ಮಂಗಳವಾರ, ಫೆಬ್ರವರಿ 10, 2009

'ಸುಧಾ'ಪಾನದ ಸುದ್ದಿ

ಇತ್ತೀಚೆಗೆ ಊರಿಗೆ ಹೋದಾಗ ಅಕಸ್ಮಾತ್ತಾಗಿ ಒಂದಿಷ್ಟು ಹಳೆಯ 'ಸುಧಾ'ಗಳ ರಾಶಿ ಕಣ್ಣಿಗೆ ಬಿತ್ತು. ಮಾಡುತ್ತಿದ್ದ ಕೆಲಸ ಕೈ ಬಿಟ್ಟು ಹಾಗೆಯೇ ಓದಲು ಕುಳಿತುಕೊಂಡೆ. ಒಂದೆರಡು ಪುಟ ತಿರುವುತ್ತಿದ್ದಂತೆಯೇ ನಾನೇ ಕಳೆದುಹೋಗಿದ್ದೆ. ಒಂದೊಂದು ಬಿಡಿ ಪತ್ರಿಕೆಯೂ ಒಂದು ನಿಧಿಯಂತೆ. ವೈವಿಧ್ಯಮಯ ನೆನಪುಗಳ ಮೂಟೆಯಂತೆ. ಕುಡಿದಷ್ಟೂ ಇನ್ನೂ ಬೇಕೆನ್ನಿಸುವ, ಮತ್ತು ಹತ್ತಿಸುವ ರಸಪಾಕದಂತೆ ಅನ್ನಿಸತೊಡಗಿತ್ತು.
'ಸುಧಾ' ಜೊತೆಗಿನ ನನ್ನ ನಂಟು ನನಗೊಂದು ಮೂರು-ಮೂರೂವರೆ ವರ್ಷವಾಗಿದ್ದಾಗಲೇ ಶುರುವಾಗಿತ್ತು. ಅಪ್ಪನ ಮೂಲಮನೆ 'ಬಾಳೇಸರ'ದಲ್ಲಿ 'ಸುಧಾ' ತರಿಸುತ್ತಿದ್ದರು. ಊರಿಗೆ ಹೋದಾಗೆಲ್ಲ ಅಪ್ಪ ಹಳೆ ಪತ್ರಿಕೆಗಳನ್ನು ಹಿಡಿದುಕೊಂಡು ನಾವಿರುತ್ತಿದ್ದ ಹನುಮಾಪುರಕ್ಕೆ ತರುತ್ತಿದ್ದ. ರಾತ್ರಿ ಊಟವಾದ ಮೇಲೆ ಚಿಮಣಿ ದೀಪದ ಬೆಳಕಿನಲ್ಲಿ ಅಪ್ಪ-ಅಮ್ಮ ಓದಲು ಶುರು ಮಾಡಿದರೆ ನಾನೂ ಪಕ್ಕದಲ್ಲೊಂದು 'ಸುಧಾ' ಹಿಡಿದು ಕುಳಿತುಕೊಳ್ಳುತ್ತಿದ್ದೆ. ಅಕ್ಷರ ಬರದಿದ್ದರೂ ಚಿತ್ರ ನೋಡುವ ಹಂಬಲ. ಅದರಲ್ಲೂ ಪುಟಾಣಿ ಪುಟ್ಟಿ, ವಿಕ್ರಮ್, ಫ್ಯಾಂಟಮ್ ಕಾರ್ಟೂನುಗಳನ್ನು ನೋಡಿ, ನನಗೆ ತಿಳಿದಂತೆ ಅರ್ಥೈಸಿಕೊಳ್ಳುತ್ತಿದ್ದೆ. ಆಮೇಲೆ ಸರಸರ ಓದಲು ಬರೆಯಲು ಕಲಿತಿದ್ದೇ 'ಸುಧಾ'ದಲ್ಲಿನ ಕಾರ್ಟೂನು, ಮಕ್ಕಳ ಕಥೆ ಓದಬೇಕೆಂಬ ಆಸೆಯಿಂದ.
ಮುಂದೆ ಶಾಲೆಗೆ ಸೇರಲೆಂದು ಬಾಳೇಸರಕ್ಕೆ ಬಂದುಳಿದ ಮೇಲಂತೂ ತೂಕಡಿಸುವವಳಿಗೆ ಹಾಸಿಗೆ ಹಾಸಿಕೊಟ್ಟಂತಾಗಿತ್ತು. ಪ್ರತಿ ಗುರುವಾರ 'ಸುಧಾ' ಬಂತೆಂದರೆ ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಜಗಳ ಮಾಡಿಯಾದರೂ ನಾನೇ ಮೊದಲು ಅದನ್ನು ಓದಬೇಕು. ಮೊದಲು ಓದಲು ಅವಕಾಶವಾಗಲಿಲ್ಲವೆಂದರೆ ನನಗಾಗುತ್ತಿದ್ದ ವ್ಯಥೆ, ಅವಮಾನ ಅಷ್ಟಿಷ್ಟಲ್ಲ.
ಅಷ್ಟೊತ್ತಿಗಾಗಲೇ ಮಕ್ಕಳಿಗೆ ಮೀಸಲಾದ ಅಂಕಣಗಳನ್ನೆಲ್ಲಾ ಓದಿ ಅರಗಿಸಿಕೊಳ್ಳುವಷ್ಟು ಪರಿಣಿತಿ ಪಡೆದಿದ್ದ ನಾನು ನನ್ನಷ್ಟಕ್ಕೇ 'ದೊಡ್ಡವರ ಸರಕಿ'ಗೆ ಪ್ರೊಮೋಷನ್ ಕೊಟ್ಟುಕೊಂಡಿದ್ದೆ. ದೊಡ್ಡವರ ಸರಕೆಂದರೆ ಕಥೆ, ಧಾರಾವಾಹಿಗಳು. ಚಿಕ್ಕಮಕ್ಕಳೆಲ್ಲಾ ಧಾರಾವಾಹಿ ಓದಬಾರದು, ದೊಡ್ಡವರ ಮಾತ್ರ ಓದಬೇಕು ಎಂಬುದು ನಮ್ಮ ಮನೆಯಲ್ಲಿದ್ದ ಹಿರಿಯ ಹುಡುಗರು ಅಂದರೆ ನನ್ನ ದೊಡ್ಡಪ್ಪಂದಿರ ಮಕ್ಕಳು ಹಾಕಿದ್ದ ನಿಯಮ. ಅವರು ಬೇಡ ಎಂದಷ್ಟೂ ನನಗೆ ಅದರಲ್ಲೇನೋ ಇದೆ, ನಾನದನ್ನು ಓದಲೇಬೇಕೆಂಬ ಕುತೂಹಲ. ಅವರೆಲ್ಲ ಕೆಳಗೆ ಬರೆಯುವುದರಲ್ಲಿ, ಓದು ಆಟಗಳಲ್ಲಿ ಮಗ್ನರಾಗಿದ್ದಾಗಿದ್ದಾಗ ನಾನು ಕದ್ದು ಮೆತ್ತಿಗೆ ಹೋಗಿ 'ಸುಧಾ' ಧಾರಾವಾಹಿಗಳ ಪುಟ ತೆರೆಯುತ್ತಿದ್ದೆ. ಒಂದೇ ಉಸಿರಿನಲ್ಲಿ ಆ ವಾರದ ಇಡೀ ಕಂತು ಮುಗಿಸುತ್ತಿದ್ದೆ. ಮಧ್ಯದಲ್ಲಿ ಯಾರಾದರೂ ಬಂದರೆ ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮಧ್ಯದ ಒಂದು ಬೆರಳನ್ನು ಯಾವಾಗಲೂ ಮಕ್ಕಳ ಪುಟದಲ್ಲಿ ಇರಿಸಿಕೊಳ್ಳುತ್ತಿದ್ದೆ. ಮೆತ್ತಿನ ಏಣಿಯನ್ನು ಯಾರಾದರೂ ಹತ್ತಿ ಬರುವ ಸದ್ದಾಗುತ್ತಲೇ ಟಕ್ಕಂತ ಇದನ್ನು ಮುಚ್ಚಿ ಆ ಪುಟಕ್ಕೆ ದೃಷ್ಟಿ ವರ್ಗಾಯಿಸುತ್ತಿದ್ದೆ. ಆದರೆ ಅಕ್ಕ-ಅಣ್ಣಂದಿರಿಗೆ ನಾನು ಧಾರಾವಾಹಿ ಓದುತ್ತೇನೆಂದು ಸದಾ ಸಂಶಯ. ಏಕ್ದಂ ಎಲ್ಲೆಲ್ಲಿಂದಲೋ ಪ್ರತ್ಯಕ್ಷರಾಗಿ, 'ನೀನು ಧಾರ್ವಾಯಿ ಓದ್ತಾ ಇದ್ದಿದ್ದೆ ಹದಾ' ಎಂದು ಅಟ್ಯಾಕ್ ಮಾಡುತ್ತಿದ್ದರು. 'ಇಲ್ಲೇ ಇಲ್ಲ' ಎಂದು ನಾನೂ ಪಟ್ಟು ಬಿಡದೇ ವಾದಿಸುತ್ತಿದ್ದೆ.
ಆ 'ದೊಡ್ಡವರ' ವ್ಯಾಪ್ತಿಯಲ್ಲಿ ಆರನೇ ತರಗತಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗಳೂ ಬರುತ್ತಿದ್ದಳು. ಶಾಲೆಗೆ ಹೋಗುವಾಗ ನಮ್ಮನ್ನೆಲ್ಲಾ ಲೀಡ್ ಮಾಡುತ್ತಿದ್ದ ಹಿರಿಯಕ್ಕ ಅವಳು. ಮಧ್ಯ ದಾರಿಯಲ್ಲಿ ಅವಳದೇ ತರಗತಿಯ ಸ್ನೇಹಿತೆಯೊಬ್ಬಳು, ಇನ್ನೊಂದೆರಡು ಜನ ಚಿಕ್ಕ ಹುಡುಗರ ಜೊತೆ ನಮ್ಮನ್ನು ಸೇರಿಕೊಳ್ಳುತ್ತಿದ್ದಳು. ದಿನಾ ದಾರಿ ತುಂಬ ಅವರಿಬ್ಬರೂ 'ಸುಧಾ'ದಲ್ಲಿ ಓದಿದ್ದನ್ನು ಚರ್ಚಿಸುತ್ತಾ ಸಾಗುತ್ತಿದ್ದರು.
ಒಮ್ಮೆ ಲೇಖಕಿ ವಿದ್ಯುಲ್ಲತಾ ಅವರ 'ರಥಸಪ್ತಮಿ' ಧಾರಾವಾಹಿ ಬರಲಾರಂಭಿಸಿತ್ತು. ಇವರಿಬ್ಬರೂ ಹೊಸ ಧಾರಾವಾಹಿ ಬಗ್ಗೆ ಮಾತುಕತೆ ಆರಂಭಿಸಿದರು. ಏನು ಮಾಡಿದರೂ ಧಾರಾವಾಹಿ ನಾಯಕಿಯ ಹೊಸ ರೀತಿಯ ಹೆಸರು ಇವರಿಗೆ ನೆನಪಿಗೇ ಬರುತ್ತಿಲ್ಲ. 'ಆ ನಾಯಕಿ ಹೆಸರೆಂಥಾ ಆತೇ', 'ಎಂಥೋ ಹೊಸಾ ಹೆಸರು, ಎಂಥಾ ಮಾಡಿರೂ ನೆನಪೇ ಆಗ್ತಿಲ್ಲೆ' ಎಂದು ಇಬ್ಬರೂ ಪರದಾಡಲಾರಂಭಿಸಿದರು. ಹಿಂದೆಯೇ ಬರುತ್ತಿದ್ದ ನನಗೆ ಇವರ ಪೇಚಾಟ ನೋಡಲಾಗಲಿಲ್ಲ. 'ಅಯ್ಯೋ, ಅದ್ರ ಹೆಸರು ಸಮುದ್ಯತಾ' ಎಂದೇ ಹೇಳೇಬಿಟ್ಟೆ. 'ಹಾಂ ಹಾಂ ಸಮುದ್ಯತಾ' ಎಂದು ಇಬ್ಬರೂ ತಲೆದೂಗಿದರೂ, ಮರುಕ್ಷಣ ನಮ್ಮಕ್ಕ 'ನಿಂಗೆ ಹ್ಯಾಂಗೆ ಗೊತ್ತಿದ್ದು ಅದು' ಎಂದು ನನ್ನತ್ತ ದೊಡ್ಡ ಕಣ್ಣು ಬಿಟ್ಟಳು. ತಪ್ಪಿನ ಅರಿವಾದ ನಾನು ಎಂಜಲು ನುಂಗುತ್ತ, 'ಅದಾ, ಅದು ನೀನೇ ಆವತ್ತು ಹೇಳ್ತಾ ಇದ್ದಿದ್ದೆ' ಎಂದೇನೋ ಓಳು ಬಿಟ್ಟು ಪರಾರಿಯಾದೆ.
ಇನ್ನೊಮ್ಮೆ 'ಶಾರದೆ' ಅವರ 'ಕವಲೊಡೆದ ದಾರಿ' ಧಾರಾವಾಹಿಯ ಚರ್ಚೆ. ನಾಯಕ-ನಾಯಕಿಯ ಸಂಸಾರದಲ್ಲಿ ಮೂರನೇ ಹೆಂಗಸಿನ ಪ್ರವೇಶವಾಗಿತ್ತು. ಯಥಾಪ್ರಕಾರ ನಮ್ಮಕ್ಕ-ಅವಳ ಗೆಳತಿಗೆ ಆ ಪಾತ್ರದ ಹೆಸರು ನೆನಪಾಗುತ್ತಿಲ್ಲ. ಹಿಂದಿನ ಸಲದಂತಾಗಬಾರದೆಂದು ನಾನೂ ತಡೆದುಕೊಳ್ಳುವಷ್ಟು ತಡೆದುಕೊಂಡೆ. ಐದು ನಿಮಷವಾದರೂ ಇವರಿಗೆ ನೆನಪೇ ಆಗುತ್ತಿಲ್ಲ. ನೋಡಿ ನೋಡಿ ನನಗೂ ಸಾಕಾಯಿತು. 'ಅದರ ಹೆಸರು ಮೀನಾ ಹೇಳಿ' ಬಾಯ್ತಪ್ಪಿ ಹೇಳಿ ನಾಲಿಗೆ ಕಚ್ಚಿಕೊಳ್ಳುವಷ್ಟರಲ್ಲಿ ನಮ್ಮಕ್ಕ ನನ್ನನ್ನು ಹಿಡಿದಾಗಿತ್ತು. 'ಹೌದಾ, ನೀ ಧಾರ್ವಾಯಿ ಓದ್ತೆ. ಓದ್ತ್ನಿಲ್ಲೆ ಹೇಳಿ ಸುಳ್ಳು ಹೇಳ್ತೆ' ಎಂದು ಅಕ್ಕೋರ ಮಾದರಿಯಲ್ಲಿ ತಲೆ ಹಾಕಲಾರಂಭಿಸಿದಳು. ಈಗ ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. 'ಇಲ್ಲೆ, ಇಡೀ ಧಾರ್ವಾಯಿ ಓದಿದ್ನಿಲ್ಲೆ, ಇಲ್ಲಿಯವರೆಗೆ... ಹೇಳಿ ಇರ್ತಲೆ, ಅದ್ನ ಮಾತ್ರೆ ಓದಿದ್ದಿ' ಎಂದೆ. ಅವಳಿಗೆ ನಂಬಿಕೆ ಬರಲಿಲ್ಲ. ಆದರೆ ಅಷ್ಟರಲ್ಲಿ ಶಾಲೆ ಹತ್ತಿರ ಬಂದಿತ್ತು, ನಾನು ಬಚಾವಾದೆ.
ಎಳವೆಯಲ್ಲಿ ಓದಿನ ರುಚಿ ಹತ್ತಿಸಿದ 'ಸುಧಾ', ಆಮೇಲೆ ಜೊತೆಗೂಡಿದ ಹಳೆ 'ಕಸ್ತೂರಿ'ಗಳ ಸಖ್ಯದ ಕಥೆ ತುಂಬಾ ದೊಡ್ಡದಿದೆ. ಊರಿಂದ ತಂದಿದ್ದ ಹಳೆ ಪತ್ರಿಕೆಯೊಂದನ್ನು ನೋಡುತ್ತಿದ್ದಂತೆ ಎಲ್ಲ ನೆನಪಾಗುತ್ತಿದೆ ಇಂದು.

8 ಕಾಮೆಂಟ್‌ಗಳು:

  1. ರೇಖಾ, ಚೆನ್ನಾಗ್ ಬಂಜು ಈ ಲಘು ಬರಹ. ಖರೆ ಹೇಳದಾದ್ರೆ - ನಾನೂ ಕನ್ನಡ ಶಾಲೆಲ್ಲಿ ಇರಕಾದ್ರೆ ಯಂಡಮೂರಿ ಅವರದ್ದು ’ಸ್ಟುವರ್ಟ್ ಪುರಂ ಪೊಲೀಸ್ ಸ್ಟೇಶನ್’ ಧಾರವಾಹಿನ ’ಕದ್ದು’ ಓದ್ತಾ ಇದ್ದಿದ್ದು ನೆನಪಾತು! ಒಳ್ಳೆಯ ಬರಹಕ್ಕಾಗಿ ಒಂದು ಒಳ್ಳೆಯ ಥಾಂಕ್ಯೂ. :)

    ಪ್ರತ್ಯುತ್ತರಅಳಿಸಿ
  2. ನಿನಗೂ ಧನ್ಯವಾದ ಪೂರ್ಣಿಮಾ. ನನ್ನಂತೆ, ನಿನ್ನಂತೆ ಬಹುತೇಕ ಓದುಹುಳುಗಳೆಲ್ಲ ಮೊದಮೊದಲ ಧಾರಾವಾಹಿಗಳನ್ನು ಓದಿದ್ದು 'ಕದ್ದು' ಓದಿಯೇ. ಆ ಕಾಲಕ್ಕೆ ಅವೆಲ್ಲ ದೊಡ್ಡವರಿಗೆ ಮೀಸಲಾದವು ಎಂಬ ಅಲಿಖಿತ ನಿಮಯವಿತ್ತಲ್ಲವೇ. ಇಂದು ಬೇಡ ಅನ್ನುವವರಿಲ್ಲ, ಓದುವವರೂ.

    ಪ್ರತ್ಯುತ್ತರಅಳಿಸಿ
  3. ರೇಖಾರವರೆ..

    ಸರಳವಾದ ಭಾಷೆಯಲ್ಲಿ...
    ಚಂದವಾದ ಬರಹ,,,..

    ನನಗೆ ಇಷ್ಟವಾಯಿತು...

    ಇದು ನನ್ನ ಅನುಭವ ಕೂಡ...

    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  4. ಧನ್ಯವಾದಗಳು 'ಪ್ರಕಾಶಣ್ಣ',
    ನಿಮ್ಮ ಪ್ರೋತ್ಸಾಹ ಸದಾ ಇರಲಿ.

    ಪ್ರತ್ಯುತ್ತರಅಳಿಸಿ
  5. ನಮಸ್ಕಾರ,

    ನಿಮ್ಮ ಬ್ಲಾಗಿಗೆ ಹೊಸಬ ನಾನು. ನಿಮ್ಮ ಲೇಖನ ಓದಿದೆ.
    ಸುಧಾಪಾನ ಬಹಳ ಖುಷಿ ಕೊಡ್ತು.
    ಹೀಗೆ ಮುಂದುವರಿಸಿ.
    ನಮ್ಮ ಕಟ್ಟೆಗೂ ಒಮ್ಮೆ ಭೇಟಿ ಕೊಡಿ.

    ಕಟ್ಟೆ ಶಂಕ್ರ
    http://somari-katte.blogspot.com

    ಪ್ರತ್ಯುತ್ತರಅಳಿಸಿ
  6. ರೇಖಾ ಅವರೇ,

    ತುಂಬ ಚಂದದ ಬರಹ, ಬರೆಯುತ್ತಿರಿ ಹೀಗೆ.

    ಪ್ರತ್ಯುತ್ತರಅಳಿಸಿ
  7. Good one attige. It reminded me of my childhood and all the circus I used to do to read daravahis and novels. - shreepad

    ಪ್ರತ್ಯುತ್ತರಅಳಿಸಿ
  8. Rekhakka good one...
    Sudha, mayyora matte metti... madyanhadalli haasige raashi hatti manikyadu kate oodata idda nenapaatu...

    ಪ್ರತ್ಯುತ್ತರಅಳಿಸಿ