ಅ ಫಾರ್ ಅಯ್ಯೋ, ಪ ಫಾರ್ ಪಾಪ
ಸಿಂಗಪುರಕ್ಕೆ ಬಂದ ಹೊಸದರಲ್ಲಿ ಇಲ್ಲಿನ ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 'ಕನ್ನಡ ಕಲಿ' ಕಾರ್ಯಕ್ರಮದ ಅಂಗವಾಗಿ ಹೊಸದಾಗಿ ಕನ್ನಡ ಓದಲು ಬರೆಯಲು ಕಲಿತಿದ್ದ ಮಕ್ಕಳೆಲ್ಲ ವೇದಿಕೆ ಹತ್ತಿ ಸಂಭ್ರಮಿಸುತ್ತಿದ್ದರು. 'ಒಂದು ಎರಡು, ಬಾಳೆಲೆ ಹರಡು'- ಹಿರಿ ಕಿರಿಯ ಕಂಠಗಳಲ್ಲಿ ಧ್ವನಿ ಹೊರಡುತ್ತಿದ್ದಂತೆ ತಂತಾನೇ ನನ್ನ ಕಣ್ಣುಗಳಲ್ಲಿ ನಗು ಇಣುಕಿತು. ಮನಸ್ಸು ನನ್ನ ಕುಮಾರ ಕಂಠೀರವನಿಗೆ ಕನ್ನಡ ಕಲಿಸಲು ಮುಂದಾದ ಸಮಯದ ಮಜಕೂರುಗಳನ್ನು ಮೆಲುಕಾಡತೊಡಗಿತು.
ನಮ್ಮ ಹಿರಿಯರು 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು' ಎಂದು ಸುಲಭಕ್ಕೆ ಹೇಳಿ ಬಿಟ್ಟರು. ಈ ಗಾದೆ ರೂಪುಗೊಂಡ ಸಮಯದಲ್ಲಿ ಸಂಸ್ಕಾರ, ಸಂಸ್ಕೃತಿ, ಜೀವನ ವಿಧಾನ, ಹೆಚ್ಚೆಂದರೆ ಒಂದು ಭಾಷೆ... ಇಷ್ಟನ್ನೇ ಮಕ್ಕಳು ಕಲಿಯುತ್ತಿದ್ದುದು, ಅಮ್ಮಂದಿರು ಕಲಿಸುತ್ತಿದ್ದುದು. ಮೇಲಾಗಿ ಕಲಿಸುವವರು ಅಕ್ಕರೆಯ ಅಮ್ಮನಾಗಿರಲಿ, ಹಿರಿಯ ಬಂಧುವಾಗಿರಲಿ ಇಲ್ಲವೇ ಹೆದರಿಸುವ ಮಾಸ್ತರಾಗಿರಲಿ... ಅವರು ಹೇಳಿಕೊಟ್ಟಿದ್ದನ್ನು ಸಂಪೂರ್ಣ ಒಪ್ಪಿ, ಅನೂಚಾನವಾಗಿ ತಿದ್ದಿ-ತೀಡಿ ಕರಗತ ಮಾಡಿಕೊಳ್ಳುವುದು ಕಲಿಯುವವರ ಧರ್ಮವಾಗಿತ್ತು. 'ಕನ್ನಡದಲ್ಲಿ ಅಃ/ಅನುನಾಸಿಕಗಳು ಏಕಿವೆ, ಒಂದೇ ಉಚ್ಚಾರಕ್ಕೆ ಶ-ಷ ಎರಡು ಅಕ್ಷರ ಏಕೆ' ಎಂದೆಲ್ಲ ಆಗಿನ 'ಸಾಮಾನ್ಯ' ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಕಡಿಮೆಯೇ, ಒಂದೊಮ್ಮೆ ಕೇಳಿದ್ದರೂ ಬರುತ್ತಿದ್ದ ಉತ್ತರ ಹೆಚ್ಚುಕಡಿಮೆ ಒಂದೇ-'ಸಾಕು ತಲೆಹರಟೆ!'ವರುಷಗಳ ಹಿಂದೆ ಒಂದು ಪಾಟಿಯಲ್ಲಿ 'ಅಆಇಈ' ಬರೆದು, 'ಇದನ್ನು ತಿದ್ದು ಮಗಳೇ' ಎಂದು ಕೈಗಿತ್ತ ಹೊತ್ತಿನಲ್ಲಿ ನನ್ನಮ್ಮನಿನೂ ಇಂಥ ವಿಚಾರ ಹೊಳೆದಿರಲಿಕ್ಕಿಲ್ಲ. ನಾನೂ ಅಷ್ಟೇ, ಉಲ್ಟಾ ಮಾತಾಡದೇ ಅಮ್ಮ ಬರೆದಿದ್ದನ್ನು ತಿದ್ದುತ್ತಾ ಹೋಗಿದ್ದೆ. ಕಾಲವೂ ಬಹಳ ಸರಳವಾಗಿತ್ತು. ನನ್ನಂಥ ಬಹುಪಾಲು ಮಕ್ಕಳಿಗೆ ಐದನೆತ್ತಿಯವರೆಗೆ ಒಂದೇ ಭಾಷೆ-ಕನ್ನಡ. ಆಮೇಲೆ ಇಂಗ್ಲೀಷ್, ಹಿಂದಿ ಎಲ್ಲ ಬಂದಿದ್ದು. ಮಾಸ್ತರು 'ಸಿಯುಟಿ-ಕಟ್, ಪಿಯುಟಿ-ಪುಟ್' ಎಂದು ಹೇಳಿ ಕೊಟ್ಟರು, ನಾವೂ ಪೀಂ ಪಿಟ್ ಎನ್ನದೇ ತೌಡು ಕುಟ್ಟುತ್ತಾ ಹೋಗಿದ್ದೆವು. ಆಗೆಲ್ಲ ಏನಿದ್ದರೂ ಸ್ಪೆಲ್ಲಿಂಗ್, ಅರ್ಥ ಇವೆರಡಕ್ಕೆ ಮಾತ್ರ ಲಕ್ಷ್ಯ. ಫೋನಿಕ್ಸ್, ವ್ಯುತ್ಪತ್ತಿ ಇಂಥವೆಲ್ಲ ನಮ್ಮ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ.
'ಒಂದು ಮಗು ಹುಟ್ಟಿದಾಗ ಒಬ್ಬ ತಾಯಿಯೂ ಜನ್ಮ ತಾಳುತ್ತಾಳೆ' ಎಂಬ ಮಾತಿದೆ, ಹಾಗೇ ಒಂದು ಮಗುವಿನಲ್ಲೊಬ್ಬ 'ವಿದ್ಯಾರ್ಥಿ' ಹುಟ್ಟಿಕೊಳ್ಳುತ್ತಿದ್ದಂತೆ ಅಮ್ಮನಲ್ಲೂ ಒಬ್ಬ 'ಗುರು'ವಿನ ಸೃಷ್ಟಿಯಾಗುತ್ತದೆ. ನಾನು ಅಮ್ಮನಾದ ಮೇಲೆ, ನನ್ನ ಮಗನಿಗೆ ಬರೆಯುವುದನ್ನು ಕಲಿಸುವ ಸಂದರ್ಭ ಬಂದಾಗಲೇ ಈ ಗುರು ಪದವಿಯ ಗುರುತರ ಜವಾಬ್ದಾರಿ ಮತ್ತು ಅರಿವಾಗಿದ್ದು.
ಅವನ ತಲೆಮಾರಿನ ಬಹುತೇಕರಂತೆ ಅವನೂ ಮೊದಲು ಇಂಗ್ಲೀಷ್ ಓದಲು, ಬರೆಯಲು ಕಲಿತ. ಮೂರನೇ ವರ್ಷದವರೆಗೆ ಅಚ್ಚ ಕನ್ನಡ ಮಾತ್ರ ಅರಿತಿದ್ದ ಆತ ಶಾಲೆಯಲ್ಲಿ ಆಂಗ್ಲ ಭಾಷೆಗೆ ತೆರೆದುಕೊಳ್ಳುತ್ತಿದ್ದಂತೆಯೇ ಮನದ ಮೂಲೆಗಳಲ್ಲಿ ಕನ್ನಡ ನಿಧಾನಕ್ಕೆ ಮಸುಕಾಗತೊಡಗಿತು. ಆ ಸಮಯದಲ್ಲಿ ನಾವು ಯುಎಸ್ಎಯಲ್ಲಿ ಇದ್ದುದರಿಂದ ಆತ ಇಂಗ್ಲೀಷ್ ಕಲಿಯಬೇಕಾದ ಒತ್ತಡ ಇತ್ತು. ಹಾಗಾಗಿ ಕನ್ನಡದ ಗೂಡಲ್ಲಿ ಆಂಗ್ಲ ಕೋಗಿಲೆ ಇಟ್ಟ ಮೊಟ್ಟೆಗಳಿಗೆ ನಾವೂ ಅನಿವಾರ್ಯವಾಗಿ ಕಾವು ಕೊಟ್ಟೆವು. ಆತ ಆ ಭಾಷೆಗೆ ಒಗ್ಗಿಕೊಂಡು, ಸರಾಗವಾಗಿ ಓದಲು, ಬರೆಯಲು ಕಲಿತ ಮೇಲೆ, ಮತ್ತೆ ಕನ್ನಡದ ಬಳಕೆಯ ಮೇಲೆ ಜಮೆಗೊಂಡಿದ್ದ ದೂಳು ಒರೆಸುವ ಕೆಲಸ ಶುರುವಾಯಿತು. ಕರ್ನಾಟಕದಲ್ಲಿ ಕನ್ನಡ ಪರಿಸರದ ನಡುವೆ ಇದ್ದು ಆ ಭಾಷೆಯನ್ನು ಕಲಿಸುವಷ್ಟು ಸುಲಭವಲ್ಲ, ದೂರ ದೇಶದಲ್ಲಿ ಕನ್ನಡದ ಗಂಧ ಗಾಳಿ ಇಲ್ಲದೆಡೆ ಕಲಿಸುವುದು. ಸಿಂಗಪುರದ ಕನ್ನಡಿಗ ಮಕ್ಕಳು ಜೊತೆಗಾರರ ಉಮೇದಿಗಾದರೂ ಕಲಿತರೇನೋ, ನನ್ನ ಮಗನಿಗೆ ಸಹಕನ್ನಡಿಗ ಸ್ನೇಹಿತರೂ ಇರಲಿಲ್ಲ.
ಒಂದಿನ ಕನ್ನಡ ಅಕ್ಷರಗಳನ್ನು ಹೇಳಿ ಅದರಿಂದ ಆರಂಭವಾಗುವ ಶಬ್ದಗಳನ್ನು ಹೇಳಿಸುತ್ತಿದ್ದೆ. ಅ-ಅರಸ, ಆ-ಆನೆ ಎಂಬ ನಮ್ಮ ಡಿಫಾಲ್ಟ್ ಪದ ವಿಸ್ತಾರ ಅವನಿಗೆ ಪರಿಚಯವಿರಲಿಲ್ಲ. ಹಾಗಾಗಿ ಸುಲಭ ಶಭ್ದಗಳಲ್ಲಿ 'ಅ-ಅನ್ನ, ಆ-ಆ ಕಡೆ, ಇ-ಇದು, ಈ-ಈ ಕಡೆ...' ಹೀಗೆ ನಮ್ಮ ಅಭ್ಯಾಸ ಶುರುವಾಯಿತು. 'ಐ'ಗೆ ಒಂದು ಶಬ್ದ ಹೇಳು ಅಂದೆ- 'ಐಯ್ಯೋ' ಎಂದ. ಫೋನಿಕ್ಸ್ ವಿಧಾನದಲ್ಲಿ ಆಂಗ್ಲ ಭಾಷೆಯನ್ನು ಕಲಿತಿದ್ದ ಮಗ, ಅದೇ ನಿಯಮಗಳನ್ನು ಕನ್ನಡಕ್ಕೂ ಅನ್ವಯಿಸಿ 'ಅಯ್ಯೋ'ಗೆ ಐಯ್ಯೋ ಎಂದಿದ್ದು ನೋಡಿ ನಗು ತಡೆಯಲಾಗಲಿಲ್ಲ. ಅವನಿಗೋ, ಗೊಂದಲ! ಇಷ್ಟು ಸರಳ ಉದಾಹರಣೆಗೆ ಅಮ್ಮ ನಗುತ್ತಿದ್ದಾಳಲ್ಲ ಎಂದು. ಆ ಹೊತ್ತಿಗೆ ಕನ್ನಡ ಬರೆಯಲು ಗೊತ್ತಿಲ್ಲದಿದ್ದ ಅವನಿಗೆ ತಿಳಿಸಿ ಹೇಳುವಷ್ಟರಲ್ಲಿ ನನ್ನ ಸ್ಥಿತಿ 'ಅಯ್ಯೋ' ಎನ್ನುವಂತಾಗಿತ್ತು.
ಅಂತೂ ಹಳಿ ತಪ್ಪಿ, ಅಯೋಮಯವಾಗಿದ್ದ 'ಅಯ್ಯೋ'ವನ್ನು ಸ್ವಸ್ಥಾನಕ್ಕೆ ತಂದಿಳಿಸಿ ನಮ್ಮ ಪದಬಂಡಿ ಮುಂದುವರಿಯಿತು. ಒ-ಒಂದು, ಓ-ಓಡೋದು... ಔ- 'ಅವ್ ಹೋಗ್ತ'....!! ಮತ್ತದೇ ಫೋನಿಕ್ಸ್ ತಮಾಷೆ. ನಮ್ಮ ಮನೆ ಮಾತು 'ಹವ್ಯಕ ಕನ್ನಡ'ದಲ್ಲಿ 'ಅವು' ಎಂದರೆ 'ಅವರು' ಎಂದರ್ಥ. ಮಗನಿಗೆ ಗೊತ್ತಿದ್ದಿದ್ದು ಅದೊಂದೇ ಕನ್ನಡವಾದ್ದರಿಂದ ಅವನ ಪ್ರಕಾರ ಈ ಪದ ವಿಸ್ತಾರವೂ ಕಾಯಿದೆಶೀರು ಇತ್ತು. ವಿಧಿ ಇಲ್ಲದೇ ನಾನೇ ಔ-ಅವು, ಅಂ-ಅಮ್ಮ...ಗಳನ್ನೆಲ್ಲ 'ಅಕ್ರಮ-ಸಕ್ರಮ' ಮಾಡಿಕೊಂಡೆ.
ವರ್ಣಮಾಲೆಯನ್ನು ಕಲಿತು ಮುಗಿಸುವ ಹೊತ್ತಿಗೆ 'ಒತ್ತಕ್ಷರ'ದ ತಲೆ ಬಿಸಿ ಶುರುವಾಯ್ತು. ಇಂಗ್ಲೀಷಿನಂತೆ ಇನ್ನೊಂದ್ಸಲ ಅದೇ ಅಕ್ಷರವನ್ನು ಬರೆದರೆ ಆಯ್ತಪ್ಪ, ಒಂಚೂರೂ ಹೋಲಿಕೆ ಇಲ್ಲದ ಹೊಸದೊಂದು ಒತ್ತು ಬಂದು ಗತ್ತು ಮಾಡುವುದೇಕೆ ಎಂದವನ ಪ್ರಶ್ನೆ. ಯಥಾ ಪ್ರಕಾರ 'ಅಮ್ಮ' ಎಂದರೆ 'ಅ-ಮ-ಮ-ಅ' ಎಂದೂ, 'ಅಪ್ಪ' ಎಂದರೆ 'ಅ-ಪ-ಪ-ಅ' ಎಂದೆಲ್ಲ ಬರೆದು, ಅಳಿಸಿ... ಅಂತೂ ಇಂತೂ ಒತ್ತಕ್ಷರ ಕೈಗೆ ಹತ್ತುವಷ್ಟರಲ್ಲಿ ನೆತ್ತಿ ಹೊತ್ತಿ ಉರಿದಷ್ಟು ಸುಸ್ತು!
ಇಷ್ಟೆಲ್ಲ ಕಷ್ಟಪಟ್ಟು ಕಲಿತ ಕನ್ನಡ ಭಾರತದಲ್ಲಿ ಒಂದನೆಯ ತರಗತಿ ಓದುತ್ತಿದ್ದಾಗ ಅಂತೂ ಅನುಕೂಲಕ್ಕೆ ಬಂತು. ಶಾಲಾ ಪುಸ್ತಕದ ಜೊತೆ ಬಸ್ಸಿನ ಬೋರ್ಡ್, ನಿಯತಕಾಲಿಕಗಳು ಎಲ್ಲ ಓದುವ ಮಟ್ಟಕ್ಕೆ ಅವ ಬಂದ. ಇನ್ನೇನು ಮಗ ನನ್ನ ಫೇವರಿಟ್ ಆದ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದುತ್ತಾನೆ, ಮಾರ-ಪ್ಯಾರ, ಕರ್ವಾಲೋ, ಜುಗಾರಿ ಕ್ರಾಸ್ ಎಂದೆಲ್ಲ ಅವನ ಜೊತೆ ಕಥೆ ಹೊಡೆಯಬಹುದು ಎಂದು ಹಗಲುಕನಸು ಕಾಣುವ ಹೊತ್ತಿಗೆ ಸಿಂಗಪುರ ಕೈ ಬೀಸಿ ಕರೆದಿತ್ತು.
ಇಲ್ಲಿ ಬರುತ್ತಿದ್ದಂತೆ ಹಿಂದಿ ಕಲಿಯಬೇಕಾದ ಅನಿವಾರ್ಯತೆ, ಅದೂ ಸೀದಾ ಎರಡನೆತ್ತಿ ಲೆವೆಲ್ಗೆ, ವ್ಯಾಕರಣದ ಜೊತೆಗೆ. ಮತ್ತೆ ನಮ್ಮ 'ಅ,ಆ,ಇ,ಈ' ಶುರು. ಈ ಬಾರಿ ಅವನಿಗೆ ಸಂಪೂರ್ಣ ಅಪರಿಚಿತವಾಗಿದ್ದ ಭಾಷೆಯಲ್ಲಿ. ಅದು ಇನ್ನೊಂದು ರಾಮಾಯಣ ಬಿಡಿ!
ಹೊರನಾಡಿನಲ್ಲಿ ಕನ್ನಡ ಕಲಿಕೆಗೆ ಇರುವ ಅಡ್ಡಿ ಅನೇಕ. ಮೇಲಿನ ತರಗತಿಗಳಿಗೆ ಬರುತ್ತಿದ್ದಂತೆ ಮಕ್ಕಳ ಆಂಗ್ಲ ಭಾಷಾ ಬಳಕೆ ಹೆಚ್ಚಾಗುತ್ತದೆ. ಶಾಲೆಯ ಪುಸ್ತಕಗಳ ಜೊತೆಗೆ ಅವರು ಓದುವ ಇತರ ಮನರಂಜನೆಯ, ಜ್ಞಾನಾರ್ಜನೆಯ ಪುಸ್ತಕಗಳೆಲ್ಲ ಆಂಗ್ಲ ಭಾಷೆಯವು. ಕನ್ನಡ ಕಣ್ಣಿಗೆ ಬೀಳುವುದೇ ಅಪರೂಪ. ಬಿದ್ದರೂ ಪಕ್ಕದಲ್ಲಿ ಅದರ ಆಂಗ್ಲ ಭಾಷಾಂತರ ರೂಪ ಲಭ್ಯ, ಬಹುತೇಕ ಸಂದರ್ಭಗಳಲ್ಲಿ. ಕನ್ನಡ ಅಕ್ಷರ ಹೆಕ್ಕಿ ಹೆಕ್ಕಿ, ಪದ ಜೋಡಿಸಿ, ವಾಕ್ಯ ಮಾಡಿ ಅರಿತುಕೊಳ್ಳುವಷ್ಟು ಆಸಕ್ತಿ, ಸಹನೆ ಎರಡೂ ಇಂದಿನ ವೇಗಗತಿಯ ಸಮಾಜದಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿಲ್ಲ. ಇನ್ನು ಅವರ ಉಚ್ಚಾರಣೆಯೋ!? ಗೌರಮ್ಮನ್ನಿಗೆ ಗೌನ್ ತೊಡಿಸಿದಂತೆ. ನನ್ನ ಬಂಧುವೊಬ್ಬರ ಮಕ್ಕಳಿಬ್ಬರು ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ಭಾರತಕ್ಕೆ ಬಂದಾಗ, ಅಜ್ಜ-ಅಜ್ಜಿಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕೆ, ಅಮ್ಮನ ಒತ್ತಾಯಕ್ಕೆ ಕನ್ನಡ ಮಾತನಾಡುತ್ತಾರೆ. ಅವರ 'ನನ್ ಖೇಯ್, ನನ್ ಕ್ಯಾಲ್' ಎಂಬ ಉಚ್ಚಾರ ಕೇಳುವುದಕ್ಕೆ ತಮಾಷೆಯಾಗಿರುತ್ತದೆ, ಆದರೆ ಅಷ್ಟಾದರೂ ಕನ್ನಡ ಮಾತನಾಡುತ್ತಾರಲ್ಲ ಎಂಬುದೊಂದು ಸಮಾಧಾನ. ಏಕೆಂದರೆ ಈಗೀಗ ಹೊರ ದೇಶಗಳಲ್ಲಿ ಹೋಗಲಿ, ಬೆಂಗಳೂರಲ್ಲಿ ಸಹ ಇಬ್ಬರು ಕನ್ನಡಿಗ ಮಕ್ಕಳು ಸೇರಿದರೆ, ಅವರು ಮಾತನಾಡುವುದು ಇಂಗ್ಲೀಷಿನಲ್ಲಿ. ಗೆಳೆಯನ ಧಾರವಾಡ ಕನ್ನಡ ಮಂಡ್ಯದ ಹುಡುಗನಿಗೆ ಬರುವುದಿಲ್ಲ, ಗೆಳತಿ ಮನೆಯಲ್ಲಾಡುವ ಕುಂದಾಪುರ ಕನ್ನಡ ಹವ್ಯಕರ ಹುಡುಗಿಗೆ ಗೊತ್ತಿಲ್ಲ. ಇನ್ನು ಬೆಂಗಳೂರಿನ ಸ್ಥಳೀಯ ಕನ್ನಡವೋ, ಅದಕ್ಕೆ ಸ್ವಂತಿಕೆಯೇ ಇಲ್ಲ!
ತೇಜಸ್ವಿಯವರ ಪುಸ್ತಕಗಳನ್ನು ಮಗ ಎಂದು ಓದುತ್ತಾನೋ ಗೊತ್ತಿಲ್ಲ, ಹಳ್ಳಿಗೆ ಹೋದಾಗ ಬೋರ್ಡ್ ನೋಡಿಕೊಂಡು ಬಸ್ ಹತ್ತುವಷ್ಟಾದರೂ ಗೊತ್ತಿರಲಿ ಎಂದು ಪ್ರತಿಬಾರಿ ರಜೆ ಬಂದಾಗಲೂ ಅವನ ಕನ್ನಡ ವರ್ಣಮಾಲೆ, ಕಾಗುಣಿತ ತಿದ್ದಿ ತೀಡುವ ಕಾರ್ಯಕ್ರಮ ತಪ್ಪದೇ ಹಮ್ಮಿಕೊಳ್ಳುತ್ತೇನೆ. ತಡವರಿಸದೇ, ಅಳುಕದೇ ಅರ್ಧ ಪುಟ ಓದುವಷ್ಟು ಆತ ತಯಾರಾಗುವ ಹೊತ್ತಿಗೆ ರಜೆ ಮುಗಿದು ಮತ್ತೆ ಶಾಲೆ ಶುರುವಾಗುತ್ತದೆ. ಕನ್ನಡ ದೀರ್ಘಕಾಲದ ರಜೆಯ ಮೇಲೆ ತೆರಳುತ್ತದೆ.
-ರೇಖಾ ಹೆಗಡೆ ಬಾಳೇಸರ
ಕನ್ನಡ ಸಂಘ (ಸಿಂಗಪುರ)ದ ದ್ವೈವಾರ್ಷಿಕ ಪತ್ರಿಕೆ 'ಸಿಂಗಾರ'ದಲ್ಲಿ ಪ್ರಕಟಗೊಂಡ ಲೇಖನ