ಶುಕ್ರವಾರ, ಸೆಪ್ಟೆಂಬರ್ 6, 2013

ಶ್ವಾಮಿ ಧೇವನೆ ಲೋಕ ಫಾಲನೆ..

ಪ್ರಾರ್ಥನೆಯೆಂದರೆ ಶ್ರದ್ಧೆ, ಭಕ್ತಿ, ಸಮರ್ಪಣಾ ಮನೋಭಾವ ಅನಾವರಣಗೊಳ್ಳುವ, ಸಾಕಾರಗೊಳ್ಳುವ ಸಮಯ ಎಂಬುದು ಸಾಮಾನ್ಯ ಕಲ್ಪನೆ. ಬಹಳಷ್ಟು ಜನರಿಗೆ ಇದು ಮನಸ್ಸನ್ನು ಜಾಗೃತಗೊಳಿಸುವ, ಏಕಾಗೃತೆ ಸಾಧಿಸುವ, ದೇವರೊಂದಿಗೆ ಸಂಭಾಷಿಸುವ, ಶಾಂತಗೊಳ್ಳುವ/ಸ್ವಚ್ಛಗೊಳ್ಳುವ ಕ್ರಿಯೆ. ಪ್ರಾರ್ಥನೆ ಎಂದಾಕ್ಷಣ ಮನದಲ್ಲಿ ಮೂಡುವುದು ಗಂಭೀರ, ದೈವೀಕ ಭಕ್ತಿ ಭಾವ.

 ಅದು ಸರಿ. ನಿಜಕ್ಕೂ ಇದು ಇಷ್ಟೆಲ್ಲ ಜಟಿಲ, ಬಿಗುವಿನ, ಗಾಂಭೀರ್ಯದ ಅನುಭವವೇ? ಪ್ರಾರ್ಥನೆಗೆ ಲಘುವಾದ, ತಿಳಿಯಾದ, ಮುಸ್ಸಂಜೆಯ ತಂಗಾಳಿಯಂಥ ಕಚಗುಳಿಯ ಆಯಾಮ ಸಾಧ್ಯವಿಲ್ಲವೇ? ಪ್ರತಿ ಮನೆಯ ಕಿರು ಕೋಣೆಯ ಖಾಸಗೀತನದಲ್ಲಿ, ಏಕಾಂತದಲ್ಲಿ, ಆತಂಕದ, ಅಗತ್ಯದ ಕ್ಷಣಗಳಲ್ಲಿ ಸಾಧ್ಯವಿಲ್ಲದಿರಬಹುದು. ಆದರೆ ಶಾಲೆಗಳಲ್ಲಿ, ವಿಶೇಷವಾಗಿ ಹಳ್ಳಿ ಶಾಲೆಗಳಲ್ಲಿ ನಡೆವ  ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ರಧ್ಧೆ ಭಕ್ತಿಗಳಿಗಿಂತ ಹೆಚ್ಚು ರಭಸದಿಂದ ಹರಿಯುವುದು ಸರಸಮಯ ಹಾಸ್ಯ ರಸವೇ. ವಿದ್ಯಾರ್ಥಿ ಜೀವನದ ಮೊದಲೈದು ವರ್ಷಗಳನ್ನು ಹಳ್ಳಿ ಶಾಲೆಯಲ್ಲಿ ಕಳೆದ ನನಗೆ ಇದರ ಫಸ್ಟ್ ಹ್ಯಾಂಡ್ ಅನುಭವವಿದೆ. 
ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಆಗಷ್ಟೇ ಮನೆಯಿಂದ ತಾಜಾ ಬಂದಿರುತ್ತಿದ್ದ ಮಕ್ಕಳಲ್ಲಿ ತುಂಟತನದ ಕೋಷಂಟ್ ತಾರಕದಲ್ಲಿರುತ್ತಿತ್ತು. ಹೆಣ್ಣು ಮಕ್ಕಳಾದರೆ ಮುಂದಿರುವವರ ಜಡೆ ಜಗ್ಗುವುದು, ರಿಬ್ಬನ್ ಬಿಚ್ಚುವುದು, ಗಂಡು ಮಕ್ಕಳು ಮುಂದಿರುವವರ ಚಡ್ಡಿ ಎಳೆಯುವುದು, ಬಿಳಿ ಅಂಗಿಯ ಬೆನ್ನಿನ ಮೇಲೆ ಧೂಳಿನ ಕೆಂಪು ಕೈ ಅಚ್ಚು ಒತ್ತುವುದು.... ಮಾಮೂಲು. ಇವೆಲ್ಲ ಇನ್ನೂ ಪ್ರಾರ್ಥನೆಗೆ ಮುನ್ನ ಎಲ್ಲ ಬಂದು ಜಮೆಗೊಳ್ಳುವಾಗಿನ ಕಾರುಬಾರುಗಳು. ಆಮೇಲೆ ಮಾಸ್ತರು ಬಂದು ಒಂದೆರಡು ಮಕ್ಕಳ ಬೆನ್ನು ಬೆಚ್ಚಗೆ ಮಾಡಿದ ಮೇಲೆ ಪ್ರಾರ್ಥನೆ ಆರಂಭ... 
ಭಾರಥಾಂಭೆಯೇ ಝನಿಸಿ ನಿನ್ನೊಳು ಧನ್ಯನಾಧೆನು ಧೇವಿಯೇ 
ನಿನ್ನ ಫ್ರೇಮಧಿ ಭೆಳೆದ ಝೀವವು ಮಾನ್ಯವಾಧುಧು ಥಾಯಿಯೇ ......." 
ಎಲ್ಲೆಡೆಯಿಂದ ಹೊಡೆದು ಹೊಡೆದು, ಕೂಗಿ ಕಿರುಚಿ ಹಾಡುವ(?) ಕಂಠಗಳು.ಹಾಗಂತ ಈ ಹಾಡುಗಳನ್ನೆಲ್ಲ ಬರೆದು ತೋರಿಸಿ ಎಂದು ಯಾರಾದರೂ ಹೇಳಿದ್ದರೆ ಬಹುಷಃ ಎಲ್ಲ ಮಕ್ಕಳೂ ಸರಿಯಾಗಿಯೇ ಅಂದರೆ "ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...." ಎಂದೇ ಬರೆಯುತ್ತಿದ್ದರೇನೋ. ಆದರೆ ಅದಕ್ಕೆ ಪ್ರಾರ್ಥನೆ ಎಂಬ ರೂಪ ನೀಡಿ, ಪ್ರಾಣ ತುಂಬಿ ಹಾಡಬೇಕು ಎಂದು ಹಿರಿಯರು ಆದೇಶಿಸುತ್ತಿದ್ದಂತೆಯೇ, ಅದನ್ನು ಸ್ವಲ್ಪ ಜಾಸ್ತಿಯೇ ಪಾಲಿಸುತ್ತಿದ್ದ ಮಕ್ಕಳು "ಬರೀ ಪ್ರಾಣವೇಕೆ,  ಮಹಾಪ್ರಾಣವನ್ನೇ ತುಂಬೋಣ" ಎಂದು ಅತ್ಯುತ್ಸಾಹದಿಂದ ಹಾಡಿ(?) ಅದಕ್ಕೊಂದು ಉಗ್ರ ಸ್ವರೂಪ ನೀಡುತ್ತಿದ್ದರು. ಹಾಗಾಗಿ.. 
"ಸ್ವಾಮಿ ಧೇವನೆ ಲೋಕ ಫಾಲನೆ ಥೇನ ಮೋಸ್ತು ನಮೋಸ್ತುಥೆ 
ಫ್ರೇಮದಿಂದಲಿ ನೋಢು ನಮ್ಮನು ಥೇನ ಮೋಸ್ತು ನಮೋಸ್ತುಥೆ" 
ಎಂದು ಹೊಡೆದು ಹೊಡೆದು, ಪದಗಳನ್ನು ಎಲ್ಲೆಲ್ಲೋ ಒಡೆದು ಉಚ್ಛರಿಸಿಯೇ ನಾವೆಲ್ಲ ಪ್ರಾರ್ಥನೆ ಮಾಡುತ್ತಿದ್ದುದು. ಪ್ರಾರ್ಥನೆ ತಾರಕಕ್ಕೇರಿದ ಸಮಯದಲ್ಲಿ ಒಬ್ಬೊಬ್ಬರ ಆಂಗಿಕ ಭಾವವನ್ನು ಗಮನಿಸಬೇಕು. ಹಾಡಿನ ಯಾವೊಂದು ಶಬ್ದ, ಆಶಯವೂ ಹಾಡುವವರ ಮುಖದಲ್ಲಿ ಪ್ರತಿಫಲಿಸದು, ಅಲ್ಲಿರುವುದು ಒಂದೇ- ಎಲ್ಲಿ ಮಾಸ್ತರರ/ಅಕ್ಕೋರ ಕಣ್ಣು ತಮ್ಮ ಮೇಲೆ ಬಿದ್ದು, ಸರಿಯಾಗಿ ಹಾಡಿಲ್ಲ ಎಂದು ಕಿವಿ ಹಿಂಡುತ್ತಾರೋ ಎಂಬ ದಿಗಿಲು ಮಾತ್ರ. ಹಾಗಾಗಿಯೇ ಬಾಯನ್ನಷ್ಟೇ ಗರಿಷ್ಠ ಸಾಮರ್ಥ್ಯದಲ್ಲಿ ತೆರೆದು ಮುಚ್ಚುತ್ತ, ಸ್ವರಸಂಭ್ರಮವನ್ನು ಮುಗಿಲು ಮುಟ್ಟಿಸುವ ಧಾವಂತ ಆ ಮುಗ್ಧ ಮುಖಗಳಲ್ಲಿ. 
ಅತ್ತ ಒಂದೆಡೆ ಕಂಠಶೋಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಕೈಗಳಿಗೂ ಭಾರಿ ಕೆಲಸ. ಹಾಡು ತಾರಕಕ್ಕೇರುತ್ತಿದ್ದಂತೆಯೇ ಅವಕ್ಕೂ ವಿಚಿತ್ರ ತುಮುಲ. ತಡೆದುಕೊಳ್ಳಲಾರದ ಕೈ ತನ್ನೊಡೆಯನ ಚಡ್ಡಿಯ, ಒಡತಿಯದ್ದಾದರೆ ಲಂಗದ ಚುಂಗನ್ನು ಜಗ್ಗಿ, ಜಗ್ಗಿ ಸ್ವರಭಾರವನ್ನು ಬ್ಯಾಲೆನ್ಸ್ ಮಾಡಲು ತಿಣುಕಾಡುತ್ತದೆ. ಇತ್ತ ಅಷ್ಟೂ ಜೊತೆ ಕಾಲುಗಳು ನೆಲಕ್ಕೆ ಬೆಸುಗೆ ಹಾಕಿದಂತಿದ್ದರೆ, ದೇಹದ ಮೇಲರ್ಧ ಮುಖ್ಯವಾಗಿ ತಲೆಗಳು ಒಳ್ಳೆ ಫಲಭರಿತ ಎತ್ತರೆತ್ತರದ ತೆಂಗಿನಮರಗಳು ಸುಳಿಗಾಳಿಗೆ ಅತ್ತಿತ್ತ ತೊನೆದಾಡುವ ರೀತಿಯಲ್ಲಿ ಹಿಂದಕ್ಕೂ, ಮುಂದಕ್ಕೂ ಹೊಯ್ದಾಡುತ್ತಿರುತ್ತವೆ. ಹಾಡು ಅಡಗುತ್ತಿದ್ದಂತೆಯೇ ತೊನೆದಾಟವೂ ಸ್ತಬ್ಧ. ನಮ್ಮೂರಿನ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ನಾನೂ ಎಲ್ಲರಂತೆ ಈ ಪ್ರಾರ್ಥನಾ ರಸ ಲಹರಿಯ ಅಭಿವ್ಯಕ್ತಿಯಾಗಿದ್ದೆ. 
ಈ ತೊನೆದಾಟ ಪ್ರಾರ್ಥನೆಗಷ್ಟೇ ಸೀಮಿತವಾಗಿರಲಿಲ್ಲ. ಸಾಯಂಕಾಲ "ಬಾಯಿಪಟ್ಟೆ" (ಬಾಯಿಪಾಠ) ಹೇಳುವಾಗಲೂ "ಒಂದೊಂದ್ಲ್ ಒಂದ, ಒಂದ್ಯೆರಡ್ಲ ಎರಡ" ಎನ್ನುತ್ತಿದ್ದಂತೆ ಪಿಕಪ್ ಆಗುತ್ತಿದ್ದ ಹೊಯ್ದಾಟ "ಒಂದ್ ಹತ್ಲ್ ಹತ್ತ" ಎಂಬಲ್ಲಿ ಒಂದು ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿತ್ತು. ಮತ್ತೆ ಬ್ರೇಕ್ ಕೇ ಬಾದ್ "ಎರಡೊಂದ್ಲ್ ಎರಡ..." ಆರಂಭವಾಗುತ್ತಿದ್ದಂತೆ ಹೆಣ್ಣು/ಗಂಡು ಮಕ್ಕಳು, ಒಂದನೆತ್ತಿ/ಎರಡನೆತ್ತಿ ಎಂಬೆಲ್ಲ ಪ್ರತ್ಯೇಕತೆಗಳೊಂದಿಗೆ ನಿಂತಿರುತ್ತಿದ್ದ ಉದ್ದುದ್ದ ಸಾಲುಗಳು ಅವೆಲ್ಲ ಭೇದ ಮರೆತು ಒಮ್ಮತದಿಂದ ಹಿಂದಕ್ಕೂ ಮುಂದಕ್ಕೂ ಗಾಳಿ ಗುದ್ದಲಾರಂಭಿಸುತ್ತಿದ್ದವು. "ಪ್ರಭವ, ವಿಭವ..." ದಂಥ ಉದ್ದುದ್ದ ಬಾಯಿಪಾಠವಂತೂ ತೊನೆದಾಟದ ಸಮಸ್ತ ಸಾಧ್ಯತೆಗಳನ್ನು ಪ್ರದರ್ಶಿಸುತ್ತಿತ್ತು. 
ಇರಲಿ, ಮತ್ತೆ ಪ್ರಾರ್ಥನೆಯ ವಿಷಯ/ವಿಲಾಸಕ್ಕೆ ಬರೋಣ. ಮುಂದೆ ಜವಾಹರ ನವೋದಯ ವಿದ್ಯಾಲಯ ಸೇರಿದ ಮೇಲೆ ಅದರ ಭಾವ ಏನಿರಬೇಕು ಎಂಬುದು ಸ್ವಲ್ಪ ಮಟ್ಟಿಗೆ ಅನುಭವಕ್ಕೆ ಬಂತು ನನಗೆ. ಆದರೂ ಹಳ್ಳಿ ಶಾಲೆಗಳಿಗಿಂತ ಆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾರ್ಥನೆಯ ದನಿ, ಭಾಷೆ ಬೇರೆಯಿದ್ದವೆ ಹೊರತು ಆ ಸಮಯದಲ್ಲಿನ ತುಂಟಾಟಗಳಲ್ಲ. ಇಲ್ಲೂ ಅದೇ ಅಂಗಿ ಜಗ್ಗುವುದು, ಜಡೆ ಎಳೆಯುವುದು, ಮುಂದಿರುವವರ ಅಂಗಿಯೊಳಗೆ ಕಲ್ಲು ಹರಳು ತೂರಿಸುವುದು..... ಎಲ್ಲ ಎಂದಿನಂತೆ. ದೈಹಿಕ ಶಿಕ್ಷಕರ ಕೈಯಲ್ಲಿ ಸಿಕ್ಕಿ ಬಿದ್ದರೆ ಮಂಡಿಯೂರಿ ಕುಳಿತುಕೊಳ್ಳುವ, ಸಭೆಯ ಸುತ್ತ ಮೊಣಕೈ ಊರುತ್ತ ತೆವಳುವ "ಮರ್ಯಾದೆ" ಪ್ರಾಪ್ತವಾಗುತ್ತಿದ್ದುದು ಮಾತ್ರ ವಿಶೇಷ. 
ಪ್ರಾರ್ಥನೆಯ ಸಂದರ್ಭದಲ್ಲಿ ಒಂದು ಗಾದೆಮಾತನ್ನು ವಿವರಿಸಿ ಹೇಳುವುದು, ವಾರ್ತೆಗಳನ್ನು ಓದುವುದು ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಇರುವ ರೂಢಿ. ಶಾಲೆಯ ಹಿರಿಯ ತರಗತಿಗಳ ಮಕ್ಕಳು ಪಾಳಿಯ ಆಧಾರದಲ್ಲಿ ಇವನ್ನು ನಿರ್ವಹಿಸುವುದುಂಟು. ಮಾರನೆ ದಿನ ಪಾಳಿ ಇರುವವರು ಹಿಂದಿನ ದಿನ ಮನೆಯಲ್ಲಿ ಎದ್ದು ಬಿದ್ದು ಹಳೆ ಪುಸ್ತಕ ಹುಡುಕಿ ಗಾದೆ ಆಯ್ದುಕೊಳ್ಳುವುದೇನು, ಉರು ಹೊಡೆಯುವುದೇನು, ಆಯಾ ಗಾದೆಗಳನ್ನು ಆ ಮಕ್ಕಳ ತಲೆಯ ಮೇಲೆಯೇ ಮೊಟಕಿ ಮನೆಯ ಹಿರಿಯರು ಮಜಾ ತೆಗೆದುಕೊಳ್ಳುವುದೇನು... "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು, ಆಳಾಗಿ ದುಡಿ; ಅರಸನಾಗಿ ಉಣ್ಣು"-ವಂಥವನ್ನು ಹಿರಿಯರ ಎದುರು ಹೇಳತೊಡಗಿದರೆ ಮೂಲೆಲಿ ಮಲಗಿದ್ದ ಮಾರಿಯನ್ನು ಮೈ ಮೇಲೆ ಎಳಕೊಂಡ ಹಾಗೆ ಆಗುತ್ತಿದ್ದುದು ಖರೆ! 
ಇಷ್ಟೆಲ್ಲ ಉರು ಹೊಡೆದು ಗಾದೆ ವಿಸ್ತಾರದ ಒಂದೊಂದು ಅಕ್ಷರವನ್ನೂ ಮರೆಯದೇ ನೆನಪಿನ ಪೆಟ್ಟಿಗೆಗೆ ತುಂಬಿ ಬೀಗ ಜಡಿದುಕೊಂಡು ಬಂದ ಮಕ್ಕಳು ಮಾರನೇ ದಿನ ಪ್ರಾರ್ಥನೆ ಹೊತ್ತಿಗೆ ಸರಿಯಾಗಿ ಅದರ ಕೀಲಿ ಕಳೆದುಕೊಂಡು ಟಠಡಢಣ, ತಥದಧನ ಎಂದು ತಡಬಡಾಯಿಸುತ್ತಿದ್ದುದೂ ಅಷ್ಟೇ ಖರೆ. 
ಇನ್ನು ವಾರ್ತೆ ಓದುವವರ ಖದರೇ ಬೇರೆ. ಆ ದಿನ ಪ್ರಾರ್ಥನೆಗಿಂತ ಮುಂಚಿನ ಸಮಯದಲ್ಲಿ ಅವರ ವರ್ತನೆ ಥೇಟ್ ಅಮೆರಿಕ ಅಧ್ಯಕ್ಷರ ಗತ್ತಿನದು. ಓದುವ ಸುದ್ದಿ ಮಾತ್ರ ಸ್ಥಳೀಯ, ಹಿಂದಿನ ದಿನದ ಪತ್ರಿಕೆಯಲ್ಲಿ ಬಂದ "ತಾಲ್ಲೂಕಿನ ಇಂಥಲ್ಲಿ ಬೈಕುಗಳ ಡಿಕ್ಕಿ- ಇಬ್ಬರಿಗೆ ಗಾಯ; ಇಂಥ ಊರಲ್ಲಿ ತಹಶೀಲ್ದಾರ್ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರ ಧರಣಿ...."ಯಂಥವು. ಏಕೆಂದರೆ ಶಿಕ್ಷಕರಿಗೂ ತಾಲ್ಲೂಕಿನ ತರಲೆ ತಾಪತ್ರಯಗಳ ಬಗ್ಗೆ ಆಸಕ್ತಿಯೇ ಹೊರತು ಬುಷ್-ಬ್ಲೇರ್-ಬ್ರೌನ್ ಬಡಿವಾರಗಳಲ್ಲ. ಪತ್ರಿಕೆಗಳಿಗೆ ರಜೆಯಿದ್ದ ದಿನ ಅಥವಾ ಅವು ಊರಿಗೆ ತಲುಪದ ದಿನ ಎರಡು ದಿನಗಳ ಹಿಂದಿನ ಸುದ್ದಿಯೇ ಶಾಲಾ ಸಭೆಯಲ್ಲಿ ಬಿತ್ತರಗೊಳ್ಳುವುದು. 
ಮಕ್ಕಳ- ಮಾಸ್ತರರ ಮನೆಗಳಲ್ಲಿನ ರೇಡಿಯೊ-ಟಿವಿಗಳೇನಿದ್ದರೂ ಅವರವರ ಖಾಸಗಿ ಬಳಕೆಗೆ ಮಾತ್ರ. ಇತ್ತ ವೇದಿಕೆಯ ಮೇಲಿರುವವರು ಗಾದೆ ಹೊದ್ದ ನೀತಿ ಪಾಠ ಬೋಧಿಸುತ್ತ, ವಾರ್ತೆ ಓದುತ್ತ ಲೋಕೋತ್ತರ ಚಿಂತನೆ ಮಾಡುತ್ತಿದ್ದರೆ, ಕೆಳಗೆ ವಿಶ್ರಾಮ ಸ್ಥಿತಿಯಲ್ಲಿ ನಿಂತ ಎಲ್ಲ ವಿದ್ಯಾರ್ಥಿಗಳ ಮೊಗದಲ್ಲಿ ಏಕೋಭಾವ- 'ಅಯ್ಯೋ, ಈ ಬರೀ ಬೋರು ಕಾರುಬಾರು ಯಾವಾಗ ಮುಗಿಯುತ್ತದಪ್ಪ'- ಅವರ ಮನದ ಕನ್ನಡಿಯಾಗಿ ನಡೆದಿರುತ್ತವೆ ಉಗುರು ಕಚ್ಚುವ, ಜಡೆಯ ತುದಿಯನ್ನು ಸುರುಳಿ ಸುತ್ತುವ, ನೆಲ ಕೆರೆಯುವ ಕ್ರಿಯೆಗಳು. 
ನಾನು ಓದಿದ ನವೋದಯ ವಿದ್ಯಾಲಯದಲ್ಲಿ ಪರಿಸ್ಥಿತಿ ಕೊಂಚ ಭಿನ್ನವಿತ್ತು. ಪತ್ರಿಕೆಯ ಸುದ್ದಿ ಹಳೆಯದಾಗುತ್ತದೆಂದು ಹಿಂದಿನ ರಾತ್ರಿಯ ಟಿವಿ ವಾರ್ತೆಯ ಸಾರಾಂಶವನ್ನು ಓದಬೇಕಿತ್ತು. ದೂರದರ್ಶನ ರಾಷ್ಟ್ರೀಯ ವಾಹಿನಿಯ ಪ್ರಸಾರವೊಂದೇ ತಲುಪುತ್ತಿದ್ದ ಆ ಸಮಯದಲ್ಲಿ ರಾತ್ರಿ ಒಂಬತ್ತೂವರೆಯ ಆಂಗ್ಲ ವಾರ್ತೆಯನ್ನು ವೀಕ್ಷಿಸಿ ಸುದ್ದಿ ಸಂಗ್ರಹಿಸಿಕೊಂಡು ಮರುದಿನ ಓದುವುದೆಂದರೆ ಇಂಗ್ಲೀಷ್ ಭೂತಕ್ಕೆ ಬೆದರುತ್ತಿದ್ದ ಬಹಳಷ್ಟು ಮಕ್ಕಳ ಮಂಡೆ ಬಿಸಿಯಾಗುತ್ತಿತ್ತು. ಆದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ "ಭೂತ ದರ್ಶನ"ದ ಪಾಳಿ ಎದುರಾಗುತ್ತಿದ್ದುದು ಅಪರೂಪವಾಗಿತ್ತು. 
ಇಷ್ಟೆಲ್ಲ ಪಡಿಪಾಟಲೇಕೆ, ಆಯಾ ದಿನದ ಪತ್ರಿಕೆಯನ್ನು ತಂದು ಆಯ್ದ ಸುದ್ದಿಯನ್ನು ಓದಬಾರದೇ ಎಂದು ನಿಮಗನಿಸಬಹುದು. ಆದರೆ ರಾಜಧಾನಿಯಿಂದ ಬಲು ದೂರವಿರುವ ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಅಂದಿನ ಪತ್ರಿಕೆ ಅಂದು ಸಂಜೆಯೊಳಗೇ ಚಂದಾದಾರರ ಕೈ ತಲುಪಿದರೆ ಅದವರ ಪುಣ್ಯ. 
'ನವೋದಯ'ದಲ್ಲಿ ಪ್ರಾರ್ಥನೆಯ ಸಮಯದಲ್ಲಿ ಒಂದು ಪ್ರತಿಜ್ಞೆ ಕೈಗೊಳ್ಳುವ ಪದ್ಧತಿ ಇತ್ತು. "ಭಾರತ ನನ್ನ ದೇಶ. ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು....." ಎಂದು ಆರಂಭವಾಗಿ ಮುಂದುವರಿಯುತ್ತಿತ್ತು ಆ ಪ್ರತಿಜ್ಞೆ. ಆ ಘನ ಗಂಭೀರ ಪ್ರತಿಜ್ಞೆಯ ಸಮಯದಲ್ಲೂ ಕೆಲ ಹಗುರ ಕ್ಷಣಗಳು ಎದುರಾಗುತ್ತಿದ್ದವು. ಆರರಿಂದ ಹನ್ನೆರಡನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದ ಶಾಲೆಯಲ್ಲಿ, ಹನ್ನೊಂದನೇ ತರಗತಿಗೆ ಬರುತ್ತಿದ್ದಂತೆಯೇ ಬಹಳಷ್ಟು ಹುಡುಗರಿಗೆ ತಾವು ತಾರುಣ್ಯಾವಸ್ಥೆಯ ತುಂಟತನದ ಹರಿಕಾರರೇನೋ ಎಂಬ ಪ್ರಜ್ಞೆ. ಕೈಯನ್ನು ಎದೆಮಟ್ಟಕ್ಕೆ ಮುಂದೆ ಚಾಚಿ ಪ್ರತಿಜ್ಞಾವಿಧಿ ಪೂರೈಸುತ್ತಿದ್ದ ಸಂದರ್ಭದಲ್ಲಿ "ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು" ಎನ್ನುವಾಗ ಈ ಹನ್ನೊಂದು, ಹನ್ನೆರಡನೆಯ ತರಗತಿಯ ಸುಮಾರು ಹುಡುಗರು ಮುಂಚಾಚಿದ ಹಸ್ತದ, ಒಂದೇ ಮಟ್ಟದಲ್ಲಿರಬೇಕಾದ ಐದು ಬೆರಳುಗಳ ಪೈಕಿ ಮಧ್ಯದ ಬೆರಳನ್ನು ಕೊಂಚ ತಗ್ಗಿಸುತ್ತಿದ್ದರಂತೆ. 
ಈ ವಿಷಯವನ್ನು ಅರಿತ, ಆ ಹುಡುಗರ ಮೇಲೆ ಕಣ್ಣಿಟ್ಟಿದ್ದ ಕೆಲ ಹುಡುಗಿಯರು ಹಾಗೆ ಮಾಡುವುದರ ಅರ್ಥ- "ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು- ಒಬ್ಬನ/ಳ ಹೊರತಾಗಿ" ಎಂದು ಪತ್ತೆ ಹಚ್ಚಿ ಆಮೇಲೆ ತಾವೂ ಹಾಗೆ ಮಾಡತೊಡಗಿದರು. ಬಾಕಿಯವರಿಗಿಂತ ನಾಲ್ಕು ಡಿಗ್ರಿ ಜಾಸ್ತಿಯೇ ಬಿಸಿಯಾಗುವ ನೆತ್ತರು ನೆತ್ತಿ ಸೇರಿ, ಚಿತ್ತವನ್ನು ಚಿತ್ರಾನ್ನ ಮಾಡುವ ವಯಸ್ಸಿನಲ್ಲಿ ಆ ಬಿಸಿಯಿಂದ ಬಚಾವಾಗಲು ಇಂಥ ಕೂಲ್ ಕಿತಾಪತಿ ಮಾಡುತ್ತಿದ್ದ ಹುಡುಗ/ಗಿಯರು ಮಧ್ಯದ ಬೆರಳ ಬದಲಾಗಿ ಉಂಗುರದ ಬೆರಳನ್ನು ತಗ್ಗಿಸುತ್ತಿದ್ದರೆ ಇನ್ನೂ ಅರ್ಥವತ್ತಾಗಿರುತ್ತಿತ್ತು. ಆದ್ಯಾಕೋ ಆ ಸರಳ ವಿಚಾರ ಯಾರಿಗೂ ಹೊಳೆದಿರಲಿಲ್ಲ ಅನ್ನಿಸುತ್ತದೆ. 
ಈಗೀಗ ಹುಟ್ಟುಹಬ್ಬದ ಶುಭಾಶಯ ಕೋರುವಿಕೆ ಕೂಡ ಪ್ರಾರ್ಥನಾ ಕಲಾಪದ ಅಂಗವಾಗುತ್ತಿದೆ. ದಿನಾ ಅದೇ ಸಮವಸ್ತ್ರ, ಶೂ-ಕಾಲುಚೀಲಗಳಲ್ಲಿ ಹುದುಗಿ, ಒಂದೆ ಫ್ಯಾಕ್ಟರಿಯಿಂದ ತಯಾರಾದ ಗೊಂಬೆಗಳಂತೆ ಕಾಣಿಸುವ ನೂರಾರು ಮಕ್ಕಳ ನಡುವೆ ಮರೆಯಾಗಿ ಬಿಡುವ ಬಾಲಕ/ಕಿಗೆ ಆ ದಿನ ಬಣ್ಣಬಣ್ಣದ ಹೊಸ ಬಟ್ಟೆ ತೊಟ್ಟು ಒಳ್ಳೆ ರಾಜಠೀವಿ ಬೀರುತ್ತ ನಿಲ್ಲುವ ಅವಕಾಶ.
ಇವೆಲ್ಲದರ ಜೊತೆಗೆ ಸಭೆಗೆ ತಡವಾಗಿ ಬಂದದ್ದಕ್ಕೆ, ಉಗುರು ಕೆತ್ತಿಲ್ಲದ್ದಕ್ಕೆ, ಕೊಳೆಯಾದ ಅಂಗಿ ತೊಟ್ಟು ಅಥವಾ ಎಣ್ಣೆ ಹಾಕಿ ಬಾಚದೇ ಕೂದಲು ಕೆದರಿಕೊಂಡು ಬಂದಿದ್ದಕ್ಕೆ... ಹೀಗೆ ಹತ್ತಾರು ತಪ್ಪುಗಳನ್ನು ಗುರುತಿಸಿ, ಶಿಕ್ಷೆ ಕೊಡುವ ಪುಟ್ಟ ಸೆಷನ್  ಕೂಡ ಮುಖ್ಯ ಸಭಾ ಕಾರ್ಯಕ್ರಮದೊಂದಿಗೆ ತಳಕು ಹಾಕಿಕೊಂಡಿರುತ್ತದೆ. "ಶಿಕ್ಷಕ"ರಿಗೂ, ಶಿಕ್ಷೆ ಪಡೆವವರಿಗೂ ಇದೊಂಥರ ಮಾಮೂಲಿ ಕಾರ್ಯಕ್ರಮ- ಬದ್ಧತೆಯಾಗಲಿ, ಬೇಸರವಾಗಲಿ ಎಲ್ಲೂ ಹಣಕದು. ಮಕ್ಕಳ ಪಾಲಿಗಂತೂ ಪ್ರಾರ್ಥನೆಯ ಕೊನೆಯಲ್ಲಿ "ಜನ ಗಣ ಮನ" ಎಂದಷ್ಟೇ ಸಲೀಸು ಈ ಬೈಗುಳು ತಿನ್ನುವುದು. 
ಆಟದ ಮೈದಾನದಲ್ಲಿ ಪಂದ್ಯ ಆರಂಭಿಸುವ ಮುನ್ನ, ಓಟದ ಟ್ರ್ಯಾಕ್ ಗಿಳಿಯುವ ಮುನ್ನ ಮೈ ಹಗುರಗೊಂಡು ಲವಲವಿಕೆ ಮೂಡಲೆಂದು ವಾರ್ಮ್ ಅಪ್ ಅಭ್ಯಾಸ ನಡೆಸುತ್ತಾರಲ್ಲವೇ. ಹೂ ಬಿಸಿ ನೀರಿನ ಹದ ಹೊಂದಿದ ಇಂಥ ಪ್ರಾರ್ಥನೆಯ ಎಫೆಕ್ಟ್ ಕೂಡ ಅದೇ. ಶೈಕ್ಷಣಿಕ ದಿನವನ್ನು ಬರ ಮಾಡಿಕೊಳ್ಳುವ ಇಂಥ ಹಲ್ಕೀ-ಫುಲ್ಕಿ ಕ್ಷಣಗಳು ಇಡೀ ದಿನ ತಲೆಯಲ್ಲಿ ನಡೆವ ಕಸರತ್ತಿಗೆ ಪೂರ್ವಭಾವಿಯಾಗಿ ಮನವನ್ನೊಂಚೂರು ಹಗುರ ಮಾಡಿ, ಹುರುಪು ತುಂಬುವುದು ಸತ್ಯ. 

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)

6 ಕಾಮೆಂಟ್‌ಗಳು:

  1. ಚೊಲೊ ಇದ್ದೆ ಬರಹ. ದಯಕರ ದಾನ್ ವಿದ್ಯಾ ಕಾ ನೆನಪಾತು. ಪ್ರಾರ್ಥನೆ ಮಾಡಕಾರೆ ಹಿ೦ದಿ ಮೆಡಮ್ ಯೆಲ್ಲಿ ನೊಡತ್ರು ಹೇಳಿ ನಾವು ವಾರೆಗಣ್ಣ್ಲಲ್ಲಿ ಅವರನ್ನ ನೊಡತಾನೆ ಇಪ್ಪದು ನೆನಪಾತು. ಶಾಲೆ ನೆನಪುಗಳು ಯಾವಗ್ಲು ಚ೦ದಾ.

    ಪ್ರತ್ಯುತ್ತರಅಳಿಸಿ