ದೇವಗುಂಡಿಯಲ್ಲಿ ಪೂರ್ವಕ್ಕೆ ಮುಖ ಮಾಡಿ ನಿಂತ ನಮ್ಮ ಮನೆಯೆದುರು ದೊಡ್ಡ ಕೆರೆ. ಉತ್ತರ ಹಾಗೂ ಪಶ್ಚಿಮಕ್ಕೆ ಕಾಡು. ದಕ್ಷಿಣದಲ್ಲಿ ಹೊಲಗದ್ದೆಗಳು, ಅದೂ ಕಣ್ಣಿಗೆ ನಿಲುಕುವಷ್ಟು ದೂರ ಮಾತ್ರ. ಅಲ್ಲಿಂದ ಮುಂದೆ ಮತ್ತೆ ಕಾಡು. ಹೀಗಾಗಿ ಮನೆಯವರನ್ನು ಬಿಟ್ಟರೆ ಆಳುಗಳು ಕೆಲಸಕ್ಕೆ ಬಂದಾಗ, ಹತ್ತಿರದ ಹೊಲದವರು ನೀರಿಗೆ ಬಂದಾಗ, ಇಲ್ಲಾ ತುತರ್ು ಔಷಧವನ್ನೋ, ಹಾಲು-ಮಜ್ಜಿಗೆಯನ್ನೋ ಕೇಳಿಕೊಂಡು ಹನುಮಾಪುರ ಊರ ಹೆಂಗಸರು-ಮಕ್ಕಳು ಬಂದಾಗ ಮಾತ್ರ ಬೇರೆ ಜನಸಂಪರ್ಕ. ಬೇಸಿಗೆಯ ಸಂದರ್ಭದಲ್ಲಂತೂ ಒಂದೊಂದು ದಿನ ಕನಿಷ್ಠ ಒಬ್ಬ ಅನ್ಯ ವ್ಯಕ್ತಿಯ ದರ್ಶನವೂ ಆಗದಿದ್ದುದು ಉಂಟು.
ಇಂಥ ನೀರವ, ನೀರಸ ವಾತಾವರಣದಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ರಂಗು ತುಂಬಿಕೊಳ್ಳುತ್ತಿತ್ತು. ಅದು ಗೌಳೇರ ಆಗಮನದಿಂದ. ಗೌಳೇರು ಅಥವಾ ಗೌಳಿಗಳು ಮರಾಠಿ ಮಾತನಾಡುವ ಬುಡಕಟ್ಟು ಜನ. ನಮ್ಮ ಮುಂಡಗೋಡ ತಾಲ್ಲೂಕಿನಲ್ಲಿ ಅಲ್ಲಲ್ಲಿ ಅವರ ಸಮುದಾಯ ಇದೆ. ಹತ್ತು, ಇಪ್ಪತ್ತು ಎಮ್ಮೆಗಳನ್ನು ಸಾಕಿಕೊಂಡು, ಅವುಗಳ ಲಾಲನೆ-ಪಾಲನೆ ಮಾಡುತ್ತ, ಹಾಲು-ಖೋವಾ ಮಾರಿಕೊಂಡು ಜೀವನ ನಡೆಸುವ ಜನ ಇವರು. ಮಳೆಗಾಲ ಮುಗಿದು, ನೆಲದ ತೇವದ ಜೊತೆಗೆ ಹಸಿರೂ ಬತ್ತಿ ಹೋಗುತ್ತಿದ್ದ ಸಮಯದಲ್ಲಿ ಇವರು ಹುಲ್ಲು ಹುಲುಸಾಗಿದ್ದ ಹೊಸ ಜಾಗ ಹುಡುಕಿಕೊಂಡು ತಂಡಗಳಲ್ಲಿ ತೆರಳುತ್ತಿದ್ದರು. ಎಲ್ಲೋ ಎರಡು ಮೂರು ವರ್ಷಕ್ಕೊಮ್ಮೆ ನಮ್ಮ ದೇವಗುಂಡಿಯ ಕಡೆಗೂ ಬರುತ್ತಿದ್ದ ಅವರು ಕಾಡಿನಂಚಿನಲ್ಲಿ ಒಂದೆಡೆ 'ದೊಡ್ಡಿ' ಕಟ್ಟಿಕೊಂಡು ವಾಸಿಸುತ್ತಿದ್ದರು.
ದೊಡ್ಡಿ ಎಂದಾಕ್ಷಣ ದೊಡ್ಡ ಕಲ್ಪನೆ ಮಾಡುವುದು ಬೇಡ. ತೀರಾ ಕಚ್ಚಾ ರೀತಿಯ ವಾಸದ ವ್ಯವಸ್ಥೆ ಅದು. ಒಂದು ಎಂಟಡಿ ಉದ್ದಗಲದ ಜಾಗದಲ್ಲಿ ನಾಲ್ಕು ಮೂಲೆಗೂ ಒಂದೊಂದು ಗೂಟ ಹುಗಿದು, ಆ ಗೂಟಗಳ ಮೇಲೆ ಒಂದಿಷ್ಟು ಗಳು ಅಡ್ಡಡ್ಡ ಇಟ್ಟು, ಅದರ ಮೇಲೆ ಸೊಪ್ಪಿನ ಚಪ್ಪರ ಕಟ್ಟುತ್ತಿದ್ದರು. ಅಷ್ಟು ಮಾಡಿದರೆ ತಲೆಗೊಂದು ಸೂರು ಸಿದ್ಧ. ಈ ಮನೆಗೆ ಗೋಡೆ ಬೇಕಲ್ಲ, ಅದಕ್ಕೂ ವ್ಯವಸ್ಥೆ ಇತ್ತು. ಇನ್ನೊಂದಿಷ್ಟು ಸೊಪ್ಪಿನ ಚಂಡೆಗಳನ್ನು ಮುರಿದು ತಂದು, ಗೂಟಗಳಿಗೆ ಅಡ್ಡಡ್ಡ ಕಟ್ಟಿದ್ದ ಬಿದಿರ ಗಳುಗಳಿಗೆ ಅವನ್ನು ಸಿಕ್ಕಿಸಿದರಾಯಿತು. ಅದೇ ಗೋಡೆ, ಅದರದ್ದೇ ಬಾಗಿಲು. ನೆಲದಲ್ಲಿಷ್ಟು ಹುಲ್ಲು, ಕಳೆ ಕಿತ್ತು, ಕೆತ್ತಿ, ಸಗಣಿ ಹಾಕಿ ಸಾರಿಸಿದರೆ ಊಟ ಮಾಡಲು, ಮಲಗಲು ತೊಂದರೆ ಇಲ್ಲ. ಅಡುಗೆ ತಯಾರಿ, ಪಾತ್ರೆ ತೊಳೆಯುವುದೆಲ್ಲ ದೊಡ್ಡಿಯ ಹೊರಗೆ.
ಹಗಲೆಲ್ಲ ಎಮ್ಮೆಗಳನ್ನು ದೊಡ್ಡಿಯಲ್ಲಿ ಕೂಡಿ ಇಡುತ್ತಿದ್ದ ಗೌಳೇರು ರಾತ್ರಿ ಅವನ್ನು ಅಡವಿ ಮೇಯಲು ಬಿಡುತ್ತಿದ್ದರು. ಬೆಳಿಗ್ಗೆ ಅಡವಿಯಿಂದ ಅವನ್ನು ಹೊಡೆದುಕೊಂಡು ಬಂದು ಹಾಲು ಹಿಂಡಿ, ಹತ್ತಿರದ ಊರಲ್ಲಿರುತ್ತಿದ್ದ ಡೇರಿಗೆ ಹೋಗಿ ಕೊಟ್ಟು ಬರುತ್ತಿದ್ದರು.
ಈ ಮಧ್ಯೆ ಗೌಳೇರ ಹೆಂಗಸರು ನೀರಿಗಾಗಿ ನಮ್ಮ ಮನೆಗೆ ಬರುತ್ತಿದ್ದರು. ಮದುವೆಯಾದವರೆಲ್ಲ ಹೆಂಗಸರು ಎನ್ನುವುದಾದರೆ ಅವರನ್ನೂ 'ಹೆಂಗಸರು' ಎನ್ನಬಹುದಿತ್ತು. ವಯೋಮಾನದ ದೃಷ್ಟಿಯಿಂದ ಅವರೆಲ್ಲ ಹೆಣ್ಣುಮಕ್ಕಳೇ. ಎಂಟು, ಹತ್ತು ವಯಸ್ಸಿನ ಆ ಬಾಲಕಿಯರೆಲ್ಲ ಪಟಗಚ್ಚೆ ಹಾಕಿ ಸೀರೆ ಉಟ್ಟು, ಕತ್ತಲ್ಲಿ ಪೋಣಿಸಿದ ಕರಿಮಣಿ ಸರ, ಮೇಲಿಂದಿಷ್ಟು ಹಿತ್ತಾಳೆಯ ಆಭರಣ ಹಾಕಿಕೊಂಡು ಬರುತ್ತಿದ್ದುದನ್ನು ಕಂಡರೆ ನಮಗೆ ಅಚ್ಚರಿ. ನಾನು, ಅಕ್ಕ ಅಪ್ಪ-ಅಮ್ಮನ ಸುಪದರ್ಿಯಲ್ಲಿ ಆರಾಮವಾಗಿ ಓಡಾಡಿಕೊಂದು, ಮಜವಾಗಿರಬೇಕಾದರೆ ನಮ್ಮದೇ ವಯಸ್ಸಿನ ಹೆಣ್ಣುಮಕ್ಕಳು ಸಂಸಾರ, ಅಡುಗೆ ತಾಪತ್ರಯಗಳನ್ನೆಲ್ಲ ಹೊತ್ತುಕೊಂಡು, ಎರಡು-ಮೂರು ಫಲರ್ಾಂಗ್ ದೂರದ ನಮ್ಮ ಮನೆಗೆ ನೀರು ತರಲು ಬಂದರೆಂದರೆ ನಮ್ಮ ಕುತೂಹಲ ಮುಗಿಲು ಮುಟ್ಟುತ್ತಿತ್ತು. ಅವರ ಹೆಸರೇನು, ಯಾವಾಗ ಮದುವೆ ಆಗಿದ್ದು, ದೊಡ್ಡಿಯಲ್ಲಿ ಕಾಣುವ ಆ ಮೂರು/ನಾಲ್ಕು/ಐದು ಗಂಡಸರ ಪೈಕಿ ಇಂತಿಂಥ ಹುಡುಗಿಯ ಗಂಡ ಯಾರು, ತಂದೆ-ತಾಯಿಯನ್ನು ಬಿಟ್ಟು ಇಲ್ಲಿ ಬಂದಿರಲು ಅವರಿಗೆ ಬೇಸರ ಬರುವುದಿಲ್ಲವೇ.... ನಮ್ಮಲ್ಲಿ ಪ್ರಶ್ನೆಗಳ ಪಟ್ಟಿಯೇ ಸಿದ್ಧವಿರುತ್ತಿತ್ತು. ಉತ್ತರ ಪಡೆಯುವುದು ಮಾತ್ರ ಸಾಧ್ಯವಿರಲಿಲ್ಲ. ಏಕೆಂದರೆ ಆ ಹುಡುಗಿಯರಿಗೆ ಕನ್ನಡ ಬರುತ್ತಿರಲಿಲ್ಲ, ನಮಗೆ ಮರಾಠಿ ಗೊತ್ತಿಲ್ಲ.
ಆದರೂ ಆಗಾಗ ಉಪಲಬ್ಧವಾಗುತ್ತಿದ್ದ ಸಹವಾಸದಿಂದಾಗಿ ಒಂದೆರಡು ಪ್ರಶ್ನಾರ್ಥಕ ವಾಕ್ಯಗಳನ್ನು ಕಲಿತುಕೊಂಡಿದ್ದೆವು. ಮೊದಲು ಕೇಳುತ್ತಿದ್ದ ಪ್ರಶ್ನೆ ನಿಸ್ಸಂದೇಹವಾಗಿ 'ತುಲಾ ನಾಂವ್ ಕಾಯ್' ಎಂದೇ. ಭಾಷೆ ಸರಿಯೋ, ತಪ್ಪೋ ನಮಗೆ ಗೊತ್ತಿರಲಿಲ್ಲ. ಆದರೂ ದಿನಾ ಅದೇ ಪ್ರಶ್ನೆ ಕೇಳುತ್ತಿದ್ದೆವು. ದಿನಾ ಏಕೆ, ಒಮ್ಮೆ ಉತ್ತರ ಪಡೆದರೆ ಸಾಲದೇ ಎಂದು ಯಾರಾದರೂ ಕೇಳಬಹುದು. ಒಮ್ಮೆಯಾದರೂ ಉತ್ತರ ದೊರಕಿದರೆ ತಾನೇ ಸುಮ್ಮನಿರೋದು. ಇನ್ನೂ ಮದುವೆಯಾಗದೇ(!?), ಫ್ರಾಕ್, ಮಿಡಿ ಹಾಕಿಕೊಂಡು ಓಡುತ್ತ, ಜಿಗಿಯುತ್ತ, ಕಿತಾಪತಿ ಮಾಡುತ್ತ ಇರುತ್ತಿದ್ದ ನಮ್ಮಿಬ್ಬರನ್ನು ಕಂಡರೆ ಅವರಿಗದೇನು ನಾಚಿಕೆಯೋ, ಮುಜುಗರವೋ, ಕೀಳರಿಮೆಯೋ ಅಥವಾ 'ಉಸಾಬರಿಯೇಕೆ' ಎಂಬ ಉಪೇಕ್ಷೆಯ ಭಾವವೋ ತಿಳಿಯದು. ನಮ್ಮ ಕುತೂಹಲವನ್ನು ಅವರೆಂದೂ ತಣಿಸುತ್ತಿರಲಿಲ್ಲ. ಬದಲಾಗಿ ಮುಸಿಮುಸಿ ನಕ್ಕು, ನಮಗೆ ತಿಳಿಯದ ಮರಾಠಿ ಭಾಷೆಯಲ್ಲಿ ಅದೇನೋ ಹೇಳಿ ಕಳಚಿಕೊಂಡು ಬಿಡುತ್ತಿದ್ದರು. ಆದರೆ ಅಮ್ಮ ಮಾತನಾಡಿಸಿದರೆ ಅಷ್ಟೋ, ಇಷ್ಟೋ ಮಾತನಾಡುತ್ತಿದ್ದರು. ಅಂತೂ ಒಂದು ವಾರದ ನಂತರ ನಮಗೆ ಆಕೆ ಚಿಮಣಾಬಾಯಿ, ಈಕೆ ಸಕ್ಕೂಬಾಯಿ- ಧೋಂಡುನ ಹೆಂಡತಿ, ಮತ್ತವಳು ನಕಲೂಬಾಯಿ- ವಿಠ್ಠೂನ ಹೆಂಡತಿ..... ಎಂದು ಅರೆಬರೆ ದುಭಾಷಿ ಅಮ್ಮನ ಮೂಲಕ ತಿಳಿಯುತ್ತಿತ್ತು.
ಬೇಸಿಗೆಯಲ್ಲಿ ಒಮ್ಮೊಮ್ಮೆ ನಮ್ಮ ಮನೆಯಲ್ಲಿ ಕರೆವು ಇರುತ್ತಿರಲಿಲ್ಲ. ಆದರೆ ಹಾಲು-ಮಜ್ಜಿಗೆ ಇಲ್ಲದೇ ಊಟ ಮೆಚ್ಚದಲ್ಲ, ಹಾಗಾಗಿ ಸಮೀಪದಲ್ಲಿ ಎಲ್ಲಾದರೂ ದೊಡ್ಡಿ ಹಾಕಿಕೊಂಡು ಇರುತ್ತಿದ್ದ ಗೌಳೇರ ಬಳಿ ಹೋಗುತ್ತಿದ್ದೆವು. ಹಾಲು ತರುವ ಜವಾಬ್ದಾರಿ ಅಣ್ಣ-ಅಕ್ಕ, ನನ್ನದಿರುತ್ತಿತ್ತು. ನಾವೋ ಇಂಥದ್ದೊಂದು ಅವಕಾಶಕ್ಕಾಗಿ ಕೆರೆಯ ಬಳಿಯ ಕಪ್ಪೆಯಂತೆ ಕಾದಿರುತ್ತಿದ್ದೆವು. ನಮ್ಮ ಚಾಳಿ ಗೊತ್ತಿದ್ದ ಅಮ್ಮ ಹೊಗುವ ಮೊದಲೇ 'ದಿಕ್ಕು ನೋಡ್ತಾ ಕುತ್ಗಳಡಿ, ಹದಾ ಹೊತ್ತಿಗೆ ಮನೆಗೆ ಬನ್ನಿ' ಎಂದು ಎಚ್ಚರಿಸಿಯೇ ಕಳಿಸುತ್ತಿದ್ದಳು. ಒಂದು ಕಿವಿಯಿಂದ ಕೇಳಿದ್ದನ್ನು ಇನ್ನೊಂದು ಕಿವಿಯಿಂದ ಹೊರಕಳಿಸುತ್ತಿದ್ದ ನಾವು ಕೈಲೊಂದು ಚೊಂಬು ಹಿಡಿದು ಸೀದಾ ದೊಡ್ಡಿಯೆಡೆಗೆ ಓಡುತ್ತಿದ್ದೆವು.
ಅದು ಬೆಳಗಿನ ಸಮಯ. ಕಾಡಿನಿಂದ ಎಮ್ಮೆಗಳನ್ನು ಹೊಡೆದುಕೊಂಡು ಬಂದ ಗೌಳೇರು ಅವನ್ನು ದೊಡ್ಡಿಯಲ್ಲಿ ಕೂಡಿ ಹಾಕಿ ಹಾಲು ಕರೆಯುವ ಹೊತ್ತು. ಎಮ್ಮೆಗಳಿಗೆ ಮತ್ತು ಕರುಗಳಿಗೆ ಪ್ರತ್ಯೇಕ ಆವರಣ ಇರುತ್ತಿತ್ತು. ಆವರಣ ಎಂದರೆ ಚೌಕಾಕಾರದಲ್ಲಿ ನಾಲ್ಕು ಮೂಲೆಗೂ ಒಂದೊಂದು ಗೂಟ ಹುಗಿದು, ಅದಕ್ಕೆ ಅಡ್ಡಲಾಗಿ ಮರದ ಎಳೆಗಳನ್ನು ಬಿಗಿದು ಕಟ್ಟಿದ ಜಾಗ ಅಷ್ಟೇ. ಅದಕ್ಕೊಂದು ಚಿಕ್ಕ ಸರಗೋಲು. ಒಂದೋ, ಎರಡೋ ಕೋಣ ಇದ್ದರೆ ಅವು ಹೊರಗೆ ಮರದ ಅಡಿ ಕಟ್ಟಿರುತ್ತಿದ್ದವು. ಎಲ್ಲ ಎಮ್ಮೆ, ಕರು, ಕೋಣಗಳ ಕಿವಿಗಳೂ, ಅವುಗಳ ಮಾಲೀಕರು ನಿರ್ಧರಿಸಿದ ಆಕಾರದಲ್ಲಿ ಹರಿದುಕೊಂಡಿರುತ್ತಿದ್ದವು. ಕೆಲವೊಂದಕ್ಕೆ ಹಿತ್ತಾಳೆಯ ರಿಂಗ್ ಕೂಡ ಇರುತ್ತಿತ್ತು.
ನಮ್ಮ ಮನೆಯಲ್ಲೆಲ್ಲ ಹಾಲು ಕರೆಯುವುದು ಭಾರಿ ಅಚ್ಚುಕಟ್ಟಾದ ರೀತಿಯಲ್ಲಿ. ಕೊಟ್ಟಿಗೆಯೇ ಜನ ಎದ್ದು, ಕುಂತು ಮಾಡುವಷ್ಟು ಚೊಕ್ಕ ಇರುತ್ತಿತ್ತು. ದನಗಳ ಉಚ್ಚೆ, ಸಗಣಿಯನ್ನು ಒಂದು ಚೂರು ಉಳಿಯಗೊಡದೇ ಆಗಾಗ ಸ್ವಚ್ಛ ಮಾಡುತ್ತಿದ್ದರು. ಜೊತೆಗೆ ಹುಲ್ಲು ಹಾಕಲು ಗೋದನಿಗೆ (ಗೋದಲಿ), ನೀರಿಗೆ ಕಲ್ಲಿನ ಬಾನಿ.... ಎಲ್ಲೂ ಏನೂ ಕೊಚ್ಚೆ ಕಾಣುತ್ತಿರಲಿಲ್ಲ. ಹಾಲು ಕರೆಯುವಾಗಲೂ ಅಷ್ಟೇ, ಮೊದಲು ತಮ್ಮ ಕೈ ತೊಳೆದುಕೊಂಡು, ಹೂ ಬೆಚ್ಚಗಿನ ನೀರಲ್ಲಿ ಆಕಳ ಕೆಚ್ಚಲನ್ನು ಚೊಕ್ಕವಾಗಿ ತೊಳೆದು, ಮೊಲೆಗಳಿಗೆ ಬೆಣ್ಣೆ ಹಚ್ಚಿ (ಕೈ ಸರಾಗವಾಗಿ ಜಾರಬೇಕಲ್ಲ!), ಸ್ವಚ್ಛವಾದ ಚೊಂಬಿಗೆ ಹಾಲಿನ ಧಾರೆ ಸೇರುವಂತೆ ಕರೆಯುತ್ತಿದ್ದರು. ಹಾಲು ಕರೆಯುವುದು ಎಂದರೆ ಹೀಗೆ ಇರಬೇಕು ಎಂಬ ಪ್ರಜ್ಞೆ ನಮ್ಮಲ್ಲಿ ಇತ್ತು.
ಆದರೆ ಗೌಳೇರು ಹಾಲು ಕರೆಯುವ ಪರಿಯೋ? 'ಯದಕ್ಕೂ ಬ್ಯಾಡ ಸರ್ವಜ್ಞ!' ಎಮ್ಮೆಯ ಕೆಚ್ಚಲಿನ ಸಮೀಪದಲ್ಲಿ ಕುಕ್ಕರುಗಾಲಿನಲ್ಲಿ ಕುಳಿತಿರುತ್ತಿದ್ದ ಗೌಳಿಮಾಮಾ ತನ್ನೆರಡೂ ತೊಡೆಗಳ ನಡುವೆ ಕೊಳಕಾದ ಚೊಂಬೊಂದನ್ನು ಇಟ್ಟುಕೊಳ್ಳುತ್ತಿದ್ದ. ಸಗಣಿ, ಉಚ್ಚೆ, ಎಮ್ಮೆಯ ಮೈ, ಬಾಲ ಏನನ್ನಾದರೂ ಮುಟ್ಟಿ ಬಂದ ಕೈಯನ್ನು ಕೆಚ್ಚಲಿಗೆ ಹಚ್ಚಿ, ಅದನ್ನು ತೊಳೆಯದೇ ಹಾಗೇ 'ಚೊಂಯ್ ಚೊಂಯ್' ಎಂದು ಹಾಲು ಕರೆಯುತ್ತಿದ್ದ. ಇದನ್ನು ದೂರದಲ್ಲಿ ನಿಂತು ನೋಡುತ್ತಿದ್ದ ನಮ್ಮ ಮೂವರ ಮುಖದ ಮೇಲೆ ಅಷ್ಟಾವಕ್ರ ಗೆರೆಗಳು ಮೂಡಿ ಮಾಯವಾಗುತ್ತಿದ್ದವು. ಸರಿ, ಹೇಗ್ಹೇಗೋ ಹಾಲು ಕರೆದಾಯ್ತು, ಅದನ್ನು ಹಾಗೇ ಅಳೆದು ಕೊಡಬಾರದಾ? ಇಲ್ಲ, ನೀರು ಸೇರಿಸಿಯೇ ಕೊಡುತ್ತಿದ್ದರು. 'ನೀರು ಹಾಕೋದು ಬೇಡ, ಸ್ವಲ್ಪ ಕಡಿಮೆ ಇದ್ರೂ ಪವರ್ಾಗಿಲ್ಲ' ಎಂದು ನಾವು ಎಷ್ಟು ಹೇಳಿದರೂ, ಹಾಗೆ ಮಾಡುವುದು ತಮ್ಮ 'ವೃತ್ತಿಧರ್ಮ'ಕ್ಕೆ ವಿರುದ್ಧವಾದುದು ಎಂದೇ ಅವರು ವಾದಿಸುತ್ತಿದ್ದರು.
ನಮ್ಮ ಮನೆಯ ಆಸುಪಾಸಿನಲ್ಲೇ ಇದ್ದ ಸಂದರ್ಭದಲ್ಲಿ ಕನಿಷ್ಠ ಪಕ್ಷ ನಮ್ಮದೇ ಬಾವಿಯ ನೀರನ್ನು ಹಾಲಿಗೆ ಸೇರಿಸುತ್ತಿದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಕೆಲವೊಮ್ಮೆ ನಮ್ಮ ಮನೆಗಿಂತ ಕಾಡಿನ ತೊರೆಯೇ ಹತ್ತಿರವಾಗಿದ್ದ ಪ್ರಸಂಗದಲ್ಲಿ ಅಲ್ಲಿಂದಲೇ ನೀರು ತಂದುಕೊಳ್ಳುತ್ತಿದ್ದ ಅವರು ಅದನ್ನೇ ಹಾಲಿಗೆ ಬೆರೆಸುತ್ತಿದ್ದರು. ಒಣ ಹವಾಮಾನದ ಮುಂಡಗೋಡಿನಲ್ಲಿ ಬೇಸಿಗೆಯಲ್ಲಿ ಹಳ್ಳದ ನೀರು ಸಿಗಬೇಕೆಂದರೆ ಅದು ಅಲ್ಲಲ್ಲಿ ಮಡುಗಟ್ಟಿಕೊಂಡಿದ್ದರೆ ಮಾತ್ರ. ಆ ಅಲ್ಪ ನೀರೂ ತರಗೆಲೆ ಬಿದ್ದು ಕೊಳೆತಂತಾಗಿ ಕಪ್ಪಾಗಿರುತ್ತಿತ್ತು. ಮೇಲಿಂದ ಒಂಥರಾ ಗೊಬ್ಬರದ ವಾಸನೆ ಬೇರೆ. ಆ 'ಗೋಬರ್ ಫ್ಲೇವರ್' ನೀರನ್ನೇ ನಮ್ಮ ಕಣ್ಣೆದುರು ಅವರು ಬಿಂದಾಸ್ ಆಗಿ ಬೆರೆಸುತ್ತಿದ್ದರೆ ನೋಡುತ್ತಿದ್ದ ನಮಗೆ ಹೊಟ್ಟೆ ತೊಳೆಸಿ ಬಂದಂತಾಗುತ್ತಿತ್ತು. ಆದರೂ ಗತಿ ಇಲ್ಲದೇ ಅದನ್ನು ತರುತ್ತಿದ್ದ ನಾವು ಮನೆಗೆ ಬಂದದ್ದೇ ಅಮ್ಮನಿಗೆ ಅಭಿನಯಪೂರ್ವಕವಾಗಿ ಎಲ್ಲವನ್ನೂ ವಿವರಿಸುತ್ತಿದ್ದೆವು. 'ಥೂ, ಎಂಥ ಗತಿ ಬಂತು' ಎಂದು ಅಸಹ್ಯಪಟ್ಟುಕೊಳ್ಳುತ್ತಿದ್ದ ಅಮ್ಮ, 'ನಿಂಗ ನೋಡ್ತಾ ನಿಂತಿದ್ದು ಸಾಕು, ನೀರು ಸೇರ್ಸದು ಬ್ಯಾಡದೇ ಬ್ಯಾಡ ಹೇಳಿ ಜೋರು ಮಾಡಲೆ ಬಂಜಿಲ್ಯ' ಎಂದು ನಮಗೇ ಗದರಿಸುತ್ತಿದ್ದಳು. ಆಮೇಲೆ ಅದನ್ನು ಅರಿಸಿ, ಕುದಿಸಿ, ಕುದಿಸಿ, ತನ್ನದೇ ರೀತಿಯಲ್ಲಿ ಪ್ಯಾಶ್ಚರೀಕರಿಸುತ್ತಿದ್ದಳು. ಗೌಳೇರ ದೊಡ್ಡಿಯಿಂದ ತಂದ ಹಾಲನ್ನು ನಾವ್ಯಾರೂ ನೇರವಾಗಿ ಕುಡಿಯುತ್ತಿರಲಿಲ್ಲ. ಮಜ್ಜಿಗೆಯನ್ನು, ಅದರಿಂದ ಮಾಡಿದ ಪಳದ್ಯ, ತಂಬುಳಿಯಂಥ ಪದಾರ್ಥಗಳನ್ನು ಮಾತ್ರ ಬಳಸುತ್ತಿದ್ದೆವು.
ಅಸಹ್ಯಪಟ್ಟುಕೊಂಡೂ ಗೌಳೇರ ದೊಡ್ಡಿಯಿಂದ ಹಾಲು ತರುವ ಪರಿಸ್ಥಿತಿ ಹೆಚ್ಚೆಂದರೆ ಎರಡು ಮೂರು ವಾರ ಇರುತ್ತಿತ್ತು. ಅಷ್ಟೊತ್ತಿಗೆ ಮನೆಯಲ್ಲಿ ಯಾವುದಾದರೂ ಒಂದು ದನ ಕರು ಹಾಕುತ್ತಿತ್ತು. 'ಸದ್ಯ, ಹಾಲಿಗೆ ಒಂದು ವ್ಯವಸ್ಥೆಯಾಯಿತು' ಎಂದು ಅಮ್ಮ ನಿಟ್ಟುಸಿರು ಬಿಡುತ್ತಿದ್ದಳು. ನಮಗೆ ಎಳೆಗರು ಮನೆಗೆ ಬಂದ, ಗಿಣ್ಣು ತಿನ್ನುವ ಅವಕಾಶ ಸಿಕ್ಕಿದ ಖುಷಿ ಇದ್ದರೂ, ಗೌಳೇರ ದೊಡ್ಡಿಗೆ ಹೋಗಲು ಒಂದು ನೆಪ ತಪ್ಪಿಹೋಯ್ತಲ್ಲ ಎಂದು ಬೇಸರವಾಗುತ್ತಿತ್ತು.
ಆದರೂ ಎರಡು ಮೂರು ದಿನಕ್ಕೊಮ್ಮೆ ಅಮ್ಮನ ಕಣ್ಣು ತಪ್ಪಿಸಿ ದೊಡ್ಡಿಯ ಕಡೆ ದೌಡಾಯಿಸುತ್ತಿದ್ದೆವು. ಅಷ್ಟೊತ್ತಿಗಾಗಲೇ ಗೌಳಿಮಾಮಾಗಳ ಸ್ನೇಹ ಸಂಪಾದಿಸಿರುತ್ತಿದ್ದ ಅಣ್ಣ ಅವರ ಬಿದಿರು ಲಾಠಿ ತಿರುಗಿಸುತ್ತ, ಎಮ್ಮೆ ಕರುಗಳನ್ನು ಬೆದರಿಸುತ್ತ ಹುಡುಗಾಟಿಕೆಗೆ ಶುರುವಿಟ್ಟುಕೊಳ್ಳುತ್ತಿದ್ದ. ನಾನು, ಅಕ್ಕ ಆ ವೇಳೆಗೆ ಪರಿಚಯವಾಗಿರುತ್ತಿದ್ದ ನಕಲೂಬಾಯಿ/ಸೋನುಬಾಯಿ/ಧೂಳಿಬಾಯಿ....ಗಳೆಡೆ ಒಂದೊಂದು ನಗೆಬಾಣ ಎಸೆದು, ನಿಧಾನಕ್ಕೆ ದೊಡ್ಡಿಯ ಒಳಗೊಂದು ಕಾಲು ಇಡುತ್ತಿದ್ದೆವು. ಅವರು ಮರದ ಪರಾತದಲ್ಲಿ ರೊಟ್ಟಿ ತಟ್ಟುವುದನ್ನು, ಅಡ್ಡಾದಿಡ್ಡಿ ಕಲ್ಲು ಹೂಡಿ ಮಣ್ಣಿನ ಮಡಕೆಯಲ್ಲಿ ಅನ್ನ ಬೇಯಿಸುವುದನ್ನು ಅದೇನೋ 'ಭಾರಿ ವಿನೂತನ ವಿದ್ಯಮಾನ' ಎನ್ನುವಂತೆ ಕಣ್ಣು ಕಿಸಿದುಕೊಂಡು ನೋಡುತ್ತಿದ್ದೆವು. ಬೇಸಿಗೆಯಲ್ಲಿ ಕಾಡಿನಲ್ಲಿ ಹೇರಳವಾಗಿರುತ್ತಿದ್ದ ಕವಳಿ ಕಾಯಿಗಳನ್ನು ತಂದು ಅವರು ಸಾರು ಮಾಡುತ್ತಿದ್ದರೆ ನಮಗೆ ಭಾರಿ ಅಚ್ಚರಿ. ಮನೆಗೆ ಬರುತ್ತಿದ್ದಂತೆಯೇ 'ನಮ್ಮನೆಲ್ಲೂ ಕವಳಿ ಕಾಯಿ ಸಾರು ಮಾಡು' ಎಂದು ಅಮ್ಮನಿಗೆ ದುಂಬಾಲು ಬೀಳುತ್ತಿದ್ದೆವು. 'ಆ ಕವಳಿ ಕಾಯಿ ಆಮಶಂಕೆಗೆ ಮೂಲ. ರಕ್ತ, ಸುಂಬಳ ಹೇಲಾಟ ಶುರು ಆಗ್ತು ನೋಡಿ. ಹಣ್ಣೇ ಅಷ್ಟು ಪಿತ್ತ, ಇನ್ನು ಕಾಯಿದು ಸಾರು ಮಾಡವಡ'- ಅಮ್ಮ ನಮ್ಮ ಬೇಡಿಕೆಯನ್ನು ನಿರ್ದಯೆಯಿಂದ ಗುಡಿಸಿ ಗೊಬ್ಬರಗುಂಡಿಗೆ ಹಾಕುತ್ತಿದ್ದಳು. ಮೇಲಿಂದ 'ಆ ಗೌಳೇರ ದೊಡ್ಡಿ ಹತ್ತಿರ ಠಳಾಯಿಸದು, ಹಿಂಗಿದ್ದೇ ಬ್ಯಾಡ್ದೇ ಹೋದ್ದ ನೋಡಿ ಬಂದು ಪೀಡಿಸದು... ಬೇರೆ ಕೆಲ್ಸ ಇಲ್ಲೆ ನಿಂಗಕ್ಕೆ. ಇನ್ನೊಂದಿವ್ಸ ಅಲ್ಲಿಗೆ ಹೋದ್ರೆ ನೋಡಿ' ಎಂದು ಎಚ್ಚರಿಸುತ್ತಿದ್ದಳು. ಯಥಾ ಪ್ರಕಾರ ನಮ್ಮ ಕಿವಿ ಸುರಂಗದ ಕಾರ್ಯ ನಿರ್ವಹಿಸುತ್ತಿತ್ತು.... ಆ ವಿಷ್ಯ ಬಿಡಿ.
ದೊಡ್ಡಿ ಎಂದಾಕ್ಷಣ ನನ್ನ ದಡ್ಡತನದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಶಾರದೆ ದನ ಕಳೆದಿತ್ತು, ವಾರದ ನಂತರ ಅದರ ಕಳೇಬರ ಪತ್ತೆಯಾಯಿತು ಎಂದೆನಲ್ಲ, ಆ ದಿನ ಅಪ್ಪ ಆ ಬಗ್ಗೆ ಅಮ್ಮನಿಗೆ ವಿವರಿಸುತ್ತಿದ್ದ. 'ಶಾರದೆ (ಕಳೇಬರ) ಸಿಕ್ಕಿದ್ದು ಎಲ್ಲಿ' ಅಮ್ಮ ಕೇಳಿದಳು. 'ಹಳ್ಳ ದಾಟಿದ ಮೇಲೆ ಕಲ್ಲಳ್ಳಿಗೆ ಹೋಪ ದಾರಿಯಲ್ಲಿ ಎಡಕ್ಕೆ ಒಂದು ದಡ್ಡಿ ಇದ್ದು ನೋಡಿದ್ಯ, ಅಲ್ಲೇ ಹತ್ತಿರದಲ್ಲಿ' ಎಂದ ಅಪ್ಪ. 'ಹೌದಾ'- ಅಮ್ಮನ ಉದ್ಘಾರ... ಅಪ್ಪ ವಿವರಿಸುತ್ತ ಮುಂದೆ ಹೋದ, ಕೇಳುತ್ತಿದ್ದ ನಾನು ಮಾತ್ರ ಆ 'ದಡ್ಡಿ' ಎಂಬ ಶಬ್ದ ಹಿಡಿದುಕೊಂಡು ಹಿಂದೆಯೇ ಉಳಿದುಬಿಟ್ಟೆ. 'ಅಲ್ಯಾವ ದಡ್ಡಿ ಇದ್ದಾಳೆ, ಅವಳೇನು ಯಾವಾಗಲೂ ಅಲ್ಲಿಯೇ ಇರುತ್ತಾಳಾ, ಅಮ್ಮನಿಗೆ ಅವಳ ಪರಿಚಯ ಹೇಗೆ, ಹುಲಿ ನಮ್ಮ ಶಾರದೆಯನ್ನು ಕೊಂದರೂ ಆ ದಡ್ಡ ಹುಡುಗಿಗೆ ತಿಳಿಯಲಿಲ್ಲವಾ'- ನನ್ನ ಮನಸ್ಸಿನೊಳಗೆ ಪ್ರಶ್ನೆಯೇ ಪ್ರಶ್ನೆ. ಆದರೆ ದನ ಸತ್ತುಹೋಯಿತೆಂಬ ನೋವಿನಲ್ಲಿದ್ದ ಅಮ್ಮ-ಅಪ್ಪನ ಬಳಿ ಆ ಬಗ್ಗೆ ಪ್ರಶ್ನಿಸಲು ಮನಸ್ಸಾಗಲಿಲ್ಲ. ಒಂದೆರಡು ದಿನಗಳ ನಂತರ ಭಿಡೆ ಬಿಟ್ಟು ಅಣ್ಣನ ಬಳಿ 'ಅದು ಯಾವ ದಡ್ಡಿ' ಎಂದು ಕೇಳಿದೆ. 'ಗೌಳೇರ ದಡ್ಡಿ' ಅಣ್ಣ ಟಕ್ಕಂತ ಉತ್ತರ ಕೊಟ್ಟ. ಆಗಲೇ ಅಂತೂ ನನ್ನ ತಲೆಯೆಂಬ ಟ್ಯೂಬ್ಲೈಟ್ನಲ್ಲಿ ಹೊಳೆದದ್ದು- ಅಪ್ಪ ಹೇಳಿದ ದಡ್ಡಿ ಯಾವುದೇ ದಡ್ಡ ಹೆಂಗಸಲ್ಲ, ಬದಲಾಗಿ ಗೌಳೇರ ದೊಡ್ಡಿ ಎಂದು. ದೊಡ್ಡಿ ಎಂಬ ಶಬ್ದ ನಮ್ಮ ಹವ್ಯಕ ಭಾಷೆಯಲ್ಲಿ ಅಪಭ್ರಂಶವಾಗಿ ದಡ್ಡಿ ಆಗಿದ್ದು ಮತ್ತು ನಮ್ಮ ಭಾಷೆಯಲ್ಲಿ ನಪುಂಸಕ ಲಿಂಗ ವಾಚಕವೇ ಸ್ತ್ರೀಲಿಂಗ ವಾಚಕಕ್ಕೂ ಬಳಕೆಯಾಗುತ್ತಿದ್ದುದು ನನ್ನ ಗೊಂದಲಕ್ಕೆ ಕಾರಣವಾಗಿತ್ತು. ದೊಡ್ಡಿ ಬಗ್ಗೆ ಅನಗತ್ಯ ತಲೆ ಕೆಡಿಸಿಕೊಂಡು ನಾನು ದಡ್ಡಿಯಾಗಿದ್ದೆ.
ಒಮ್ಮೆ ನಮ್ಮ ಜಮೀನಿನ ಪಕ್ಕದ ಕೃಷ್ಣಪ್ಪನ ಹೊಲದಲ್ಲಿ ಗೌಳೇರ ನಾಲ್ಕೈದು ಸಂಸಾರಗಳು ಎಮ್ಮೆ, ಕರುಗಳ ಸಮೇತ ಬಂದು ದೊಡ್ಡಿ ಕಟ್ಟಿದ್ದವು. ಯಥಾ ಪ್ರಕಾರ ನಮ್ಮ ಮನೆಗೆ ನೀರಿಗೆ, ಕೆಲವೊಮ್ಮೆ ತುತರ್ು ಅಕ್ಕಿಗಾಗಿ ಬರುವುದು ನಡೆದಿತ್ತು. ನಾವು ಮೂವರು ದಿನಕ್ಕೆ ನಾಲ್ಕು ಸಲ ಅಲ್ಲಿ ಠಳಾಯಿಸುತ್ತ, ಅವರ ಚರ್ಯೆಗಳನ್ನೆಲ್ಲಾ ತಲೆ ತುಂಬಿಸಿಕೊಳ್ಳುವುದೂ ನಡೆದೇ ಇತ್ತು. ಒಂದಿನ ಅಪರಾಹ್ನ ಮೂರು ಗಂಟೆಯ ಹೊತ್ತು. ದೊಡ್ಡವರೆಲ್ಲ ಚಹಾ ಮುಗಿಸಿ ತಂತಮ್ಮ ಕೆಲಸದಲ್ಲಿ ತೊಡಗಿದ್ದರೆ, ನಾವಿನ್ನೂ ಮಲಗಿಯೇ ಇದ್ದೆವು. 'ಹೆಗಡೀರೇ, ಹೆಗಡೀರೇ' ಎಂಬ ಆರ್ತ ಕರೆ ನಮ್ಮನ್ನು ಬಡಿದೆಬ್ಬಿಸಿತು. ನಾವು ಎದ್ದು ನೋಡುವಷ್ಟರಲ್ಲಿ ಗೌಳೇರ ಮುದುಕಿಯೊಬ್ಬಳು ಅಳುತ್ತಳುತ್ತ ಅಮ್ಮನ ಬಳಿ ಮರಾಠಿಯಲ್ಲಿ ಏನೋ ಹೇಳುತ್ತಿದ್ದಳು. ಮಾತಿಗೊಮ್ಮೆ ಹೊಟ್ಟೆಯ ಮೇಲೆ ಕೈ ಆಡಿಸುತ್ತ, ದೊಡ್ಡಿಯ ಕಡೆ ತೋರಿಸುತ್ತ ಏನೇನೋ ಹೇಳೇ ಹೇಳಿದಳು ಆಕೆ. ಅಮ್ಮನಿಗೆ ಏನೇನೂ ಅರ್ಥವಾಗಲಿಲ್ಲ, ನಮಗಂತೂ ಅದು ಜಪಾನಿ ಭಾಷೆ- ಅರ್ಥವಾಗುವ ಪ್ರಶ್ನೆಯೇ ಇಲ್ಲ. ಆದರೂ ಆಕೆ ಪದೇ ಪದೇ ಹೊಟ್ಟೆಯ ಬಳಿ ಕೈ ತಗೊಂಡು ಹೋಗುತ್ತಿದ್ದುದನ್ನು ನೋಡಿದ ಅಮ್ಮ, 'ಮುದ್ಕಿಗೆ ಹೊಟ್ಟೆನೋವಕ್ಕು. ಹೋಗಿ ಅಪ್ಪನ ಕರೆದು ಔಷಧಿ ಇದ್ರೆ ಕೊಡಲು ಹೇಳಿ' ಎಂದು ನಮ್ಮನ್ನು ಅಪ್ಪ ಇದ್ದಲ್ಲಿಗೆ ಅಟ್ಟಿದಳು.
ಒಳ್ಳೆ ರಸ್ತೆ, ವಾಹನ ಸೌಲಭ್ಯ ಏನೂ ಇಲ್ಲದಿದ್ದ ನಮ್ಮ ಊರಲ್ಲಿ ಸಣ್ಣಪುಟ್ಟ ಅನಾರೋಗ್ಯಗಳ ಸಂದರ್ಭದಲ್ಲಿ ಬೇಕಾದೀತೆಂದು ಅಪ್ಪ ತುತರ್ು ಔಷಧಗಳನ್ನು ಇಟ್ಟುಕೊಂಡಿರುತ್ತಿದ್ದ. ಕೆಮ್ಮು, ನೆಗಡಿ, ಜ್ವರ, ಹೊಟ್ಟೆನೋವುಗಳಂಥ ಸಾಮಾನ್ಯ ತೊಂದರೆಗಳ ಮಾತ್ರೆಗಳು, ವಿವಿಧ ಮುಲಾಮುಗಳು, ಬ್ಯಾಂಡೇಜ್ ಸಾಮಗ್ರಿಗಳೆಲ್ಲಾ ನಮ್ಮ ಮನೆಯಲ್ಲಿ ಯಾವಾಗಲೂ ಇರುತ್ತಿದ್ದವು. ಹಾಗಾಗಿ ಊರ ಜನ ಕೂಡ ಅಗತ್ಯವಿದ್ದಾಗ ಬಂದು ಔಷಧ ಒಯ್ಯುತ್ತಿದ್ದರು. ಪೇಟೆಯ ವೈದ್ಯರು ಇಂಜೆಕ್ಷನ್ ಬರೆದುಕೊಟ್ಟರೆ, ಅದನ್ನು ಖರೀದಿಸಿ ತಂದು, ಅಪ್ಪನ ಬಳಿ ಬಂದು ಚುಚ್ಚಿಸಿಕೊಂಡು ಹೋಗುತ್ತಿದ್ದರು. ಈ ಮುದುಕಿಯೂ ಅದೇ ಕಾರಣಕ್ಕೆ ಬಂದಿರಬೇಕೆಂದು ಅಂದುಕೊಂಡೆವು ನಾವು.
ವಾಸ್ತವದಲ್ಲಿ ಗೌಳಿ ಮುದುಕಿ ಬಂದಿದ್ದು ಔಷಧ ಕೇಳಿಕೊಂಡೇ. ಆದರೆ ಆಕೆಗಲ್ಲ, ಅವರ ಎಮ್ಮೆಗೆ. ಗಬ್ಬಿದ್ದ ಅವರ ಎಮ್ಮೆಯೊಂದು ಕರು ಹಾಕಲು ಬಂದಿತ್ತು. ನೀರು ಹೋಗಿ ಮೂರು ತಾಸಾಗಿದ್ದರೂ ಕರು ಇನ್ನೂ ಹೊರಬಂದಿರಲಿಲ್ಲ. ಹಿಂದಿನೆರಡು ಕಾಲು ಹೊರಬಂದಿದ್ದರೆ, ಮುಂದಿನ ಕಾಲುಗಳು ಮತ್ತು ತಲೆ ಎಮ್ಮೆಯ ದೇಹದೊಳು ಸಿಕ್ಕಿಕೊಂಡಿದ್ದವು. ಎಷ್ಟು ಹೊತ್ತಾದರೂ ಹೆರಿಗೆ ಮುಂದುವರಿಯುವ ಲಕ್ಷಣವೇ ಕಾಣದಾಗ, ಆ ಪ್ರೊಸೆಸ್ ಸುರಳೀತವಾಗಲು ಏನಾದರೂ ಔಷಧ ಕೊಡಿ ಎಂದು ಕೇಳಿಕೊಂಡು ಗೌಳಿಮಾಮಿ ನಮ್ಮಲ್ಲಿಗೆ ಬಂದಿದ್ದಳು.
ಎಮ್ಮೆ, ದನಗಳಿಗೆ ಹೆರಿಗೆ ಮಾಡಿಸಿ ಅಪ್ಪನಿಗೆ ಅನುಭವ ಇರಲಿಲ್ಲ, ಅವುಗಳ ಹೊಟ್ಟೆ ಝಾಡಿಸುವುದಕ್ಕೆ ಹೊರತಾಗಿ ಬೇರೆ ಔಷಧವೂ ಮನೆಯಲ್ಲಿರಲಿಲ್ಲ. ಆದರೂ ವಿಷಯ ತಿಳಿಯುತ್ತಲೇ ಅಪ್ಪ, ಗೋಪಾಲಣ್ಣ ದೊಡ್ಡಿಯೆಡೆಗೆ ಓಡಿದರು. ಹಿಂದೆಯೇ ನಮ್ಮ ಸವಾರಿ. ಅಲ್ಲಿನ ದೃಶ್ಯ ಭಯಂಕರವಾಗಿತ್ತು. ಆ ಗೌಳಿಮಾಮಿಯ ಮಗ ಭಾಗುನ ಜೊತೆಗೆ ಇತರ ದೊಡ್ಡಿಯ ಮಾಮಾಗಳು, ಅವರ ಪುಟ್ಟ ಹೆಂಡತಿಯರು ಎಲ್ಲ ಸುತ್ತ ನಿಂತು ಕಂಗಾಲಾಗಿ ನೋಡುತ್ತಿದ್ದರು. ಶರೀರದಲ್ಲಿ ಸಿಕ್ಕಿಕೊಂಡಿದ್ದ ಕರುವನ್ನು ಹೊರದೂಡಲು ಎಮ್ಮೆ ಹರಸಾಹಸ ಮಾಡುತ್ತಿತ್ತು. ವೇದನೆ ತಡೆಯಲಾರದೇ ತನ್ನನ್ನು ಕಟ್ಟಿದ್ದ ಗೂಟದ ಸುತ್ತ ಆಲೆಕೋಣ ಸುತ್ತುವಂತೆ ಸುತ್ತುತ್ತಿತ್ತು. ಒದ್ದಾಡಿ, ಒದ್ದಾಡಿ ಸುಸ್ತಾಗಿ ಆಗಲೇ ತೇಲುಗಣ್ಣು, ಮೇಲುಗಣ್ಣು ಬಿಡಲಾರಂಭಿಸಿತ್ತು. ನಾವು ಹೋಗುವ ಹೊತ್ತಿಗೆ ಕರುವಿಗೆ ಇನ್ನೂ ಜೀವವಿತ್ತು. ಆಗಾಗ ಅದು ಹೊರಬಂದಿದ್ದ ತನ್ನೆರಡೂ ಹಿಂಗಾಲುಗಳನ್ನು ದಢಬಢ ಒದೆಯುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಅದೂ ನಿಂತು ಹೋಯಿತು. ಇನ್ನು ತಡ ಮಾಡಿದರೆ ತಾಯಿಯ ಜೀವವೂ ಹೋಗಬಹುದು ಎಂದುಕೊಂಡ ಅಪ್ಪ, ಗೋಪಾಲಣ್ಣ ಭಾಗುನ ಸಹಾಯದಿಂದ ಸಾವಕಾಶವಾಗಿ ಆ ಸತ್ತ ಕರುವನ್ನು ಹೊರಗೆಳೆಯಲಾರಂಭಿಸಿದರು. ಕರುವಿನ ಮುಂಗಾಲುಗಳು, ಮುಖ ಒಳಗೆ ಎಲ್ಲೆಲಿ,್ಲ ಯಾವ ರೀತಿಯಲ್ಲಿ ಸಿಕ್ಕಿಕೊಂಡಿದ್ದವೋ, ಏನೇನು ಗೋಜಲಾಗಿತ್ತೋ ಏನೋ? ಎಷ್ಟೇ ಸಾವಕಾಶವಾಗಿ, ನಯವಾಗಿ ಎಳೆದರೂ ಪ್ರತಿ ಬಾರಿಗೊಮ್ಮೆ ಎಮ್ಮೆ ಕಾಡೇ ನಡುಗುವುಷ್ಟು ವಿಕಾರವಾಗಿ ಕಿರುಚಿಕೊಳ್ಳುತ್ತಿತ್ತು.
ಎಮ್ಮೆ ಪಡುತ್ತಿದ್ದ ಅಪಾರ ವೇದನೆ, ನಿಂತು ನೋಡುತ್ತಿದ್ದ ಅಮ್ಮನ ಮುಖದಲ್ಲಿ ಪ್ರತಿಫಲಿಸಿ ಆಕೆಯಲ್ಲಿ ವಿಚಿತ್ರ ಸಂಕಟವನ್ನು ಹುಟ್ಟುಹಾಕಿದ್ದರೆ, ನಮ್ಮ ಕಣ್ಣೆಂಬ ಕೆರೆಗಳು ಕೋಡಿ ಬಿದ್ದಿದ್ದವು. ನಾವಿದನ್ನು ಇನ್ನೂ ಹೆಚ್ಚು ಹೊತ್ತು ನೋಡಬಾರದೆಂದು ಆಕೆ ನಮ್ಮನ್ನು ಮನೆಗೆ ಹೊರಡಿಸಲು ಶತಂಪ್ರಯತ್ನ ಮಾಡಿದಳು. ಊಹೂಂ, ನಮ್ಮ ಕಾಲುಗಳು ಬೇರು ಬಿಟ್ಟಿದ್ದವು. ಅತ್ತ, ಮನೆಯಲ್ಲಿ ಒಲೆ ಮೇಲೆ ಬೇಯಿಸಲು ಇಟ್ಟಿದ್ದ ಗಂಜಿ ಬೇರೆ ಅಮ್ಮನನ್ನು ಸೆಳೆಯುತ್ತಿತ್ತು. ನಮ್ಮ ಮನೆಯಲ್ಲೆಲ್ಲ ಎಮ್ಮೆ, ದನ ಕರು ಹಾಕಿದ ನಂತರದಲ್ಲಿ ಅವಕ್ಕೆ ಕಾಳುಮೆಣಸು, ಜೀರಿಗೆ ಹಾಕಿ ಬೇಯಿಸಿದ ಅಕ್ಕಿಯ ಗಂಜಿ ತಿನ್ನಿಸುತ್ತಾರೆ, ಹೊಟ್ಟೆ ಒಣಗಲಿ ಎಂದು. ಹಾಗೆಯೇ ನಂಜಾಗದಿರಲಿ ಎಂದು ಬೂದುಗುಂಬಳವನ್ನು ಕಡಿದು, ಅದಕ್ಕೆ ಒಳ್ಳೆಣ್ಣೆ ಸೇರಿಸಿ ತಿನ್ನಿಸುತ್ತಾರೆ ಕೂಡ. ಈ ಎಲ್ಲ ತಯಾರಿಗಳನ್ನು ಅರ್ಧಂಬರ್ಧ ಮಾಡಿಟ್ಟು ಬಂದಿದ್ದ ಅಮ್ಮ ನಮ್ಮನ್ನು ಅಲ್ಲೇ ಬಿಟ್ಟು ಮನೆಯೆಡೆ ಹೆಜ್ಜೆ ಹಾಕಿದಳು.
ಇತ್ತ ಐದಾರು ಸಲ ಎಳೆದು ನೋಡಿದರೂ ಕರು ಹೊರಬರದಿದ್ದಾಗ, ಮುಂದೇನು ಮಾಡುವುದು ಎಂದು ತೋಚದೇ ಅಪ್ಪ ಮತ್ತಿತರರು ಕೈಚೆಲ್ಲಿದರು. ಮರಣದ ಕಳೆ ಎಮ್ಮೆಯ ಮುಖವನ್ನು ಆವರಿಸಿಕೊಳ್ಳುತ್ತಿದ್ದರೆ, ಸೂತಕದ ಛಾಯೆ ಸುತ್ತ ನಿಂತಿದ್ದ ಎಲ್ಲರ ಮುಖವನ್ನು ಕಪ್ಪಾಗಿಸಿತ್ತು. ಒಂದೈದು ನಿಮಿಷಗಳ ನಂತರ ಇದ್ದಕ್ಕಿದ್ದಂತೆ ಏನಾಯಿತೋ, ದಭಕ್ಕೆಂದು ಕರು ತಾಯಿಯಿಂದ ಕಳಚಿಕೊಂಡು ಕೆಳಗೆ ಬಿತ್ತು. ಹಿಂದೆಯೇ ಆಣೆಕಟ್ಟಿನ ಕ್ರೆಸ್ಟ್ಗೇಟ್ ತೆರೆದಾಕ್ಷಣ ರಭಸದಿಂದ ಮುನ್ನುಗ್ಗುವ ನೀರಿನ ತೆರದಲ್ಲಿ ರಕ್ತದುಚ್ಚಾಟ. ಎಲ್ಲರೂ ಅವಾಕ್ಕಾಗಿ ನೋಡುತ್ತಿದ್ದಂತೆಯೇ, ಐದಾರು ನಿಮಿಷ 'ಪಚ, ಪಚ, ಪಚ' ಎಂದು ಥೇಟ್ ಎಮ್ಮೆ ಉಚ್ಚೆ ಹೊಯ್ಯುವ ರೀತಿಯಲ್ಲಿಯೇ ಅದರ ಮೈಯಿಂದ ಹರಿದು ಬಿದ್ದ ರಕ್ತ, ಕಪ್ಪು ನೆಲವನ್ನು ನೆನೆಸಿ ಇನ್ನಷ್ಟು ದಟ್ಟಗಪ್ಪು ಮಾಡಿತು. ಇಷ್ಟು ಹೊತ್ತು ಬೇನೆಗೆ ಭಾಷ್ಯ ಬರೆದಿದ್ದ ಜೋಡಿ ಕಣ್ಣುಗಳು ಅಂತಿಮವಾಗಿ ಒಮ್ಮೆ ನಭದತ್ತ ದೃಷ್ಟಿ ತೂರಿ ಮತ್ತೆ ನೆಲ ಸೇರುತ್ತಿದ್ದಂತೆಯೇ, ದುರಂತ ನಾಟಕ ಇಲ್ಲಿಗೆ ಪರಿಸಮಾಪ್ತಿಯಾಯ್ತು ಎನ್ನುವಂತೆ ರೆಪ್ಪೆಯ ದಪ್ಪನ ಪರದೆ ಇಳಿಬಿದ್ದಿತು.
ಎಮ್ಮೆ ಧಡ್ಡಂತ ನೆಲಕ್ಕೆ ಬಿದ್ದು, ನಿಶ್ಚಲವಾಗಿ ನಿಮಿಷಗಳೇ ಉರುಳಿದರೂ ಎಲ್ಲೂ ಯಾವ ಚಲನೆಯೂ ಇರಲಿಲ್ಲ, ಗಾಳಿಯೊಂದನ್ನು ಬಿಟ್ಟರೆ. ನಾವು ಮೂವರಷ್ಟೇ ಅಲ್ಲ, ಎಲ್ಲರ ಕಾಲುಗಳಿಗೂ ಬೇರು ಬಂದಿದ್ದವು. ಎಲ್ಲರೂ ಮರಗಟ್ಟಿ ಹೋಗಿದ್ದರು. ಮರಗಳ ನಡುವೆ ಮಾತಿಗೂ ಬರ. ಇಂಥ ಶಾಪಗ್ರಸ್ತ, ನಿಂತು ಹೋದ ಕಾಲಕ್ಕೆ ಕೀಲಿ ಕೊಟ್ಟಿದ್ದು 'ಅಯ್ಯೋ ರಾಮಾ, ಕಡೆಗೂ ಹೋಗಿಬಿಡ್ತಲ್ಲೇ' ಎಂಬ ವ್ಯಥೆಯ ಆಲಾಪ. ಸೂತಕದ ದಿಗ್ಬಂಧನದಿಂದ ಬಿಡಿಸಿಕೊಂಡು ಕತ್ತು ಹೊರಳಿಸಿ ನೋಡಿದರೆ ಅಲ್ಲಿ ಅಮ್ಮ, ಗೌರತ್ತಿಗೆ ನಿಂತಿದ್ದರು. ಅಮ್ಮನ ಕೈಯಲ್ಲಿ ಇನ್ನೂ ಹಬೆಯಾಡುತ್ತಿದ್ದ ಗಂಜಿಯ ಬೋಗುಣಿ. ಗೌರತ್ತಿಗೆಯ ಕೈಯಲ್ಲಿ ಬೂದುಗುಂಬಳದ ಕಡಿಗಳು ತುಂಬಿದ್ದ ಬಟ್ಟಲು.
ಅಮ್ಮ ತರುವ ಪುಡಿ ಔಷಧಿ ತನ್ನ ನೋವಿಗಿನಿತೂ ಸಾಲದೆಂದು, ಸಕಲ ನೋವುಗಳಿಂದ ಶಾಶ್ವತ ಮುಕ್ತಿ ಪಡೆವ ದಾರಿ ಹುಡುಕಿಕೊಂಡು ಎಮ್ಮೆ ದೂರ ಸಾಗಿದ್ದರೆ, ಮತ್ತೆ ಆ ಔಷಧವನ್ನು ಮನೆಗೊಯ್ಯಲು ಮನಸ್ಸಾಗದೇ, ಬೇರೆ ಎಮ್ಮೆಗಳಿಗೆ ಅದನ್ನು ಉಣಿಸಲೂ ಆಗದೇ ದಾರಿಗಾಣದ ಅಮ್ಮ ನಿಂತೇ ಇದ್ದಳು.