ಮಂಗಳವಾರ, ಜನವರಿ 14, 2014

ಏನಿಲ್ಲ... ಏನಿಲ್ಲ... ನನ್ನ ನಿನ್ನ ನಡುವೆ ವೆನಿಲ್ಲಾ...

ಒಂದು ಹತ್ತು ವರ್ಷಗಳ ಹಿಂದಿನ ಮಾತು. ನಮ್ಮ ಮಲೆನಾಡಿನಲ್ಲೆಲ್ಲ ವೆನಿಲ್ಲಾ ಮಾಯೆ ಅಮರಿಕೊಂಡಿದ್ದ ಹೊತ್ತು! ಕೆಜಿ ತೂಕದ ವೆನಿಲ್ಲಾ ಕ್ವಿಂಟಲ್ ಅಡಿಕೆಗಿಂತ ಜಾಸ್ತಿ ತೂಗುತ್ತಿದ್ದ ಕಾಲ. "ಇಂಥವರ ಮನೆಯಲ್ಲಿ ಇಂತಿಷ್ಟು ಕ್ವಿಂಟಲ್ ಅಡಿಕೆ ಆಗ್ತಡ" ಎಂಬ ಮಾತಿಗಿಂತ "ಇಂಥವರ ಮನೆಯಲ್ಲಿ ಇಷ್ಟು ಕೆಜಿ ವೆನಿಲ್ಲಾ ಆಗ್ತಡ" ಎಂಬುದಕ್ಕೆ ಹೆಚ್ಚು ತೂಕ ಇತ್ತು.
ಈ ವೆನಿಲ್ಲಾ ಹೆಂಗೆಂಗೋ ಇದ್ದವರನ್ನೆಲ್ಲ ಏನೇನೋ ಮಾಡಿಸಿತು. ತುಂಡು ಭೂಮಿ ಇಟ್ಟುಕೊಂಡು 'ಉಂಡರೆ ಉಡಲಿಲ್ಲ, ಉಟ್ಟರೆ ಉಣ್ಣಲಿಲ್ಲ' ಎಂದು ಬದುಕುತ್ತಿದ್ದವರೆಲ್ಲ ವೆನಿಲ್ಲಾ ದೇವಿಯ ಕೃಪೆಯಿಂದ ರಾಜರಾಗಿಹೋದರು. ವೆನಿಲ್ಲಾ ಸೋಡಿಗೆಯಂತೂ (ಬೀನ್, ಕೋಡು) ಸೈ, ಅದರ ಬುಡದ ದಂಟು ಕೂಡ ಮಂತ್ರ ದಂಡವಾಗಿ ಝಣ ಝಣ ಹಣ ಉದುರಿಸುತ್ತಿದ್ದ ಕಾಲ ಅದು. ಹೊಸದಾಗಿ ಬೆಳೆ ಬೆಳೆಯುವವರಿಗೆ ಕೂಳೆ ಮಾರಿಕೊಂಡೇ ಎಷ್ಟೋ ಜನ ಚೆನ್ನಾಗಿ ದುಡ್ಡು ಮಾಡಿದರು. ಅಂಗಳ-ಹಿತ್ತಲುಗಳಲ್ಲಿ, ಬೆಟ್ಟ, ಧರೆಗಳ ಮೇಲೆ... ಎಲ್ಲೆಲ್ಲೂ ಗಿಡದ ಗೂಟ, ಕಲ್ಲು ಕಂಬ ಎದ್ದು, ವೆನಿಲ್ಲಾ ಬಳ್ಳಿಯನ್ನು ಹೊದ್ದವು. ಹಿಂದೆ ಕಾಳುಮೆಣಸಿನ ಬಳ್ಳಿ ಸುತ್ತಿದ್ದ ಅಡಿಕೆ ಮರಗಳಿಗೆಲ್ಲ ಹೊಸದಾಗಿ ವೆನಿಲ್ಲಾ ಬಳ್ಳಿಯಪ್ಪುಗೆ.
ಮಧ್ಯ ಅಮೇರಿಕಾ ದೇಶಗಳಲ್ಲಿ, ಮೂಲತಃ ಇಂದಿನ ಮೆಕ್ಸಿಕೋದಲ್ಲಿ ಮೊದಲು ಬಳಕೆಯಾದ ವೆನಿಲ್ಲಾ ಒಂದು ತರಹದ ಸೀತಾಳೆ (ಆರ್ಕಿಡ್) ಸಸ್ಯ. ಇದರ ಸೋಡಿಗೆ ಆಹಾರದಲ್ಲಿ ಬಳಕೆಯಾಗುವ ಪರಿಮಳದ ಮೂಲ. ಇದು ಸೋಡಿಗೆ ಎಂದು ಕರೆಸಿಕೊಂಡರೂ ವಾಸ್ತವದಲ್ಲಿ ದ್ವಿದಳ ಸಸ್ಯಗಳ ಸೋಡಿಗೆಗಿಂತ ಭಿನ್ನ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡೋನೇಶಿಯಾ, ಮಡಗಾಸ್ಕರ್, ಚೀನಾ, ಮೆಕ್ಸಿಕೋ ಅತಿ ಹೆಚ್ಚು ವೆನಿಲ್ಲಾ ಉತ್ಪಾದಿಸುವ, ರಫ್ತು ಮಾಡುವ ದೇಶಗಳು. ಭಾರತದಲ್ಲಿ ಮೊದಮೊದಲು ಕೇರಳ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ, ತೀರ್ಥಹಳ್ಳಿಯ ಪುರುಷೋತ್ತಮ ರಾಮ್ ಅವರಂಥದ ಪ್ರಗತಿಪರ ಕೃಷಿಕರ ತೋಟದಲ್ಲಿ ಬೆಳೆಯುತ್ತಿದ್ದ ವೆನಿಲ್ಲಾ ೧೯೯೫ರ ಇಸ್ವಿಯ ಆಸುಪಾಸು ಬೆಲೆ ಮುಗಿಲು ಮುಟ್ಟುತ್ತಿದ್ದಂತೆಯೇ ಪಶ್ಚಿಮ ಘಟ್ಟ ಪ್ರದೇಶಗಳ ತೋಟದೊಳಗೆಲ್ಲಾ ಪ್ರವೇಶ ಮಾಡಿತು, ನಮ್ಮ ಉತ್ತರ ಕನ್ನಡಕ್ಕೂ ಬಂತು.
ನೆಟ್ಟ ದುಡ್ಡಿನ ಬಳ್ಳಿ ಬೇರೂರುತ್ತಿದ್ದಂತೆಯೇ ಜನರ ದಿನಚರಿಯೂ ಬದಲಾಯಿತು. ಬೆಳ್ಳಂಬೆಳಿಗ್ಗೆ ಮೊದಲು ಆಸ್ರಿಗೆ ಕುಡಿದು, ಕೈಯಲ್ಲಿ ಒಂದು ಕತ್ತಿ ಹಿಡಿದು ಅಡಿಕೆ ತೋಟಕ್ಕೆ ತೆರಳುತ್ತಿದ್ದ ತೋಟಿಗರೆಲ್ಲ ಎಲ್ಲಾ ಕೆಲಸ ಬಿಟ್ಟು, 'ಥೋ, ಸೂರ್ಯನ ಬೆಳಕು ಬೀಳದ್ರೊಳಗೆ ಪಾಲಿನೇಷನ್ ಮಾಡವು' ಎನ್ನುತ್ತ ವೆನಿಲ್ಲಾ ಚಪ್ಪರಗಳಿಗೆ ದೌಡಾಯಿಸತೊಡಗಿದರು. (ಇದಕ್ಕೆ ಕೃತಕ ಪರಾಗ ಸ್ಪರ್ಷ ಬೇಕು). ಮುರುಗಲು, ಉಪ್ಪಾಗೆ ಸಿಪ್ಪೆಗಳನ್ನು ಹೊಡತಲ (ಅಗ್ಗಿಷ್ಟಿಕೆ) ಹೊಗೆಯಲ್ಲಿ, ಕಾಳುಮೆಣಸು, ಏಲಕ್ಕಿಗಳನ್ನು ಬಿಸಿಲಿನಲ್ಲೋ ಕೆಂಡದ ಕಾವಿನಲ್ಲೋ ಒಣಗಿಸುತ್ತಿದ್ದ ಜನ ವೆನಿಲ್ಲಾಗಾಗಿ ವಿಶೇಷ ಡ್ರೈಯರ್ ಕಟ್ಟಿದರು. ಮಾಮೂಲಿಯಾಗಿ ಏಲಕ್ಕಿ, ವಿಶೇಷ ಸಂದರ್ಭದಲ್ಲಿ ಕೇಸರಿಯ ದೋಸ್ತಿ ಮಾಣುತ್ತಿದ್ದ ಪಾಯಸ, ಲಾಡು, ಪೇಡೆಗಳು ಬದಲಾದ ಕಾಲಕ್ಕೆ ತಕ್ಕಂತೆ 'ವೆನಿಲ್ಲಾ' ಎಂಬ ಕಪ್ಪು ಸುಂದರಿಯ ಸಖ್ಯ ಶುರು ಮಾಡಿಕೊಂಡವು.
ಮಾತುಕತೆಗೆ ಕುಂತಾಗ 'ಯಮ್ಮಲ್ಲಿ ಇಂತಿಷ್ಟು ಕೆಜಿ ವೆನಿಲ್ಲಾ ಆಗ್ತು' ಎಂಬ ಹೆಗ್ಗಳಿಗೆಯ ಹೇಳಿಕೆಗಳು, 'ಅವರ್ ಮನೆಲ್ಲಿ ಈ ಸಲ ಭಾರಿ ವೆನಿಲ್ಲಾ ಆಜಪ್ಪಾ' ಎಂಬ ಅರೆ ಅಸೂಯೆಯ, ಚೂರು ಮೆಚ್ಚುಗೆಯ ಮಾತುಗಳು ಕುಶಲೋಪರಿ ವಿಚಾರಣೆಯಷ್ಟೇ ಸಾಮಾನ್ಯವಾದವು. ಕೆಲವೆಡೆ ಒಟ್ಟು ಕುಟುಂಬದಲ್ಲಿ ಮನೆಯ ಮೂಲ ಧನ-ಜಾಗ-ಗೊಬ್ಬರ, ಮನೆಯದೇ ಲೆಕ್ಕದಲ್ಲಿ ಆಳು ಪಡೆದ ಜನ, 'ವೆನಿಲ್ಲಾ ಉತ್ಪನ್ನ ಯನ್ನದು!' ಎಂದು ಹೇಳಿ ಪ್ರತ್ಯೇಕ ಖಾತೆಯಲ್ಲಿ ದುಡ್ಡು ಜಮಾಯಿಸತೊಡಗಿದರು. ಮೊದಲೆಲ್ಲ ಮನೆಯ ಎಲ್ಲ ಸದಸ್ಯರಿಗೆ ಒಟ್ಟಾಗಿ ಆಭರಣ ಮಾಡಿಸುತ್ತಿದ್ದ ಕೂಡು ಕುಟುಂಬಗಳಲ್ಲಿ ಈಗ ಇದ್ದಕ್ಕಿದ್ದಂತೆ ಕೆಲವರ ಮೈಮೇಲೆ 'ವೆನಿಲ್ಲಾ ಚಿನ್ನ' ಅರಳಿ ಅಸಹನೆಯ ನಾತ ನಾರಲಾರಂಭಿಸಿತು.
ಎಷ್ಟೋ ಕಡೆ ಮನೆಗೆ ಬರುವ ನೆಂಟರೆಲ್ಲ 'ನಿಮ್ಮನೆ ವೆನಿಲ್ಲಾ ಪ್ಲಾಟ್ ಭಾರಿ ಇದ್ದಡಾ, ನೋಡಕಾತು' ಎಂದು ಕೋರುವುದು, ಆತಿಥೇಯರು ಮನೆ ತೋರಿಸಿದಷ್ಟೇ ಸಲೀಸಾಗಿ 'ಬನ್ನಿ, ಯಮ್ಮನೆ ವೆನಿಲ್ಲಾ ನೋಡಲಕ್ಕು' ಎಂದು ಆಹ್ವಾನಿಸುವುದು ಅತಿಥಿ ಸತ್ಕಾರದ ಭಾಗವಾದವು. ಹಲವೆಡೆ ಹಳೆ ಕಾಲದಿಂದ ಬಂದು ಹೋಗಿ ಮಾಡುತ್ತಿದ್ದ ವಿಶ್ವಾಸದ ಜನರೂ ಎಲ್ಲೋ ಕ್ಷಣಿಕ ಆಸೆಗೆ ಬಿದ್ದು ಗುರ್ತದವರ ಮನೆಯಲ್ಲಿ ಐದೋ, ಆರೋ ಸೋಡಿಗೆ ಕದಿಯಲು ಹೋಗಿ 'ಅಡಿಕೆಗೆ ಹೋಗದ ಮಾನವನ್ನು ವೆನಿಲ್ಲಾದಲ್ಲಿ ಕಳಕೊಂಡರು'. ಇಂಥ ಪ್ರಕರಣಗಳು ಪದೇ ಪದೇ ವರದಿ ಆಗತೊಡಗಿದಂತೆ ಶಿರಸಿ, ಸಿದ್ದಾಪುರಗಳಂಥ ಪೇಟೆಗಳ ಜನರ ಗಮನವೂ ಇತ್ತ ತಿರುಗಿ, ಎಷ್ಟೋ ಮಂದಿ ತಂತಮ್ಮ ಪೇಟೆ ಮನೆಯ ತಾರಸಿ ಮೇಲೆ ವೆನಿಲ್ಲಾ ಚಪ್ಪರ ಬೆಳೆಸಿ ದುಡ್ದು ಕೊಯಿಲು ಮಾಡಿದರು. ಇನ್ನು ಕೆಲವು ಪುಂಡರು ಸಮೀಪದ ಹಳ್ಳಿಗಳಿಗೆ ಸದ್ದಿಲ್ಲದೇ ಹೋಗಿ, ವೆನಿಲ್ಲಾ ಕದ್ದು ಬರುವ ಪರಿಪಾಟ ಮಾಡಿಕೊಂಡರು, ಸಿಕ್ಕಿಬಿದ್ದು ಹೊಡೆತ ತಿಂದರು.
ಮಜವೆಂದರೆ ನಾನು ಗಮನಿಸಿದ ಪ್ರಕಾರ ನನ್ನ ಮದುವೆಯಲ್ಲಿ ದಿಬ್ಬಣದವರು ಮದುಮಗಳಿಗಿಂತ ಹೆಚ್ಚು ಆಸಕ್ತಿಯಿಂದ ನೋಡಿದ್ದು ನಮ್ಮನೆಯಲ್ಲಿ ಬೆಳೆದ ವೆನಿಲ್ಲಾ ಬಳ್ಳಿಗಳನ್ನು! ಕರಿ (ಮದುವೆ) 'ಕೂಸಿ'ಗಿಂತ ಕರಿ ಸೋಡಿಗೆಯ ನೋಟವೇ ಸೊಗಸು ಎಂಬ ತೀರ್ಮಾನಕ್ಕೆ ಬಂದಿದ್ದರೋ ಅಥವಾ ಮದುವೆ ಚಪ್ಪರದ ಸ್ವೇದ ಗಂಧಕ್ಕಿಂತ, ಸೀತಾಳೆ (ವೆನಿಲ್ಲಾ) ಚಪ್ಪರದಡಿಯ ಸಿಹಿ ವಾಸನೆಯೇ ಆಪ್ಯಾಯಮಾನಮಾನವಾಗಿತ್ತೋ, ನಾನು ಕೇಳುವ ಸಾಹಸ ಮಾಡಲಿಲ್ಲ. ಆದರೆ ಹೊಸದಾಗಿ ಹೋದ ಗಂಡನ ಮನೆಯಲ್ಲಿ ನಾಲ್ಕು ಜನ ಕೂತು 'ಬೀಗರ ಮನೆಲ್ಲಿ ಭರ್ಜರಿ ವೆನಿಲ್ಲಾ ಪ್ಲಾಟ್ ಮಾಡಿದ್ದ' ಎನ್ನುವುದನ್ನು ಕೇಳಿದಾಗೆಲ್ಲಾ ನನಗೆ ಮದುವೆ ಮನೆಯಲ್ಲಿನ ವೈರುಧ್ಯ ನೆನಪಾಗಿ ನಗು ಬರುತ್ತಿದ್ದುದು ಸುಳ್ಳಲ್ಲ.
ಇಂತಿಪ್ಪ ವೆನಿಲ್ಲಾ ಮುಗಿಲೇರಿ ಕುಂತಿದ್ದು, ಮೆರೆದಿದ್ದು ಒಂದು ನಾಲ್ಕು ವರ್ಷ ಮಾತ್ರ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾಕ್ಕೆ ಬೆಲೆ ಏರಿದಷ್ಟೇ ಸುಲಭವಾಗಿ ಕುಸಿದೂ ಹೋಯಿತು. ಲಾಭದ ಆಸೆಗೆ ಬಿದ್ದ ಒಂದಷ್ಟು ಜನ ಸರಿಯಾಗಿ ಸೋಡಿಗೆಯ ವರ್ಗ ವಿಂಗಡನೆ ಮಾಡದೆ ಮಾರುಕಟ್ಟೆಗೆ ಬಿಟ್ಟಿದ್ದು, ಕಲಬೆರಕೆ ಮಾಡಿದ್ದು... ಒಳ್ಳೆಯ ರೈತರ ಸಂಪಾದನೆಗೂ ಮಣ್ಣು ಹಾಕಿತು. ಮುಚ್ಚಟೆಯಿಂದ ಬೆಳೆದು, ಸಂಸ್ಕರಿಸಿ ಇಟ್ಟಿದ್ದ ಕಟ್ಟು ಕಟ್ಟು ವೆನಿಲ್ಲಾ ಕೊಳ್ಳುವವರಿಲ್ಲದೇ ಮುಗ್ಗತೊಡಗಿದಾಗ ಬೆಳೆಗಾರರು ಕಂಗೆಟ್ಟರು. ಹೊಸತಾಗಿ ಚಾಲ್ತಿಗೆ ಬಂದಿದ್ದ ಬೆಳೆಯಾಗಿದ್ದರಿಂದ ಅದರ ಪರ್ಯಾಯ ಬಳಕೆಯಾಗಲಿ, ಮಾರುಕಟ್ಟೆ ತಂತ್ರವಾಗಲೇ ಬಹುತೇಕರಿಗೆ ತಿಳಿದಿರಲಿಲ್ಲ. ವೆನಿಲ್ಲಾ ಅಬ್ಬರದಲ್ಲಿ ತೋಟದಲ್ಲಿ ತಲೆಮಾರಿನಿಂದ ಬೆಳೆದುಕೊಂಡು ಬಂದಿದ್ದ ಏಲಕ್ಕಿ, ಕಾಳುಮೆಣಸಿಂಥ ಉಪಬೆಳೆಗಳನ್ನು ಮರೆತಿದ್ದ ಜನ ನಿಧಾನವಾಗಿಯಾದರೂ ಎಚ್ಚೆತ್ತು ಮತ್ತೆ ಅವುಗಳ ಬುಡಕ್ಕೆ ಮಣ್ಣು, ಗೊಬ್ಬರ ಹೊರಲಾರಂಭಿಸಿದರು. ಏಲಕ್ಕಿ ಪಾಯಸಕ್ಕೆ ಮರಳಿದ್ದಷ್ಟೇ ಅಲ್ಲ, ಹೊಸದಾಗಿ ಡ್ರೈಯರಿನಲ್ಲೂ ಜಾಗ ಪಡೆದುಕೊಂಡಿತು.

ಮೊನ್ನೆ ಜೂನಿನಲ್ಲಿ, ತುಂಬಾ ಸಮಯದ ನಂತರ ಊರಿಗೆ ಹೋದಾಗ ಅಲ್ಲಿ ಇಲ್ಲಿ ತೋಟ ಸುತ್ತಾಡುತ್ತಿದ್ದೆ. ಅಡಿಕೆ ಮರಗಳಿಗೆ ಸುತ್ತಿದ್ದ ಕಾಳು ಮೆಣಸಿನ ಬಳ್ಳಿಗಳ ಮಧ್ಯೆ ಸ್ಯಾಂಪಲ್ಲಿಗೆ ಕೂಡ ಒಂದು ವೆನಿಲ್ಲಾ ಬಳ್ಳಿ ಕಾಣದು. ಕೆಲವೆಡೆ ಹಿಂದೆ ಚಪ್ಪರ ಇದ್ದ ಜಾಗದಲ್ಲಿ ಬೋಳು ಬೋಳು ಕಲ್ಲು ಕಂಬಗಳ, ಗೂಟಗಳ ಸಾಲು ಇಂದೋ ನಾಳೆಯೋ ಬುಡಮೇಲಾಗುವುದಕ್ಕೆ ಕಾಯುತ್ತ ನಿಂತಿದ್ದರೆ, ಇನ್ನು ಹಲವೆಡೆ ಆಗಲೇ ಎರಡಡಿ ಎತ್ತರದ ಅಡಿಕೆ ಸಸಿಯ ಸಾಲುಗಳು ಎದ್ದಿವೆ. ಕೆಲವೊಂದು ಕಡೆ ಮಾತ್ರ ವೆನಿಲ್ಲಾ ಬುಡ ಕಿತ್ತ ನಂತರದ ಕುಣಿ ಹಾಗೆಯೇ ಬಾಯ್ತೆರೆದು ನಿಂತಿದೆ, 'ವೆನಿಲ್ಲಾ ದುಡ್ಡು' ತುಂಬು ಸಂಸಾರಗಳಲ್ಲಿ ತೋಡಿದ ಕಂದರದಂತೆಯೇ!

('ಅವಧಿ.ಕಾಮ್'ನಲ್ಲಿ ಡಿಸೆಂಬರ್ ೪, ೨೦೧೩ರಂದು ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ