ಗುರುವಾರ, ಜುಲೈ 30, 2009

ಕ್ಷಮೆ ಇರಲಿ

ಪ್ರಿಯ ಸ್ನೇಹಿತರೇ,
ಬಹಳ ದಿನಗಳಿಂದ ಬಳಸದೇ 'ಪೆನ್ನು' ಧೂಳು ಹಿಡಿದಿತ್ತು. ಒಳಗಣ ಶಾಯಿಯೂ ಒಣಗಿ ಗಟ್ಟಿಯಾಗಿತ್ತು. ರಾಶಿ ಸೋಮಾರಿತನ, ಒಂಚೂರು ಸಿನಿಕತನ, ಮೇಲಿಂದ ಮುತ್ತಿಕೊಂಡ ಗೊಂದಲದ ಬಿಂಜಲುಬಲೆ.... ನಿಜ ಹೇಳಬೇಕೆಂದರೆ ನನ್ನ ಬಳಿ 'ಪೆನ್ನು' ಇರುವುದೇ ಮರೆತು ಹೋಗಿತ್ತು. ಇವತ್ತೇಕೋ ನೆನಪಾಯಿತು. ಎತ್ತಿ ತೊಳೆದು, ಶಾಯಿ ತುಂಬುತ್ತಿದ್ದೇನೆ. ಈ ಬಾರಿ ಯಾವ '....ತನ'ದ ಗಾಳಿಯೂ ಅದನ್ನು ಒಣಗಗೊಡದಿರಲಿ ಎಂಬುದೊಂದು ಹಾರೈಕೆ.

ಶೆಟ್ಟಣ್ಯಾರ ಯಲ್ಲವ್ವ ಎಂಬೋ 'ಕಾಡವ್ವ'

ಹನುಮಾಪುರದ ಹೆಂಗಸರು ಎಂದಾಕ್ಷಣ ಎಲ್ಲರಿಗಿಂತ ಮೊದಲು ನನ್ನ ಕಣ್ಣಿಗೆ ಕಟ್ಟುವುದು ಯಲ್ಲವ್ವನ ಚಿತ್ರ. ದೇವಗುಂಡಿ ಕೆರೆಯ ಕೆಳಭಾಗದಲ್ಲಿ ಏರಿಗೆ ತಾಗಿ ನಮ್ಮ ಜಮೀನು ಇದ್ದರೆ, ಮೇಲುಭಾಗದಲ್ಲಿ ಕೆರೆಗೆ ಹೊಂದಿಕೊಂಡೇ ಶೆಟ್ಟಣ್ಯಾರ ಹೊಲ ಇತ್ತು. ಆತನ ಪತ್ನಿಯೇ ಯಲ್ಲವ್ವ. ನಾನು ಬಲ್ಲಂದಿನಿಂದಲೇ ಆಕೆ ಅರೆಮುದುಕಿ ಮತ್ತು ವಿಧವೆ. ಮಾಸಿದ ದಡಿ ಸೀರೆ, ಕಸೆ ರವಿಕೆ, ಅಗಲ ಬಾಯಲ್ಲಿ ಯಾವಾಗಲೂ ಕವಳ ತುಂಬಿಕೊಂಡು ಇರುತ್ತಿದ್ದ ಆಕೆ ಪಟ್ಟಗೆ ತಲೆ ಬಾಚಿದ್ದನ್ನು ನಾನೆಂದೂ ನೋಡಿರಲಿಲ್ಲ. ಕುತ್ತಿಗೆಯೊಳಗೆ ಸ್ಪ್ರಿಂಗ್ ಇದ್ದು, ಯಾವುದೋ ಅದೃಶ್ಯ ಕೈ ಅದನ್ನು ಸದಾಕಾಲ ತಟ್ಟುತ್ತಿರುತ್ತದೆಯೇನೋ ಎಂಬಂತೆ ಆಕೆಯ ತಲೆ ಯಾವಾಗಲೂ ಅತ್ತಿಂದಿತ್ತ ಅಲುಗಾಡುತ್ತಲೇ ಇರುತ್ತಿತ್ತು.
ಯಲ್ಲವ್ವನಿಗೆ ನಾನು, ಅಣ್ಣ-ಅಕ್ಕ ಇಟ್ಟ ಹೆಸರು 'ಕಾಡವ್ವ'. ಇನ್ನೂ ಸರಗೋಲು ದಾಟುವ ಮೊದಲೇ 'ಅಮ್ಮಾರೆ, ಈಟು ಮಜ್ಜಿಗೀ ಕೊಡ್ರಿ' ಎನ್ನುತ್ತಲೇ ಆಕೆ ಮುಂದಡಿ ಇಡುತ್ತಿದ್ದಳು. ಎಡಹೊತ್ತಿನಲ್ಲಿ ನಾವೇನಾದರೂ ದೋಸೆ ತಿನ್ನುವುದು ಕಂಡಿತೋ- 'ಅಮ್ಮಾರೆ, ನನ್ಗೂ ದ್ವಾಸಿ ಕೊಡ್ರಿ', ಎಣ್ಣೆಯ ಪರಿಮಳ ಬಂತೋ- 'ಏನೋ ಕಜ್ಜಾಯ ಮಾಡಾಕ್ಹತ್ತೀರಲ್ಲ, ಇತ್ತಾಗ ಒಂದೀಟು ಇಡ್ರಿ', 'ಒಂಚೂರು ಉಪ್ಪಿನಕಾಯಿ ನೀಡ್ರಿ', 'ಬಾಳಿಹಣ್ಣು ಕೊಡ್ರಿ', 'ಮಾವಿನ್ ಹಣ್ಣು ಕೊಡ್ರಿ.........' ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಹನುಮಾಪುರ ಮುಟ್ಟುತ್ತಿತ್ತು. 'ಯಲ್ಲವ್ವ, ನಿನ್ನ ಹೀಂಗೇ ಬಿಟ್ರೆ ನಾಳೆ ಸೀರೆ ಕೊಡ್ರಿ, ಸರ-ಬಳೆ ಕೊಡ್ರಿ ಹೇಳ್ಲಿಕ್ಕೆ ಶುರು ಮಾಡ್ತೀಯೆ' ಅಮ್ಮ ಟೀಕಿಸುತ್ತಿದ್ದಳು. 'ಹೂನ್ರೀ ಮತ್ತ, ಆಟೊಂದು ಸೀರಿ ಅದಾವಲ್ಲ, ಒಂದ್ ಕೊಡ್ರಿ ನನಗ, ನಿಮ್ ಹೆಸರ ಹೇಳಿ ಉಟಗೊಂತೀನಿ' ಪಟ್ಟಂತ ಉತ್ತರ ಬರುತ್ತಿತ್ತು.
ಹಿತ್ತಲಲ್ಲಿ ಅಮ್ಮ, ಗೌರತ್ತಿಗೆ ಕಷ್ಟಪಟ್ಟು ಬೆಳೆದ ತರಕಾರಿಗಳ ಮೇಲೆ ಯಲ್ಲವ್ವ ಇಷ್ಟಪಟ್ಟು ಕಣ್ಣು ಹಾಯಿಸುತ್ತಿದ್ದಳು. ಯಥಾ ಪ್ರಕಾರ 'ಅಮ್ಮಾರ, ಒಂದು ಯೆರಡು ಸೌತೀಕಾಯಿ ಕೊಡ್ರಿ, ಹೀರಿಕಾಯಿ ಕೊಡ್ರಿ, ಕುಂಬಳಕಾಯಿ ಕೊಡ್ರಿ....' ಎಂಬ ಪಲ್ಲವಿ ಯಲ್ಲವ್ವನಿಂದ. ಬೇಸಿಗೆಯ ಒಂದು ಮಧ್ಯಾಹ್ನ. ಅಮ್ಮ, ಗೌರತ್ತಿಗೆ ಭಾರದ ಕೊಡಗಳಲ್ಲಿ ನೀರು ಎತ್ತಿಕೊಂಡು ಬಂದು ಹರಿವೆ, ಗೋಳಿ ಸೊಪ್ಪಿನ ಕಣಗಳಿಗೆ, ಮೂಲಂಗಿ, ಬೀಟ್ರೂಟ್ ಓಳಿಗಳಿಗೆ ನೀರು ಹಾಯಿಸುತ್ತಿದ್ದರು. ನೀರುಣಿಸುವುದನ್ನು ಮುಗಿಸಿ ಮನೆಗೆ ಮರಳುವ ಮುನ್ನ ಸಂಜೆಯ ಅಡಿಗೆಗೆಂದು ಒಂದಷ್ಟು ಕೆಂಪು ಹರಿವೆ ಸೊಪ್ಪು ಮುರಿಯತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ ಯಲ್ಲವ್ವನ ಸವಾರಿ ಆಗಮಿಸಿತು. 'ಅಮ್ಮಾರು ಏನ್ ಮಾಡಾಕ್ಹತ್ತೀರಿ' ಆಕೆ ಕೇಳಿದಳು. ಅಮ್ಮ ತಲೆ ಎತ್ತದೇ ಜಾಣಗಿವುಡು ತೋರಿದಳು. ಯಲ್ಲವ್ವ ಬಿಡಬೇಕಲ್ಲ, 'ಹರಿವಿ ಸೊಪ್ಪು ಕೀಳಾಕ್ಹತ್ತೀರಲ್ಲ' ಎಂದಳು. ಗೌರತ್ತಿಗೆ ಮುಗುಮ್ಮಾಗಿ 'ಹೂಂ' ಎಂದಳು. 'ನಮ್ಗೂ ಒಂದೀಟು ಸೊಪ್ಪು ಕೊಡ್ರೀ, ಏನು ನೀವೊಬ್ಬರೇ ತಿಂತೀರೇನು' ಭಿಡೆ ಇಲ್ಲದ ಯಲ್ಲವ್ವ ಬೇಡಿಕೆಯ ಜೊತೆಗೆ ಆಕ್ಷೇಪವನ್ನು ಎದುರಿಟ್ಟಳು. 'ಪಕ್ಕಾ ಇದೀಯೇ ನೀನು. ನಮ್ಮನೆ ಗದ್ದೇಲಿ, ನಾವು ಬೀಜ ಹಾಕಿ, ನೀರು ಹೊತ್ತು ಬೆಳೀತೇವೆ. ನೀ ಬಂದ್ಕಂಡು ದೊಡ್ಡದಾಗಿ 'ನೀವೊಬ್ರೇ ತಿಂತೀರೇನು' ಹೇಳಿ ಬಿಡ್ತೀಯೇ. ಯಾವತ್ತಾದರೂ ಒಂದು ಕೊಡ ನೀರು ಎತ್ತಿ ಹಾಕಿದೀಯ?' ಅಮ್ಮ ದಬಾಯಿಸಿದಳು. 'ಅಯ್ಯ, ಅದಕ್ಯಾಕ ಹಂಗ್ ಅಂತೀರಿ ಅಮ್ಮಾರೆ, ನಿಮಗ ಗಿಡ ಹಚ್ಚದ್ ಗೊತ್ತೈತಿ, ಹಚ್ಚತೀರಿ, ನಮಗ ಗೊತ್ತಿಲ್ಲ, ಹಚ್ಚಂಗಿಲ್ಲ. ನೀವ್ ಬೆಳಿದೀರಿ, ಅದಕ್ಕ ಕೇಳಾಕ್ಹತ್ತೀನಿ, ಇಲ್ಲಂದ್ರ ಕೇಳತಿದ್ದೆನೇನು?'- ಯಲ್ಲವ್ವನ ತರ್ಕ ಇದು.
ಯಲ್ಲವ್ವ ಶಕ್ತಿ ಇದ್ದ ಕಾಲದಲ್ಲಿ ಹೊಲಕ್ಕೆ ಆಗಾಗ ಬರುತ್ತಿದ್ದಳು. ಬಂದಾಗೆಲ್ಲ ಬಿಂದಿಗೆ ಹಿಡಕೊಂಡು ನೀರಿಗಾಗಿ ನಮ್ಮನೆಗೆ ಬರುತ್ತಿದ್ದಳು. ಒಂದು ಬಿಂದಿಗೆ ನೀರಿಗೆಂದು ಬಂದವಳು ಮಜ್ಜಿಗೆ, ಅದೂ ಇದೂ ಎನ್ನುತ್ತ ಒಂಬತ್ತು ಬೇಡಿಕೆ ಇಡುತ್ತಿದ್ದಳು. ಕರೆವು ಇಲ್ಲದ ಕಾಲದಲ್ಲಿ, ಅದೂ ನಾವು ಮಕ್ಕಳೆಲ್ಲ ರಜೆಗೆ ಬಂದಿರುವಾಗ ಯಾರಾದರೂ ಮಜ್ಜಿಗೆ ಎನ್ನುತ್ತ ಬಂದರೆ ಅಮ್ಮನ ತಲೆ ಕಾಯುತ್ತಿತ್ತು. ಅಪರೂಪಕ್ಕೆ ಬಂದರೆ ಅಡ್ಡಿ ಇಲ್ಲ, ಯೋಗಕ್ಷೇಮ ವಿಚಾರಿಸಿ ಅಷ್ಟೋ ಇಷ್ಟೋ ಮಜ್ಜಿಗೆ ಕೊಡುತ್ತಿದ್ದಳು. ಆದರೆ ಎರಡೆರಡು ದಿನಕ್ಕೊಮ್ಮೆ ಬರುವವರ ಮೇಲೆ ಆ ಅನುಕಂಪ ಇರುತ್ತಿರಲಿಲ್ಲ. ನಾವೋ, ಮಜ್ಜಿಗೆ ಇಲ್ಲದೇ ಊಟ ಅಪೂರ್ಣ ಎಂಬಂಥ ಬ್ರಾಹ್ಮಣರು, ಜೊತೆಗೆ ಯಾವುದೋ ಬೇನೆಯ ಹೆಸರು ತೆಗೆದುಕೊಂಡು, ಒಂದು ಚೊಂಬು ಹಿಡಿದುಕೊಂಡು ಬರುವ ಊರ ಜನ, ಮೇಲಿಂದ ಯಲ್ಲವ್ವನಂಥ ರೆಗ್ಯುಲರ್ 'ಗಿರಾಕಿ'ಗಳು... ಯಲ್ಲವ್ವ ಇನ್ನೂ 'ಅಮ್ಮಾರೆ, ಮ' ಎನ್ನುತ್ತಿದ್ದಂತೆಯೇ ಅಮ್ಮ 'ಮಜ್ಜಿಗೆ ಇಲ್ಲಾ' ಎಂದು ಸರ್ರಂತ ಸಿಡುಕುತ್ತಿದ್ದಳು.
ನಿಜ ಹೇಳಬೇಕೆಂದರೆ ಯಲ್ಲವ್ವನಿಗೆ ಏನು ಬಯ್ದರೂ ವೇಸ್ಟೇ. ಅಮ್ಮನ ಪ್ರಖರ ಆಕ್ಷೇಪ-ಬಯ್ಗುಳಗಳೂ ಯಲ್ಲವ್ವನ ಸುತ್ತ ದಪ್ಪಗೆ ಬೆಳೆದಿದ್ದ 'ನಿರ್ಭಿಡೆ'ಯ ಪ್ರಭಾವಲಯಕ್ಕೆ ಡಿಕ್ಕಿ ಹೊಡೆಯುತ್ತಲೇ ಕಣ್ಣು ಮಂಜಾಗಿ ಮಕಾಡೆ ಬೀಳುತ್ತಿದ್ದವು. ಮೇಲಾಗಿ ಅಮ್ಮನ ನಿಷ್ಠುರತೆಗೊಂದು ಮಿತಿ ಇತ್ತು. ಆ ಮಿತಿಯನ್ನು ದಾಟದಂತೆ ಆಕೆಯ ಅಪ್ಪಯ್ಯ ಹೇಳಿಕೊಟ್ಟ ಆಚಾರ ಕಾವಲು ಕಾಯುತ್ತಿತ್ತು. ಶಾಸ್ತ್ರ ನಿಪುಣನಾಗಿದ್ದ ಅಜ್ಜ, ಅಮ್ಮ ಮದುವೆಯಾಗಿ ಬರುವಾಗ ಹೇಳಿದ್ದನಂತೆ- 'ಮಗಳೇ, ಬಾಯಾರಿ ಬಂದವರಿಗೆ ಯಾವತ್ತೂ ಕೈ ತಿರುಗಿಸಡಾ. ಅದರಲ್ಲೂ ಯಾರಾದರೂ ಮಜ್ಜಿಗೆ ಕೇಳಿ ಬಂದರೆ ಇಲ್ಲೆ ಅನ್ನಡಾ. ಒಂದೇ ಲೋಟದಷ್ಟು ಇದ್ದರೆ ಅದಕ್ಕೆ ಇನ್ನೊಂದು ಲೋಟ ನೀರು ಸೇರಿಸಿ ನೀರು ಮಜ್ಜಿಗೆಯಾದರೂ ಕೊಡು, ಆದರೆ ಇಲ್ಲೆ ಹೇಳಿ ಕಳಿಸಡಾ. ಮೇಲಾಗಿ ಮಜ್ಜಿಗೆಯನ್ನು ಯಾವತ್ತೂ ದಾನವಾಗಿ ಕೊಡವೇ ಹೊರತು ಅದಕ್ಕೆ ದುಡ್ಡು ತಗಳಡಾ.' ಅಪ್ಪಯ್ಯ ಒಪ್ಪುವಂತೆ ನಡೆದುಕೊಂಡು ಬಂದವಳು ಅಮ್ಮ. ಅಮ್ಮಾರು ಕೊಟ್ಟೇ ಕೊಡುತ್ತಾರೆ ಎಂಬ ಭರವಸೆ ಈ ಖಾಯಂ ಗಿರಾಕಿಗಳಿಗೂ ಇರುತ್ತಿತ್ತು. ಹಾಗಾಗಿ ಅವರೂ ಜಪ್ಪಯ್ಯ ಎನ್ನದೇ ಅಲ್ಲೇ ಕುಳಿತಿರುತ್ತಿದ್ದರು. ಅಮ್ಮ ಸಿಡಿಮಿಡಿಗುಡುತ್ತಲೇ ಯಲ್ಲವ್ವನೆದುರು ಒಂದು ಗಿಂಡಿಯಲ್ಲಿ ಮಜ್ಜಿಗೆ ತಂದಿಟ್ಟು, 'ಇಲ್ಲೇ ಕುಡಕಂಡು ಹೋಗಬೇಕು. ಮನೆಗೆ ಒಯ್ತೇನೆ ಅಂದ್ರೆ ಇಲ್ಲಾ ನೋಡು' ಎನ್ನುತ್ತಿದ್ದಳು. ಯಲ್ಲವ್ವ ಕವಳದ ಕೆಂಪು ಮೆತ್ತಿದ್ದ ಬಾಯನ್ನು ಕೆನ್ನೆ ಕಾಣದಷ್ಟು ಅಗಲಕ್ಕೆ ಹರಡಿಕೊಂಡು ಮಜ್ಜಿಗೆ ಒಳಗಿಳಿಸುತ್ತಿದ್ದಳು.
ಈ ಎಲ್ಲ ಮಜ್ಜಿಗೆ-ಮೃಷ್ಟಾನ್ನಗಳ ಋಣವನ್ನು ಯಲ್ಲವ್ವ ಮರೆಯುತ್ತಿರಲಿಲ್ಲ. ಆದರೆ ತೀರಾ ಬಡವಳಾಗಿದ್ದ ಆಕೆಯ ಬಳಿ ತಿರುಗಿ ನೀಡುವಂಥದ್ದೇನೂ ಇರಲಿಲ್ಲ. ಅಂಥ ಯಾವುದೇ ಋಣಸಂದಾಯದ ನಿರೀಕ್ಷೆಯಾಗಲಿ, ಅಗತ್ಯವಾಗಲಿ ಅಪ್ಪ-ಅಮ್ಮನಿಗೆ ಇರಲೂ ಇಲ್ಲ. ಆದರೂ ಯಲ್ಲವ್ವ ವರ್ಷಕ್ಕೊಮ್ಮೆ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದಳು. ಆಗ ನಮ್ಮ ಮನೆಯಲ್ಲಿನ್ನೂ ಒಳ್ಳೆಯ ಹಲಸು-ಬಕ್ಕೆಯ ಮರ ಇರಲಿಲ್ಲ. ಯಲ್ಲವ್ವನ ಮನೆಯಲ್ಲಿ ಒಂದು ಚಂದ್ರ ಹಲಸಿನ ಮರವಿತ್ತು. ವರ್ಷಕ್ಕೆ ಹದಿನೈದು ಇಪ್ಪತ್ತು ಕಾಯಿ ಬರುತ್ತಿತ್ತು ಅದರಲ್ಲಿ. ನಾವು ರಜಕ್ಕೆ ಬಂದ ಆ ಸಮಯದಲ್ಲಿ ಯಲ್ಲವ್ವ ಮುದ್ದಾಂ ಒಂದು ಕಾಯನ್ನು ನಮ್ಮ ಮನೆಗೆ ಕಳಿಸುತ್ತಿದ್ದಳು. ಅಪರೂಪದ ಆ ಕಾಯಿ ಹಣ್ಣಾಗುವುದನ್ನೇ ಕಾಯುತ್ತಿದ್ದ ನಾನು, ಅಣ್ಣ-ಅಕ್ಕ ಅಂತೂ ಆ ಸಮಯ ಬಂದಾಗ ಜೇನು ಜಿನುಗುವ ಆ ಕೆಂಪು ತೊಳೆಗಳನ್ನು ಮಹಾ ಮೆಚ್ಚಿನಿಂದ ತಿನ್ನುತ್ತಿದ್ದೆವು.
ಇಬ್ಬರು ಗಂಡುಮಕ್ಕಳು ಮತ್ತು ಸಾಲಾಗಿ ಏಳು ಹೆಣ್ಣು ಮಕ್ಕಳು ಯಲ್ಲವ್ವನಿಗೆ. ಅವರಲ್ಲೊಬ್ಬಾಕೆ ಲಕ್ಷಣವಾಗಿದ್ದ, ಚುರುಕಿನ ಯುವತಿ ಹನುಮಂತಿ. ಅದು ಹೇಗೋ ಆಕೆಗೂ, ಮಳಗಿ ಫಕ್ಕೀರಪ್ಪನ ಮಗ ತಿರುಪತಿಗೂ ಸ್ನೇಹ ಬೆಳೆಯಿತು, ಪ್ರೇಮ ಬಲಿಯಿತು. ಮನೆಯವರಿಗೆ ತಿಳಿದರೆ ಭಾರಿ ರಾದ್ಧಾಂತವಾದೀತೆಂದು ಅವರು ಹೊಲಕ್ಕೆ ಬಂದಾಗಲೆಲ್ಲ ಪರಸ್ಪರ ಭೇಟಿ ಮಾಡಿ ಹರೆಯದ ಆ ಹುರುಪಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು.
ಒಮ್ಮೆ ನಮ್ಮ ಮನೆಯಲ್ಲಿ ಕೂಲಿ ಕೆಲಸಕ್ಕೆಂದು ಹನುಮಂತಿ, ಆಕೆಯ ತಂಗಿ ಗಿರಿಜೆ ಬಂದಿದ್ದರು. ಸಂಜೆಯ ಹೊತ್ತು, ಕಣದಲ್ಲಿ ತೂರಿ ಉಳಿದ ಜೊಳ್ಳಿನೊಂದಿಗೆ ಬೆರೆತಿದ್ದ ಭತ್ತದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುತ್ತಿದ್ದರು ಅವರು. ಅದೇ ಸಮಯಕ್ಕೆ, ತನ್ನ ಹೊಲದಲ್ಲಿ ಕಮತ ಮುಗಿಸಿ ಕೆರೆಯ ಏರಿಯ ಗುಂಟ ಮನೆಗೆ ಮರಳುತ್ತಿದ್ದ ತಿರುಪತಿ ಇವರನ್ನು ಕಂಡಿದ್ದೇ ಇತ್ತ ಬಂದ. ಇಬ್ಬರೂ ಮಾತುಕತೆಯಲ್ಲಿ ತೊಡಗಿಕೊಂಡರು. ಮನೆಯ ಬಳಿ ಆಡಿಕೊಂಡಿದ್ದ ನಾನು, ಅಣ್ಣ-ಅಕ್ಕ ಇದನ್ನು ಕಂಡಿದ್ದೇ ಅಲ್ಲೇ ಮಾವಿನ ಮರವೊಂದರ ಅಡಿ ಕುಳಿತು ಗಮನಿಸತೊಡಗಿದೆವು. ಆಗ ಅಣ್ಣನಿಗಿನ್ನೂ ಹನ್ನೊಂದು ವರ್ಷ, ಅಕ್ಕನಿಗೆ ಒಂಭತ್ತಾದರೆ ನನಗೆ ಏಳು. ಯಾರಾದರೂ ಪ್ರೇಮಿಸುತ್ತಾರೆ ಎಂಬುದು ಗೊತ್ತಾದರೆ ನಮಗೆ ಭಾರಿ ಕಿಡಿಗೇಡಿ ಕುತೂಹಲ ಆಗ. ಹನುಮಂತಿ-ತಿರುಪತಿಯ ವಿಷಯ ನಮಗೆ ಹೇಗೋ ತಿಳಿದಿತ್ತು. ಆಗ ಭಾರಿ ಚಾಲ್ತಿಯಲ್ಲಿದ್ದ ರಾಜಕುಮಾರನ 'ಜ್ವಾಲಾಮುಖಿ' ಚಿತ್ರದ 'ಹೇಳುವುದು ಒಂದು, ಮಾಡುವುದು ಇನ್ನೊಂದು' ಹಾಡಿನ ಒಂದು ಸಾಲು ಆಧರಿಸಿ, 'ಹನುಮಂತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ' ಎಂದು ಹಾಡು ಬೇರೆ ಕಟ್ಟಿದ್ದೆವು.
ಆ ದಿನವೂ ಅವರಿಬ್ಬರೂ ಮಾತನಾಡುತ್ತಿರಬೇಕಾದರೆ, ನಾವು ಮೂವರೂ ಸಣ್ಣ ದನಿಯಲ್ಲಿ ಮತ್ತದೇ ಹಾಡು ಶುರು ಹಚ್ಚಿಕೊಂಡೆವು. ನಮ್ಮ ದನಿ ಅವರನ್ನು ತಲುಪದೆಂಬ ವಿಶ್ವಾಸ ನಮಗಿತ್ತು. ಆದರೆ ಅಲ್ಲೇ ಉರುವಲು ಕಟ್ಟಿಗೆ ಗುಡ್ಡೆಗೆ ಬರುವ ಅಮ್ಮನಿಗೆ ಅದು ಕೇಳಬಹುದು ಎಂದು ನಾವು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಛೋಟುದ್ದದ ನಾವು ಇನ್ನೊಬ್ಬರ ಪ್ರೇಮ ಪ್ರಕರಣವನ್ನು ಗಮನಿಸುವಷ್ಟು ಮುಂದುವರೆದಿದ್ದೇವೆ ಎಂಬುದು ಗೊತ್ತಾಗುತ್ತಲೇ ಕಿಡಿಕಿಡಿಯಾದ ಅಮ್ಮ, ಕಟ್ಟಿಗೆ ಗುಡ್ಡೆಯಿಂದ ಸಪೂರನೆಯ ಕೋಲು ಸೆಳಕೊಂಡವಳೇ ಮೈಮರೆತು ನೋಡುತ್ತಿದ್ದ ನಮ್ಮ ಬೆನ್ನು ಕೆಂಪೇರಿಸಿದಳು. ಅಷ್ಟು ಸಾಲದೆಂಬಂತೆ ಸೀದಾ ಆ ಯುವ ಪ್ರೇಮಿಗಳ ಬಳಿ ಹೋಗಿ, 'ಕೆಲಸಕ್ಕೆ ಹೇಳಿ ಬಂದ್ಕಂಡು ಇಂಥದ್ದೇ ಮಾಡ್ತೀರ ನೀವು, ಇಂಥದ್ದೇನಿದ್ರೂ ನಮ್ಮನೆ ಕಂಪೌಂಡ್ ಹೊರಗೆ ಇಟ್ಗಳಿ. ಇನ್ನೊಂದ್ಸಲ ಇಲ್ಲಿ ಬಂದು ಹೀಂಗೆ ಮಾಡಿದ್ರೆ ಮತ್ತೆ ಇತ್ಲಾಗೆ ಕಾಲು ಹಾಕ್ಲಿಕ್ಕೆ ಬಿಡದಿಲ್ಲ, ಹುಷಾರ್' ಎಂದು ಜೋರು ಮಾಡಿದಳು.
ಮುಂದೆ ಕೆಲವೇ ತಿಂಗಳಲ್ಲಿ ಭಾರಿ ಗಲಾಟೆಗಳ ನಡುವೆ ಅವರಿಬ್ಬರ ಮದುವೆ ನಡೆಯಿತು. ಎರಡೂ ಕಡೆಯವರ ಗಟ್ಟಿ ವಿರೋಧವಿದ್ದುದರಿಂದ ಮೊದಲ ಒಂದೆರಡು ವರ್ಷ ಬಹಳ ಕಷ್ಟ ಅನುಭವಿಸಿದರು ಇಬ್ಬರೂ. ಆದರೆ ಈಗ ಸುಮಾರು ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ನಂತರ ನೋಡಿದರೆ ನಮ್ಮೂರಿನ ಭಾರಿ ಯಶಸ್ವಿ ಜೋಡಿ ಈ ತಿರುಪತಿ-ಹನುಮಂತಿ. ಪರಸ್ಪರ ಅಪಾರ ಪ್ರೀತಿ, ವಿಶ್ವಾಸ, ಗೌರವವಿಟ್ಟುಕೊಂಡು ಬಾಳುವ ಜೊತೆಗೆ ರಟ್ಟೆ ಮುರಿದು ರೊಟ್ಟಿ ತಿನ್ನುತ್ತ ಬದುಕು ಹಸನು ಮಾಡಿಕೊಂಡಿರುವ ಈ ದಂಪತಿ, ಮದುವೆ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕೆನ್ನುವವರಿಗೆಲ್ಲ ಆದರ್ಶವೇ ಸೈ.