಿ ಬಂದರೆ ಇಲ್ಲೆ ಅನ್ನಡಾ. ಒಂದೇ ಲೋಟದಷ್ಟು ಇದ್ದರೆ ಅದಕ್ಕೆ ಇನ್ನೊಂದು ಲೋಟ ನೀರು ಸೇರಿಸಿ ನೀರು ಮಜ್ಜಿಗೆಯಾದರೂ ಕೊಡು, ಆದರೆ ಇಲ್ಲೆ ಹೇಳಿ ಕಳಿಸಡಾ. ಮೇಲಾಗಿ ಮಜ್ಜಿಗೆಯನ್ನು ಯಾವತ್ತೂ ದಾನವಾಗಿ ಕೊಡವೇ ಹೊರತು ಅದಕ್ಕೆ ದುಡ್ಡು ತಗಳಡಾ.' ಅಪ್ಪಯ್ಯ ಒಪ್ಪುವಂತೆ ನಡೆದುಕೊಂಡು ಬಂದವಳು ಅಮ್ಮ. ಅಮ್ಮಾರು ಕೊಟ್ಟೇ ಕೊಡುತ್ತಾರೆ ಎಂಬ ಭರವಸೆ ಈ ಖಾಯಂ ಗಿರಾಕಿಗಳಿಗೂ ಇರುತ್ತಿತ್ತು. ಹಾಗಾಗಿ ಅವರೂ ಜಪ್ಪಯ್ಯ ಎನ್ನದೇ ಅಲ್ಲೇ ಕುಳಿತಿರುತ್ತಿದ್ದರು. ಅಮ್ಮ ಸಿಡಿಮಿಡಿಗುಡುತ್ತಲೇ ಯಲ್ಲವ್ವನೆದುರು ಒಂದು ಗಿಂಡಿಯಲ್ಲಿ ಮಜ್ಜಿಗೆ ತಂದಿಟ್ಟು, 'ಇಲ್ಲೇ ಕುಡಕಂಡು ಹೋಗಬೇಕು. ಮನೆಗೆ ಒಯ್ತೇನೆ ಅಂದ್ರೆ ಇಲ್ಲಾ ನೋಡು' ಎನ್ನುತ್ತಿದ್ದಳು. ಯಲ್ಲವ್ವ ಕವಳದ ಕೆಂಪು ಮೆತ್ತಿದ್ದ ಬಾಯನ್ನು ಕೆನ್ನೆ ಕಾಣದಷ್ಟು ಅಗಲಕ್ಕೆ ಹರಡಿಕೊಂಡು ಮಜ್ಜಿಗೆ ಒಳಗಿಳಿಸುತ್ತಿದ್ದಳು.
ಈ ಎಲ್ಲ ಮಜ್ಜಿಗೆ-ಮೃಷ್ಟಾನ್ನಗಳ ಋಣವನ್ನು ಯಲ್ಲವ್ವ ಮರೆಯುತ್ತಿರಲಿಲ್ಲ. ಆದರೆ ತೀರಾ ಬಡವಳಾಗಿದ್ದ ಆಕೆಯ ಬಳಿ ತಿರುಗಿ ನೀಡುವಂಥದ್ದೇನೂ ಇರಲಿಲ್ಲ. ಅಂಥ ಯಾವುದೇ ಋಣಸಂದಾಯದ ನಿರೀಕ್ಷೆಯಾಗಲಿ, ಅಗತ್ಯವಾಗಲಿ ಅಪ್ಪ-ಅಮ್ಮನಿಗೆ ಇರಲೂ ಇಲ್ಲ. ಆದರೂ ಯಲ್ಲವ್ವ ವರ್ಷಕ್ಕೊಮ್ಮೆ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದಳು. ಆಗ ನಮ್ಮ ಮನೆಯಲ್ಲಿನ್ನೂ ಒಳ್ಳೆಯ ಹಲಸು-ಬಕ್ಕೆಯ ಮರ ಇರಲಿಲ್ಲ. ಯಲ್ಲವ್ವನ ಮನೆಯಲ್ಲಿ ಒಂದು ಚಂದ್ರ ಹಲಸಿನ ಮರವಿತ್ತು. ವರ್ಷಕ್ಕೆ ಹದಿನೈದು ಇಪ್ಪತ್ತು ಕಾಯಿ ಬರುತ್ತಿತ್ತು ಅದರಲ್ಲಿ. ನಾವು ರಜಕ್ಕೆ ಬಂದ ಆ ಸಮಯದಲ್ಲಿ ಯಲ್ಲವ್ವ ಮುದ್ದಾಂ ಒಂದು ಕಾಯನ್ನು ನಮ್ಮ ಮನೆಗೆ ಕಳಿಸುತ್ತಿದ್ದಳು. ಅಪರೂಪದ ಆ ಕಾಯಿ ಹಣ್ಣಾಗುವುದನ್ನೇ ಕಾಯುತ್ತಿದ್ದ ನಾನು, ಅಣ್ಣ-ಅಕ್ಕ ಅಂತೂ ಆ ಸಮಯ ಬಂದಾಗ ಜೇನು ಜಿನುಗುವ ಆ ಕೆಂಪು ತೊಳೆಗಳನ್ನು ಮಹಾ ಮೆಚ್ಚಿನಿಂದ ತಿನ್ನುತ್ತಿದ್ದೆವು.
ಇಬ್ಬರು ಗಂಡುಮಕ್ಕಳು ಮತ್ತು ಸಾಲಾಗಿ ಏಳು ಹೆಣ್ಣು ಮಕ್ಕಳು ಯಲ್ಲವ್ವನಿಗೆ. ಅವರಲ್ಲೊಬ್ಬಾಕೆ ಲಕ್ಷಣವಾಗಿದ್ದ, ಚುರುಕಿನ ಯುವತಿ ಹನುಮಂತಿ. ಅದು ಹೇಗೋ ಆಕೆಗೂ, ಮಳಗಿ ಫಕ್ಕೀರಪ್ಪನ ಮಗ ತಿರುಪತಿಗೂ ಸ್ನೇಹ ಬೆಳೆಯಿತು, ಪ್ರೇಮ ಬಲಿಯಿತು. ಮನೆಯವರಿಗೆ ತಿಳಿದರೆ ಭಾರಿ ರಾದ್ಧಾಂತವಾದೀತೆಂದು ಅವರು ಹೊಲಕ್ಕೆ ಬಂದಾಗಲೆಲ್ಲ ಪರಸ್ಪರ ಭೇಟಿ ಮಾಡಿ ಹರೆಯದ ಆ ಹುರುಪಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು.
ಒಮ್ಮೆ ನಮ್ಮ ಮನೆಯಲ್ಲಿ ಕೂಲಿ ಕೆಲಸಕ್ಕೆಂದು ಹನುಮಂತಿ, ಆಕೆಯ ತಂಗಿ ಗಿರಿಜೆ ಬಂದಿದ್ದರು. ಸಂಜೆಯ ಹೊತ್ತು, ಕಣದಲ್ಲಿ ತೂರಿ ಉಳಿದ ಜೊಳ್ಳಿನೊಂದಿಗೆ ಬೆರೆತಿದ್ದ ಭತ್ತದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುತ್ತಿದ್ದರು ಅವರು. ಅದೇ ಸಮಯಕ್ಕೆ, ತನ್ನ ಹೊಲದಲ್ಲಿ ಕಮತ ಮುಗಿಸಿ ಕೆರೆಯ ಏರಿಯ ಗುಂಟ ಮನೆಗೆ ಮರಳುತ್ತಿದ್ದ ತಿರುಪತಿ ಇವರನ್ನು ಕಂಡಿದ್ದೇ ಇತ್ತ ಬಂದ. ಇಬ್ಬರೂ ಮಾತುಕತೆಯಲ್ಲಿ ತೊಡಗಿಕೊಂಡರು. ಮನೆಯ ಬಳಿ ಆಡಿಕೊಂಡಿದ್ದ ನಾನು, ಅಣ್ಣ-ಅಕ್ಕ ಇದನ್ನು ಕಂಡಿದ್ದೇ ಅಲ್ಲೇ ಮಾವಿನ ಮರವೊಂದರ ಅಡಿ ಕುಳಿತು ಗಮನಿಸತೊಡಗಿದೆವು. ಆಗ ಅಣ್ಣನಿಗಿನ್ನೂ ಹನ್ನೊಂದು ವರ್ಷ, ಅಕ್ಕನಿಗೆ ಒಂಭತ್ತಾದರೆ ನನಗೆ ಏಳು. ಯಾರಾದರೂ ಪ್ರೇಮಿಸುತ್ತಾರೆ ಎಂಬುದು ಗೊತ್ತಾದರೆ ನಮಗೆ ಭಾರಿ ಕಿಡಿಗೇಡಿ ಕುತೂಹಲ ಆಗ. ಹನುಮಂತಿ-ತಿರುಪತಿಯ ವಿಷಯ ನಮಗೆ ಹೇಗೋ ತಿಳಿದಿತ್ತು. ಆಗ ಭಾರಿ ಚಾಲ್ತಿಯಲ್ಲಿದ್ದ ರಾಜಕುಮಾರನ 'ಜ್ವಾಲಾಮುಖಿ' ಚಿತ್ರದ 'ಹೇಳುವುದು ಒಂದು, ಮಾಡುವುದು ಇನ್ನೊಂದು' ಹಾಡಿನ ಒಂದು ಸಾಲು ಆಧರಿಸಿ, 'ಹನುಮಂತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ' ಎಂದು ಹಾಡು ಬೇರೆ ಕಟ್ಟಿದ್ದೆವು.
ಆ ದಿನವೂ ಅವರಿಬ್ಬರೂ ಮಾತನಾಡುತ್ತಿರಬೇಕಾದರೆ, ನಾವು ಮೂವರೂ ಸಣ್ಣ ದನಿಯಲ್ಲಿ ಮತ್ತದೇ ಹಾಡು ಶುರು ಹಚ್ಚಿಕೊಂಡೆವು. ನಮ್ಮ ದನಿ ಅವರನ್ನು ತಲುಪದೆಂಬ ವಿಶ್ವಾಸ ನಮಗಿತ್ತು. ಆದರೆ ಅಲ್ಲೇ ಉರುವಲು ಕಟ್ಟಿಗೆ ಗುಡ್ಡೆಗೆ ಬರುವ ಅಮ್ಮನಿಗೆ ಅದು ಕೇಳಬಹುದು ಎಂದು ನಾವು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಛೋಟುದ್ದದ ನಾವು ಇನ್ನೊಬ್ಬರ ಪ್ರೇಮ ಪ್ರಕರಣವನ್ನು ಗಮನಿಸುವಷ್ಟು ಮುಂದುವರೆದಿದ್ದೇವೆ ಎಂಬುದು ಗೊತ್ತಾಗುತ್ತಲೇ ಕಿಡಿಕಿಡಿಯಾದ ಅಮ್ಮ, ಕಟ್ಟಿಗೆ ಗುಡ್ಡೆಯಿಂದ ಸಪೂರನೆಯ ಕೋಲು ಸೆಳಕೊಂಡವಳೇ ಮೈಮರೆತು ನೋಡುತ್ತಿದ್ದ ನಮ್ಮ ಬೆನ್ನು ಕೆಂಪೇರಿಸಿದಳು. ಅಷ್ಟು ಸಾಲದೆಂಬಂತೆ ಸೀದಾ ಆ ಯುವ ಪ್ರೇಮಿಗಳ ಬಳಿ ಹೋಗಿ, 'ಕೆಲಸಕ್ಕೆ ಹೇಳಿ ಬಂದ್ಕಂಡು ಇಂಥದ್ದೇ ಮಾಡ್ತೀರ ನೀವು, ಇಂಥದ್ದೇನಿದ್ರೂ ನಮ್ಮನೆ ಕಂಪೌಂಡ್ ಹೊರಗೆ ಇಟ್ಗಳಿ. ಇನ್ನೊಂದ್ಸಲ ಇಲ್ಲಿ ಬಂದು ಹೀಂಗೆ ಮಾಡಿದ್ರೆ ಮತ್ತೆ ಇತ್ಲಾಗೆ ಕಾಲು ಹಾಕ್ಲಿಕ್ಕೆ ಬಿಡದಿಲ್ಲ, ಹುಷಾರ್' ಎಂದು ಜೋರು ಮಾಡಿದಳು.
ಮುಂದೆ ಕೆಲವೇ ತಿಂಗಳಲ್ಲಿ ಭಾರಿ ಗಲಾಟೆಗಳ ನಡುವೆ ಅವರಿಬ್ಬರ ಮದುವೆ ನಡೆಯಿತು. ಎರಡೂ ಕಡೆಯವರ ಗಟ್ಟಿ ವಿರೋಧವಿದ್ದುದರಿಂದ ಮೊದಲ ಒಂದೆರಡು ವರ್ಷ ಬಹಳ ಕಷ್ಟ ಅನುಭವಿಸಿದರು ಇಬ್ಬರೂ. ಆದರೆ ಈಗ ಸುಮಾರು ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ನಂತರ ನೋಡಿದರೆ ನಮ್ಮೂರಿನ ಭಾರಿ ಯಶಸ್ವಿ ಜೋಡಿ ಈ ತಿರುಪತಿ-ಹನುಮಂತಿ. ಪರಸ್ಪರ ಅಪಾರ ಪ್ರೀತಿ, ವಿಶ್ವಾಸ, ಗೌರವವಿಟ್ಟುಕೊಂಡು ಬಾಳುವ ಜೊತೆಗೆ ರಟ್ಟೆ ಮುರಿದು ರೊಟ್ಟಿ ತಿನ್ನುತ್ತ ಬದುಕು ಹಸನು ಮಾಡಿಕೊಂಡಿರುವ ಈ ದಂಪತಿ, ಮದುವೆ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕೆನ್ನುವವರಿಗೆಲ್ಲ ಆದರ್ಶವೇ ಸೈ.

ಸೋಮವಾರ, ಮಾರ್ಚ್ 9, 2009

ಜೀವ ನದಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:
ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.
ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.
ಅಪ್ಪ-ಅಮ್ಮ ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ.
ಓದು ಬರದಿದ್ದರೂ ಅಮ್ಮಮ್ಮ ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.
ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.
ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.
ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ 'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.
ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.
ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.

ಮಂಗಳವಾರ, ಫೆಬ್ರವರಿ 10, 2009

'ಸುಧಾ'ಪಾನದ ಸುದ್ದಿ

ಇತ್ತೀಚೆಗೆ ಊರಿಗೆ ಹೋದಾಗ ಅಕಸ್ಮಾತ್ತಾಗಿ ಒಂದಿಷ್ಟು ಹಳೆಯ 'ಸುಧಾ'ಗಳ ರಾಶಿ ಕಣ್ಣಿಗೆ ಬಿತ್ತು. ಮಾಡುತ್ತಿದ್ದ ಕೆಲಸ ಕೈ ಬಿಟ್ಟು ಹಾಗೆಯೇ ಓದಲು ಕುಳಿತುಕೊಂಡೆ. ಒಂದೆರಡು ಪುಟ ತಿರುವುತ್ತಿದ್ದಂತೆಯೇ ನಾನೇ ಕಳೆದುಹೋಗಿದ್ದೆ. ಒಂದೊಂದು ಬಿಡಿ ಪತ್ರಿಕೆಯೂ ಒಂದು ನಿಧಿಯಂತೆ. ವೈವಿಧ್ಯಮಯ ನೆನಪುಗಳ ಮೂಟೆಯಂತೆ. ಕುಡಿದಷ್ಟೂ ಇನ್ನೂ ಬೇಕೆನ್ನಿಸುವ, ಮತ್ತು ಹತ್ತಿಸುವ ರಸಪಾಕದಂತೆ ಅನ್ನಿಸತೊಡಗಿತ್ತು.
'ಸುಧಾ' ಜೊತೆಗಿನ ನನ್ನ ನಂಟು ನನಗೊಂದು ಮೂರು-ಮೂರೂವರೆ ವರ್ಷವಾಗಿದ್ದಾಗಲೇ ಶುರುವಾಗಿತ್ತು. ಅಪ್ಪನ ಮೂಲಮನೆ 'ಬಾಳೇಸರ'ದಲ್ಲಿ 'ಸುಧಾ' ತರಿಸುತ್ತಿದ್ದರು. ಊರಿಗೆ ಹೋದಾಗೆಲ್ಲ ಅಪ್ಪ ಹಳೆ ಪತ್ರಿಕೆಗಳನ್ನು ಹಿಡಿದುಕೊಂಡು ನಾವಿರುತ್ತಿದ್ದ ಹನುಮಾಪುರಕ್ಕೆ ತರುತ್ತಿದ್ದ. ರಾತ್ರಿ ಊಟವಾದ ಮೇಲೆ ಚಿಮಣಿ ದೀಪದ ಬೆಳಕಿನಲ್ಲಿ ಅಪ್ಪ-ಅಮ್ಮ ಓದಲು ಶುರು ಮಾಡಿದರೆ ನಾನೂ ಪಕ್ಕದಲ್ಲೊಂದು 'ಸುಧಾ' ಹಿಡಿದು ಕುಳಿತುಕೊಳ್ಳುತ್ತಿದ್ದೆ. ಅಕ್ಷರ ಬರದಿದ್ದರೂ ಚಿತ್ರ ನೋಡುವ ಹಂಬಲ. ಅದರಲ್ಲೂ ಪುಟಾಣಿ ಪುಟ್ಟಿ, ವಿಕ್ರಮ್, ಫ್ಯಾಂಟಮ್ ಕಾರ್ಟೂನುಗಳನ್ನು ನೋಡಿ, ನನಗೆ ತಿಳಿದಂತೆ ಅರ್ಥೈಸಿಕೊಳ್ಳುತ್ತಿದ್ದೆ. ಆಮೇಲೆ ಸರಸರ ಓದಲು ಬರೆಯಲು ಕಲಿತಿದ್ದೇ 'ಸುಧಾ'ದಲ್ಲಿನ ಕಾರ್ಟೂನು, ಮಕ್ಕಳ ಕಥೆ ಓದಬೇಕೆಂಬ ಆಸೆಯಿಂದ.
ಮುಂದೆ ಶಾಲೆಗೆ ಸೇರಲೆಂದು ಬಾಳೇಸರಕ್ಕೆ ಬಂದುಳಿದ ಮೇಲಂತೂ ತೂಕಡಿಸುವವಳಿಗೆ ಹಾಸಿಗೆ ಹಾಸಿಕೊಟ್ಟಂತಾಗಿತ್ತು. ಪ್ರತಿ ಗುರುವಾರ 'ಸುಧಾ' ಬಂತೆಂದರೆ ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಜಗಳ ಮಾಡಿಯಾದರೂ ನಾನೇ ಮೊದಲು ಅದನ್ನು ಓದಬೇಕು. ಮೊದಲು ಓದಲು ಅವಕಾಶವಾಗಲಿಲ್ಲವೆಂದರೆ ನನಗಾಗುತ್ತಿದ್ದ ವ್ಯಥೆ, ಅವಮಾನ ಅಷ್ಟಿಷ್ಟಲ್ಲ.
ಅಷ್ಟೊತ್ತಿಗಾಗಲೇ ಮಕ್ಕಳಿಗೆ ಮೀಸಲಾದ ಅಂಕಣಗಳನ್ನೆಲ್ಲಾ ಓದಿ ಅರಗಿಸಿಕೊಳ್ಳುವಷ್ಟು ಪರಿಣಿತಿ ಪಡೆದಿದ್ದ ನಾನು ನನ್ನಷ್ಟಕ್ಕೇ 'ದೊಡ್ಡವರ ಸರಕಿ'ಗೆ ಪ್ರೊಮೋಷನ್ ಕೊಟ್ಟುಕೊಂಡಿದ್ದೆ. ದೊಡ್ಡವರ ಸರಕೆಂದರೆ ಕಥೆ, ಧಾರಾವಾಹಿಗಳು. ಚಿಕ್ಕಮಕ್ಕಳೆಲ್ಲಾ ಧಾರಾವಾಹಿ ಓದಬಾರದು, ದೊಡ್ಡವರ ಮಾತ್ರ ಓದಬೇಕು ಎಂಬುದು ನಮ್ಮ ಮನೆಯಲ್ಲಿದ್ದ ಹಿರಿಯ ಹುಡುಗರು ಅಂದರೆ ನನ್ನ ದೊಡ್ಡಪ್ಪಂದಿರ ಮಕ್ಕಳು ಹಾಕಿದ್ದ ನಿಯಮ. ಅವರು ಬೇಡ ಎಂದಷ್ಟೂ ನನಗೆ ಅದರಲ್ಲೇನೋ ಇದೆ, ನಾನದನ್ನು ಓದಲೇಬೇಕೆಂಬ ಕುತೂಹಲ. ಅವರೆಲ್ಲ ಕೆಳಗೆ ಬರೆಯುವುದರಲ್ಲಿ, ಓದು ಆಟಗಳಲ್ಲಿ ಮಗ್ನರಾಗಿದ್ದಾಗಿದ್ದಾಗ ನಾನು ಕದ್ದು ಮೆತ್ತಿಗೆ ಹೋಗಿ 'ಸುಧಾ' ಧಾರಾವಾಹಿಗಳ ಪುಟ ತೆರೆಯುತ್ತಿದ್ದೆ. ಒಂದೇ ಉಸಿರಿನಲ್ಲಿ ಆ ವಾರದ ಇಡೀ ಕಂತು ಮುಗಿಸುತ್ತಿದ್ದೆ. ಮಧ್ಯದಲ್ಲಿ ಯಾರಾದರೂ ಬಂದರೆ ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮಧ್ಯದ ಒಂದು ಬೆರಳನ್ನು ಯಾವಾಗಲೂ ಮಕ್ಕಳ ಪುಟದಲ್ಲಿ ಇರಿಸಿಕೊಳ್ಳುತ್ತಿದ್ದೆ. ಮೆತ್ತಿನ ಏಣಿಯನ್ನು ಯಾರಾದರೂ ಹತ್ತಿ ಬರುವ ಸದ್ದಾಗುತ್ತಲೇ ಟಕ್ಕಂತ ಇದನ್ನು ಮುಚ್ಚಿ ಆ ಪುಟಕ್ಕೆ ದೃಷ್ಟಿ ವರ್ಗಾಯಿಸುತ್ತಿದ್ದೆ. ಆದರೆ ಅಕ್ಕ-ಅಣ್ಣಂದಿರಿಗೆ ನಾನು ಧಾರಾವಾಹಿ ಓದುತ್ತೇನೆಂದು ಸದಾ ಸಂಶಯ. ಏಕ್ದಂ ಎಲ್ಲೆಲ್ಲಿಂದಲೋ ಪ್ರತ್ಯಕ್ಷರಾಗಿ, 'ನೀನು ಧಾರ್ವಾಯಿ ಓದ್ತಾ ಇದ್ದಿದ್ದೆ ಹದಾ' ಎಂದು ಅಟ್ಯಾಕ್ ಮಾಡುತ್ತಿದ್ದರು. 'ಇಲ್ಲೇ ಇಲ್ಲ' ಎಂದು ನಾನೂ ಪಟ್ಟು ಬಿಡದೇ ವಾದಿಸುತ್ತಿದ್ದೆ.
ಆ 'ದೊಡ್ಡವರ' ವ್ಯಾಪ್ತಿಯಲ್ಲಿ ಆರನೇ ತರಗತಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗಳೂ ಬರುತ್ತಿದ್ದಳು. ಶಾಲೆಗೆ ಹೋಗುವಾಗ ನಮ್ಮನ್ನೆಲ್ಲಾ ಲೀಡ್ ಮಾಡುತ್ತಿದ್ದ ಹಿರಿಯಕ್ಕ ಅವಳು. ಮಧ್ಯ ದಾರಿಯಲ್ಲಿ ಅವಳದೇ ತರಗತಿಯ ಸ್ನೇಹಿತೆಯೊಬ್ಬಳು, ಇನ್ನೊಂದೆರಡು ಜನ ಚಿಕ್ಕ ಹುಡುಗರ ಜೊತೆ ನಮ್ಮನ್ನು ಸೇರಿಕೊಳ್ಳುತ್ತಿದ್ದಳು. ದಿನಾ ದಾರಿ ತುಂಬ ಅವರಿಬ್ಬರೂ 'ಸುಧಾ'ದಲ್ಲಿ ಓದಿದ್ದನ್ನು ಚರ್ಚಿಸುತ್ತಾ ಸಾಗುತ್ತಿದ್ದರು.
ಒಮ್ಮೆ ಲೇಖಕಿ ವಿದ್ಯುಲ್ಲತಾ ಅವರ 'ರಥಸಪ್ತಮಿ' ಧಾರಾವಾಹಿ ಬರಲಾರಂಭಿಸಿತ್ತು. ಇವರಿಬ್ಬರೂ ಹೊಸ ಧಾರಾವಾಹಿ ಬಗ್ಗೆ ಮಾತುಕತೆ ಆರಂಭಿಸಿದರು. ಏನು ಮಾಡಿದರೂ ಧಾರಾವಾಹಿ ನಾಯಕಿಯ ಹೊಸ ರೀತಿಯ ಹೆಸರು ಇವರಿಗೆ ನೆನಪಿಗೇ ಬರುತ್ತಿಲ್ಲ. 'ಆ ನಾಯಕಿ ಹೆಸರೆಂಥಾ ಆತೇ', 'ಎಂಥೋ ಹೊಸಾ ಹೆಸರು, ಎಂಥಾ ಮಾಡಿರೂ ನೆನಪೇ ಆಗ್ತಿಲ್ಲೆ' ಎಂದು ಇಬ್ಬರೂ ಪರದಾಡಲಾರಂಭಿಸಿದರು. ಹಿಂದೆಯೇ ಬರುತ್ತಿದ್ದ ನನಗೆ ಇವರ ಪೇಚಾಟ ನೋಡಲಾಗಲಿಲ್ಲ. 'ಅಯ್ಯೋ, ಅದ್ರ ಹೆಸರು ಸಮುದ್ಯತಾ' ಎಂದೇ ಹೇಳೇಬಿಟ್ಟೆ. 'ಹಾಂ ಹಾಂ ಸಮುದ್ಯತಾ' ಎಂದು ಇಬ್ಬರೂ ತಲೆದೂಗಿದರೂ, ಮರುಕ್ಷಣ ನಮ್ಮಕ್ಕ 'ನಿಂಗೆ ಹ್ಯಾಂಗೆ ಗೊತ್ತಿದ್ದು ಅದು' ಎಂದು ನನ್ನತ್ತ ದೊಡ್ಡ ಕಣ್ಣು ಬಿಟ್ಟಳು. ತಪ್ಪಿನ ಅರಿವಾದ ನಾನು ಎಂಜಲು ನುಂಗುತ್ತ, 'ಅದಾ, ಅದು ನೀನೇ ಆವತ್ತು ಹೇಳ್ತಾ ಇದ್ದಿದ್ದೆ' ಎಂದೇನೋ ಓಳು ಬಿಟ್ಟು ಪರಾರಿಯಾದೆ.
ಇನ್ನೊಮ್ಮೆ 'ಶಾರದೆ' ಅವರ 'ಕವಲೊಡೆದ ದಾರಿ' ಧಾರಾವಾಹಿಯ ಚರ್ಚೆ. ನಾಯಕ-ನಾಯಕಿಯ ಸಂಸಾರದಲ್ಲಿ ಮೂರನೇ ಹೆಂಗಸಿನ ಪ್ರವೇಶವಾಗಿತ್ತು. ಯಥಾಪ್ರಕಾರ ನಮ್ಮಕ್ಕ-ಅವಳ ಗೆಳತಿಗೆ ಆ ಪಾತ್ರದ ಹೆಸರು ನೆನಪಾಗುತ್ತಿಲ್ಲ. ಹಿಂದಿನ ಸಲದಂತಾಗಬಾರದೆಂದು ನಾನೂ ತಡೆದುಕೊಳ್ಳುವಷ್ಟು ತಡೆದುಕೊಂಡೆ. ಐದು ನಿಮಷವಾದರೂ ಇವರಿಗೆ ನೆನಪೇ ಆಗುತ್ತಿಲ್ಲ. ನೋಡಿ ನೋಡಿ ನನಗೂ ಸಾಕಾಯಿತು. 'ಅದರ ಹೆಸರು ಮೀನಾ ಹೇಳಿ' ಬಾಯ್ತಪ್ಪಿ ಹೇಳಿ ನಾಲಿಗೆ ಕಚ್ಚಿಕೊಳ್ಳುವಷ್ಟರಲ್ಲಿ ನಮ್ಮಕ್ಕ ನನ್ನನ್ನು ಹಿಡಿದಾಗಿತ್ತು. 'ಹೌದಾ, ನೀ ಧಾರ್ವಾಯಿ ಓದ್ತೆ. ಓದ್ತ್ನಿಲ್ಲೆ ಹೇಳಿ ಸುಳ್ಳು ಹೇಳ್ತೆ' ಎಂದು ಅಕ್ಕೋರ ಮಾದರಿಯಲ್ಲಿ ತಲೆ ಹಾಕಲಾರಂಭಿಸಿದಳು. ಈಗ ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. 'ಇಲ್ಲೆ, ಇಡೀ ಧಾರ್ವಾಯಿ ಓದಿದ್ನಿಲ್ಲೆ, ಇಲ್ಲಿಯವರೆಗೆ... ಹೇಳಿ ಇರ್ತಲೆ, ಅದ್ನ ಮಾತ್ರೆ ಓದಿದ್ದಿ' ಎಂದೆ. ಅವಳಿಗೆ ನಂಬಿಕೆ ಬರಲಿಲ್ಲ. ಆದರೆ ಅಷ್ಟರಲ್ಲಿ ಶಾಲೆ ಹತ್ತಿರ ಬಂದಿತ್ತು, ನಾನು ಬಚಾವಾದೆ.
ಎಳವೆಯಲ್ಲಿ ಓದಿನ ರುಚಿ ಹತ್ತಿಸಿದ 'ಸುಧಾ', ಆಮೇಲೆ ಜೊತೆಗೂಡಿದ ಹಳೆ 'ಕಸ್ತೂರಿ'ಗಳ ಸಖ್ಯದ ಕಥೆ ತುಂಬಾ ದೊಡ್ಡದಿದೆ. ಊರಿಂದ ತಂದಿದ್ದ ಹಳೆ ಪತ್ರಿಕೆಯೊಂದನ್ನು ನೋಡುತ್ತಿದ್ದಂತೆ ಎಲ್ಲ ನೆನಪಾಗುತ್ತಿದೆ ಇಂದು.

ಗುರುವಾರ, ಜನವರಿ 22, 2009

ಅರೆರೆ.... ಚಿಗರೆ!!

ಅಡವಿ, ವನ್ಯಪ್ರಾಣಿಗಳು ಎಂದಾಕ್ಷಣ ನನ್ನ ಕಣ್ಣೆದುರು ಮೂಡುತ್ತಿದ್ದ ಆಕಾರಗಳು ಎರಡು: ಒಂದು ಹುಲಿ, ಇನ್ನೊಂದು ಜಿಂಕೆ (ನಮ್ಮೂರಿನ ಭಾಷೆಯಲ್ಲಿ ಚಿಗರೆ).
ಈ ಪೈಕಿ ಮೊದಲನೆಯದು ಕಾಡಿನ ವಿಚಾರವಾಗಿ ಎದೆಯಾಳದಲ್ಲೊಂದು ಮರಗಟ್ಟಿಸುವ ಭಯವನ್ನು ಹುದುಗಿಸಿಟ್ಟಿದ್ದರೆ, ಎರಡನೆಯದು ಬೆಚ್ಚನೆಯ ಆಕರ್ಷಣೆಯನ್ನು ಚೌಕಟ್ಟು ಕಟ್ಟಿ ಕೂಡ್ರಿಸಿತ್ತು. ಅದರ ಮಿರಿಮಿರಿ ಮಿಂಚುವ ಚಂದದ ಚುಕ್ಕೆಭರಿತ ಚರ್ಮ, ಕವಲು ಕವಲಾದ ಕೋಡುಗಳು, ಪಿಳಿ ಪಿಳಿ ಕಣ್ಣುಗಳು, ಛಂಗನೇ ನೆಗೆದು ಓಡುವ ಪರಿ... ಅದರ ಬಗೆಗೊಂದು ಮಧುರವಾದ ಪ್ರೀತಿಯನ್ನು ಹುಟ್ಟು ಹಾಕಿದ್ದವು.
ಮನೆ ಸುತ್ತಲ ಕಾಡಿನಲ್ಲಿ ಹರಿಣಗಳು ಹೇರಳವಾಗಿದ್ದ ಕಾಲ ಅದು. ಚಕ್ಕಡಿ ಗಾಡಿ ಕಟ್ಟಿಕೊಂಡು ಕಾಡಿನೊಳಗೆ ಕಟ್ಟಿಗೆ ಹೇರಲೋ, ಗಳು ತರಲೋ ಹೊರಟಾಗ ಇದ್ದಕ್ಕಿದ್ದಂತೆ ಜಿಂಕೆಗಳ ದರ್ಶನವಾಗುತ್ತಿತ್ತು. ಸಾಮಾನ್ಯವಾಗಿ ಹಿಂಡಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವು ಆಗಾಗ ನಾಯಿಗಳಿಂದ, ಬೆನ್ನಟ್ಟಿದ ಬೇಟೆಗಾರರಿಂದ ತಪ್ಪಿಸಿಕೊಳ್ಳಲೆಂದು ನಮ್ಮ ಕಂಪೌಂಡ್ನೊಳಗೆ ನುಗ್ಗಿ ಬರುತ್ತಿದ್ದುದುಂಟು. ಇದ್ದಕ್ಕಿದ್ದಂತೆ ಶೂನ್ಯದೊಳಗಿನಿಂದ ಪ್ರತ್ಯಕ್ಷವಾದಂತೆ ಕಂಡ ಜಿಂಕೆಯನ್ನು ನೋಡಿ ನಾವು 'ಅರೆ! ಚಿಗರೆ!! ಇಲ್ ಬಾ, ಅಲ್ನೋಡು' ಎನ್ನುವುದರೊಳಗಾಗಿ ಅವು ಮಾಯವಾಗಿರುತ್ತಿದ್ದವು. ಆದರೂ 'ನಮ್ಮನೆಗೆ ಚಿಗರೆ ಬಂದಿತ್ತು' ಎಂಬುದೊಂದು ಪುಳಕ ವರ್ಷಗಟ್ಟಲೇ ನಮ್ಮಲ್ಲಿ ಉಳಿದಿರುತ್ತಿತ್ತು.
ಶೌಚಾಲಯ ಇಲ್ಲದ ಆ ದಿನಗಳಲ್ಲಿ ತಂಬಿಗೆ ತಗೊಂಡು ಕಾಡಿಗೆ ಹೋದಾಗ ಎಷ್ಟೋ ಬಾರಿ ಜಿಂಕೆಗಳು ಕಾಣುತ್ತಿದ್ದುದುಂಟು. ಮನೇಲಿ ಯಾರಾದ್ರೂ ಒಬ್ಬರಿಗೆ ಅವು ಕಂಡವೆಂದರೆ ಬಂದು ಹೇಳಿದಾಕ್ಷಣ ಮತ್ತಿಬ್ಬರು ಆ ಕಡೆಗೆ ಓಡುತ್ತಿದ್ದೆವು. ಆದರೆ ಒಮ್ಮೆ ಮನುಷ್ಯರನ್ನು ಕಂಡ ಅವು ನಮ್ಮ ಸ್ವಾಗತಕ್ಕೆ ಕಾದಿರಬೇಕಲ್ಲ!
ಜಿಂಕೆಗಳಿಗೆ ಎತ್ತಿನ ಕೊರಳಿನ ಗಂಟೆಗಳ, ಗೆಜ್ಜೆಸರಗಳ ನಾದ ಬಲು ಇಷ್ಟ ಎಂಬುದು ಅಪ್ಪ ಅನುಭವದಿಂದ ಕಂಡುಕೊಂಡಿದ್ದ ಸತ್ಯ. ಒಮ್ಮೆ ಗೆಜ್ಜೆಸರ ಕಟ್ಟಿದ್ದ ಎತ್ತುಗಳನ್ನು ಹೂಡಿದ್ದ ಗಾಡಿಯಲ್ಲಿ ಕುಳಿತು ಕಾಡಿನ ದಾರಿಯಲ್ಲಿ ಮಾಸ್ತ್ಯಮ್ಮ ದೇವಿಯ ಗುಡಿಗೆ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ನನ್ನ ಆರನೆಯ ಇಂದ್ರಿಯ ಜಾಗೃತವಾಯಿತು. ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಗಟ್ಟಿಗೊಳ್ಳತೊಡಗಿತು.
ಗಾಡಿ ಹೊಡೆಯುತ್ತಿದ್ದ ಅಪ್ಪನ ಬೆನ್ನಿಗಂಟಿ ಕುಳಿತಿದ್ದ ನಾನು ಈ ಬಗ್ಗೆ ಅವನ ಕಿವಿಯಲ್ಲಿ ಪಿಸುಗುಟ್ಟಿದೆ. ಎತ್ತುಗಳ ಹಗ್ಗ ಎಳೆದು ಗಾಡಿಯ ವೇಗ ತಗ್ಗಿಸಿದ ಅಪ್ಪ ಅಷ್ಟೇ ಮೆತ್ತಗಿನ ದನಿಯಲ್ಲಿ, 'ಆನೂ ಈಗ ಅದನ್ನೇ ಹೇಳಂವ ಆಗಿದ್ದಿ. ರಸ್ತೆ ಅಂಚಿಗಿರ ಬಿದಿರ ಮಟ್ಟಿಗಳನ್ನ ದಿಟ್ಟಿಸಿ ನೋಡು... ಎಂಥ ಕಾಣ್ತು ಹೇಳು...' ಎಂದ. ಗದ್ದಲ ಮಾಡುತ್ತಿದ್ದ ಅಣ್ಣ, ಅಕ್ಕ ಕೂಡ ಮಾತು ನಿಲ್ಲಿಸಿ ಅತ್ತ ದೃಷ್ಟಿ ತೂರಿದರು. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಬಿದಿರು ಮೆಳೆಗಳು ದಟ್ಟೈಸಿದ್ದವು. ದಪ್ಪ ದಪ್ಪ ಬಿದಿರ ಬುಡಗಳ ಮರೆಯಲ್ಲಿ ನಮಗೆ ಹೊಳೆಯುವ ಪಿಳಿ ಪಿಳಿ ಕಣ್ಣುಗಳು, ನಿಮಿರುತ್ತಿದ್ದ ಕಿವಿಗಳು, ಬಡಿದುಕೊಳ್ಳುತ್ತಿದ್ದ ಮೊಂಡ ಬಾಲಗಳು ಕಾಣಿಸಿದವು. ಅತ್ಲಾಗೊಂದ್ನಾಕು, ಇತ್ಲಾಗೊಂದ್ನಾಕು ಜಿಂಕೆಗಳು ನಮ್ಮನ್ನೇ ಗಮನಿಸುತ್ತ ಬಹುಶಃ ಕುತೂಹಲದಿಂದ ನಿಂತಿದ್ದವು. 'ಅರೆ! ಎಷ್ಟೆಲ್ಲಾ ಜಿಂಕೆ!'- ನಾವು ಕೂಗುವುದರೊಳಗಾಗಿ ನಮ್ಮ ಪ್ರತಿಕ್ರಿಯೆ ಹೀಗೆ ಇರಬಹುದು ಎಂದು ಊಹಿಸಿದ್ದ ಅಪ್ಪ 'ಶ್! ಕೂಗಡಿ, ಸುಮ್ಮಂಗೆ ನೋಡಿ' ಎಂದ.
ನಾವು ನಿಂತರೆ ಅವು ಪರಾರಿಯಾಗುತ್ತವೆಂಬ ಅರಿವಿದ್ದ ಅಪ್ಪ ನಿಧಾನವಾಗಿ ಗಾಡಿ ಹೊಡೆಯುತ್ತಲಿದ್ದ. 'ಅಪ್ಪಾ, ಗಾಡಿ ನಿಲ್ಸಾ, ಒಂದ್ಸಲ ನಿಲ್ಸಾ' ಎಂದು ನಾವು ಕುಸುಕುಸು ಶುರು ಮಾಡಿಯೇ ಬಿಟ್ಟವು. ನಮ್ಮ ಈ ಜಾಗರೂಕ ವರ್ತನೆ ಮತ್ತು ಇದ್ದಕ್ಕಿದ್ದಂತೆ ಉಂಟಾದ ಮೌನದ ವಾತಾವರಣದಲ್ಲಿ ಅಪಾಯದ ವಾಸನೆ ಗ್ರಹಿಸಿದ ಜಿಂಕೆಗಳು ರಸ್ತೆಯ ಅತ್ಲಾಗಿಂದ ಇತ್ಲಾಗೆ ಅಡ್ಡಾದಿಡ್ಡಿ ಜಿಗಿದು, ಮನಸ್ಸೋ ಇಚ್ಛೆ ಚದುರಿಯೇ ಬಿಟ್ಟವು. 'ನೋಡಿ, ನಾವು ಅವನ್ನು ಗಮನಿಸದು ಅವಕ್ಕೆ ಗೊತ್ತಾಗ್ಲಾಗ. ನಮ್ಮ ಪಾಡಿಗೆ ಕೆಲಸ ಮಾಡ್ತಾ ಸೂಕ್ಷ್ಮವಾಗಿ ಅವನ್ನು ಗಮನಿಸವು. ಆವಾಗ ಅವೂ ಅಲ್ಲೇ ನಿಲ್ತ'- ಅಪ್ಪ ಪರಿಸರ ಪಾಠದ ಒಂದು ನೀತಿ ಬೋಧಿಸಿದ.
ರಸ್ತೆಯಂಚಿನಲ್ಲಿ ಮೇಯುತ್ತಿರುವ ಜಿಂಕೆಗಳು ಯಾರಾದರೂ ಬರುವ ಸೂಚನೆ ಸಿಕ್ಕಿದ್ದೇ ಈ ಬದಿಯಿಂದ ಆ ಬದಿಗೆ ದಾಟಿ ಓಡಿ ಹೋಗಿದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಈ ವರ್ತನೆ, ಓಡಾಡುವ ಜನರ ಮತ್ತು ಅವರ ಬಳಿಯಿರಬಹುದಾದ ನಾಯಿಗಳ ಗಮನವನ್ನು ಮುದ್ದಾಂ ಅವುಗಳ ಮೇಲೆ ಎಳೆದು ತರುತ್ತಿತ್ತು. ಹಲವು ಬಾರಿ ಖುದ್ದು ಅವನ್ನು ಅಪಾಯದಲ್ಲಿ ಸಿಕ್ಕಿಸುತ್ತಿತ್ತು. ಅವುಗಳ ಈ ಪೆದ್ದ ನಡವಳಿಕೆಯ ಬಗ್ಗೆ ಅಪ್ಪನಲ್ಲಿ ಪ್ರಸ್ತಾಪಿಸಿದಾಗ, ತಾನೂ ಇದನ್ನು ಗಮನಿಸಿರುವುದಾಗಿ ಆತ ಹೇಳಿದ. ಈ ಕಾರಣದಿಂದಾಗಿಯೇ ಅವು ಬೇಟೆಗಾರರಿಗೆ ಸುಲಭವಾಗಿ ಬಲಿಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ.
ಕಾಡು ಕಣಗಿಲು, ಅತ್ತಿ ಮರಗಳ ಹಣ್ಣೆಂದರೆ ಜಿಂಕೆಗಳಿಗೆ ಮಹಾ ಪ್ರೀತಿ. ಅತ್ತಿ ಹಣ್ಣಾಗುವ ಕಾಲದಲ್ಲಿ ಗದ್ದೆಗಳ ಅಂಚಿನಲ್ಲಿರುವ ಆ ಮರಗಳ ಕೆಳಗೆ ಮುಂಜಾವಿನಲ್ಲಿ ಜಿಂಕೆಗಳ ಜಾತ್ರೆಯೇ ಸೇರುತ್ತಿತ್ತು. ಟಣ್ ಟಣ್ ಎಂದು ನೆಗೆಯುತ್ತ, ಒಂದು ಐದ್ಹತ್ತು ನಿಮಿಷದಲ್ಲಿ ಇದ್ದ ಹಣ್ಣುಗಳನ್ನೆಲ್ಲ ತಿಂದು ನೆಲ ಸಾಫ್ ಮಾಡಿ ಜಾಗ ಖಾಲಿ ಮಾಡುತ್ತಿದ್ದವು ಅವು. ಬೇಗ ಎದ್ದು ಹೋಗಿ, ಕದ್ದು ಕೂತು ನೋಡಿದಾಗಲಷ್ಟೇ ಈ ಮನೋಹರ ದೃಶ್ಯ ಲಭ್ಯವಾಗುತ್ತಿತ್ತು.
ಇನ್ನು ಏಕಮುಖವಾಗಿ ಎತ್ತರಕ್ಕೆ ಬೆಳೆವ ಕಣಗಿಲು ಮರದ ಕೆಳಗೂ ಅಷ್ಟೇ. ರಾತ್ರಿಯಿಡೀ ಬಿದ್ದಿರುತ್ತಿದ್ದ ಅರಿಶಿಣ ಬಣ್ಣದ, ಗೋಲಿ ಗಾತ್ರದ ಹಣ್ಣುಗಳನ್ನು ತಿನ್ನಲು ಬೆಳಿಗ್ಗೆ ಹಿಂಡುಗಟ್ಟಲೇ ಜಿಂಕೆಗಳು ಬರುತ್ತಿದ್ದವು. ಅವುಗಳ ಕಾಲ್ತುಳಿತ, ಕಾದಾಟದಿಂದಾಗಿ ಹಣ್ಣಿನ ಸುಗ್ಗಿಯ ಕಾಲದಲ್ಲಿ ಆ ಮರಗಳ ಅಡಿಯ ನೆಲ ಈಗಷ್ಟೇ ಕೆತ್ತಿದ ಹಾಗೆ ಇರುತ್ತಿತ್ತು. ಸುತ್ತಲ ನೆಲವೆಲ್ಲ ಎಳೆ ಹುಲ್ಲು, ಗರಿಕೆ ಚಿಗುರುಗಳಿಂದ ನಳನಳಿಸುತ್ತಿದ್ದರೆ ಕಣಗಿಲು ಮರದಡಿ ವೃತ್ತದಾಕಾರದಲ್ಲಿ ಕಾಲುದಾರಿಯಷ್ಟು ಬೋಳಾಗಿರುತ್ತಿತ್ತು ನೆಲ.
ವಿಪರ್ಯಾಸವೆಂದರೆ ಕಣಗಿಲು, ಅತ್ತಿ ಹಣ್ಣುಗಳ ಮೇಲಿನ ಈ ಮೋಹವೇ ಜಿಂಕೆಗಳಿಗೆ ಬಹಳಷ್ಟು ಸಲ ಡೆತ್ ಟ್ರ್ಯಾಪ್ ಆಗುತ್ತಿತ್ತು. ಹನುಮಾಪುರದ ಬಹುಸಂಖ್ಯಾತ ಜನರಿಗೆ ಜಿಂಕೆ ಮಾಂಸವೆಂದರೆ ಅದೇನು ಪ್ರೀತಿಯೋ! ಕಣ್ಣಿಗೆ ಬಿದ್ದ ಯಾವೊಂದು ಜಿಂಕೆಯನ್ನೂ ಅವರು ಬದುಕಗೊಡುತ್ತಿರಲಿಲ್ಲ. ಕಾಡಿನೊಳಗಣ ಜಿಂಕೆ ಬೇಟೆಯ ವಿದ್ಯಮಾನ ನಮಗೆ ತಿಳಿಯುತ್ತಿರಲಿಲ್ಲ ನಿಜ, ಆದರೆ ನಮ್ಮ ಮನೆಯ ಆಸುಪಾಸಿನಲ್ಲೇ ಎಷ್ಟೋ ಬಾರಿ ನಮ್ಮ ಕಣ್ಣೆದುರೇ ಆ ಜನ, ಮತ್ತವರ ನಾಯಿಗಳು ಜಿಂಕೆ ಹಿಡಿದಾಗ ನಮಗೆ ತೀರಾ ವ್ಯಥೆಯಾಗುತ್ತಿತ್ತು.
ಹಲವು ಸಲ ಊರವರ ನಾಯಿಗಳು ಬೆನ್ನು ಹತ್ತಿದಾಗ ಜಿಂಕೆಗಳು ದಾರಿ ತಪ್ಪಿ ನಮ್ಮ ಕಂಪೌಂಡ್ನೊಳಗೆ ನುಗ್ಗುತ್ತಿದ್ದವು. ಅವು ಎತ್ತಲಿಂದ ಬಂದವು, ಎತ್ತ ಓಡಿದವು ಅಥವಾ ಎಲ್ಲಿ ಅಡಗಿವೆ ಎಂದು ನಮಗೆ ಗೊತ್ತಿದ್ದರೂ, ಆ ನಾಯಿಗಳ ಒಡೆಯರು ಬಂದು ಕೇಳಿದಾಗ ನಾವು ಜಿಂಕೆ ಅಲ್ಲಿ ಬಂದಿಲ್ಲ ಎಂದೇ ವಾದಿಸುತ್ತಿದ್ದೆವು. 'ಅಮ್ಮಾರು/ಹೆಗಡೇರು ಬಿಡ್ರೀ, ನೀವು ಸುಳ್ಳ್ ಹೇಳಾಕ್ಹತ್ತೀರಿ' ಎಂದು ಅವರು ಗೊಣಗಿಕೊಂಡರೂ, ಒಳನುಗ್ಗಿ ಹುಡುಕಾಡುವ ಧಾರ್ಷ್ಟ್ಯ ತೋರುತ್ತಿರಲಿಲ್ಲ. ಅತ್ತ ಆ ಜಿಂಕೆಯ ಪ್ರಾಣ ಉಳಿದುಕೊಂಡರೆ, ಇತ್ತ ಒಂದು ಬಡಜೀವ ಬದುಕಿಸಿದ ಧನ್ಯತಾಭಾವ ನಮ್ಮಲ್ಲಿ ಉಳಿದುಕೊಳ್ಳುತ್ತಿತ್ತು. ಆದರೆ ಹಲವು ಸಲ ನಮ್ಮ ನಾಯಿಗಳು ಬೊಗಳಿ, ಆ ಜಿಂಕೆಯನ್ನು ಇನ್ನಷ್ಟು ಬೆದರಿಸಿ, ಅದು ಹೊರ ಓಡುವಂತೆ ಮಾಡಿ ನಮ್ಮೆಲ್ಲಾ ಪ್ರಯತ್ನಗಳನ್ನೂ ಮಣ್ಣುಗೂಡಿಸುತ್ತಿದ್ದವು. ಅಂಥ ದಿನ ನಮ್ಮ ನಾಯಿಗಳಿಗೆ ಕಡ್ಡಾಯ ಉಪವಾಸದ ಶಿಕ್ಷೆ.
ಒಮ್ಮೆ ಹೀಗಾಯ್ತು: ಬೇಸಿಗೆಯ ಆ ದಿನ ಊರಿನ ಸುಮಾರು 20-25 ಜನ ನಮ್ಮನೆಯೆದುರಿನ ಕೆರೆಯಲ್ಲಿ ಮೀನು ಹಿಡಿಯಲು ಜಮಾಯಿಸಿದ್ದರು. ಅವರೊಂದಿಗೆ ಅವರ ಹೆಂಡಿರು-ಮಕ್ಕಳು, ನಾಯಿಗಳ ಗದ್ದಲವೂ ಸೇರಿತ್ತು. ಇತ್ತ ಅವರು ಮೀನು ಬೇಟೆಯಲ್ಲಿ ತೊಡಗಿದ್ದಾಗ ಅವರ ನಾಯಿಗಳು ಕಾಡಿಗೆ ನುಗ್ಗಿದವು. ಅಲ್ಲೊಂದು ನತದೃಷ್ಟ ಜಿಂಕೆ ಅವುಗಳ ಕಣ್ಣಿಗೆ ಬಿತ್ತು, ಸರಿ ಅದನ್ನು ಬೆನ್ನತ್ತಿದವು. ತಪ್ಪಿಸಿಕೊಳ್ಳಲು ಎರ್ರಾಬಿರ್ರಿ ಓಡಿದ ಜಿಂಕೆ ಸೀದಾ ನಮ್ಮ ಬೇಲಿಯೊಳಗೆ ನುಗ್ಗಿತು. ಮನುಷ್ಯರನ್ನಾದರೆ ನಾವು ತಡೆಯಬಹುದಿತ್ತು. ಆದರೆ ನಾಯಿಗಳಿಗೆ ನಮ್ಮ ಮಾತು ಪಾಲಿಸಬೇಕಾದ ಭಿಡೆ ಇಲ್ಲವಲ್ಲ, ಅವು ಹಿಂದೆಯೇ ನುಗ್ಗಿದವು. ದಿಕ್ಕುಗಾಣದ ಜಿಂಕೆ ಅಲ್ಲಿ ಇಲ್ಲಿ ಓಡಿ, ಕೊನೆಗೆ ನಮ್ಮ ತೋಟದ ಬೇಲಿ ದಾಟಿ, ಅದಕ್ಕೆ ಹೊಂದಿಕೊಂಡಿದ್ದ ಕೆರೆ ಏರಿ ಪ್ರವೇಶಿಸಿತು. ಅದರ ದುರಾದೃಷ್ಟಕ್ಕೆ ಅಲ್ಲಿ ಊರಿನ ಹೆಂಗಸರು, ಮಕ್ಕಳು ಇದ್ದರು. ಅವರು ಛೂಗುಟ್ಟಿ ಅದನ್ನು ಇನ್ನಷ್ಟು ಕಂಗೆಡಿಸಿದರು. ಬೆದರಿದ ಈ ಹರಿಣಿ ಬೇರೆ ಮಾರ್ಗವೇ ಇಲ್ಲದೇ, ಸೀದಾ ಎದುರಿನ ಕೆರೆಗೆ ನುಗ್ಗಿತು. ಮೊದಲೇ ಕ್ಷೀಣಿಸಿದ್ದ ಕೆರೆಯ ನೀರು ಮೀನು ಹಿಡಿಯುವವರ ಭರಾಟೆಯಿಂದಾಗಿ ಕೆಸರುಗಟ್ಟಿತ್ತು. ಅದು ಆ ಹೆದರಿದ ಹುಲ್ಲೆಯ ದುರಂತ ನಾಟಕದ ಕೊನೆಯ ವೇದಿಕೆಯಾಯ್ತು. ಜಿಂಕೆ ಕೆರೆಗೆ ಹಾರುತ್ತಲೇ ಮೀನು ಹಿಡಿಯುತ್ತಿದ್ದವರೆಲ್ಲ ವೃತ್ತಾಕಾರವಾಗಿ ಅದನ್ನು ಸುತ್ತುವರೆದರು. ಕೆಸರು ನೀರಿನಲ್ಲಿ ಈಜಲು ವಿಫಲ ಯತ್ನ ನಡೆಸುತ್ತಿದ್ದ ಅದನ್ನು ಸಮೀಪಿಸಿದ ಅವರು, ಅದರ ಕೋಡು ಹಿಡಿದು, ಬಲವಂತವಾಗಿ ಅದರ ಮೊಗವನ್ನು ಕೆಸರಲ್ಲಿ ಮುಳುಗಿಸಿ, ಉಸಿರು ಗಟ್ಟಿಸಿ.......
ಮೂರು ನಿಮಿಷ ಒದ್ದಾಡಿದ ಆ ನಾಲ್ಕು ಹೊಳಪು ಕಾಲುಗಳು ಮರು ನಿಮಿಷದಲ್ಲಿ ನಿಶ್ಚಲವಾದವು. ಜಿಂಕೆ ಬೇಲಿ ದಾಟಿ ಕೆರೆ ಏರಿಗೆ ನುಗ್ಗಿದಾಗಿನಿಂದ 'ಅಯ್ಯೋ, ಅದಕ್ಕೇನೂ ಮಾಡಬೇಡ್ರೋ, ಅದನ್ನು ಬಿಟ್ಟು ಬಿಡ್ರೋ' ಎಂದು ಅಂಗಲಾಚುತ್ತಿದ್ದ, ಕೂಗುತ್ತಿದ್ದ, ಗದರಿಸುತ್ತಿದ್ದ ಅಮ್ಮನ ಕಂಠವೂ ದನಿಯನ್ನು ಕಳೆದುಕೊಂಡಿತು. ಕಣ್ಣೆದುರೇ ಕಿರಾತ ನರ್ತನ ಮಾಡಿದ ಕ್ರೌರ್ಯ, ನನ್ನ, ಅಣ್ಣ-ಅಕ್ಕನ ಕಾಲುಗಳನ್ನು ಕಂಪನದ ಕೇಂದ್ರಗಳನ್ನಾಗಿ ಮಾಡಿತ್ತು. ನಮ್ಮ ಎಳೆಯ ಮನಗಳಿಗೆ ಆ ಘಟನೆ ನೀಡಿದ ಹೊಡೆತ ಅಪಾರ.
ಊರಿಗೆ ವಿದ್ಯುತ್ ಬಂದ ಮೇಲಂತೂ ಅಕ್ರಮ ವಿದ್ಯುತ್ ಬೇಲಿಗಳಿಗೆ ಸಿಕ್ಕು ಸತ್ತ ಜಿಂಕೆಗಳೆಷ್ಟೋ. ಒಮ್ಮೆ ಅಪ್ಪ-ಅಮ್ಮ-ಪುಟ್ಟ ಮರಿಜಿಂಕೆಯ ಸುಂದರ ಸಂಸಾರವೊಂದು ನಮ್ಮ ಮನೆ ಸುತ್ತ ಅಲ್ಲಿ ಇಲ್ಲಿ ಸುಳಿದಾಡುತ್ತ, ಮೇಯುತ್ತ ಸಂತಸ ಮೂಡಿಸಿತ್ತು. ಆದರೆ ಭತ್ತ ತೆನೆಗಟ್ಟುತ್ತಿದ್ದ ಆ ಸಮಯದಲ್ಲಿ ಅವುಗಳ ಇರುವಿಕೆ ಬಹುಶಃ ಸುತ್ತಲ ಹೊಲಗಳ ರೈತರಿಗೇನೂ ಸಂತಸ ಉಕ್ಕಿಸಿರಲಿಕ್ಕಿಲ್ಲ. ಒಂದು ಮುಂಜಾನೆ, 'ಇಂಥವನ ಹೊಲದಂಚಿಗೆ ಒಂದು ಜಿಂಕೆ ಕರೆಂಟ್ ತಾಗಿ ಸತ್ತು ಬಿದ್ದಿದೆಯಂತೆ' ಎಂದು ಅಪ್ಪ ಸುದ್ದಿ ತಂದ. ನಾನೂ ಅವನೊಟ್ಟಿಗೆ ನೋಡಲು ಹೋದೆ. ಕೊಬ್ಬಿದ ಮೈಯ ಹೆಣ್ಣು ಜಿಂಕೆಯೊಂದರ ದೇಹ ಅಲ್ಲಿತ್ತು. ಅದು ಬಹುಶಃ ನಮಗೆಲ್ಲ ಮುದ ನೀಡಿದ ಆ ಬಾಣಂತಿ ಜಿಂಕೆಯೇ ಇರಬೇಕು. ಅದರ ತುಂಬಿದ ಕೆಚ್ಚಲು, ಅನಾಥವಾಗಿರಬಹುದಾದ ಆ ಮರಿ ಜಿಂಕೆಯ ನೆನಪನ್ನು ಮೂಡಿಸಿ ಮನಸ್ಸನ್ನು ಭಾರವಾಗಿಸಿತು.
ಮತ್ತೊಂದು ಪ್ರಸಂಗ: ಒಂದಿನ ಕಾಡಿನ ಕಡೆಯಿಂದ ಲಗುಬಗೆಯಿಂದ ಬಂದ ಅಪ್ಪ, ಮನೆ ಬಳಿ ಏನೋ ಮಾಡುತ್ತಿದ್ದ ನನ್ನನ್ನು, ಅಮ್ಮನನ್ನು ಕರೆದು, 'ನಮ್ಮ ಗದ್ದೆಯಂಚಿನ ಅಗಳ(ಕಾಲುವೆ)ದಲ್ಲಿ ಒಂದು ಜಿಂಕೆ ಅಡಗಿ ಕೂತಿದ್ದು. ಬೇಕಾದ್ರೆ ಸದ್ದು ಮಾಡದೇ ಹೋಗಿ ನೋಡಿ ಬನ್ನಿ' ಎಂದ. ನಮಗೆ ಕುತೂಹಲ- 'ಎಲ್ಲಿತ್ತು, ಎಲ್ಲಿಂದ ಬಂತು'- ಇತ್ಯಾದಿ ಪ್ರಶ್ನೆಗಳಿಗೆ ಮೊದಲಿಟ್ಟೆವು. 'ಈಗ ಆನು ಕಾಡಿಂದ ಬರಬೇಕಾದ್ರೆ ಬೂಬಣ್ಣನ ನಾಯಿ ಅದನ್ನು ಬೆನ್ನಟ್ಟಿ ಬಂತು. ಅದು ಬಂದು ಅಗಳ ಇಳತ್ತು. ಹಿಂದಿಂದ ಕೂಗ್ತಾ ಬಂದ ನಾಯಿನ್ನ ಆನು ಬೆದರಿಸಿ ದೂರ ಕಳ್ಸಿದ್ದಿ' ಎಂದ ಅಪ್ಪ. 'ಬೂಬಣ್ಣ ಇದ್ದಿದ್ನಿಲ್ಯ' ನಾವು ಕೇಳಿದೆವು. 'ಅಂವ ಸ್ವಲ್ಪ ಹೊತ್ತು ಬಿಟ್ಟು ಬಂದ. ಜಿಂಕೆ ಬಗ್ಗೆ ವಿಚಾರಿಸ್ದ. ಆನು ಗೊತ್ತಿಲ್ಲೆ ಅಂದಿ. ಅಂವ ತನ್ನ ನಾಯಿನ್ನ ಕೂಗ್ತಾ ಊರ ಕಡೆಗೆ ಹೋದ' ಎಂದ. ನನಗೆ ಅನುಮಾನ- 'ಜಿಂಕೆ ಇನ್ನೂ ಅಲ್ಲಿರ್ತ' ಎಂದೆ. 'ಗೊತ್ತಿಲ್ಲೆ, ಆದರೆ ನಾಯಿ ಬಾಯಿ ಹಾಕಿತ್ತಕ್ಕು, ಅದರ ಕಾಲಿಗೆ ಸಣ್ಣ ಗಾಯ ಆಜು. ಹಂಗಾಗಿ ಅಲ್ಲೇ ಇದ್ರೂ ಇದ್ದಿಕ್ಕು' ಎಂದ ಅಪ್ಪ.
ನಾನು, ಅಮ್ಮ ಗಡಿಬಿಡಿಯಿಂದ ಅತ್ತ ಧಾವಿಸಿದೆವು. ಮನದಣಿಯೆ ಜಿಂಕೆಯನ್ನು ನೋಡಲು ಹೋದ ನಮ್ಮ ಕಣ್ಣಿಗೆ ಕಂಡಿದ್ದು ಮಾತ್ರ ಎಂಥ ಭೀಭತ್ಸ ದೃಶ್ಯ!! ಅಗಳಕ್ಕೆ ಇಳಿದಿದ್ದ ಬೂಬಣ್ಣನ ಕೈಯಲ್ಲಿ ರಕ್ತಸಿಕ್ತ ಚಾಕು. ಜಿಂಕೆಯ ಕುತ್ತಿಗೆ ಮುಕ್ಕಾಲು ಭಾಗ ಕತ್ತರಿಸಿ ಹೋಗಿತ್ತು. ಕತ್ತರಿಸಿದ ಕತ್ತಿನಿಂದ ಧಾರಾಕಾರ ಸುರಿಯುತ್ತಿದ್ದ ರಕ್ತ ಕಪ್ಪು ನೆಲವನ್ನು ಕೆಂಪಗೆ ತೋಯಿಸಿತ್ತು. ಅದರ ಉರುಟು ಕುತ್ತಿಗೆಯೊಳಗಿನ ಪೊಳ್ಳಿನಿಂದ ಪ್ರವಹಿಸುತ್ತಿದ್ದ ರಕ್ತಧಾರೆ, ಮಳೆಗಾಲದಲ್ಲಿ ಬಾಳೇಸರದ ಝರಿಗಳಲ್ಲಿ ಧುಮ್ಮಿಕ್ಕುತ್ತಿದ್ದ ಕೆನ್ನೀರಿನ ಪ್ರವಾಹವನ್ನು ಆ ಕ್ಷಣ ನೆನಪಿಸಿತು ನನಗೆ. 'ಯಂಥಕ್ಕೆ ಅದರ ಕುತ್ತಿಗೆ ಕಡಿದ್ಯ ಬೂಬಣ್ಣ, ಬಿಟ್ಟಿದ್ರೆ ಎಲ್ಲಾದರೂ ಬದುಕ್ಯತ್ತಿತ್ತು' ಆಕ್ಷೇಪಿಸಿದಳು ಅಮ್ಮ. 'ನಾ ಕಡೀಲಿಲ್ಲಾಂದ್ರೂ ಅದು ಏನೂ ಬದುಕಂಗಿರಲಿಲ್ಲ ಅಮ್ಮಾರೇ, ನಮ್ಮ ನಾಯಿ ಅದರ ಕಾಲಿಗೆ ಗಾಯ ಮಾಡಿತ್ತು' ಎಂದನಾತ.
ಜಿಂಕೆ ಇತ್ತ ಬಂದಿಲ್ಲ ಎಂದು ಅಪ್ಪ ಹೇಳಿದ ಮೇಲೆ ಆತ ಮುಂದೆ ಸಾಗಿದ್ದನಂತೆ. ಅಷ್ಟರಲ್ಲಿ ಅವನ ನಾಯಿ ಜಿಂಕೆಯ ಸೂಟು ಹಿಡಿದು ವಾಪಸ್ ಬಂದು ಕೂಗಲಾರಂಭಿಸಿತಂತೆ. ಜಿಂಕೆ ಎದ್ದು ಓಡಬೇಕೆನ್ನುವಷ್ಟರಲ್ಲಿ ಅಲ್ಲಿ ಬಂದ ಬೂಬಣ್ಣ, ಅದು ಓಡದಂತೆ ಅದರ ಮುಂಗಾಲಿನ ಮೂಳೆಯನ್ನು ಲಟಕ್ಕೆಂದು ಮುರಿದನಂತೆ- ಅದನ್ನಾತ ಹೆಮ್ಮೆಯಿಂದ ಹೇಳಿಕೊಂಡ. 'ನಮ್ ಮಂದ್ಯಾಗ ನಾವ ಅದಕ್ಕ ಚಾಕು ಹಾಕಲಿಲ್ಲಾಂದ್ರ ತಿನ್ನಂಗಿಲ್ರೀ, ಅದ್ಕ ಅದರ ಕುತ್ಗೀ ಕೊಯ್ದೆ' ಎಂದ ಬೂಬಣ್ಣ, ಅಷ್ಟೊತ್ತಿಗೆ ಅಸು ನೀಗಿದ್ದ ಜಿಂಕೆಯ ಕಳೇಬರವನ್ನು ಹೊತ್ತೊಯ್ಯಲು ಅಣಿಯಾದ. ಜಿಗುಪ್ಸೆ ಹುಟ್ಟಿ ವಾಕರಿಕೆ ಬಂದಂತಾಗಿದ್ದರಿಂದ ನಾನು, ಅಮ್ಮ ಮನೆಯತ್ತ ಓಡಿದೆವು.
ಈಚಿನ ವರ್ಷಗಳಲ್ಲಿ ಮನೆ ಸುತ್ತಲಿನ ಕಾಡೆಲ್ಲ ಒತ್ತುವರಿಯಾಗಿ ಭತ್ತ, ಹತ್ತಿ ಬೆಳೆವ ಗದ್ದೆಯಾಗಿ ಮಾರ್ಪಟ್ಟ ನಂತರ ಜಿಂಕೆಗಳ ಈ ಒಡನಾಟ ಅಪರೂಪವಾಗಿ ಬಿಟ್ಟಿದೆ. ಹಿಂದೆ ತಮ್ಮದಾಗಿದ್ದ ನೆಲದತ್ತ ಇಂದು ಕಣ್ಣೆತ್ತಿ ನೋಡಲೂ ಭಯ ಬೀಳುತ್ತಿರಬೇಕು ಅವು. ಇತ್ತ ನಾವೂ ನಗರಾಭಿಮುಖಿಗಳಾಗಿ ಬೆಳೆದೆವಲ್ಲ. ಆದರೂ ಅಪರೂಪಕ್ಕೊಮ್ಮೆ ಬನ್ನೇರು ಘಟ್ಟಕ್ಕೋ, ಇನ್ಯಾವುದೋ ವನ್ಯಧಾಮಕ್ಕೋ ಹೋದಾಗ, ಅಲ್ಲಿ ಕಣ್ಣಳತೆ ಅಗಲದ ಜಾಗದಲ್ಲಿ, ಕಬ್ಬಿಣದ ಬೇಲಿಯೊಳಗೆ ಭರ್ತಿಯಾದ ಹರಿಣಗಳ ಹಿಂಡನ್ನು ನೋಡಿದಾಕ್ಷಣ, ನನ್ನೂರಿನ ಅಡವಿಗಳಲ್ಲಿ ವಿಸ್ತಾರವಾಗಿ ವಿಹರಿಸುತ್ತಿದ್ದ ಆ ಚಂಚಲನೇತ್ರ ಚಿತ್ತಾಪಹಾರಿಗಳ ನೋಟ ನಯನದೆದುರು ನರ್ತಿಸುತ್ತದೆ.
ನನ್ನೂರಿನ ಸುತ್ತ ಈಗ ಬಾಳಲು ಬೇಕಾದ ಅನುಕೂಲತೆ, ಅನಿವಾರ್ಯತೆ ಜಿಂಕೆಗಳಿಗಿಲ್ಲ. ಬಾಳಿಸುವ ಬದ್ಧತೆ ಜನರಿಗಿಲ್ಲ. ಹಾಗಾಗಿ ಮೊದಲಿದ್ದ ಎಡೆಗಳಲ್ಲಿ ಇಂದು ಅವುಗಳ ಬಾಳುವೆಯೇ ಇಲ್ಲ.

(ಪ್ರಜಾವಾಣಿಗೆ ಧನ್ಯವಾದ ಹೇಳುತ್ತ.....)

ಗುರುವಾರ, ಜನವರಿ 8, 2009

ನನ್ನೊಳಗಿನ ನಾನು

ನನ್ನೊಳಗಿನ ನಾನು ಕಗ್ಗಂಟು
ಒಳಹೊಕ್ಕು ಯಾರೂ ಬಿಡಿಸಲಾರರು
ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು
ಬಿಡಿಸಿ ಯಾರೂ ಸವಿಯಲಾರರು

ನನ್ನ ಮಾಡಿದರು ಒಂದು ಕೀಲುಗೊಂಬೆ
ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು
ಒಲ್ಲದೇ ಹೋದಾಗ ನಾ
ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ

ನನ್ನ ಕಡು ಕೋಪ, ನೇರ ನುಡಿ
ಸುತ್ತೆಲ್ಲ ಜನರ ನಾಲಿಗೆಗೆ ಆಹಾರ
ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು
ಕಾಣುವ ಕಣ್ಣಿಗೆ ಮಾತ್ರ ಬರವೋ ಬರ

ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು
ಆಡಂಭರದ ಕೆಳೆಗೆ ಈ ಮನ ಒಪ್ಪದು
ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ
ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ

ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ
ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ
ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ
ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ
ನಮಸ್ಕಾರ ಸ್ನೇಹಿತರೆ,
ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.