ಶುಕ್ರವಾರ, ಸೆಪ್ಟೆಂಬರ್ 6, 2013

ಶರಶಯ್ಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ 

ನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ ಮೇಲ್ನೋಟಕ್ಕೆ ಯಾವ ವ್ಯತ್ಯಾಸವೂ ಕಾಣದಿದ್ದರೂ, ಹೊಸ ವರ್ಷದ ಹೊಸ ದಿನ ಮುಗಿದು ಇನ್ನೆರಡು ದಿನಗಳು ಮುಗಿದಿವೆ! ಗಡಿಯಾರದ ಮುಳ್ಳಿನ ಒಂದು ಚಲನೆ ಕೂಡ ಜಗತ್ತಿನ ಮೈ ಕೊಡವಿ ಎಬ್ಬಿಸಿ, ಸಂ-ಚಲನ ಮೂಡಿಸುವ ವಿದ್ಯಮಾನವೇ ಆಶ್ಚರ್ಯಕರ..ಓಹ್ ಆಕರ್ಷಕ. ಹೊಸ ವರ್ಷದೊಂದಿಗೆ ಬೆಸುಗೆ ಬಿದ್ದಿರುವ ಸಂಗತಿಗಳು ಅನೇಕ. ಪಾಶ್ಚಿಮಾತ್ಯರಿಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾರ್ವತ್ರಿಕವಾಗಿ ನೂತನ ಶಕೆಯ ಆಗಮನ. ಹಲವರಿಗೆ ಹೊಸ ವರ್ಷದ ಆರಂಭ ಎಂದರೆ ಪಾರ್ಟಿ, ಪಾನಗೋಷ್ಠಿ, ಕುಣಿತ. ಮಜಾ! ಒಂದಷ್ಟು ಜನರಿಗೆ ಅವೇ ಹಳೆಯ ಗೊಂದಲ : ಹೊಸ ವರ್ಷ ಶುರುವಾಗಿ ವಾರ ಕಳೆದರೂ ಇಸ್ವಿ ಬರೆಯುವಾಗೆಲ್ಲ ಹಳೆಯದನ್ನೇ ಯಾಂತ್ರಿಕವಾಗಿ ಬರೆದು ತಿದ್ದಿ ಮತ್ತೆ ಬರೆಯುವ, ಹಳೆ ಕ್ಯಾಲೆಂಡರನ್ನೇ ದಿಟ್ಟಿಸುವ ಗೋಜಲು. ಬಹುತೇಕ ಜನರಿಗೆ ನವ ವರ್ಷದ ಹೊಸ್ತಿಲಲ್ಲಿ ಏನಾದರೂ ಒಂದು ಪ್ರತಿಜ್ಞೆ 'ನ್ಯೂ ಇಯರ್ ರೆಸೊಲ್ಯೂಶನ್' ಮಾಡುವ ಹಂಬಲ. ಚಟ ಅನ್ನಿ, ಏನೂ ತಪ್ಪಿಲ್ಲ! ಇಂಥ ಪ್ರತಿಜ್ಞೆ ಮಾಡಿ ಪಾಲಿಸುವ, ಕನಿಷ್ಠ ಆಗಾಗ ನೆನಪಾದರೂ ಮಾಡಿಕೊಳ್ಳುವ ಕೆಲವರನ್ನು ನೋಡಿ ನಾನೂ ಅದನ್ನು ರೂಢಿಸಿಕೊಂಡೆ, ಒಂದಷ್ಟು ವರ್ಷಗಳ ಹಿಂದೆ. ಪ್ರತಿಜ್ಞೆ ಮಾಡುವುದೇನೋ ಸರಿ, ಆದರೆ ಏನು ಮಾಡುತ್ತೇನೆ/ಮಾಡಲಾರೆ ಎಂದು? ಕಾಶಿಗೆ ಯಾತ್ರೆ ಹೋದವರು ತಮಗೆ ಅತ್ಯಂತ ಇಷ್ಟವಾದದ್ದನ್ನು (ಸಾಮಾನ್ಯವಾಗಿ ತಿನ್ನುವ ಒಂದು ವಸ್ತು) ಬಿಡುವುದಾಗಿ ಪ್ರತಿಜ್ಞೆ ಮಾಡಿ ಬರುವ ರೂಢಿ ಇದೆ. ಇಲ್ಲಿ ಬಿಡುವುದೇನು? ಎಲ್ಲ ನಾನೇ ರೂಢಿಸಿಕೊಂಡ ಅಭ್ಯಾಸಗಳು; ಅನೇಕ ವರ್ಷಗಳಿಂದ ಹಾಸಿ, ಹೊದೆದುಕೊಂಡು ಬಂದ ಬೆಚ್ಚನೆಯ ಮುಚ್ಚಿಗೆಗಳು. ಆದರೂ ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿಂದ್ಹಾಗೇ ಕಣ್ಮುಚ್ಚಿಕೊಂಡು ಆಣೆ ಮಾಡುತ್ತಿದ್ದೆ: 

1) ಈ ವರ್ಷ ಸೋಮಾರಿತನವನ್ನು ಸಂಪೂರ್ಣ ಬಿಟ್ಟು ಬಿಡುತ್ತೇನೆ. ಪ್ರತಿಯೊಂದು ಕೆಲಸವನ್ನೂ ಆಗಿಂದ್ದಾಗೆ ಮಾಡಿ ಮುಗಿಸುತ್ತೇನೆ. 
2) ಪ್ರತಿ ಬೆಳಿಗ್ಗೆ ಆರು ಗಂಟೆಗೆ ಏಳುತ್ತೇನೆ. 'ಇನ್ನೂ ಐದು ನಿಮಿಷ' ಎಂದು ಮುಸುಕೆಳೆದುಕೊಂಡು ಮುಕ್ಕಾಲು ಗಂಟೆ ಬಿಟ್ಟು ಏಳುವ ಚಟಕ್ಕೆ ಚಟ್ಟ ಕಟ್ಟುತ್ತೇನೆ. 
3) ತೂಕ ಇಳಿಸುವ ವ್ರತವನ್ನು ಪಾಲಿಸುತ್ತೇನೆ. ಕಡಿಮೆ ತಿನ್ನುತ್ತೇನೆ, ಯೋಗಾಭ್ಯಾಸ, ವ್ಯಾಯಾಮ ತಪ್ಪದೇ ಮಾಡುತ್ತೇನೆ. 
4) ಒಣಗಿದ ಬಟ್ಟೆಯನ್ನು ತಕ್ಷಣ ಮಡಿಚಿ, ಇಸ್ತ್ರಿ ಹಾಕಿ ಸಿದ್ಧವಿಟ್ಟುಕೊಳ್ಳುತ್ತೇನೆ. 
5) ಒಗೆಯಬೇಕಿರುವುದನ್ನು ಆಗಿಂದ್ದಾಗೆ ಒಗೆಯುತ್ತೇನೆ. ಕಪಾಟು, ಡ್ರಾಯರ್, ಟೇಬಲ್‌ಗಳ ಮೇಲೆ ಕಸ ಕಡಿಮೆಗೊಳಿಸಿ, ಶಿಸ್ತಿನಿಂದ ಇಟ್ಟುಕೊಳ್ಳುತ್ತೇನೆ. ಯಾವುದೇ ವಸ್ತು ಎಷ್ಟೇ ಚೆನ್ನಾಗಿರಲಿ, ನನಗೆ ಅದರ ಅವಶ್ಯಕತೆಯಿಲ್ಲ ಎಂದಾದರೆ ಬೇರೆಯವರಿಗೆ ಕೊಟ್ಟೋ, ಇಡಬೇಕಾದಲ್ಲಿ ಇಟ್ಟೋ ಅದರಿಂದ ಕಳಚಿಕೊಳ್ಳುತ್ತೇನೆ. ಎಂದಾದರೂ ಬೇಕಾಗಬಹುದು ಎಂಬ ಆಸೆಯಿಂದ ತಲೆ ಮೇಲೆ ಹೊತ್ತು ತಿರುಗುವುದಿಲ್ಲ. 
6) ಯಾವತ್ತೂ ಹೊರಡುವ ಹೊತ್ತಿಗೆ ಗಡಿಬಿಡಿಯಲ್ಲಿ ಒದ್ದಾಡುವುದನ್ನು ಬಿಟ್ಟು, ಐದು ನಿಮಿಷ ಮೊದಲೇ ಸಿದ್ಧವಾಗಿ ಆರಾಮವಾಗಿ ಹೊರಡುತ್ತೇನೆ. 
7) ಕಣ್ಣು, ಕಿವಿ ಎಲ್ಲ ಒಂದೆಡೆ ನೆಟ್ಟು, ಬಾಯಿ ತೆರೆದುಕೊಂಡು ಇಹಪರದ ಅರಿವು ಮರೆತು ಟಿವಿ ವೀಕ್ಷಿಸುವುದುನ್ನು ಬಿಟ್ಟು, ಕೈ ಕೆಲಸ ಮಾಡುತ್ತ, ಸಮಯದ ಪರಿವೆ ಇಡುತ್ತ ಮನರಂಜನೆ ಪಡೆಯುತ್ತೇನೆ. ಟಿವಿಗಿಂತ ಓದಿಗೆ ಹೆಚ್ಚು ಆದ್ಯತೆ ಕೊಡುತ್ತೇನೆ. 
8) ಹಾಲಿನ, ಚಹಾದ ಪಾತ್ರೆ ಒಲೆಯ ಮೇಲಿಟ್ಟು, ಬೇರೆಲ್ಲೋ ಲಕ್ಷ್ಯವಿಟ್ಟು, ಅದು ಚೆಲ್ಲಿ ಕರಕಲಾದ ಮೇಲೆ ತಿಕ್ಕುತ್ತಾ ಕೂಡ್ರುವ ಕಾಯಕಕ್ಕೆ ತಿಲಾಂಜಲಿಯಿಡುತ್ತೇನೆ. 
9) ಪತ್ರ, ಇ-ಪತ್ರಗಳಿಗೆ ಅಂದಂದೇ ಉತ್ತರ ಬರೆಯುತ್ತೇನೆ. ಸ್ನೇಹಿತರಿಗೆಲ್ಲ ಆಗಾಗ್ಗೆ ಕರೆ ಮಾಡುತ್ತ, ಭೇಟಿಯಾಗುತ್ತ ಸಂಪರ್ಕವನ್ನು ಬಲಪಡಿಸುತ್ತೇನೆ. 
10) ಮುಂದೊಂದು ದಿನ ಮತ್ತೆ ಓದುತ್ತೇನೆ/ಬೇಕಾದೀತು ಎಂದು ಪತ್ರಿಕೆಗಳ ಗುಡ್ಡೆ ಹಾಕಿ, ಇನ್ನು ಅವನ್ನು ಇಡಲು ಜಾಗವೇ ಇಲ್ಲ ಎಂಬ ಸ್ಥಿತಿ ಬಂದಾಗ ಹಳೇ ಪೇಪರ್ ಕೊಳ್ಳುವವರನ್ನು ಹುಡುಕುವ ಹಳೆ ಚಾಳಿ ಕಳೆಯುತ್ತೇನೆ. 
11) ಸಿಟ್ಟು ಕಡಿಮೆ ಮಾಡುತ್ತೇನೆ. ಟೆನ್ಶನ್ ದೂರವಿಡುತ್ತೇನೆ. 
12) ಕಚೇರಿಗೆ ತಡವಾಗಿ ಹೋಗುವುದಿಲ್ಲ. ಬದಲಾಗಿ ಐದು ನಿಮಿಷ ಮೊದಲೇ ನನ್ನ ಕುರ್ಚಿಯಲ್ಲಿರುತ್ತೇನೆ. 
13)........ 
14)....... 
15)....... 
ನನ್ನ ಕೆಲವು ಸಾಂಪ್ರದಾಯಿಕ ಪ್ರತಿಜ್ಞೆಗಳಿವು. ಇವತ್ತಿಗೂ ಪ್ರತಿಜ್ಞಾ ಪಟ್ಟಿಯಲ್ಲಿ ಫ್ರೆಶ್ ಆಗಿ, ಅಗ್ರಗಣ್ಯರಾಗಿ ಇವೆ. ಏಕೆಂದರೆ ಯಾವುದನ್ನೂ ನಾನು ಜನವರಿ ಎರಡನೇ ವಾರಕ್ಕಿಂತ ಮುಂದೆ ಪಾಲಿಸಿಕೊಂಡು ಹೋಗಿದ್ದಿಲ್ಲ. ಈಗ ಇನ್ನೂ ಒಂದಷ್ಟು ಹೊಸ '....ತ್ತೇನೆ'ಗಳು ಸೇರಿಕೊಂಡು ಪಟ್ಟಿ ಉದ್ದವಾಗಿದೆಯೇ ಹೊರತು, ಯಾವುದೂ ಪಾಲನೆಯಾಗಿ, ಅನವಶ್ಯಕವಾಗಿದ್ದಿಲ್ಲ. ನನ್ನವಲ್ಲವಾದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಇನ್ನೊಂದಿಷ್ಟು ಪ್ರತಿಜ್ಞೆಗಳಿವೆ. ಬಹಳಷ್ಟು ಜನ ಅನುಸರಿಸುವ, ಕನಿಷ್ಠ ಪಕ್ಷ ಹೊಸ ವರ್ಷವನ್ನು ಸ್ವಾಗತಿಸುವ ಎಕ್ಸೈಟ್‌ಮೆಂಟ್‌ನಲ್ಲಿ, ಬದ್ಧತೆಯ ಹಂಗಿಲ್ಲದೇ ಮೈಮೇಲೆ ಎಳೆದುಕೊಳ್ಳುವ ಪ್ರತಿಜ್ಞೆಗಳಿವು: 
1) ಈ ವರ್ಷ ಖಂಡಿತ ಕುಡಿಯುವುದಿಲ್ಲ. 
2) ಯಾವ ಕಾರಣಕ್ಕೂ ತಂಬಾಕು ಹಾಕುವುದಿಲ್ಲ/ ಧೂಮಪಾನ ಮಾಡುವುದಿಲ್ಲ. 
3) ಮೊಬೈಲ್‌ಗೆ ಅಂಟಿಕೊಳ್ಳುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಮಾತನಾಡುತ್ತೇನೆ. 
4) ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತೇನೆ. 
5) ಮಾತಿನ ಶೈಲಿ/ಬಾಡಿ ಲ್ಯಾಂಗ್ವೇಜ್/ಅಪ್ರೋಚ್ ಅನ್ನು ಸುಧಾರಿಸಿಕೊಳ್ಳುತ್ತೇನೆ. 
6) ಎಲ್ಲರೆದುರು ಮೂಗಿನಲ್ಲಿ ಬೆರಳಾಡಿಸುವುದಿಲ್ಲ/ ಕಾಲು ಕುಣಿಸುವುದಿಲ್ಲ/ ತಲೆ ಕೆರೆದುಕೊಳ್ಳುವುದಿಲ್ಲ. 
7) ಬೇರೆಯವರ ವಿಷಯದಲ್ಲಿ ತಲೆ ತೂರಿಸುವುದಿಲ್ಲ, ಬಾಯಿ ಹಾಕುವುದಿಲ್ಲ. 
8) ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತೇನೆ. 
.................... 
ಈ ಹೊಸ ವರ್ಷದ ಹೊಸ್ತಿಲ ಪ್ರತಿಜ್ಞೆಗಳೇ ಹೀಗೆ. ಆರಂಭದ ಒಂದು ವಾರ, ಹೆಚ್ಚೆಂದರೆ ಇನ್ನೊಂದೆರಡು ವಾರ ಪ್ರತಿಜ್ಞೆ ಕೈಗೊಂಡ ಬಹುತೇಕರೆಲ್ಲ ಅದರ ಗುಲಾಮರು. ಭಾರಿ ಮನ್ನಣೆ ಅದಕ್ಕೆ. ಮೂರನೇ ವಾರ ಕಳೆಯುತ್ತಿದ್ದಂತೆಯೇ ಗುಲಾಮಗಿರಿ ಸಾಕಾಗಿ, ಪ್ರತಿಜ್ಞಾ ಶೂರರೆಲ್ಲ 'ಇವತ್ತೊಂದಿನ ಮಾಫ್' ಎಂಬ ಮನಸ್ಥಿತಿಗೆ ಬಂದು ಮುಟ್ಟುತ್ತಾರೆ. ಆ 'ಇವತ್ತು' ಮುಗಿಯುವುದಲ್ಲ. ಪ್ರತಿದಿನವೂ ಮಾಫಿ ಮುಂದುವರಿದು ಆಗಲೇ ಮೂರ್‍ನಾಲ್ಕು ತಿಂಗಳು ಕಳೆದುಬಿಟ್ಟಿರುತ್ತದೆ. ಅಲ್ಲಿಗೆ ಹೊಸ ವರ್ಷದ ಪ್ರತಿಜ್ಞೆಯೆಂಬುದು ಹಳೆಯದಾಗಿ, ಹಳಸಲಾಗಿ ಹಾಸಿಗೆ-ಹೊದಿಕೆಯಡಿ ಮುದುಡಿರುತ್ತದೆ, ಮದ್ಯದ ಗುಟುಕಿನಲ್ಲಿ ಕರಗಿರುತ್ತದೆ, ತಂಬಾಕಿನ ಧೂಮದಲ್ಲಿ ಮಸುಕಾಗಿರುತ್ತದೆ. ಅಲ್ಲಿಗೆ, ಅದರೆಡೆಗಿನ ಬದ್ಧತೆ ಸುದೀರ್ಘ ನಿದ್ದೆಗೆ ತೆರಳಿ, 'ಸರಿ, ಈ ವರ್ಷ ಮುಗಿವವರೆಗೆ ಹೀಗಿದ್ದರಾಯ್ತು. ಮುಂದಿನ ವರ್ಷದಿಂದ ಖಂಡಿತಾ ಸುಧಾರಿಸಬೇಕು' ಎಂಬ ಪಲಾಯನವಾದ ಆವರಿಸಿಕೊಳ್ಳುತ್ತದೆ. ಮತ್ತೆ ಹುಟ್ಟಿ ಬರುತ್ತದೆ ಹೊಸ ವರ್ಷದ ಮೊದಲ ದಿನ; ಈಗ ಬಂದಂತೆ. ಪ್ರತಿಜ್ಞೆಗಳೂ ಹುಟ್ಟುತ್ತವೆ!

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ