ಮೌನದ ಮನವಿ
ಎಲ್ಲಿ ಅಡಗಿರುವೆ ಸ್ವರಮೆಲ್ಲಗೆ ಮರೆಯಾಗಿ
ಕಲ್ಲಾಗಿದೆ ಕೊರಳು
ಸೊಲ್ಲೆತ್ತಲೂ ಬರದೆಮನ್ನಿಸು ಅಸಡ್ಡೆಯನು
ಬಿನ್ನಹದ ಉಪೇಕ್ಷೆಯನು
ನಿನ್ನಿರುವ ಮರೆತು
ಬೆನ್ನು ತೋರಿದ ತಪ್ಪನು
ಮತ್ತಿನ ಮಬ್ಬಿನಲಿದ್ದೆ
ಕತ್ತಲೆಯ ಹೊದ್ದಿದ್ದೆ
ಚಿತ್ತದ ನುಡಿ ಲೆಕ್ಕಿಸದೆ
ಮೆತ್ತಗೆ ಮುಸುಕೆಳೆದಿದ್ದೆ
ಭ್ರಮೆ ಚದುರಿ ಬಯಲಾಗೆ
ಕಮರಿತ್ತು ದನಿ ಟಿಸಿಲು
ಅಮಾವಾಸ್ಯೆಯ ನಭದಂತೆ
ಜಮೆಯಾದ ಕಾರ್ಮುಗಿಲು
ಇಲ್ಲೀಗ ಗದ್ದಲ, ಎಲ್ಲೆಲ್ಲೂ ಸಪ್ಪಳ
ಚೆಲ್ಲಿ ತುಳುಕಿದೆ ಕರ್ಕಶ ರವ
ಒಲ್ಲೆ ಈ ಗೌಜು, ನಿಲ್ಲದ ಮೋಜು
ಮೆಲ್ಲುಲಿಗೆ ಕಿವಿಯಾಗಿ ಕಾದಿದೆ ಜೀವ
ಬಿಕ್ಕುತಿಹೆ ಬೇಡುತಿಹೆ ಪ್ರೀತಿಯಲಿ ಬೈಯುತಿಹೆ
ಸಿಕ್ಕು ನೀ ಬೇಗ, ಕಣ್ಣಂತೆ ಕಾಯುವೆ
ಸುಕ್ಕಿದ ಚೇತನಕೆ ತುಸು ಕಸುವು ತುಂಬುವೆ
ಅಕ್ಕರೆಯಲಿ ಆದರಿಸಿ ಬೆನ್ನಾಗಿ ನಿಲ್ಲುವೆ
(ಅವಧಿ.ಕಾಮ್ ನಲ್ಲಿ ಪ್ರಕಟವಾದ ಕವನ)
ನಸುಕಿನಾ ಮುಸುಕಿನಲಿ..
ಪ್ರತ್ಯುತ್ತರಅಳಿಸಿಇಬ್ಬನಿಯ ಮಬ್ಬಿನಲಿ..
ತೊರೆಯ ತೆರೆಯಲ್ಲಿ..
ರವಿಯ ರೆಶಿಮೆಯಲ್ಲಿ..
ಬೆಟ್ಟದಾ ಜುಟ್ಟದಲ್ಲಿ..
ಓನಕೆಯ ಅ೦ಚಿನಲಿ..
ಪಸರಿಸಿದಾ ಪೈರಿನಲಿ..
ಹೆಸರಿಡದಾ ಕ೦ದನಲಿ..
ದಾಟೀ ಇಲ್ಲದ ಪದ್ಯದಲ್ಲಿ..
..ಮೌನದ ಮಾತು..
ತುಂಬಾ ಸುಂದರ ಕವನ ರೇಖಾ ಅವರೆ, ಹೀಗೇ ಬರೆಯುತ್ತಿರಿ.
ಪ್ರತ್ಯುತ್ತರಅಳಿಸಿಮಂಜು ಅಣ್ಣ, ನಿನ್ನ ಕಮೆಂಟ್ ತುಂಬ ಸುಂದರವಾಗಿದ್ದು. ಕವನಕ್ಕೆ ಕಾಂಪ್ಲಿಮೆಂಟ್ ಆಗಿ ಪ್ರತಿ ಕವನ, ನನಗೆ ರಾಶಿ ಇಷ್ಟ ಆತು!
ಪ್ರತ್ಯುತ್ತರಅಳಿಸಿಧನ್ಯವಾದಗಳು ವಸಂತ್ ಕುಲಕರ್ಣಿ ಅವರೆ!
ಪ್ರತ್ಯುತ್ತರಅಳಿಸಿ